ಎಂಜಲು ಎಲೆ ಮೇಲೆ ಉರಳು ಸೇವೆ

ಎಂಜಲು ಎಲೆ ಮೇಲೆ ಉರಳು ಸೇವೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿರುವ ಎಂಜಲು ಎಲೆ ಮೇಲೆ ಉರುಳು ಸೇವೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ದಲಿತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಪುರೋಹಿತಶಾಹಿ ವಿರುದ್ದ ಧ್ವನಿ ಎತ್ತುತ್ತಿದೆ. ಹಾಗಾದರೆ ಇಲ್ಲಿ ನಡೆದಿದ್ದೇನು.

ಕಳೆದ ಹತ್ತಾರು ವರ್ಷಗಳಿಂದ ಈ ರೀತಿಯ ಆಚರಣೆಗಳು ಕೇವಲ ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲದೆ, ಚಿಕ್ಕ ಬಳ್ಳಾಪುರ ಸೇರಿದಂತೆ ಹಲವೆಡೆ ನಡೆಯುತ್ತಿದೆ. ಅವಾಗ ಏಳದ ಧ್ವನಿ ಈಗ ಬರುತ್ತಿರುವುದಕ್ಕೆ ಕಾರಣವಾದರೂ ಏನು?, ಇದೊಂದು ಪ್ರಚಾರದ ಗಿಮಿಕ್ಕಾ? ಅಥವಾ ಪುರೋಹಿತ ವರ್ಗದವರಿಗೆ ಏನು ಮಾಡಿದರೂ ಸುಮ್ಮನಿರುತ್ತಾರೆ ಎನ್ನುವ ಕಾರಣವಾ? ಇದನ್ನು ಸಂಬಂಧ ಪಟ್ಟವರೇ ತಿಳಿಸಬೇಕಾಗಿದೆ. ಹಾಗೇ ಚಿಂತಿಸುವಂತಹ ಕಾರ್ಯವಾಗಬೇಕಿದೆ.

ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿದೆ ಅದರ ಬಗ್ಗೆ ಒಂದೇ ಒಂದು ಸಂಘಟಿತ ಹೋರಾಟ ನಡೆದಿಲ್ಲ. ಇದು ವಿಷಾದಕರ. ಇದೀಗ ವಿಷಯಕ್ಕೆ ಬರೋಣ. ಈ ಕ್ಷೇತ್ರದಲ್ಲಿ ಬ್ರಾಹ್ಮಣರ ಎಂಜಲು ಎಲೆ ಮೇಲೆ ಉರುಳು ಸೇವೆ ಮಾಡಿದರೆ. ತಮ್ಮ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವುದು ಆಚರಣೆ ಮಾಡುತ್ತಿರುವವರ ನಂಬಿಕೆಯಾಗಿದೆ. ಇಲ್ಲಿ ಬ್ರಾಹ್ಮಣರು ಸೇರಿದಂತೆ ಅಧಿಕಾರ ಶಾಹಿಗಳು, ಇತರೆ ಧಾರ್ಮಿಕರು ಉರುಳು ಸೇವೆ ಮಾಡುತ್ತಾರೆ. ಇಲ್ಲಿ ಯಾವುದೇ ಒತ್ತಡ ಇರುವುದಿಲ್ಲ. ಇದು ಸ್ವಯಂ ಪ್ರೇರಿತವಾಗಿದೆ. ಭಾರತ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಅವರ ಭಾವನೆಗೆ ತಕ್ಕಂತೆ ದೇವರನ್ನು ಪೂಜಿಸುವ, ಆರಾಧಿಸುವ ಹಕ್ಕನ್ನು ಇತರರಿಗೆ ತೊಂದರೆಯಾಗದಂತೆ ನಡೆಸಲು ಸಂವಿಧಾನ ನೀಡಿದೆ.

ಇದೀಗ ದಲಿತ ಸಂಘಟನೆಗಳು ಇದರ ವಿರುದ್ದ ಧ್ವನಿ ಎತ್ತಿರುವುದು ನಿಜಕ್ಕೂ ಸಂತಸದ ಸಂಗತಿಯೇ, ಇದೊಂದು ಮೌಢ್ಯ ಆಚರಣೆಯೇ, ಇದರ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯವಾಗಲಿ, ಜನರನ್ನು ಎಚ್ಚೆತ್ತುವಂತಹ ಕಾರ್ಯ ಮಾಡಲಿ. ಅದನ್ನು ಬಿಟ್ಟು ಇದೆಲ್ಲದ್ದಕ್ಕೂ ಪುರೋಹಿತ ಶಾಹಿಗಳೇ ಕಾರಣ ಎಂದರೆ ಎಷ್ಟರ ಮಟ್ಟಿಗೆ ಸರಿ. ಎಲ್ಲೋ ದೀಪಾವಳಿ ಲಕ್ಷ್ಮೀ ಪಟಾಕಿ ಸಿಡಿದಾಗ ಇದನ್ನು ಲಷ್ಕರ್ ಇ ತೊಯಿಬಾ ಮಾಡಿದೆ ಎಂದಂತೆ. ಆಡಳಿತ ಪಕ್ಷದವರಿಗೆ ತೊಂದರೆಯಾದರೆ ವಿರೋಧ ಪಕ್ಷದವರ ಕೈವಾಡ ಎನ್ನುವಂತೆ ಆರೋಪ ಇದೆ.  ಊಟ ಮಾಡಿದ ಬ್ರಾಹ್ಮಣರು ಎಲೆ ಮೇಲೆ ಉರುಳಿ ಅಂತ ಆದೇಶಿಸಿದರೆ ಅದು ನಿಜಕ್ಕೂ ತಪ್ಪೆ. ಆದರೆ ಅಲ್ಲಿ ನಡೆಯುತ್ತಿರುವುದರ ಬಗ್ಗೆ ಹಾಗೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ತಿಳಿ ಹೇಳಿದರೆ ಬದಲಾವಣೆಯಾಗಬಹುದು. ಅದನ್ನು ಬಿಟ್ಟು ಈ ರೀತಿ ಪ್ರತಿಭಟನೆ ಮಾಡುವುದರಿಂದ ಇದೊಂದು ಗಿಮಿಕ್ ಆಗುತ್ತದೆ ಅಷ್ಟೆ.

 ಕರ್ನಾಟಕದಲ್ಲಿ ಇಂತಹ ಆಚರಣೆಗಳು ಸಾಕಷ್ಟಿದೆ. ಮಕ್ಕಳನ್ನು ಮೇಲಿಂದ ಕೆಳಕ್ಕೆ ಎಸೆಯುವುದು, ಬಿಸಿ ಪಾಯಸದಲ್ಲಿ ಅದ್ದುವುದು, ಬೆಂಕಿ ಕೆಂಡ ಹಾಯುವುದು, ಬಾಯಿಗೆ ರಾಡ್್ಗಳನ್ನು ಚುಚ್ಚಿಕೊಳ್ಳುವುದು,ತಲೆ ಮೇಲೆ ಕಾಯಿ ಒಡೆಯುವುದು,ಬೆತ್ತಲೆ ಸೇವೆ ನಡೆಸುವುದು, ದೇವದಾಸಿ ಪದ್ದತಿ ಸೇರಿದಂತೆ ಅನೇಕ ಮೌಢ್ಯ ಆಚರಣೆಗಳು ನಡೆಯುತ್ತಲೇ ಇದೆ. ಇದರ ಬಗ್ಗೆ ಸಮರ್ಪಕವಾದ ಹೋರಾಟ ಎಲ್ಲಾದರೂ ನಡೆದಿದೆಯಾ ಎಂದರೆ ಎಲ್ಲೂ ಸಿಗುವುದಿಲ್ಲ. ಹಾಗಾದರೆ ಇದೊಂದು ಆಚರಣೆಗೆ ಸಂಘಟನೆಗಳಿಗೆ ಇಷ್ಟೊಂದು ಕಾತುರವೇಕೆ ಎನ್ನುವುದು ತಿಳಿಯುತ್ತಿಲ್ಲ.

ಎಲ್ಲಾ ಧರ್ಮಗಳಲ್ಲೂ ತಮ್ಮದೇ ಆದ ಆಚರಣೆಗಳು ಇದೆ. ಇಲ್ಲಿ ನಾಸ್ತಿಕ ಆಸ್ತಿಕ ಎನ್ನುವುದಕ್ಕಿಂತ ವ್ಯಕ್ತಿಯ ಭಾವನೆ ಮುಖ್ಯ. ಮೋಡ ನೋಡಿದ ಹಲವರಿಗೆ ಕೇವಲ ಮೋಡದಂತೆ ಕಾಣುತ್ತದೆ. ಅದೇ ಕೆಲವರಿಗೆ ವಿಭಿನ್ನ ಚಿತ್ತಾರಗಳು ಕಾಣುತ್ತವೆ. ಹಾಗೇ ಕಲ್ಲಿನ ವಿಗ್ರಹಗಳು ಕೂಡ. ನಿಜಕ್ಕೂ ಸಂಘಟನೆಗಳಿಗೆ ಇಂತಹ ಮೌಢ್ಯ ಅಳಿಸಬೇಕು ಎನ್ನುವ ಇಚ್ಛೆ ಇದ್ದರೆ, ರಾಜ್ಯಾದ್ಯಾಂತ ಜಾಗೃತಿ ಶಿಬಿರಗಳು ನಡೆಸಲಿ. ಜನರಿಗೆ ತಿಳಿ ಹೇಳುವಂತಹ ಕಾರ್ಯ ಮಾಡಲಿ. ಅದನ್ನು ಬಿಟ್ಟು ಒಂದು ವರ್ಗವನ್ನು ದೂರುವುದು, ಒಂದು ದಿನದ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಂಘಟನೆಗಳಿಗೆ ತಮ್ಮದೇ ಆದ ಶಕ್ತಿ ಇದೆ. ಇದರ ಬಗ್ಗೆ ಚಿಂತಿಸಿ ನಂತರ ಕಾರ್ಯ ರೂಪಕ್ಕೆ ಇಳಿದರೆ ಉತ್ತಮ.

Comments