ಭಾನುವಾರದ ಒಂಟಿತನದ ಲಹರಿಯಲ್ಲಿ. ಸ .ರಿ .ಗ .ಮ. ಪ.

ಭಾನುವಾರದ ಒಂಟಿತನದ ಲಹರಿಯಲ್ಲಿ. ಸ .ರಿ .ಗ .ಮ. ಪ.

ಇಂದೂ ಕೂಡ ಎಂದಿನಂತೆಯೇ ಮೂಡಣದಲ್ಲಿ ಭಾಸ್ಕರ ನಗುತ್ತಾ ಮೂಡಿದನಾದರೂ’ನನ್ನ ಹೃದಯದಲ್ಲಿ,ಮನೆಯಲ್ಲಿ,ಮನದಲ್ಲಿ ಬರೀ ಖಾಲಿ ಖಾಲಿ ಏಕೆ?,ನನ್ನ ಜೀವನದಲ್ಲಿ ಅಂತಹ ವ್ಯತ್ಯಾಸ ಏನಾಯಿತು? ಹೀಗೇಕೆ ಆಯಿತು?’ ಎಂದು ಯೋಚಿಸುತ್ತಿರುವಾಗಲೇ ಮೊಬೈಲ್ ಕೋಳಿ ’ಬೆಳಗಾಗಿದೆ’ಎಂದು ಸುಪ್ರಭಾತ ಹಾಡತೊಡಗಿತು. ಕಣ್ಣು ಮುಚ್ಚಿಕೊಂಡೆ ಕೂಗುವ ಕೋಳಿಯ ತಲೆಯ ಮೇಲೆ ಮಟುಕಿದೆ ಮತ್ತು ಹಾಗೇ ಮಂಚದ ಮೇಲೆ ಹೊರಳಾಡುತ್ತಿದ್ದಂತೆಯೇ ಮತ್ತೆ ಅದೇ ಪ್ರಶ್ನೆ ’ ಮನಸ್ಸೆಲ್ಲಾ ಖಾಲಿ ಖಾಲಿ ಏಕೆ?’. ಮಾಗಿಯ ಚಳಿ ಬೇರೆ ಹೊದಿಕೆಯ ಜೊತೆ ಮಂಚದ ಹಾಸಿಗೆ ಕೂಡ ಮೈಗೆ ಅಂಟಿಕೊಂಡಂತೆ ಭಾಸವಾಯಿತು.
ಕಣ್ಣು ತೆರೆಯದೇ ಮನದಲ್ಲಿಯೇ’ತುಂಟ ಕೃಷ್ಣನ’ ಸ್ಮರಣೆ ಮಾಡುತ್ತಾ,ಬೆರಗುಗಣ್ಣಿನಿಂದ ಲೋಕವನ್ನೆಲ್ಲ ಬೆರಗುಗೊಳಿಸಿದ ಕೃಷ್ಣನ ಪಟವನ್ನು ನೋಡುತ್ತಾ ಎದ್ದೆ.ಬಚ್ಚಲ ಮನೆಯಲ್ಲಿ ನೀರಿನ ಸದ್ದು,ಕೈಬಳೆಗಳ,ಕಾಲು ಗೆಜ್ಜೆಯ ಸದ್ದಿಲ್ಲ-ತಟ್ಟನೆ ತಲೆಯಲ್ಲಿ ಬಂದದ್ದು " ಓ! ನೀನು ಇಲ್ಲ, ಮನೆಯಲ್ಲಿ ಇಲ್ಲ. ನಿನ್ನೆಯೇ ಊರಿಗೆ ಹೋದೆ’ಎಂದು ಹೆಂಡತಿ ಊರಿಗೆ ಹೋದದ್ದು ನೆನಪಿಗೆ ಬಂತು.ಮನದ ಖಾಲಿ ಖಾಲಿ ಯ ಪ್ರಶ್ನೆಗೆ ಉತ್ತರ ಟ್ಯೂಬ್ ಲೈಟ್ ಮಂಡೆಗೆ ಕೊನೆಗೂ ಹೊಳೆಯಿತು. ಹೊಳೆದದ್ದು ಬೇಸರವನ್ನೂ ಮತ್ತೂ ಹೆಚ್ಚಿಸಿತು.ಆಫೀಸ್ ಬೇರೆ ಇಲ್ಲ ಇವತ್ತು ಭಾನುವಾರ ವೆಂದು ಗೊತ್ತಾದ ಮೇಲಂತೂ ಬೇಸರ ನೂರ್ಮಡಿಯಾಯಿತು. ಬೇಸರ ಎಷ್ಟಾದರೂ ಹೊಟ್ಟೆಯ ಗೂಡಲಿ ಮೊಡುವ ಹಸಿವಿನ ತಲ್ಲಣ,ಚುರುಕು ಗಮನವನ್ನು ಬೇರೆಡೆಗೆ ಅಂದರೆ ಅಡುಗೆ ಮನೆ...... ಸಾರಿ! ಹೆಂಡತಿ ಅಥವಾ ತಾಯಿ ಮನೆಯಲ್ಲಿದ್ದರೆ ಮಾತ್ರ ಆ ಕಡೆ ಗಮನ ಇಲ್ಲವಾದಲ್ಲಿ ಮಾವನ ಮನೆ ಅರ್ಥಾತ್ ದರ್ಶಿನಿಯ ಕಡೆಗೆ ಕಾಲು ಬುದ್ಧಿ ಹೇಳೇ ಹೇಳುತ್ತೆ ಅಲ್ಲವೇ!?.
ಸ್ನಾನ,ಸಂಧ್ಯಾವಂದನೆ ಮಾಡುತ್ತಾ ದೇವರ ದೀಪ ಹೊತ್ತಿಸಿ " ಅಜ್ಯಾನದ ಅಂಧಕಾರದಿಂದ ತುಂಬಿರೋ ಮನಗಳಲ್ಲಿ ಜ್ಯಾನದ ಜ್ಯೋತಿ ಹೊತ್ತಿಸುವುದು ಹೇಗೆ? ದಾರಿ ತೋರಿಸು" ಎಂದು ಪ್ರಾರ್ಥಿಸಿದೆ.ತಂದೆ-ತಾಯಿ ನನಗೆ ಮದುವೆ ಮಾಡಿ ಜವಾಬ್ದಾರಿಯನ್ನು ಹೆಚ್ಚಿಸಿದ್ದಲ್ಲದೇ ಎರಡು ಮನೆಗಳ ಸಂಬಂಧಗಳನ್ನು ಮಧುರವಾಗಿಸಿಕೊಳ್ಳುಲು ಹೆಣಗಾಡಬೇಕಾಗಿದೆಯಲ್ಲಾ ಎಂಬ ಆತಂಕವೂ ಮನದಲ್ಲಿ ಮೊಡಿತು. ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿರೋ ತಂದೆ-ತಾಯಿ, ಪ್ರೀತಿ-ವಿಶ್ವಾಸ, ಸಂಬಂಧಗಳ ಬಗ್ಗೆ ಸೀಮಿತಾರ್ಥದಲ್ಲಿ ಸಂಕುಚಿತ ಸ್ವಭಾವ, ಬಾಹ್ಯ ಕಣ್ಣಿಗೆ ಮಾತ್ರವಲ್ಲದೆ ಆಂತರ್ಯದ ಒಳಗಣ್ಣಿಗೆ ಪೊರೆಯನ್ನು ಬೆಳೆಸಿಕೊಂಡಿರುವವರಿಗೆ ಯಾವ ಚಿಕಿತ್ಸೆ ಕೊಡಿಸುವುದು? ಯಾರಿಂದ ಕೊಡಿಸುವುದು? ಓ ದೇವರೇ! ಅವರಿಗೆಲ್ಲಾ ಅರಿಯುವ ಶಕ್ತಿ ಕೊಡು. ಸಂಸಾರ ಜಂಜಡದಲ್ಲಿ ಮನಸ್ಸು ಜಡವಾಗದ ಹಾಗೆ ನೋಡಿಕೊಳ್ಳುವುದು ಹೇಗೆ? ಮನುಷ್ಯನಾದವನಿಗೆ ಸಂಬಂಧಗಳು ಬೇಕು. ಎಂತಹ ಸಂಬಂಧಗಳು ಬೇಕು? ಸ್ಪೂರ್ತಿ ಕೊಡುವ, ಚೇತನದಾಯಕ ವಾಗುವ ಸಂಬಂಧಗಳು, ಏಳಿಗೆಗೆ ದಾರಿಯಾಗುವ ಸಂಬಂಧಗಳು ಬೇಕೇ ಬೇಕು. ಆದರೆ ದೊಡ್ಡವರೆನಿಸಿಕೊಂಡವರಿಗೆ ಇದೆಲ್ಲಾ ಏಕೆ ಅರ್ಥವಾಗೋದಿಲ್ಲ. ಸ್ವಪ್ರತಿಷ್ಟೆ,ಸ್ವಾರ್ಥಗಳೇ ಹೆಚ್ಚಾಗಿ ಹೋಯಿತೇ? ಜಗಳದಿಂದ ಯಾವ ಅಭಿವೃದ್ಧಿ ಸಾಧ್ಯ? ಅಧೋಗತಿಯ ಅಭಿವೃದ್ಧಿಯಷ್ಟೇ!, ಅಶಾಂತಿಯ ಏಳಿಗೆಯಷ್ಟೇ!.
ಮದುವೆ! ಅರ್ಥಾತ್ ಮಧು+way ಅಂದರೆ ಸಿಹಿ,ಅಭಿವೃದ್ಧಿ,ಸಂಬಂಧ,ಜೀವನ ಸಾಧನೆ, ಮೋಕ್ಷ ಸಾಧನೆಗೆ ದಾರಿಯೇ ಅಲ್ಲವೇ?. ಸಂಬಂಧಗಳನ್ನು ಮುರಿದುಕೊಳ್ಳುವುದು ತುಂಬಾ ಸುಲಭ, ಸಹಬಾಳ್ವೆಯನ್ನು ಸಾಧಿಸುವುದು, ಸಾಧನೆಯ ತಪಸ್ಸೇ ಅಲ್ಲವೇ?. ಮರೀಚಿಕೆಯಂತೂ ಅಲ್ಲ, ಸ್ವಲ್ಪ ತಾಳ್ಮೆ,ಸಹನೆಯ ಅಗತ್ಯತೆ ಬೇಕು. ಹಾಗೆ ಪ್ರತಿಷ್ಟೆ,ಸ್ವಾರ್ಥ,ಸಂಕುಚಿತ ಸ್ವಭಾವಗಳನ್ನು ಬದಿಗೊತ್ತಿ ಆಲೋಚಿಸಿದರೆ ಸತ್ಯದರ್ಶನವಾಗುತ್ತದೆ.ದೊಡ್ಡೋರು ಓಕೆ, ಆದರೆ ದ್ವೇಷ ಯಾಕೆ?. ದ್ವೇಷದಿಂದ ಸಾಧಿಸುವುದಾದರೂ ಏನು?ಮೊರು ಮುಕ್ಕಾಲು ದಿವಸದ ಈ ಬದುಕಿನಲ್ಲಿ ದ್ವೇಷ ಜ್ವಾಲೆಯಿಂದ ಉರಿದುಹೋಗುವುದಕ್ಕಿಂತ ಪ್ರೀತಿಯ,ಶಾಂತಿಯ ದೀಪವಾಗಿ ಉರಿದು ಹಲವರಿಗೆ ದಾರಿದೀಪವಾದರೆ ಸಾರ್ಥಕವಲ್ಲವೇ? ಓ ಹೊಟ್ಟೆ ಚುರುಗುಟ್ಟುತ್ತಿದೆ ದೇವರೇ ಓ ನನ್ನಲ್ಲಿರುವ ದೇವರೇ ನಿನ್ನನ್ನು ಇನ್ನು ಹೆಚ್ಚುಹೊತ್ತು ಸತಾಯಿಸುವುದಿಲ್ಲವೆಂದು ಸಮಾಧಾನ ಪಡಿಸುತ್ತಾ. ಅಗರಬತ್ತಿಯನ್ನು ಹೊತ್ತಿಸಿ " ಶಾಂತಿ ಮನೆಯಲೆಲ್ಲಾ,ಎಲ್ಲರ ಮನಗಳಲ್ಲೂ ಪಸರಿಸಲಿ" ಎಂದು ಪ್ರಾರ್ಥಿಸಿದೆ.
ಧಿರಿಸುಗಳನ್ನು ಧರಿಸಿ ಹೊರಡಲನುವಾದೆ. ಮನಸ್ಸು ಶಾಂತವಾಗಿತ್ತು. ನನ್ನ ಹೆಂಡತಿಯ ಅಚ್ಚುಕಟ್ಟುತನಕ್ಕೆ ಮನಸೋತು, ಮನದಲ್ಲೆ ಹೆಮ್ಮೆ ಪಟ್ಟೆ. ಕನ್ನಡಿಯ ಮುಂದೆ ತಲೆ ಬಾಚಿಕೊಳ್ಳುತ್ತಾ, ಬಾಲ್ಡ್ ಆಗುತ್ತಿರುವುದಕ್ಕೆ ಬೇಸರಪಟ್ಟುಕೊಳ್ಳುತ್ತಾ, ಮೊದಲ ವಾರ್ಷಿಕೊತ್ಸವಕ್ಕೆ ಹೆಂಡತಿ ಉಡುಗೊರೆಯಾಗಿ ಕೊಟ್ಟ body spray ಕಂಕುಳಲ್ಲಿ sparay ಮಾಡಿಕೊಂಡೆ, ಇಸ್ತ್ರಿ ಮಾಡಿಟ್ಟಿದ ಅಂಗಿಯನ್ನು ಧರಿಸಿ, ಮದುವೆಯಲ್ಲಿ ಕೊಟ್ಟ denim ಪೌಡರನ್ನು ಮುಖಕ್ಕೆ ಹಚ್ಚಿಕೊಂಡೆ ಹಾಗೇ ನನ್ನ ಆಫೀಸಿನ ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ಮನೆಯ ಬೀಗದಕೈಯನ್ನು ತೆಗೆದುಕೊಂಡೆ. ಮದುವೆಯಲ್ಲಿ ಕೊಟ್ಟ Sonata ಕೈ ಗಡಿಯಾರವನ್ನು ಎಡಗೈಗೆ ಕಟ್ಟಿಕೊಂಡೆ, ಅದು ’೯.೦೦’ ಗಂಟೆಯಾಗಿದೆ ಎಂದು ಹೇಳುತ್ತಿತ್ತು. TV ಯನ್ನು ಆನ್ ಮಾಡಿದೆ ಈಟೀವಿ ಚಾನಲ್ ಹಾಕಿದೆ " ಮುಖ್ಯಾಂಶಗಳು ಖಾತೆ ಹಂಚಿಕೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಖ್ಯಾತೆಯಿಲ್ಲ" ಆದರೆ ನಮ್ಮ ಸಮ್ಮಿಶ್ರ ಸರ್ಕಾರ (ಧಾಂಪತ್ಯ ಜೀವನ)ದ ಪಕ್ಷ ವರಿಷ್ಟರೀರ್ವರಲ್ಲಿ ಗೊಂಧಲವಿದೆ, ಮಾತುಕತೆಗೆ ಸಂದರ್ಭಗಳೇ ಸಿಗುತ್ತಿಲ್ಲ, ಬಂಡಾಯದ ಗಾಳಿಯಿದೆ, ಸಂಧಾನಕ್ಕೆ ಸಂದರ್ಭಗಳು ಬೇಕು, ನಾನಂತೂ ಅಶಾವಾದಿಯೇ!" ದೀಪವು ನಿನ್ನದೇ, ಗಾಳಿಯೊ ನಿನ್ನದೇ, ಆರದಿರಲಿ ಬದುಕು"," ಹಾಲಲ್ಲಾದರೂ ಹಾಕು,ನೀರಲ್ಲಾದರ್ಯ್ ಹಾಕು ರಾಘವೇಂದ್ರನೆ" ಎಂಬೆಲ್ಲಾ ಆಲೋಚನೆಗಳು ಬೆಳ್ಮೋಡಗಳಾಗಿ ಮನದಲ್ಲಿ ಆಶಾಕಿರಣವನ್ನು ಬಿತ್ತುತ್ತಿತ್ತು, ವಾರ್ತೆಗಳು ಮುಗಿದಿತ್ತು. TV ಯನ್ನು ಆಫ್ ಮಾಡಿದೆ. ಹೊಟ್ಟೆಯ ಚುರು ಚುರು ಹೆಚ್ಚಾಗುವುದರಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕಿ ಚಪ್ಪಲಿಯನ್ನು ಧರಿಸಿ ಹೊರಟೆ. "ಓ ಆ ಕಬ್ಬಿಣದ ಬಾಗಿಲನ್ನು ಹಾಕುವುದನ್ನೇ ಮರೆತೆ ಇಲ್ಲದಿದ್ದರೆ ನನ್ನ ಓನರ್ ಅಜ್ಜಿ " ಬಿಸಿಲಿಗೆ ಬಾಗಿಲು ಹಾಳಾಗುತ್ತೆ ನಾಗೇಶ ಬಾಗಿಲು ಹಾಕಿಕೊಂಡು ಹೋಗು" ಎಂದೆಲ್ಲಾ ಉಪದೇಶಿಸುತ್ತೆ ಎಂದು ಕೊಳ್ಳುತ್ತಾ ಮಹಡಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದೆ. ಕಾಂಪೌಂಡ್ ಗೇಟಿನ ಬಳಿಯೇ ಓನರ್ ಅಜ್ಜಿ ನಿಂತಿತ್ತು. ನನ್ನನ್ನು ನೋಡಿ " ನಾಗೇಶ ನೀನು ಮನೆಯಲ್ಲೇ ಇದ್ದೀಯ? ಎಲ್ಲಿ ನಿನ್ನ ಹೆಂಡತಿ?ತಿಂಡಿಯಾಯ್ತಾ?........ ನೂರಾರು ಪ್ರಶ್ನೆಗಳು ರೈಲ್ವೇ ಭೋಗಿಗಳಂತೆ ಹಾದುಹೋದವು. ಎಲ್ಲಕ್ಕೂ ನನ್ನ ಬಳಿಯಿದ್ದ ಉತ್ತರ " ಉಂ...ಉಂ....ಉಂ...." ಎಂದು ರೈಲು ಕೂಗುವ ಹಾಗೆ ಹೇಳುತ್ತಾ ತಲೆಯಾಡಿಸುತ್ತಾ ಗೇಟು ದಾಟಿ ಹೊರಟೆ.
ದಿವಸದ ಕೆಲಸಗಳನ್ನು ಮನದಲ್ಲೇ ಯೋಚಿಸುತ್ತಾ SLV corner ದರ್ಶಿನಿ ತಲುಪಿ ಹತ್ತು ರುಪಾಯಿ ಕೊಟ್ಟು ಎರಡು ಇಡ್ಲಿ ಹಾಗು ಒಂದು ಕಪ್ ಕಾಫಿ ತೆಗೆದುಕೊಂಡೆ. ಇಡ್ಲಿ ಹೊಟ್ಟೆಯಲ್ಲಿ ಇಳಿದ ಮೇಲೆ ಬಿಸಿ ಕಾಫಿ ಹೊಟ್ಟೆಗೆ ಇಳಿಸಿದೆ. ಹೊಟ್ಟೆಯಲ್ಲಿದ್ದ ಪರಮಾತ್ಮ ಸಂತುಷ್ಟಗೊಂಡ.ಅಲ್ಲಿಂದ ಮನೆಗೆ ಹೊರಟೆ. ಖಾಲಿ,ಖಾಲಿ ಬಸ್ಸುಗಳು ಇಂದು ಭಾನುವಾರ ಎಂದು ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಮನೆಗೆ ಹಿಂತಿರುಗಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಯೋಚಿಸತೊಡಗಿದೆ.ಗಾಂಧಿ ಬಜಾರ್ ಗೆ ತೆರಳಿ MBA ಪುಸ್ತಕಗಳ ಶೋಧನೆ,ಒಳ್ಳೆಯ ಕನ್ನಡ ಪುಸ್ತಕದ ಶೋಧನೆ ಎಂದು ಯೋಚಿಸುತ್ತಿರುವಾಗಲೇ MA(ಕನ್ನಡ) ದ ಅಂತಿಮ ವರ್ಷದ ಪರೀಕ್ಷೆಗೆ ಎ.ಎನ್.ಮೊರ್ತಿರಾಯರ " ಆಷಾಡಭೂತಿ" ನಾಟಕದ ಪ್ರತಿಗೆ ಹುಡಕಬೇಕೆನಿಸಿತು ಹಾಗು ಅವರು ಬರೆದ ’ಲಲಿತ ಪ್ರಬಂಧಗಳನ್ನು’ ಓದಬೇಕೆನಿಸಿತು.Citi ಬ್ಯಾಂಕಿನ Debit ATM ಕಾರ್ಡ್ ಜೇಬಿಗೆ ಇಳಿಬಿಡುತ್ತಾ ಹೊರಟೆ ಬಸ್ಸ್ ನಿಲ್ದಾಣಕ್ಕೆ. ಅನಂತರ ಬಂದು ಬಾಕಿ ಇರುವ MBA Assignments ಬೇರೆ ಬರೆಯಬೇಕಾಗಿತ್ತು ಎಂದು ಯೋಚಿಸುತ್ತಾ ಶ್ರೀನಗರದ ಬಸ್ಸ್ ನಿಲ್ದಾಣಕ್ಕೆ ಹೊರಟೆ.
ಶಿವಾಜಿನಗರದ ಕಡೆಗೆ ಹೊರಡುವ ೩೭ ನೇ ನಂ. ಬಸ್ಸಿನಲ್ಲಿ ಕುಳಿತೆ.೫.೦೦ರೂ ಕೊಟ್ಟು ’ಗಾಂಧಿ ಬಜಾರ್’ಗೆ ಟಿಕೆಟ್ ಕೊಡಿ ಎಂದೆ. ಮಹಿಳಾ ಕಂಡಕ್ಟರ್ ಟಿಕೆಟ್ ನೀಡಿದಳು. ಹನುಮಂತನಗರದ ಬೀದಿ ಬೀದಿಗಳಲ್ಲಿ ಶಬ್ದ ಮಾಡುತ್ತಾ ಹೊರಟಿತು ಬಸ್ಸು.ತಿರುವು-ಮರುವುಗಳನ್ನು ದಾಟಿ ನ್ಯಾಷನಲ್ ಕಾಲೇಜ್ ಬಳಿಯ ನಿಲ್ದಾಣದಲ್ಲಿ ಇಳಿದೆ. ಖಾಲಿ ಖಾಲಿ ರಸ್ತೆಗಳು,ಬಾಗಿಲು ಬೀಗ ಜಡಿದ ಅಂಗಡಿಗಳು ಭಾನುವಾರವೆಂದು ಒತ್ತಿ-ಒತ್ತಿ ಹೇಳುತ್ತಿರುವಂತೆ ಭಾಸವಾಯಿತು. "ಹಾಂ! ಇಲ್ಲೇ ಮುಕ್ತಾ ಧಾರಾವಾಹಿಯ ನಂಜುಂಡನನ್ನು ನಾನು ಮಾತನಾಡಿಸಿದ್ದು, ಒಳ್ಳೆಯ ಹುಡುಗ ನನ್ನನ್ನು ಹಾಗು ನನ್ನ ಶ್ರೀಮತಿಯನ್ನು ಮನೆಗೆ ಕರೆದ ಸಂಜೆಯ ಕಾಫಿಗೆ". ಎಂದು ಮನದಲ್ಲೇ ಆ ದಿನದ ಭೇಟಿ ಕಣ್ಣಮುಂದೆ ಬಂದು ಹೋಯಿತು. ಗಾಂಧಿ ಬಜಾರಿನ ಹೂವಿನ ಮಂಡಿಯ ಹೂಗಳ ಘಮ ಘಮ ಪರಿಮಳ ಸೂಸುವ ಹೂಗಳ ಸುಗಂಧವನ್ನು ಆಸ್ವಾದಿಸುತ್ತಾ, ಬೀಡಿ ಹಿಗೆಯನ್ನು ಪಕ್ಕದಲ್ಲಿಯೇ ಉಗುಳುತ್ತಾ ಹೋದವನನ್ನು ಮನದಲ್ಲಿಯೇ ಬೈದುಕೊಳ್ಳುತ್ತಾ Citi bank ATM ತಲುಪಿದೆ. ಕ್ಯೂ ನಲ್ಲಿ ನಿಂತು ನನ್ನ ಸರದಿಗಾಗಿ ಕಾದೆ, ನನ್ನ ಸರದಿ ಬಂದಾಗ ೧೫೦೦ ರೂ ತೆಗೆದುಕೊಂಡೆ, ಬ್ಯಾಲೆನ್ಸ್ ನೋಡಿ ಮನಸ್ಸಿಗೆ ಕಸಿವಿಸಿಯಾಯಿತು. ಅಲ್ಲಿಂದ ಬೇಗ ಬೇಗ ಹೊರಟೆ ’Cridit card salesmen' ಮುತ್ತಿಗೆ ಹಾಕುವ ಮುನ್ನ ಹೊರಡಬೇಕೆಂದು ಬೇಗ ಬೇಗ ಮೆಟ್ಟಿಲುಗಳನ್ನು ಇಳಿದು ಹೊರಟೆ. ಗಾಂಧಿ ಬಜಾರ್ ರಸ್ತೆಗಳು ಸಾಮಾನ್ಯವಾಗಿ ವಾಹನ ದಟ್ಟಣೆಯಿಂದ ಕೂಡಿರುತ್ತದೆ.ಎರಡು ಕಣ್ಣಿದ್ದರೂ ಮತ್ತೆರಡು ಕಣ್ಣುಗಳ ಅವಶ್ಯಕತೆಯಿದೆ ರಸ್ತೆ ದಾಟಲು. ನಮ್ಮ BMTC ಯವರು ಇಲ್ಲಿ ಯಾಕೆ 'one way' ಮಾಡಿಲ್ಲ ಎಂಬ ಪ್ರಶ್ನೆಯೊ ಮನದಲ್ಲಿ ಮೊಡಿತು.ರಸ್ತೆ ದಾಟಿ ಶ್ರೀ ಬುಕ್ ಹೌಸ್ ಗೆ ಹೋದೆ ರಾಶಿ ರಾಶಿ ಪುಸ್ತಕಗಳನ್ನು ನೋಡಿ ಮನದಲ್ಲಿ ಹರ್ಷ ತುಂಬಿತು.ಪುಸ್ತಕಗಳ ಅಭಿಮಾನಿ ನಾನು, ಪ್ರಪಂಚದ ಎಲ್ಲಾ ಪುಸ್ತಕಗಳನ್ನು ಓದಬೇಕೆನ್ನುವ ಆಸೆ, ಆದರೆ ಎಲ್ಲಾ ಕೊಂಡು ಓದುವುದಕ್ಕಾಗುವುದಿಲ್ಲ. ನನ್ನ ಜೀವಿತದಲ್ಲಿ ಎಷ್ಟು ಪ್ರಾಪ್ತಿ ಎಂದು ಆ ಭಗವಂತ ಬರೆದಿದ್ದಾನೋ ನಾನರಿಯೆ. ಬದುಕಿರುವವರೆಗೂ ಅದು ನನ್ನ ಜೊತೆಯಲ್ಲಿರಲಿ ಎಂದು ಬಯಸುತ್ತೇನೆ.ನನಗೆ ಬೇಕಾದ MBA ಪುಸ್ತಕ ಇನ್ನೂ ಬಂದಿರಲಿಲ್ಲ. ಹಾಗೆಯೇ ಪುಸ್ತಕಗಳ rack ನಲ್ಲಿದ್ದ ಪುಸ್ತಕಗಳನ್ನು ಕೈಗೆತ್ತಿಕೊಳ್ಳುತ್ತಾ,ಪುಸ್ತಕಗಳ ಮೈದಡವುತ್ತಾ ಕೆಲ ಸಮಯ ಪುಸ್ತಕಗಳೊಡನೆ ಕಳೆದೆ. ಆರ್,ಕೆ.ನಾರಾಯಣ ರ ’Dark Room' ಹಾಗು technical ಪುಸ್ತಕ ಕೊಂಡುಕೊಂಡು ಅಲ್ಲಿಂದ ಹೊರಟೆ.ವಿದ್ಯಾರ್ಥಿ ಭವನದ ಮುಂದೆ ಹೋಗುತ್ತಾ ಮಸಾಲೆ ದೋಸೆ ತಿನ್ನಬೇಕೆನಿಸಿತು ಆದರೆ "ಬಿಡುವಿನ ಸಮಯ" ಎಂಬ ತೂಗು ಬೋರ್ಡ್ ನೋಡಿ ಆಸೆಯೆಲ್ಲಾ ಮನದಲ್ಲೇ ಕಮರಿಹೋಯಿತು.
ಅಲ್ಲಿಂದ ಅಂಕಿತ ಪುಸ್ತಕದ ಅಂಗಡಿಗೆ ಬಂದೆ,ಅಲ್ಲಿ ಎ.ಎನ್. ಮೊರ್ತಿರಾಯರ ಪುಸ್ತಕಗಳಿಗೆ ಹುಡುಕಾಟ ನಡೆಸಿದೆ.ಅದೇ ಹುಡುಕಾಟದಲ್ಲಿ ಕಣ್ಣಿಗೆ ಬಿದ್ದದ್ದು ರವಿಬೆಳೆಗೆರೆಯ "ಗಾಂಧಿ ಮತ್ತು ಗೂಡ್ಸೆ" ಪುಸ್ತಕ ಕೊಳ್ಳಬೇಕೆನಿಸಿತು ಆದರೆ ಅದು ನನ್ನ plan ನಲ್ಲಿ ಇರಲಿಲ್ಲ ಮುಂಬರುವ ತಿಂಗಳಿನಲ್ಲಿ plan ಮಾಡೋಣ ಅಂತ ಸುಮ್ಮನಾದೆ. ಎ.ಎನ್. ಮೊರ್ತಿರಾಯರ " ಲಲಿತ ಪ್ರಬಂಧಗಳು" ಹಾಗು " ಆಷಾಡಭೂತಿ" ನಾಟಕದ ಪುಸ್ತಕವನ್ನು ಕೊಂಡುಕೊಂಡೆ. ಗಾಂಧಿ ಬಜಾರ್ ನಿಂದ ಬೀದಿಗಳಲ್ಲಿ ಒಂಟಿಯಾಗಿ ಓಡಾಡುವುದು ಕಷ್ಟವೆನಿಸಿತು ಜೊತೆಯಲ್ಲಿ ನನ್ನ ಶ್ರೀಮತಿ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೆನಿಸಿತು.ಪುಸ್ತಕಗಳನ್ನು ಕಂಡರೆ ಅವಳಿಗೆ ಅಷ್ಟಕಷ್ಟೇ!, ಅವಳಿಗೆ ನಾನು ಪುಸ್ತಕದ ಅಂಗಡಿಗೆ ಹೋಗೋದು ಇಷ್ಟವಿಲ್ಲ ಗೊತ್ತಿದೆಯಾದರೂ ಅವಳು ಜೊತೆಗಿದ್ದರೆ ಅವಳ ಹುಸಿಕೋಪ ನೋಡೋದಕ್ಕಾದರೂ ನಾನು ಪುಸ್ತಕದ ಅಂಗಡಿಗೆ ಹೋಗಬೇಕೆನಿಸುತ್ತದೆ ಆದರೆ ಇಂದು ಅವಳು ನನ್ನ ಜೊತೆಯಲ್ಲಿಲ್ಲ ಮನಸ್ಸು ಬೇಸರಿಸುತ್ತಿತ್ತು.ಗಾಂಧಿ ಬಜಾರಿನ ರಸ್ತೆಯಲ್ಲಿ ಏಕಾಂಗಿಯಾಗಿ ಆಶ್ರಮ ವೃತ್ತದವರೆಗೂ ನಡೆದೆ....ನಡೆದೆ.
T12 ಬಸ್ಸಿನಲ್ಲಿ ಶ್ರೀನಗರ ತಲುಪಿದೆ.SLV corner ದರ್ಶಿನಿ ತಲುಪಿ ಕಾಫಿ ಹೀರಿ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದೆ. ಮನೆಯನ್ನು ತಲುಪಿ ಪುಸ್ತಕದ ಒಳಗೆ ಪ್ರಯಾಣಿಸಬೇಕೆನಿಸಿತು. ಊಟ ಬೇಡವೆನಿಸಿತು,ಓದಿನ ಹಸಿವು ಹೆಚ್ಚಾಗಿತ್ತು. ಓದಿನಲ್ಲಿ ಮುಳುಗಿಹೋದೆ.
ಸಂಜೆಯ ಭಾಸ್ಕರ ದಿಗಂತವನ್ನು ಕೆಂಪಾಗಿಸಿ ಬರುವೆ ಎಂದು ದಿನಕ್ಕೆ ಶುಭಾಷಯ ಹೇಳುತ್ತಿದ್ದ. ಮನದ ಖಾಲಿಯನ್ನು ಅವಳ ನೆನಪನ್ನು ಹೃದಯದೊಳಗೆ ಖಾಲಿಯಾಗದ ಹಾಗೆ ತುಂಬಿಕೊಳ್ಳುತ್ತಿದೆ ರಾತ್ರಿ ನಿದ್ದೆಗೆ ಜಾರಿ.

Rating
No votes yet

Comments