ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು
ವರ್ಷಾರಂಭದಲ್ಲಿ ಹೊಸ ವರ್ಷದ ರೆಸೊಲ್ಯೂಷನ್ ಗಳನ್ನು ನಿರ್ಧರಿಸೋದು, ಅದರ ಬಗ್ಗೆ ವಿನೋದಪೂರ್ಣವಾಗಿ ಬರೆಯೋದು ಈಗ ಸಾಮಾನ್ಯ ವಿಷಯವಾಗಿರುವಾಗ, ನಾನು ಬರೆಯೋದ್ರಲ್ಲೇನು
ಹೊಸ ವಿಷಯವಿಲ್ಲ. ಆದರೆ ಈ ಅಭ್ಯಾಸ ನನಗೆ ಹೊಸದು. ಬೆಂಗಳೂರಿಗೆ ಬಂದು ಒಂದುವರೆ ವರ್ಷವಾಗಿರುವಾಗ,ಕೊಂಚವಾದರೂ ಮೆಟ್ರೊ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೆಂದು ನಿರ್ಧರಿಸಿ ರೆಸಲ್ಯೂಷನ್ ಗಳ ಬಗ್ಗೆ ಯೋಚಿಸತೊಡಗಿದೆ
ಕಳೆದೆರಡು ಹುಟ್ಟುಹಬ್ಬಗಳಲ್ಲಿ ಇಂತಹ ನಿರ್ಣಯಗಳ ಬಗ್ಗೆ ಯೋಚಿಸಿದ್ದನಾದರೂ, ಗಂಭೀರ ಆಲೋಚನೆಯಲ್ಲಿ ತೊಡಗಿರಲಿಲ್ಲ,ಇನ್ನು ಕಾರ್ಯಗತಗೊಳಿಸುವುದು ದೂರದ ಮಾತು.
ಮೊದಲ ಬಾರಿಗೆ ಹೊಸ ವರ್ಷದ ನಿರ್ಣಯಗಳ ಬಗ್ಗೆ ಗಂಭೀರ ಆಲೋಚನೆಯಲ್ಲಿ ತೊಡಗಿದಾಗ , ಭಾರತೀಯ ಪಂಚಾಂಗದ ಪ್ರಕಾರ ಇದು ಹೊಸವರ್ಷವೇ ಅಲ್ಲದಿರುವಾಗ,ಇಂತಹ
ಯೋಚನೆಗಳನ್ನು ಮುಂದಿನ ಯುಗಾದಿಯವರೆಗೆ ಮುಂದೂಡಬಹುದೆಂದು, ಹುಟ್ಟಿದಾಗಿನಿಂದ ನನ್ನಲ್ಲಿ ನೆಲೆಸಿರುವ ಸೋಮಾರಿತನ "ಸೋಮಾರಿ ಶ್ರೀಕಾಂತ" ನ ದೃಷ್ಟಿಕೋನದಿಂದ ಹೇಳಿತು.
ಭಾರತೀಯ ಪಂಚಾಂಗವನ್ನು ಸಮಯ/ಕಾಲದ ಅಳತೆಗೋಲಾಗಿ ತೆಗೆದುಕೊಂಡರೆ, ಚಾಂದ್ರಮಾನ ಯುಗಾದಿಯು ಹೊಸವರ್ಷವೋ ಅಥವ ಸೌರಮಾನ ಯುಗಾದಿಯೋ ?
ಎಂದೆಲ್ಲಾ ನಿರ್ಣಯ ಮಾಡಬೇಕಾಗಬಹುದು,ಹಾಗಾಗಿ ಇಂದಿಗಿಂತ ಹೆಚ್ಚಾಗಿ ಬುದ್ಧಿಗೆ ಕೆಲಸಕೊಡಬೇಕಾಗುತ್ತದೆ ಎಂದು ಯೋಚಿಸಿ,ಜನವರಿಯಲ್ಲೇ ನಿರ್ಣಯಗಳ ಬಗ್ಗೆ ಯೋಚಿಸುವುದು ಒಳಿತೆನ್ನಿಸಿತು.ಸೋಮಾರಿ ಶ್ರೀಕಾಂತನೂ ಈ ನನ್ನ "ಬುದ್ಧಿಮತ್ತೆ"ಗೆ ತಲೆದೂಗಿದನು.ಯೋಚಿಸಲು ಪ್ರಾರಂಭಿಸಿದಾಗ ಏನೂ ಹೊಳೆಯದಿದ್ದಾಗ ಸ್ವಲ್ಪ ತಳಮಳವಾಯಿತು. ಆದರೆ ಸ್ವಲ್ಪ ಸಮಯದಲ್ಲೇ ವಾಂತಿಯಷ್ಟೇ ಸರಾಗವಾಗಿ ಹಾಗು ಒಟ್ಟಿಗೆ ಹಲವು ಅಭ್ಯರ್ಥಿ ನಿರ್ಣಯಗಳು ನೆನಪಾದವು.
ಆದ್ರೆ ಹೊಸವರ್ಷ ಪ್ರಾರಂಭವಾಗಿ ಮೊದಲ ತಿಂಗಳ ಕೊನೆ ಹತ್ತಿರವಿರುವಾಗ ಈಗ ಹೊಸವರ್ಷದ ನಿರ್ಣಯಗಳ ಬಗ್ಗೆ ಯೋಚಿಸೋದು ಸಮಂಜಸವಲ್ಲವೆಂದು ಎರಡನೇ ಬಾರಿ ಆಲಸಿ ಶ್ರಿಕಾಂತ ಬುದ್ಧಿವಾದ
ಹೇಳಿದನು. ಆದರೆ ಸಮಯಪರಿಪಾಲನೆಯಲ್ಲಿ ಭಾರತೀಯರ ಇತಿಹಾಸ ಹಾಗು track recordಗಳನ್ನು ಪ್ರತಿವಾದವಾಗಿ ಮಂಡಿಸಿ, ಇನ್ನೂ ಕಾಲ ಮಿಂಚಿಲ್ಲವೆಂದು ಆಗ್ರಹಪೂರ್ವಕವಾಗಿ ಒಪ್ಪಿಸಿದೆ.
ನಿರ್ಣಯಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದಾಗ ಅದನ್ನು ವಿವಿಧ ಆಯಾಮಗಳಲ್ಲಿ ವಿಂಗಡಿಸಬೇಕೆನ್ನಿಸಿತು. ತಂತ್ರಾಂಶ ಅಭಿಯಂತನಾಗಿ, ಓದುಗ ಕಮ್ ಬರಹಗಾರನಾಗಿ, ಹಾಗು ಬರಿಯ ಶ್ರೀಕಾಂತನಾಗಿ ನಿರ್ಣಯಗಳನ್ನು ವಿಂಗಡಿಸಿ,
ಪ್ರತಿಯೊಂದರಲ್ಲಿ ನಿರ್ಣಯಗಳನ್ನು ಪಟ್ಟಿ ಮಾಡಿ, ಶೋಧಿಸಿ, ಸಣ್ಣ ಪಟ್ಟಿಯನ್ನು ಮಾಡಲು ನಿರ್ಧರಿಸಿದೆ.
ಯಾವುದಾದರೂ certification ಒಂದನ್ನು ಪೂರ್ಣಗೊಳಿಸಬೇಕು ,IPv6 ತಂತ್ರಜ್ಞಾನವನ್ನು ಚೆನ್ನಾಗಿ ಓದಬೇಕು ಎಂದೆಲ್ಲ
ಸುಲಭವಾಗಿ ಕೆಲವು ವಿಷಯಗಳು ಹೊಳೆದವು.ಆದರೆ ಕೆಲಸದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಸೀಮಿತ ಮಾತ್ರ,ಸಂಬಳ ಕೊಡುವ ಧಣಿಗಳೇ ನಾನು ಮಾಡಬೇಕಾದ ಕೆಲಸಗಳನ್ನು ನಿರ್ಧರಿಸುವಾಗ
ಅದ್ದಕ್ಕೆ ವ್ಯತಿರಿಕ್ತ ನಿರ್ಣಯಗಳು ಬರಿಯ ನಿರ್ಣಯಗಳಾಗಿಯೇ ನಿಂತುಬಿಡುತ್ತವೆ. ಆದರೆ ಒಂದಂತೂ ಸತ್ಯ , ಈ ವೃತ್ತಿಯಲ್ಲಿ ಎಂದೂ ನಿಂತನೀರು ಆಗೊಕ್ಕಾಗಲ್ಲ ಹೊಸ ವಿಚಾರಗಳನ್ನು ಹಾಗು ತಂತ್ರಾಂಶಗಳನ್ನು ತಿಳಿದುಕೊಳ್ಳುತ್ತಿರಬೇಕು.
ಆದ್ದರಿಂದ ಮೇಲಿನ ನಿರ್ಣಯಗಳನ್ನು ಹೊಸ ವರ್ಷದ ರೆಸೊಲ್ಯೂಷನ್ ಪಟ್ಟಿಯಲ್ಲಿ ಇಲ್ಲದಿದ್ದರೂ ಇದ್ದಂತೆ. ರೆಸೊಲ್ಯೂಷನ್ ಗಳನ್ನು ಮಾಡದಿದ್ದರೂ ಮಾಡಿದಂತೆ. ಕೆಲಸ ಮಾಡುವವರೆಗೆ ಇವುಗಳು ತಪ್ಪಿದ್ದಲ್ಲ.
ಇನ್ನು ಓದು-ಬರವಣಿಗೆಗೆ ಬಂದರೆ ಕೆಲವು ಕಠಿಣ ನಿರ್ಧಾರಗಳನ್ನೇ ಕೈಗೊಳ್ಳಬೇಕಾಗಿದೆ. ಮುಖ್ಯವಾದುದೆಂದರೆ "ಸಂಪದದ ಓದುಗರ ಬಗ್ಗೆ ಸ್ವಲ್ಪ ಕರುಣೆತೊರಬೇಕು", ಮೊದಲನೆಯ ಸಾಲನ್ನು ಓದುತ್ತಿದ್ದಂತೆ, browserನನ್ನು
ಮುಚ್ಚಿಬಿಡಬೇಕೆಂದೆನಿಸುವಂತಹ ಲೇಖನಗಳನ್ನು ,ಕತೆಗಳನ್ನು ಬರೆಯೋದನ್ನು ಕಡಿಮೆ ಮಾಡಬೇಕು.ಇಲ್ಲದಿದ್ದರೆ ಮೂರಂಕಿಯಿಂದ ಎರಡಂಕಿಗೆ ಇಳಿದಿರುವ ನನ್ನ ಕತೆಗಳ ಓದುಗರ ಸಂಖ್ಯೆ ಒಂದಂಕಿಗೆ ಇಳಿದೀತು.
ಓದುಗನಾಗಿ," ಒಂದು ಪುಸ್ತಕವನ್ನು ಓದಿ ಮುಗಿಸಿದ ನಂತರವೇ ಮತ್ತೊಂದನ್ನು ಪುಸ್ತಕವನ್ನು ನೋಡಬೇಕು". ಇವೆರಡೂ ನಿರ್ಣಯಗಳ ಶಕ್ಯತೆ ಬಗ್ಗೆ ನನ್ನಲ್ಲಿ ಹೆಚ್ಚು ನಂಬಿಕೆಯಿಲ್ಲ. ಆದರೂ ಪ್ರಯತ್ನವನ್ನು ಮಾಡಲೇಬೇಕು.
ಒಂದಂತೂ ಪ್ರಯತ್ನಪೂರ್ವಕವಾಗಿ ಮಾಡಲೇಬೇಕಾಗಿದೆ. ಕನ್ನಡದಲ್ಲಿ ಆಂಗ್ಲ ಭಾಷೆಯ ಪದಗಳಿಗೆ ಸಮಾನಾರ್ಥಕ ಪದ ಹುಡುಕಲು "kannadakasturi.com" ತಾಣಕ್ಕೆ ಭೇಟಿಮಾಡುವುದನ್ನು ಆದಷ್ಟೂ ಕಡಿಮೆಮಾಡಬೇಕು.ತೂಕವಾದ
ಕನ್ನಡ ಪದಗಳ ಸರಳವಾಗಿ ಪ್ರಯೋಗಮಾಡುವುದನ್ನು ಮೈಗೂಡಿಸಿಕೊಳ್ಳಬೇಕು.
ಬರಿಯ ಶ್ರೀಕಾಂತನಾಗಿ ಯೋಚಿಸಿದಾಗ, "ಮನೆಯ ೬ ಅಡಿ ಕೋಲು" ಎಂಬ ಬಿರುದನ್ನು ತ್ಯಜಿಸಬೇಕೆಂದು ನಿರ್ಧರಿಸಿದ್ದೇನೆ.ದೇವೆಗೌಡ ಸರಿಯೋ ನಾರಾಯಣಮೂರ್ತಿ ಸರಿಯೋ ಎಂದು ಚರ್ಚೆಮಾಡುವವರಿಂದ ಸ್ವಲ್ಪ ದೂರಕಾಯ್ದುಕೊಳ್ಳಬೇಕೆಂದಿದ್ದೇನೆ.
ಅಂತಹ ಚರ್ಚೆಗಳಲ್ಲಿ politically correct ಗಿ ಹರಟೆಹೊಡೆಯಲು ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ನಲ್ಲೇ ಪರ-ವಿರುದ್ಧ ವಾದಮಾಡಲು ಸಾಕಷ್ಟು contemplative idlers
ಈಗಾಗಲೇ ಇದ್ದರೆ.ಇನೊಬ್ಬ ಸೇರಿ ಅಲ್ಲಿಯೂ ಸ್ಪರ್ಧೆ ಪ್ರಾರಂಭವಾಗಬಾರದು.
"ಆಬ್ಬಬ್ಬ ! ಸಾಕ್ಮಾಡೋ ,ನಿರ್ಣಯಗಳ ಅಜೀರ್ಣವಾಗಿಹೋದೀತು " ಎಂದು ನನ್ನೊಳಗಿನ ಸೋಮಾರಿ ಶ್ರೀಕಾಂತ ಎಚ್ಚರಿಸಿದ.
ಮೇಲ್ನೋಟಕ್ಕೆ ಇಷ್ಟೊಂದು ನಿರ್ಣಯಗಳೆನ್ನಿಸಿದರೂ, ಇವೆಲ್ಲವನ್ನೂ ಒಂದು ನಿರ್ಣಯದಲ್ಲಿ ಅಡಕಮಾಡಬಹುದುದೆಂದೂ, ಅದೇನೆಂದರೆ "ಈ ವರ್ಷ ಸೋಮಾರಿ ಶ್ರೀಕಾಂತನನ್ನು ಪಳಗಿಸಬೇಕೆಂದಿದ್ದೇನೆ" ಎಂದಾಗ
ಸೋಮಾರಿ ಶ್ರೀಕಾಂತ "ನೋಡೋಣ" ಎಂದು ಜೋರಾಗಿ ನಕ್ಕ.
Comments
Re: ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು
In reply to Re: ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು by hpn
ಉ: ಮೆಟ್ರೊ ಸಂಸ್ಕೃತಿ
In reply to ಉ: ಮೆಟ್ರೊ ಸಂಸ್ಕೃತಿ by srikanth
ಮೆಟ್ರೊ ಸಂಸ್ಕೃತಿ