ಬಿಹಾರದ “ನೀತಿ” ಪಾಠ
ಬಿಹಾರದ “ನೀತಿ” ಪಾಠ
ಬಿಹಾರದ ವಿಧಾನ ಸಭೆಗೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಜನತಾ ದಳ (ಸಂಯುಕ್ತ) ಮತ್ತು ಭಾಜಪ ಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಆಶ್ಚರ್ಯ ತರದಿದ್ದರೂ ವಿಜಯದ ಪ್ರಮಾಣ ಮತ್ತು ಕಾಂಗ್ರೆಸ್, ಲಾಲೂ ಪಕ್ಷಗಳ ಧೂಳೀಪಟ ಎಲ್ಲರನ್ನೂ ದಂಗು ಬಡಿಸಿದ್ದಂತೂ ನಿಜ. ಬಹುಶಃ ಇಂದಿರಾ ವಧೆಯ ನಂತರ ನಡೆದ ಚುನಾವಣೆಯಲ್ಲಿನ ಕಾಂಗ್ರೆಸ್ ಜಯಭೇರಿಯ ಪ್ರಮಾಣವನ್ನೂ ಮೀರಿಸುವ ಗೆಲುವಾಗಿರಬಹುದು ನೀತೀಶರದು. ಅಷ್ಟೇ ಅಲ್ಲ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಉಪಯೋಗಿಸಿ ಉತ್ತರ ಪ್ರದೇಶದ ರೀತಿಯ ಫಲಿತಾಂಶ ನಿರೀಕ್ಷಿಸಿದ್ದ ಕಾಂಗ್ರೆಸ್ಸಿಗರಿಗೆ ಈ ಚುನಾವಣೆ ಒಂದು ಕಹಿ ಅನುಭವ. ಬಿಹಾರದ ಚುನಾವಣೆಯ ಮತ್ತೊಂದು ಸ್ವಾರಸ್ಯ ಮತ್ತು positive outcome ಏನೆಂದರೆ ಈ ಗೆಲುವಿನೊಂದಿಗೆ ಜನತಾ ದಳ ದ ಮೈತ್ರಿ ಪಕ್ಷಕ್ಕೆ “ನೀತಿ” ಪಾಠ ಸಹ ಸಿಕ್ಕಿದ್ದು.
ಅತ್ಯಂತ ಸಂಕುಚಿತ, ‘ಹೇಟ್’ ಅಜೆಂಡಾದೊಂದಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಪಕ್ಷಗಳಿಗೆ ಮಂದಿರವೊಂದೇ ಮಂತ್ರವಲ್ಲ, “ಸರ್ವೇ ಜನಃ ಸುಖಿನೋಭವಂತು” ವೇ ನನ್ನ ತಂತ್ರ ಎಂದು ಸ್ಪಷ್ಟವಾಗಿಸಿದ ನೀತೀಶ್ ಕುಮಾರ್, ಕೇವಲ ಅಭಿವೃದ್ದಿ, ಹಿಂದುಳಿದವರ, ಬಡ ಜನರ ಏಳಿಗೆಯ ಮಂತ್ರದೊಂದಿಗೆ ಚುನಾವಣೆ ಗೆಲ್ಲಲು ಸಾಧ್ಯ ಎನ್ನುವ ಸಾಮಾನ್ಯ ಸತ್ಯದ ಪರಿಚಯ ಮಾಡಿಸಿದರು. ಹೀಗೆ ಅಭಿವೃದ್ದಿಯ ಏಕ ಮಾತ್ರ ಅಜೆಂಡಾ ಇಟ್ಟುಕೊಂಡು ಬಿಹಾರದ ಚುನಾವಣೆಯಲ್ಲಿ ಸೆಣಸಿದ ನೀತೀಶ್ ಕುಮಾರ್ ಅಭೂತಪೂರ್ವವಾದ ವಿಜಯವನ್ನೂ ಸಾಧಿಸಿದರು.
ಚುನಾವಣೆಯ ಪ್ರಚಾರದ ವೇಳೆ ದಿಗ್ಗಜರನ್ನು ಪ್ರಚಾರಕ್ಕೆ ಇಳಿಸುವುದು ವಾಡಿಕೆ. ಹಿಂದುತ್ವದ ಪೋಸ್ಟರ್ ಬಾಯ್ ಗಳೆಂದೇ ಗುರುತಿಸಿಕೊಳ್ಳುವ ನರೇಂದ್ರ ಮೋದಿ ಮತ್ತು ವರುಣ್ ಗಾಂಧೀ ಯನ್ನ ಪ್ರಚಾರಕ್ಕೆ ಇಳಿಸಲು ಭಾಜಪ ಶ್ರಮ ಪಟ್ಟರೂ ನೀತೀಶ್ ಮಾತ್ರ ಪಟ್ಟು ಬಿಡದೆ ಯಾವುದೇ ಕಾರಣಕ್ಕೂ ಈ ಈರ್ವರು ವ್ಯಕ್ತಿಗಳು ಬಿಹಾರದಲ್ಲಿ ಕಾಲಿಡಕೂಡದು ಎಂದು ಸ್ಪಷ್ಟವಾಗಿ ತಾಕೀತು ಮಾಡಿದ್ದರು. ಈ ತಾಕೀತಿನ ತಾಕತ್ತಿನಿಂದ ಮತ್ತು ಸರ್ವರನ್ನೂ ಸಮಾನವಾಗಿ ನಡೆಸಿಕೊಳ್ಳುವ ತಮ್ಮ ಇರಾದೆಯಿಂದ ಸಮಾಜದ ಎಲ್ಲ ವರ್ಗಗಳ ಬೆಂಬಲ ಪಡೆದು ದೇಶದಲ್ಲಿ ಒಂದು ಹೊಸ ಸಾಮಾಜಿಕ ರಾಜಕೀಯ ಸಮೀಕರಣದ ನಿರ್ಮಾಣಕ್ಕೆ ನೀತೀಶ್ ಕಾರಣಕರ್ತರಾದರು.
ಸ್ವಜನ ಪಕ್ಷಪಾತ, ಹಗರಣ, ಮತೀಯವಾದ, ಜಾತೀವಾದ ಮುಂತಾದ ಹಲವು ರೋಗಗಳಿಂದ ಬಳಲುತ್ತಿರುವ ಭಾರತೀಯ ರಾಜಕಾರಣಕ್ಕೆ ನೀತೀಶರಂಥ ರಾಜಕಾರಣಿಗಳು ತುಂಬಾ ಅವಶ್ಯಕ. ತೀರಾ ಹಿಂದುಳಿದ ರಾಜ್ಯವೆಂದು ಗೇಲಿಗೆ ಒಳಗಾಗಿದ್ದ ಬಿಹಾರಕ್ಕೆ ಒಂದು ಸುಂದರವಾದ ಆಡಳಿತವನ್ನು ನೀತೀಶರು ಕೊಡುವಂತಾಗಲಿ ಎಂದು ಹಾರೈಸೋಣ.
Comments
ಉ: ಬಿಹಾರದ “ನೀತಿ” ಪಾಠ