ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3
ಒಂದು ವಿಕೃತ ಘಟನೆ
ಒಂದು ದಿನ ಮಧ್ಯಾಹ್ನ ಸುಮಾರು ಒಂದು ಘಂಟೆಯ ಸಮಯದಲ್ಲಿ ಒಬ್ಬ ಮಹಿಳಾ ಕೈದಿಯನ್ನು ಜೈಲಿನಲ್ಲಿ ದಾಖಲಾತಿಗಾಗಿ ಪೋಲಿಸರು ಕರೆತಂದರು. ಅವಳು ಹೊಳೆನರಸಿಪುರದ ಬಸ್ ನಿಲ್ದಾಣದಲ್ಲಿ ಸರಗಳ್ಳತನ ಮಾಡುತ್ತಿದ್ದಳೆಂಬ ಆರೋಪದ ಮೇಲೆ ಬಂಧಿಸಿ ಮೊಕದ್ದಮೆ ಹೂಡಿದ್ದರು. ಆಕೆಯನ್ನು ದಾಖಲು ಮಾಡಿಕೊಂಡು ಮಧ್ಯಾಹ್ನ ಊಟ ಮಾಡಿಕೊಂಡು ಬಂದ ನಂತರ ಆಕೆಯನ್ನು ಹಾಸನದ ಜೈಲಿಗೆ ವರ್ಗಾಯಿಸಲು ವಾರೆಂಟ್ ಸಿದ್ಧಪಡಿಸಿಡಲು ಗುಮಾಸ್ತರಿಗೆ ತಿಳಿಸಿ ನಾನು ಮನೆಗೆ ಊಟಕ್ಕೆ ಹೋದೆ. ಮನೆಗೆ ಹೋಗಿ ಹತ್ತು ನಿಮಿಷವಾಗಿರಬಹುದು. ಗುಮಾಸ್ತ ಓಡುತ್ತಾ ಮನೆಗೆ ಬಂದವನು ಮಹಿಳಾ ಬಂದಿಯ ಆರೋಗ್ಯ ತುಂಬಾ ಕೆಟ್ಟಿದೆಯೆಂದೂ ಆಕೆಗೆ ಬಹಳ ಬ್ಲೀಡಿಂಗ್ ಆಗುತ್ತಿದೆಯೆಂದೂ ತಿಳಿಸಿದ. ಆಕೆಯನ್ನು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚನೆ ಕೊಟ್ಟು ಡಾಕ್ಟರರಿಗೆ ತಕ್ಷಣ ಸೂಕ್ತ ಚಿಕಿತ್ಸೆ ಮಾಡಲು ಕೋರಿದೆ. ನಾನೂ ಆಸ್ಪತ್ರ್ರೆಗೆ ಧಾವಿಸಿದೆ. ಆಕೆಗೆ ಗರ್ಭಪಾತವಾಗಿತ್ತು. ತಕ್ಷಣದಲ್ಲಿ ಆಕೆಗೆ ಚಿಕಿತ್ಸೆಯಾಗಿರದಿದ್ದಲ್ಲಿ ಆಕೆಯ ಜೀವಕ್ಕೆ ಅಪಾಯವಿತ್ತು. ಆಕೆಯನ್ನು ಹಾಸನದ ಜೈಲಿಗೆ ಕಳಿಸುವ ವಿಚಾರ ಬದಲಾಯಿಸಿ ಆರೋಗ್ಯ ಸುಧಾರಣೆಯಾಗುವವರೆಗೆ ಆಸ್ಪತ್ರೆಯಲ್ಲೆ ಇರಿಸಲು ನಿರ್ಧರಿಸಿದೆ. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಬಳಸಲು ಅವಕಾಶವಿದ್ದುದು ಇಪ್ಪತ್ತೈದು ರೂಪಾಯಿ ಮಾತ್ರ. ಹೆಚ್ಚಿನ ಮೊಬಲಗು ಬೇಕಾದರೆ ಡಿ.ಜಿ.ಪಿ.ರವರಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಬೇಕಿತ್ತು. ಆಕೆಯನ್ನು ನೋಡಲಾಗಲೀ, ಜಾಮೀನಿನ ಮೇಲೆ ಬಿಡಿಸಿಕೊಂಡು ಹೋಗಲಾಗಲೀ ಯಾರೂ ಬಂದಿರಲಿಲ್ಲ. ಆಕೆ ಚೇತರಿಸಿಕೊಳ್ಳಲು ಹನ್ನೆರಡು ದಿನಗಳೇ ಬೇಕಾಯಿತು. ಅಲ್ಲಿಯವರೆಗೆ ಅವಳಿಗೆ ನನ್ನ ಮನೆಯಿಂದಲೇ ಊಟ ತರಿಸಿಕೊಡುತ್ತಿದ್ದೆ. ಆಸ್ಪತ್ರೆಯಲ್ಲಿ ಸಿಗದಿದ್ದ ಔಷಧಿ ಹೊರಗೆ ಖರೀದಿಸಿಕೊಟ್ಟೆ. ಪ್ರತಿದಿನ ಸಾಯಂಕಾಲ ಆಕೆಯನ್ನು ಕಾಣಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆ ಸಂದರ್ಭದಲ್ಲಿ ಆಕೆ ತಿಳಿಸಿದ ವಿಷಯ ಆಘಾತಕರವಾಗಿತ್ತು, ಜಿಗುಪ್ಸೆ ಮೂಡಿಸುವಂತಿತ್ತು. ಸರಗಳ್ಳತನ ಮಾಡುತ್ತಿದ್ದಳೆಂದು ಪೋಲಿಸರು ಅವಳನ್ನು ಬಂಧಿಸಿದ ನಂತರ ೨೪ ಘಂಟೆಗಳ ಒಳಗೆ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಆಕೆಯನ್ನು ಎರಡು ರಾತ್ರಿಗಳು ಠಾಣೆಯಲ್ಲೇ ಬಂಧಿಸಿಟ್ಟಿದ್ದರಂತೆ. ಗರ್ಭಿಣಿಯಾಗಿದ್ದ ಆಕೆಯನ್ನು ಠಾಣೆಯಲ್ಲಿ ಇಡೀ ರಾತ್ರಿ ಸಮಯದಲ್ಲಿ ಬೆತ್ತಲೆಯಾಗಿರುವಂತೆ ಮಾಡಿ ಹಿಂಸಿಸಿ ವಿಕೃತವಾಗಿ ವರ್ತಿಸುತ್ತಿದ್ದುದಲ್ಲದೆ ಇಬ್ಬರು ಅತ್ಯಾಚಾರ ಮಾಡಿದ್ದರಂತೆ. ಆಕೆಯ ಮರ್ಮಾಂಗಕ್ಕೆ ಲಾಠಿ ತೂರಿಸಿದ್ದರಂತೆ. ಆಕೆಗೆ ಗರ್ಭಪಾತವಾಗಲು ಪೋಲಿಸರ ಹಿಂಸೆಯೇ ಕಾರಣವಾಗಿದ್ದು ಸ್ಪಷ್ಟವಾಗಿತ್ತು. ವಿಚಾರಣಾ ದಿನಾಂಕದಂದು ನ್ಯಾಯಾಧೀಶರ ಮುಂದೆ ಈ ಎಲ್ಲಾ ಸಂಗತಿ ತಿಳಿಸುವಂತೆ ಆಕೆಗೆ ಸಲಹೆ ನೀಡಿದೆ. ಆದರೆ ಆಕೆ ಹಾಗೆ ಮಾಡುವಳೆಂದು ನನಗೆ ಅನ್ನಿಸಲಿಲ್ಲ. ಆಸ್ಪತ್ರೆಯಿಂದ ಹೊರಬಂದ ದಿನ ಆಕೆಯನ್ನು ಹಾಸನದ ಜೈಲಿಗೆ ಕಳಿಸಲು ವಾರೆಂಟ್ ಸಿದ್ಧಪಡಿಸುತ್ತಿದ್ದ ವೇಳೆಯಲ್ಲಿ ಚಿತ್ರದುರ್ಗದ ಒಬ್ಬ ವ್ಯಕ್ತಿ ಆಕೆಯನ್ನು ಜಾಮೀನಿನ ಮೇಲೆ ಬಿಡುವ ಆದೇಶ ತಂದಿದ್ದರಿಂದ ಆಕೆಯನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಗೊಳಿಸುವ ಸಂದರ್ಭದಲ್ಲಿ ನನ್ನ ಮುಂದೆ ಹಾಜರುಪಡಿಸಿ ರಿಜಿಸ್ಟರಿನಲ್ಲಿ ಆಕೆಯ ಸಹಿಯನ್ನು ಪಡೆಯುತ್ತಿದ್ದಾಗ ಆಕೆ ಇತರ ಸಿಬ್ಬಂದಿಯ ಎದುರಿಗೇ ನನಗೆ ಅಡ್ಡಬಿದ್ದು ನಮಸ್ಕಾರ ಮಾಡಿ "ಅಣ್ಣಾ, ನೀವು ನನ್ನ ಜೀವ ಕಾಪಾಡಿದ ದೇವರು. ನಿಮ್ಮನ್ನೆಂದೂ ಮರೆಯುವುದಿಲ್ಲ" ಎಂದು ಅಳುತ್ತಾ ಹೇಳಿದಾಗ ನನ್ನ ಕಣ್ಣು ತೇವವಾಯಿತು.
(ಕಾಲಘಟ್ಟ: 1982-83).
Comments
ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3
In reply to ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3 by manju787
ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3
ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3
In reply to ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3 by gopaljsr
ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3
ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3
In reply to ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3 by partha1059
ಉ: ಸೇವಾಪುರಾಣ -29: ಹೊಳೆನರಸಿಪುರ - ಅನುಭವ ಭರಪೂರ -3