ನಾನು ಡಚಾವು-ಭಾಗ ೩
ಶಿಕ್ಷೆಗಳು
ಶಿಕ್ಷೆಗಳು ಶಿಬಿರದ ಕಾಯಂ ಮತ್ತು ಸಾಮಾನ್ಯ ವಿಚಾರಗಳಾಗಿದ್ದವು.ಏಳಲು ತಡವಾದರೆ.ಹಾಸಿಗೆ ಸರಿ ಇರದಿದ್ದರೆ,ಬಟ್ಟೆ ಕೊಳೆಯಾಗಿದ್ದಾರೆ. SS
ಗಳ ಮುಂದೆ ತಲೆ ಎತ್ತಿ ನಡೆದರೆ,ಕೋಟಿನಲ್ಲಿ ಕೈ ಹಾಕಿದರೆ,ತಲೆಯ ಮೇಲೆ ಟೋಪಿ ಇರದಿದ್ದರೆ.ಮುಖ ಮಾರ್ಜನ ಮಾಡಿರದಿದ್ದರೆ,ಇವಕ್ಕೆಲ್ಲ ಕ್ರೂರ ಶಿಕ್ಷೆಗಳೇ ಕಾಯುತ್ತಿರುತ್ತಿದ್ದವು.ಕಟ್ಟಿಗೆಯ ಒಂದು ಮಂಚದ ಮೇಲೆ ಬರೀ ಮೈಯಲ್ಲಿ ಮಲಗಿಸಿ,ಬೆನ್ನಿನ ಮೇಲೆ ೨೫ ಚಾಟಿ ಏಟಿನ ರುಚಿ ತೋರಿಸುತ್ತಿದ್ದರು.ಚಿಮುಕುತ್ತಿದ್ದ ನೆತ್ತರನ್ನು ತೊಳೆಯಲು ಉಪ್ಪಿನ ನೀರನ್ನು ಹಾಕುತ್ತಿದ್ದರು.ಶಿಕ್ಷೆ ಅನುಭವಿಸುತ್ತಿದ್ದ ಕೈದಿಗಳು ಪ್ರತೀ ಏಟಿನ ಸಂಖ್ಯೆಗಳನ್ನು ಜರ್ಮನ್ ಭಾಷೆಯಲ್ಲೇ ಜೋರಾಗಿ ಎಣಿಸಬೇಕಿತ್ತು.ಎಣಿಸುವಲ್ಲಿ ತಪ್ಪಾದರೆ ಅಥವಾ ಧ್ವನಿ ಕ್ಷೀಣವಾದರೆ ಮತ್ತೆ ಮೊದಲಿನಿಂದ ಎಣಿಕೆ ಹಾಗೂ ಏಟು.ಇವರ ಆರ್ತನಾದ ಎಲ್ಲರಿಗೂ ಮುಟ್ಟಲಿ ಎಂದು ಬಾಗಿಲುಗಳನ್ನು,ಕಿಟಕಿಗಳನ್ನು ತೆಗೆದಿಟ್ಟಿರುತ್ತಿದ್ದರು.ಎಷ್ಟೋ ಕೈದಿಗಳು ಅಲ್ಲೇ ಮೂರ್ಛೆಯೂ ಹೋದದ್ದುಂಟು.ಕೆಲವೊಬ್ಬರು ಗಟ್ಟಿಗರು ಒಂದೇ ಬಾರಿಗೆ ಶಿಕ್ಷೆ ಪೂರ್ಣಗೊಳಿಸುತ್ತಿದ್ದರು.ಎಷ್ಟೋ ಜನ ಸತ್ತು ಹೋದ ಉದಾಹರಣೆಗಳೂ ಇವೆ.ಮೂರ್ಛೆ ಹೋದ ಕೈದಿಗಳು ಎಚ್ಚರವಾದಮೇಲೆ ಶಿಕ್ಷೆ ಮತ್ತೆ ಜಾರಿಯಾಗುತ್ತಿತ್ತು.
ಸಾಮಾನ್ಯವಾಗಿದ್ದ ಇನ್ನೊಂದು ಕ್ರೂರ ಶಿಕ್ಷೆ ಎಂದರೆ,ಕೈದಿಯ ಕೈಗಳನ್ನು ಹಗ್ಗದಿಂದ ಕಟ್ಟಿ ನೆಲದಿಂದ ಸುಮಾರು ೨ ಅಡಿ ಎತ್ತರದಲ್ಲಿ ಮಾಳಿಗೆಗೆ ನೇತು ಹಾಕುತ್ತಿದ್ದರು.ಹಾಗು ಸಂಖ್ಯೆಗಳ ಎಣಿಕೆ ಪೂರ್ಣಗೊಳ್ಳುವ ವರೆಗೂ ಬೀಳುತ್ತಿದ್ದ ಚಾಟಿ ಏಟುಗಳು.ಶಿಕ್ಷೆ ಮುಗಿದ ಮೇಲೂ ಘಂಟೆಗಟ್ಟಲೆ ಹಾಗೇ ನೇತು ಹಾಕುತ್ತಿದ್ದರು.
ಯಾರು ಯಾರಿಗೆ ಹೇಳಬೇಕು?ಎಲ್ಲರೂ ನೋವು ಉಣ್ಣುತ್ತಿರುವವರೇ.ಅವರ ಚರ್ಮ ಸುಲಿದು ಮಾಂಸ ಕಿತ್ತು ಬರುತ್ತಿದ್ದರೆ ನನ್ನ ಕರಳು ಕಿತ್ತು ಬಂದಂಗಾಗುತ್ತಿತ್ತು.ಈ ಶಿಬಿರಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುವವರೂ ಇರಲಿಲ್ಲ,ರೋದನಗಳೆಲ್ಲ ಮುಗಿಲು ಮುಟ್ಟಿದರೂ ಸಾಂತ್ವನ ಹೇಳುವವರು ಇರಲಿಲ್ಲ.ಅಲ್ಲಿ ನಾನು ಮೂಕ ಪ್ರೇಕ್ಷಕಿ ಮಾತ್ರ.ದೇವರೇ,ನನ್ನ ನೆಲದ ಮೇಲೆ ನಡೆಯುತ್ತಿರುವ ಇಂತಹ ಕ್ರೂರತನಕ್ಕೆ ಕೊನೆಯೇ ಇಲ್ಲವೇ? ಎಂದು ಹಗಲಿರುಳೂ ರೋದಿಸಿದ್ದೇನೆ.ಆದರೆ ಆ ದೇವರೂ ಸಹ ಕಿವುಡ,ಕುರುಡ ಎಂದರಿಯಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ.
೧೯೪೪ ರಲ್ಲಿ ಧರ್ಮಗುರುಗಳು ಇದ್ದ ಬರಾಕ್ ಗಳಲ್ಲಿನ ೪ ಕೋಣೆಗಳನ್ನು ಖಾಲಿ ಮಾಡಿ ಒಂದು ಹೊಸ ಶಿಕ್ಷೆಯನ್ನು ಅಳವಡಿಕೆ ಮಾಡಲಾಯಿತು.ಅದೇ ನಿಲ್ಲುವ ಕೋಣೆಯ ಶಿಕ್ಷೆ.ಈ ಶಿಕ್ಷೆ ಶಿಬಿರದಲ್ಲೇ ಅತ್ಯಂತ ಕ್ರೂರವಾದದ್ದು.ಇವುಗಳ ರಚನೆ(set up) ಹೇಗಿತ್ತೆಂದರೆ,ಒಂದು ಕೋಣೆಯಲ್ಲಿ ೪ರಂತೆ, ೭೦*೭೦ ಸೆಂ.ಮೀ ಜಾಗದಲ್ಲಿ ಕೇವಲ ನಿಲ್ಲಲು ಮಾತ್ರ ಬರುವಂತಹ ಸೆಲ್ ಗಳನ್ನು ಮಾಡಿದ್ದರು.ಚಾಟಿ ಏಟು ತಿಂದು ಬಂದ ಕೈದಿಗಳನ್ನು ಇಲ್ಲಿ ನಿರಂತರವಾಗಿ ಸುಮಾರು ೭೨ ಘಂಟೆಗಳ ವರೆಗೆ ಅಂದರೆ ಸುಮಾರು ೩ ದಿನಗಳವರೆಗೆ ನಿಲ್ಲಿಸಲಾಗುತ್ತಿತ್ತು.ಹಿಂಸೆಯನ್ನು ಹೆಚ್ಚಿಸಲು ಬೆಳಕು ಹಾಗು ಗಾಳಿಯನ್ನು ಕಡಿಮೆ ಮಾಡಲಾಗುತ್ತಿತ್ತು.ಇದೊಂದು ನರಕಸದೃಶ ಯಾತನೆ.(೧೯೪೫ ರಲ್ಲಿ ಈ ರಚನೆಯನ್ನು ಕಿತ್ತಿ ಹಾಕಲಾಯಿತು).
ಈ ಯಾತನೆಗಳಿಂದ ರೋಸಿ ಹೋಗಿ,ತಪ್ಪಿಸಿಕೊಂಡು ಹೋಗಲೂ ಸಹ ಕೆಲ ಕೈದಿಗಳು ಪ್ರಯತ್ನ ನಡೆಸಿದರು.ಆದರೆ ಅವುಗಳೆಲ್ಲವೂ ವಿಫಲವಾದವು.ಅಂತಹ ಎಲ್ಲಾ ಪ್ರಯತ್ನಗಳು ಸಫಲ ವಾಗದಂತೆ ಮೊದಲೇ ಕ್ರಮ ಕೈಗೊಳ್ಳಲಾಗಿತ್ತು.ಬರಾಕ್ ಗಳ ಸುತ್ತಲೂ ೫ ಅಡಿಯಷ್ಟು ಅಗಲದ ಹುಲ್ಲಿನ ಹಾಸು.ಅಲ್ಲಿ SS ನವರು ಮಾತ್ರ ನಡೆದಾಡುತ್ತಿದ್ದರು.ಕೈದಿಗಳಿಗೆ ಇದು ನಿಷೇಧಿತ ಜಾಗ.ನಂತರ ಸ್ವಲ್ಪ ಜಾಗ ಬಿಟ್ಟು ತಂತಿಯ ಬೇಲಿ.ಹಾಗೂ ಅದರಲ್ಲಿ ನಿರಂತರ ವಿದ್ಯುತ್ ಪ್ರವಾಹ.ಇಷ್ಟೆಲ್ಲಾ ಪಾರಾಗಿ ಹೋದರೂ ಬದುಕುತ್ತೆವೆಂಬ ಭರವಸೆ ಇರಲಿಲ್ಲ.ಏಕೆಂದರೆ ಹಗಲೂ ರಾತ್ರಿ ಪಹರೆ ಇಡುತ್ತಿದ್ದ ನಿರೀಕ್ಷಣ ಸೌಧದ ಸಿಬ್ಬಂದಿಗಳ ಬಂದೂಕುಗಳು ಗುಂಡು ಹೊಡೆಯಲೆಂದೇ ಕಾಯುತ್ತಿದ್ದವು.ಇದನ್ನರಿತೇ ಎಷ್ಟೋ ಕೈದಿಗಳು ಈ ವಿದ್ಯುತ್ ಪ್ರವಾಹಕ್ಕೆ ಜಿಗಿದು ಆತ್ಮಾಹುತಿ ಸಹ ಮಾಡಿಕೊಂಡರು.ಆದರೆ ಸಿಕ್ಕು ಬಿದ್ದವರ ಪಾಡು ಆ ದೇವರಿಗೇ ಪ್ರೀತಿ.ಈ ರೀತಿಯ ಪ್ರಯತ್ನಗಳು ಹೆಚ್ಚಾದಂತೆ SS ನವರು ಹುಲ್ಲಿನ ಹಾಸು ಮತ್ತು ಬೇಲಿಯ ನಡುವೆ ಸುಮಾರು ೬*೬ ಅಡಿಯಷ್ಟು ಆಳವಾದ ಖಾಲಿ ಕಂದಕವನ್ನು ತೊಡಿದರು.ನಂತರ ಓಡಿ ಹೋಗುವುದು,ಆತ್ಮಾಹುತಿ ಮಾಡಿಕೊಳ್ಳುವುದು ಯಾರಿಗೂ ಸಾಧ್ಯವಾಗಲಿಲ್ಲ.
SS ನವರ ಮೂರರಷ್ಟಿದ್ದ ಕೈದಿಗಳು ಸಿಡಿದೇಳುವದಕ್ಕಿಂತ ನನಗೆ ಅನಿಸಿದ ಅಚ್ಚರಿಯ ಸಂಗತಿ ಎಂದರೆ,ಇಷ್ಟೆಲ್ಲಾ ನಡೆಯುತ್ತಿದ್ದರೂ ಜಗತ್ತಿನ ಜನರಿಗೆ ಈ ದುರುಳತನದ ಸುದ್ದಿಯೇ ಇರಲಿಲ್ಲ.ಪತ್ರಿಕೆಗಳು ಬಂಧಿಗಳನ್ನೆಲ್ಲ ದಂಗೆಕೋರರು,ಗೂಂಡ ಪ್ರವೃತ್ತಿಯವರು.ಮೈಗಳ್ಳರು ಎಂದು ಬಿಂಬಿಸಿ ಅವರನ್ನು ಸರಿ ದಾರಿಗೆ ತರುವ,ಶಿಸ್ತು ಹಾಗೂ ಶ್ರಮ ವಹಿಸಿ ಕೆಲಸ ಮಾಡಿಸುವ ಶಿಬಿರ ಎಂದು ವೈಭವೀಕರಿಸಿತ್ತು.ಇದನ್ನೇ ನಿಜ ವೆಂದು ವಿದೇಶಿ ಮಾಧ್ಯಮಗಳೂ ಸಹ ಬರೆದವು.ಆದರೆ ಗುಪ್ತ ರೀತಿಯಲ್ಲಿ ಅಲ್ಲೊಂದು ಇಲ್ಲೊಂದು ಸತ್ಯ ಲೇಖನಗಳು ಬರುತ್ತಿದ್ದರೂ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.ಅದು ನನ್ನ ಪಾಲಿನ ಒಂದು ದೊಡ್ಡ ದುರಂತ.
ಮುಂದುವರೆಯುವುದು..
Comments
ಉ: ನಾನು ಡಚಾವು-ಭಾಗ ೩
In reply to ಉ: ನಾನು ಡಚಾವು-ಭಾಗ ೩ by kamath_kumble
ಉ: ನಾನು ಡಚಾವು-ಭಾಗ ೩
ಉ: ನಾನು ಡಚಾವು-ಭಾಗ ೩