ಪೇಜಾವರಶ್ರೀ - ೮೦

ಪೇಜಾವರಶ್ರೀ - ೮೦

            ಬರುವ ಏಪ್ರಿಲ್ ೨೭ಕ್ಕೆ ಅಕ್ಷರಶಃ 79 ‘ವಸಂತ’ಗಳನ್ನು ಪೂರೈಸಲಿರುವ ಸಾತ್ವಿಕ ಸುಜೀವಿ ಪೇಜಾವರ ಸ್ವಾಮಿಗಳು, ಇತರೆಲ್ಲಾ ನಾಡಾಡಿ ಸಂನ್ಯಾಸಿಯಂತಲ್ಲದೆ ವಿವಿಧ ಕಾರಣಗಳಿಗಾಗಿ ಮನೆಮಾತಾಗಿರುತ್ತಾರೆ; ಅಷ್ಟಷ್ಟೂ ಜನಪ್ರಿಯರಾಗಿದ್ದಾರೆ! ಈ ಹಿರಿಜೀವಿಯಿಂದ ಇನ್ನೇನನ್ನಲ್ಲದ್ದಿದ್ದರೂ ನಾವು ಧಾರಾಳವಾಗಿ ಪಡೆಯಬಹುದಾದ್ದು, ಪಡೆಯಲೇ ಬೇಕಾದ್ದು ಜೀವನದ ಪ್ರಾಮಾಣಿಕ ತುಂಬು ಉತ್ಸಾಹ ಮತ್ತು ಸಾತ್ವಿಕ ಸ್ಫೂರ್ತಿ.


ಅಸ್ಪೃಶ್ಯತೆ ಇಲ್ಲದ ಹಿಂದೂ ಸಮಾಜ ನಿರ್ಮಾಣ ತಮ್ಮ ಜೀವಿತದ ಗುರಿಯೆಂದು ಸ್ವಾಮಿಗಳು ಆಗಿಂದಾಗ್ಗೆ ಹೇಳುತ್ತಲೇ ಬಂದಿದ್ದಾರೆ. ಆ ಕಳಕಳಿ ಅವರ ಅಪಾರ ಅನುಯಾಯಿಗಳಲ್ಲಿ ಈ ವೇಳೆಗಾಗಲೇ ಹುಲುಸಾಗಿ ಕುಡಿಯೊಡೆದಿರಬೇಕಾಗಿತ್ತು. ಅದು ಅಷ್ಟಾಗಿ ವ್ಯಪಕವಾಗಿ ಕಂಡುಬರುತ್ತಿಲ್ಲ. ಬಹುಶಃ ಉದಾತ್ತ ಚರಿತರು ಮಾತ್ರಾ ಪ್ರಾಮಾಣಿಕವಾಗಿ ಸ್ವೀಕರಿಸುವ ಸಾತ್ವಿಕ ಕರೆ ಇದಾಗಿದ್ದು, ಸಮಾಜದಲ್ಲಿ ಅಂಥವರ ಸಂಖ್ಯೆ ಅಲ್ಪವೆನ್ನುವುದನ್ನೇ ಇದು ಸೂಚಿಸಿತು! ಈಗಂತೂ, ಸ್ವಾಮಿಗಳು, “ವೈಷ್ಣವ ದೀಕ್ಷೆ” ಎಂಬ ನುಡಿಗಟ್ಟನ್ನೂ, “ಭಕ್ತಿ ದೀಕ್ಷೆ” ಎಂದು ಬದಲಾಯಿಸಿ ಪ್ರಯೋಗಿಸುತ್ತಿದ್ದಾರೆ! ಆದರೂ ಸ್ವಾಮಿಗಳ ಶಿಷ್ಯಗಣ, ವಿವಿಧ ಉದ್ದೇಶಗಳಿಗಾಗಿ ಅವರನ್ನು ಕೊಂಡಾಡುತ್ತಾ ಅವರೊಡನೆ ಗುರ್ತಿಸಿಕೊಳ್ಳಲು ಹಾತೊರೆಯುತ್ತದದರೂ ಈ ಸದಾಶಯವನ್ನೇಕೊ ಹೃದಯಕ್ಕೆ ತೆಗೆದುಕೊಳ್ಳಲು ಮುಂದದಮತೆನಿಸುವುದಿಲ್ಲ! ಅಥವಾ ಸ್ವಾಮಿಗಳ ಈ ಮಾತು, ಭಾವ, ಉದ್ದೇಶಗಳನ್ನು ನನ್ನಂಥಾ “ವೈಷ್ಣವರೇ” ಪೆದ್ದು-ಪೆದ್ದಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆಯೋ ಎಂದೂ ಒಮ್ಮೊಮ್ಮೆ ಗಾಬರಿಯಾಗುವುದುಂಟು!


ಏಕೆಂದರೆ ಭಾಗವತರ ಗುಣ-ಲಕ್ಷಣಗಳನ್ನು ತಿಳಿಸುವ, “ವೈಷ್ಣವರ ವ್ಯಾವಹಾರಿಕ ಸಂವಿಧಾನ”ವನ್ನೇ ಸಂತ ನರಸೀಮೆಹ್ತಾ ಬಹಳ ಹಿಂದೆಯೇ ಕಟ್ಟಿಕೊಟ್ಟಿದ್ದಾರೆ; ಇದನ್ನು ಗಾಂಧೀಜಿ ಸಹ ಸತತ ಜಪಿಸುತ್ತಿದ್ದರಂತೆ. ಹಾಗಿರುವಾಗ “ವೈಷ್ಣವತೆ”, ನಾಮದ ಐಂಗಾರ್ಯತರ, ಗೂಟನಾನಾಮದ ಆಚಾರ್ಯರುಗಳ ಸೀಮಿತ ಸ್ವತ್ತಾಗಿರಲಾರದಲ್ಲವೇ? ಹಾಗೇ ಇಡೀ ಸಮುದಾಯ ಸಮಾಜವನ್ನೇ ಶಿವಜಂಗಮವಾಗಿ, ಭಕ್ತನನ್ನು ಅದರ ಅವಿಭಿನ್ನ ಅಂಗವಾಗಿ ಕಾಣುವ ಪ್ರೌಢ, ವ್ಯಾವಹಾರಿಕ ಭಕ್ತಿಯೋಗವನ್ನು ಬಸವಾದಿ ಪ್ರಮಥರು ಸಮರ್ಥವಾಗಿ ಪ್ರಯೋಗಿಸಿಯೂ ತೋರಿಸಿದ್ದಾರೆ.


        ಸ್ವಾಮಿಗಳ ಈ “ಭಕ್ತಿದೀಕ್ಷೆ”ಯನ್ನು, ಅಂತಹ ಸರ್ವಸಮಾನ, ಅನುಕಂಪಪೂರಿತ ಮಾನವ ಸಮಾಜ ನಿರ್ಮಾಣಕ್ಕಾಗಿ ಎಂದು ಭಾವಿಸಬೇಕಲ್ಲವೇ? ‘ಉಚ್ಚಕುಲ’ದ ಉನ್ಮತ್ತ ಯಜಮಾನರುಗಳು  ಈ ಮೆಲ್ಪಙ್ತಿ ಅನುಸರಿಸುವುದಾದಲ್ಲಿ ಮಾತ್ರಾ ಸ್ವಮಿಗಳ ಜೀವಿತದ ಹೇರಾಸೆ ಇಡೇರೀತು. ಏಕೆಂದರೆ ಕಷ್ಟಪಡುತ್ತಿರುವ ನತದ್ರಷ್ಟ ಜೀವಿಗಳನ್ನು ಅನುಕಂಪದಿಂದ ಮೇಲೆತ್ತಿ ಸರಿಸಮನತೆ ಉಂಟುಮಾಡಿಕೊಡಬೇಕಾದವರು ಅವರು. ಕೀಳರಿಮೆಯಿಂದ ಬಳಲುವ ದಲಿತರಿಗಿಂತಾ ಅಂಥವರಿಗೆ ಈ ಹೃದಯ ಸಂಸ್ಕಾರ ಹೆಚ್ಚು ಅಗತ್ಯವಲ್ಲವೇ?!

Comments