ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - ೦೪

http://sampada.net/article/24590 - ಭಾಗ ೦೧

http://sampada.net/article/24910 - ಭಾಗ ೦೨

http://sampada.net/article/28021 - ಭಾಗ ೦೩


ಭಾಗ - ೦೪

 

ಚೆಕ್ ಪೋಸ್ಟ್ ಗೆ ಹೊಂದಿಕೊಂಡಂತಿದ್ದ ಆಳೆತ್ತರದ ಕಾಂಕ್ರೀಟ್ ಗೋಡೆಯ ಸರಹದ್ದನ್ನು ದಾಟಿ ಕೆಲವೇ ದೂರ ಕ್ರಮಿಸಿದ್ದೆವು. ಆಶ್ಚರ್ಯವೆಂಬಂತೆ ಅನತಿ ದೂರದಲ್ಲಿ ಮತ್ತೊಂದು ಬಹು ಎತ್ತರದ ದಟ್ಟ ಸುರುಳಿ ಕಂಬಿಯ ಗೋಡೆಯ ಸರಹದ್ದು ಪ್ರಾರಂಭವಾಗಿತ್ತು. ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ನಮಗೆ ನೋಡಸಿಗಬಹುದಾದಂತಹ ಬಹು ಎತ್ತರದ ದಟ್ಟ ಸುರುಳಿ ಕಂಬಿಯ ಗೋಡೆಯ ಆ ಸಾಲು ರಸ್ತೆಯ ಇಕ್ಕೆಲಗಳಿಗೂ ಸಮಾನಾಂತರವಾಗಿ ಆವರಿಸಿಕೊಂಡು ನಿಂತಿತ್ತು. ಒಂದೊಮ್ಮೆ ಚೆಕ್ ಪೋಸ್ಟನ್ನು ಅತಿಕ್ರಮಿಸಿ ಬಂದರೂ ಭೇಧಿಸಲಾಗದಂತಹ ಅಭೇದ್ಯ ಬೇಲಿಯದು. ನನಗೆ ಚಕ್ರವ್ಯೂಹಕ್ಕೆ ನುಸುಳಿದಂತಹ ಅನುಭವ! ಕಂದಹಾರ್ ನಿಂದ ಇಲ್ಲಿಗೆ ಬಂದಾಗ ರಾತ್ರಿಯ ವೇಳೆಯಾಗಿತ್ತು ಮತ್ತು ಮಿಲಿಟರಿ ವಿಮಾನ ಪ್ರಯಾಣದ ಆಯಾಸವೋ ಏನೋ ಇವನ್ನೆಲ್ಲಾ ಗಮನಿಸಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದ ನನ್ನ ಅಭಿಯಂತರ ಬುದ್ಧಿಗೆ ಅಲ್ಲಿನ ಇನ್ನೊಂದು ರಹಸ್ಯವೂ ತಿಳಿದುಬಿಟ್ಟಿತ್ತು. ಅದೇನೆಂದರೆ ಆ ಗೋಡೆಗೆ ವಿದ್ಯುತ್ ಹರಿಯಬಿಟ್ಟಿದ್ದುದು. ಪ್ರಾಣಿಗಳಿಂದ ರಕ್ಷಣೆಗೆ ನಮ್ಮಲ್ಲಿ ಬೇಲಿಗೆ ಹರಿಸಲ್ಪಡುವ ಅತಿ ಕಡಿಮೆ ವಿದ್ಯುತ್ ಪ್ರವಾಹದ ವಿಧಾನ ಅದಾಗಿರಲಿಲ್ಲ. ಮಂಜು ಮುಸುಕಿದಂತಹ ಮುಂಜಾನೆಯ ವಾತಾವರಣಕ್ಕೆ ಆ ಲೋಹದ ಸುರುಳಿಯ ಸುತ್ತ ಅಸ್ಪಷ್ಟ ನೀಲಾಕಾರದ ಕಾಂತೀಯ ವಲಯ ಸೃಷ್ಟಿಯಾಗಿತ್ತು. ಅಂದರೆ ಅತ್ಯಂತ ಪ್ರಬಲವಾದ ವಿದ್ಯುತ್ ಪ್ರವಾಹವನ್ನೇ ಹರಿಯಬಿಡಲಾಗಿತ್ತೆಂದರ್ಥ. ಅಶ್ಚರ್ಯವೆಂದರೆ ಎಲ್ಲಿಯೂ ಎಚ್ಚರಿಕೆ ಸಂದೇಶದ ಫಲಕಗಳಿರಲಿಲ್ಲ! ಇನ್ನೊಂದು ಪ್ರಮುಖವಾದ ಅಂಶ ನಾ ಗಮನಿಸಿದ್ದೇನೆಂದರೆ, ಸರಹದ್ದಿನ ಎಲ್ಲಾ ಮೂಲೆಯಲ್ಲೂ ವೀಕ್ಷಣಾ ಗೋಪುರಗಳಿದ್ದು, ಅದರ ಮೇಲೆ ಕುಳಿತಿದ್ದ ಇಬ್ಬರು ಸಿಪಾಯಿಗಳು ಬಂದೂಕು ನಳಿಗೆಯನ್ನು ಗುರಿಹಿಡಿದೇ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳನ್ನು ದಿಟ್ಟಿಸುತ್ತಿದ್ದುದು. ವಾರದ ಹಿಂದೆ ನಡೆದಿದ್ದ ಪ್ರಬಲ ಬಾಂಬ್ ಸ್ಫೋಟದ ಯಾವುದೇ ಕುರುಹು ಚೆಕ್ ಪೋಸ್ಟ್ ನ ಬಳಿ ಕಾಣದಿದ್ದುದು ನನಗೆ ಆಶ್ಚರ್ಯ! ಅಷ್ಟೇ ಅಲ್ಲದೆ ನೂರಾರು ಪ್ರಶ್ನೆಗಳು ನನ್ನನ್ನು ಕಾಡುತ್ತಿತ್ತು. ಇಂತಹ ಸೂಕ್ಷ್ಮ ವಿಷಯಗಳನ್ನು ಸಾರ್ವಜನಿಕವಾಗಿ ಅದರಲ್ಲೂ ಮಿಲಿಟರಿ ಶಿಬಿರಗಳಲ್ಲಿ ಚರ್ಚಿಸುವುದು ನಿಷಿದ್ಧವಷ್ಟೇ ಅಲ್ಲ ಅಪರಾಧ ಕೂಡ. ಹಾಗಾಗಿ ನನ್ನ ಪ್ರಶ್ನೆಗೆ ಉತ್ತರ ಸಿಗುವ ಅವಕಾಶವದಲ್ಲವೆಂಬುದು ಖಾತರಿಯಾಗಿತ್ತು. "ಅಬ್ಬಾ! ಅದೆಂತಹ ಭದ್ರತಾ ವ್ಯವಸ್ಥೆಯಿತ್ತು ಅಲ್ಲಿ. ಇಷ್ಟೆಲ್ಲಾ ಇದ್ದರೂ ಪದೇ ಪದೇ ಇಲ್ಲಿ ಧಾಳಿಗಳಾಗುತ್ತೆ ಎಂದರೆ ತಾಲಿಬಾನ್ ಪಡೆ ಅದೆಷ್ಟು ಮೊಂಡರಿರಬಹುದು" ಸ್ವಗತಿಸಿಕೊಳ್ಳುತ್ತಿದ್ದೆ.
ಅಂತಹ ತಣ್ಣನೆಯ ವಾತಾವರಣದಲ್ಲೂ ಕಾರಿನ ಕಿಟಕಿ ಗಾಜುಗಳನ್ನೇರಿಸಿ ಹವಾ ನಿಯಂತ್ರಕವನ್ನು ಚಾಲೂ ಇಟ್ಟಿದ್ದುದು ನನ್ನ ಕುತೂಹಲ ಮನಸ್ಸಿಗೆ ತಡೆಗೋಡೆಯಂತಿತ್ತು. ಹೊರಗಿನ ನೋಟ ಇನ್ನಷ್ಟು ಸ್ಪಷ್ಟವಾಗಲೆಂದು ಕಿಟಕಿಯ ಗಾಜನ್ನು ಕೆಳಗಿಳಿಸಿದೆ. "ಕಿಟಕಿಯಾಚೆ ಕೈಯನ್ನಾಗಲೀ, ತಲೆಯನ್ನಾಗಲೀ ಇಡಬೇಡ" ತಡಬಡಿಸಿದವನಂತೆ ಗಾಝ್ಮೆಂಡ್ ನನಗೆ ಆದೇಶವನ್ನಿತ್ತಿದ್ದ. ಚಿಕ್ಕ ಹುಡುಗರಿಗೆ ಹೇಳಿದ ಹಾಗೆ ಹೇಳುತ್ತಿದ್ದಾನಲ್ಲಾ? ಅವನ ಮುಖವನ್ನೊಮ್ಮೆ ನೋಡಿದೆ. ನನ್ನ ಮುಖ ಪ್ರಶ್ನಾರ್ಥಕ ಚಿಹ್ನೆಯೆಂತನಿಸಿತ್ತೇನೋ ಅವನಿಗೆ, "ಇದು ಇಲ್ಲಿಯ ನ್ಯಾಟೊ ಪಡೆಯ ಸುರಕ್ಷತಾ ನಿಯಮಗಳಲ್ಲೊಂದು. ಅಕಸ್ಮಾತ್ ಕಾರಿನ ಒಳಗಿಂದ ದೇಹದ ಯಾವುದೇ ಭಾಗವಾಗಲೀ ಇಲ್ಲ ಯಾವುದೇ ವಸ್ತುವಾಗಲೀ ಹೊರ ಬಂದಿದ್ದನ್ನು ಗಮನಿಸಿದರೆ ವೀಕ್ಷಣಾ ಗೋಪುರದ ಮೇಲಿರುವ ಕಾವಲು ಸೈನಿಕರು ಮುಲಾಜಿಲ್ಲದೇ ಇತ್ತ ಗುಂಡಿನ ಮಳೆಗೈಯುತ್ತಾರೆ" ಎಂದು ಹೇಳಿ ತುಟಿಯಂಚಿನಲ್ಲೇ ನಕ್ಕ. ನನ್ನನ್ನು ನಂಬು ಎನ್ನುವ ಭಾವ ಅವನ ಮುಖದಲ್ಲಿತ್ತು. ಇದೆಂತಹ ವಿಚಿತ್ರ ಹಾಗೂ ಅಪಾಯಕಾರಿ ಜಾಗವಪ್ಪಾ ಎಂದೊಕೊಂಡು ಕಾರಿನ ಕಿಟಕಿಯ ಗಾಜನ್ನು ಅನಾಮತ್ತಾಗಿ ಮೇಲೇರಿಸಿ ನಿಟ್ಟುಸಿರು ಬಿಟ್ಟೆ.
ಕಾರಿನ ವೇಗ ತಗ್ಗುತ್ತಾ ಬಂತು. ಕೆಂಪು ಬಣ್ಣದ ಕಟ್ಟಡಗಳನೇಕವು ಕೂಗಳತೆ ದೂರದಲ್ಲಿ ಸಾಲಾಗಿ ಜೋಡಿಸಿದಂತೆ ಕಾಣಿಸುತ್ತಿತ್ತು. ಅಂತೂ ಇಂತೂ ಕಾಬುಲ್ ನ್ಯಾಟೊ ಟರ್ಮಿನಲ್ ಗೆ ಸುರಕ್ಷಿತವಾಗಿ ಬಂದು ತಲುಪಿದ್ದೆವು. ಬಲಿಷ್ಟವಾದ ಕಾಂಕ್ರೀಟ್ ಗೋಡೆಗಳನ್ನು ಹೊಂದಿದ್ದ ಆ ಕಟ್ಟಡಗಳು, ನಯವಾದ ಕೆಂಪು ಬಣ್ಣದ ಸಣ್ಣ ಸಣ್ಣ ಆಯತಾಕಾರದ ಮಾರ್ಬಲ್ ನ ಹೊರ ಕವಚದಿಂದ ಆವರಿಸಿತ್ತು. ಥೇಟ್ ಯೂರೋಪಿಯನ್ ಶೈಲಿಯಲ್ಲಿ ನಿರ್ಮಿಸಿದಂತಹವು. ಅಲ್ಲಿದ್ದ ಬೃಹತ್ ಕಟ್ಟಡ ಟರ್ಮಿನಲ್ ಎಂದು ಹೇಳಬಹುದಾಗಿತ್ತು. ಮಿಕ್ಕವು ವಸತಿ, ಉಪಹಾರಗೃಹ, ಆಸ್ಪತ್ರೆ, ಒಳ ಕ್ರೀಡಾಂಗಣ, ವ್ಯಾಯಾಮ ಶಾಲೆ, ಕಛೇರಿ ಸೇರಿದಂತೆ ಇತರೇ ಸಮುಚ್ಚಯಗಳು. ಬಹುತೇಕ ಎಲ್ಲಾ ಕಟ್ಟಡಗಳೂ ಒಂದೇ ತೆರನಾಗಿದ್ದವು. ಕಾಬುಲ್ ಏರ್ ಬೇಸ್ ನಲ್ಲಿ ಕಾರ್ಯ ನಿರ್ವಹಿಸುವ ಸೈನಿಕರಿಂದಾದಿಯಾಗಿ, ಇನ್ನಿತರ ಸೇವೆಗಳನ್ನೊದಗಿಸುವ ನಮ್ಮಂತಹ ಅನೇಕ ಕಂಪನಿಗಳ ಕಾರ್ಮಿಕರಿಗೆ ವಸತಿ, ಊಟದಿಂದ ಹಿಡಿದು ಪ್ರತಿಯೊಂದು ಮೂಲಭೂತ ಸೌಕರ್ಯವನ್ನೆಲ್ಲಾ ಅಲ್ಲಿನ ವಿಮಾನ ನಿಲ್ದಾಣದ ಆವರಣದಲ್ಲೇ ಮಾಡಿದ್ದರು. ಕಂದಹಾರ್ ಹಾಗೂ ಬಗ್ರಾಮ್ ಏರ್ ಬೇಸ್ ನಂತೆಯೇ ಈ ’ಕಾಬುಲ್ ಏರ್ ಬೇಸ್’ ಕೂಡ ಬಹು ದೊಡ್ಡ ಮಿಲಿಟರಿ ಶಿಬಿರ. ಕಾರಿನಿಂದಿಳಿದು ಒಮ್ಮೆ ಸುತ್ತಲೂ ಕಣ್ಣಾಡಿಸಿದೆ. ಶಸ್ತ್ರಧಾರಿ ಸೈನಿಕರನೇಕರು ಲೋಕಭಿರಾಮರಾಗಿ ತಮ್ಮಲ್ಲೇ ಹರಟುತ್ತಾ ನಡೆದಾಡುತ್ತಿದ್ದರು. ಕಟ್ಟಡಕ್ಕೊಂದಿಕೊಂಡೇ ಇದ್ದ ಸುಸಜ್ಜಿತ ವಾಲಿಬಾಲ್, ಬಾಸ್ಕೆಟ್ ಬಾಲ್ ಆವರಣಗಳು ಬಿಕೋ ಎನ್ನುತ್ತಿತ್ತು. ಕಣ್ ರಾಚುವ ಗಿಳಿ ಹಸಿರು ಬಣ್ಣದ ಜಾಕೆಟ್ ಧರಿಸಿದ್ದ ಭಾರತೀಯ ಹುಡುಗರನೇಕರು ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿ ತಮ್ಮೊಡನಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಕೊಳ್ಳುತ್ತಿದ್ದರು. ಬಹುಪಾಲು ಬಿಳಿ ಚರ್ಮದ ಸೈನಿಕರು ಮತ್ತು ನನ್ನಂತಹ ಇತರೆ ನಾಗರೀಕರು ನನ್ನ ಹಾಗೆ ಕಂದಹಾರಿಗೋ ಅಥವಾ ಬಗ್ರಾಮ್ ಏರ್ ಬೇಸ್ ಗೋ ಹಾರಲು ದೊಡ್ಡ ಗಾತ್ರದ ಟಾರ್ಪಲಿನ್ ಚೀಲಗಳಂತಹ ಲಗೇಜನ್ನು ಹಿಡಿದು ಸಜ್ಜಾಗಿ ನಿಂತಿದ್ದರು. ಸಂದೇಶ ಬರದ ಹೊರತು ಯಾರೊಬ್ಬರೂ ಟರ್ಮಿನಲ್ ಒಳಗೆ ಹೋಗುವಂತಿರಲಿಲ್ಲ. ಇನ್ನೂ ಎಷ್ಟೊತ್ತು ಕಾಯಬೇಕೋ ಏನೋ ಎಂದು ಕಣ್ ಹರಿಸೋವರೆಗೆ ನನ್ನ ದೃಷ್ಟಿಯನ್ನು ಬೀರುತ್ತಾ ಹೊರಗೇ ನಿಂತಿದ್ದೆ. ನಾವಿದ್ದ ಸ್ವಲ್ಪ ದೂರದಲ್ಲಿ ಕೆಲ ಮಿಲಿಟರಿ ಚಾಪರ್ ಗಳು ಏರುವ ಇಳಿಯುವ ಅಭ್ಯಾಸದಲ್ಲಿ ನಿರತವಾಗಿರುವಂತೆ ತೋರುತ್ತಿತ್ತು. ಇನ್ನೊಂದು ಬದಿಯಲ್ಲಿ ಇತರೆ ಸಾರ್ವಜನಿಕ ವಿಮಾನಗಳು ರನ್ ವೇಯಿಂದ ಹಾರುತ್ತಿದ್ದ ಮತ್ತು ಇಳಿಯುತ್ತಿದ್ದ ದೃಶ್ಯ ಕಾಣುತ್ತಿತ್ತು. ಆ ಕ್ಷಣ ಮಾತ್ರ ಅಲ್ಲಿನ ಪ್ರದೇಶವೆಲ್ಲಾ ಕಿವಿ ಗಡಚಿಕ್ಕುವ ಶಬ್ದದಿಂದ ತೊಯ್ದು ಹೋಗುತ್ತಿತ್ತು. ಸುತ್ತಲೂ ಆವರಿಸಿದ್ದ ಪರ್ವತಗಳಿಂದಲೋ ಏನೋ ಶಬ್ದ ಪ್ರತಿಶಧ್ವನಿಸುತ್ತಿತ್ತು.
ಹಿಂದುಕುಶ್ ಪರ್ವತದ ಒಂದು ಸಾಲು ವಿಮಾನ ನಿಲ್ದಾಣಕ್ಕಂಟಿಕೊಂಡಂತೇ ಇದೆ. ಎಲ್ಲಾ ದಿಕ್ಕುಗಳಿಂದಾವೃತವಾದ ಹಿಂದೂ ಕುಶ್ ಪರ್ವತಗಳ ಸಾಲು ವಿಮಾನ ನಿಲ್ದಾಣವನ್ನು ತಬ್ಬಿಕೊಳ್ಳಲು ಕಾಯುತ್ತಿವೆಯೇನೋ ಎಂಬಂತೆನಿಸುತ್ತಿತ್ತು. ಅಲ್ಲಿ ನನಗೆ ಸಿಕ್ಕ ಮಾಹಿತಿ ಪ್ರಕಾರ ತಾಲಿಬಾನ್ ಪಡೆ ಇಲ್ಲಿಂದ ಕಾಲ್ಕಿತ್ತು ಕಂದಹಾರ್, ಹೆಲ್ಮಂಡ್ ಪ್ರಾಂತ್ಯ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಕಾರ್ಯನಿರತವಾಗಿದೆ ಎಂದು. ಆದ್ದಾಗ್ಯೂ ಯಾವ ಗುಡ್ಡದ ಕಡೆಯಿಂದ ಯಾವ ಹೊತ್ತು ರಾಕೆಟ್ ಧಾಳಿಯಾಗುವುದೆಂದು ಹೇಳಲು ಕಷ್ಟವಂತೆ. ಸ್ವಯಂ ಚಾಲಿತ ಕ್ಯಾಮೆರಾ ಮತ್ತು ರಡಾರ್ ಮಾಹಿತಿ ತಂತ್ರಗಾರಿಕೆಯುಳ್ಳ ಬೃಹದಾಕಾರದ ವಿಮಾನವನ್ನು ಹೋಲುವ ಬಲೂನ್ ಗಳನ್ನು ಎತ್ತರಕ್ಕೆ ಹಾರಿಬಿಟ್ಟಿದ್ದರು. ಇದು ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದೂ ಗೊತ್ತಾಗಿತ್ತು. ಅಷ್ಟೇ ಅಲ್ಲದೆ ದಿನಕ್ಕೆ ಇಷ್ಟು ಹೊತ್ತೆಂದು ಗೌಪ್ಯವಾಗಿ ಗೊತ್ತು ಮಾಡಿಕೊಳ್ಳುವ ನ್ಯಾಟೊ ಪಡೆ ತಮ್ಮ ಚಾಪರ್ ಗಳಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಗಸ್ತು ಹೊಡೆಯುತ್ತಾರೆ. ಎಲ್ಲಾ ಮೂಲಗಳಿಂದ ಎಲ್ಲವೂ ಸರಿಯಿದೆ ಎಂದಾದಲ್ಲಿ ಮಾತ್ರ ವಿಮಾನ ಹಾರುವುದು ಇಲ್ಲಾ ಇಳಿಯುವುದು ನಿರ್ಧಾರವಾಗುತ್ತದೆ. ಹಾಗಾಗಿ ವಿಮಾನ ಏರುವ ಕೊನೆ ಘಳಿಗೆಯವರೆಗೂ ಖಾತ್ರಿಯಾಗಿ ಏನೂ ಹೇಳುವಂತಿಲ್ಲ.
ಚೆಕ್ ಇನ್ ಕರೆ ಮೊಳಗಲಾರಂಭಿಸಿತ್ತು. ಗಾಝ್ಮೆಂಡ್ ಕಾರಿನ ಡಿಕ್ಕಿಯನ್ನು ತೆಗೆದು ತಮ್ಮ ತಮ್ಮ ಜಾಕೆಟ್ ಮತ್ತು ಹೆಲ್ಮೆಟ್ ಗಳನ್ನು ತೆಗೆದುಕೊಳ್ಳಿರೆಂದು ಹೇಳಿದ. ಕಬ್ಬಿಣ ಮತ್ತು ಫೈಬರ್ ಮಿಶ್ರಿತ ವಸ್ತುಗಳಿಂದ ವಿಶೇಷವಾಗಿ ಸೈನಿಕರಿಗೆಂದೇ ತಯಾರಿಸಲಾದ ಯಮಭಾರದ ಜಾಕೆಟ್ ಮತ್ತು ಶಿರಸ್ತ್ರಾಣವದು. ಎಂತಹ ಪ್ರಬಲ ಗುಂಡೂ ಸಹ ಅದರೊಳಗೆ ನುಗ್ಗುವ ಸಾಧ್ಯತೆಯೇ ಇಲ್ಲವೆನ್ನಬಹುದು. ರಾಕೆಟ್ ಅಥವಾ ಬಾಂಬ್ ಧಾಳಿಯಾದರೂ ದೇಹದ ಎದೆ ಮತ್ತು ತಲೆಯ ಭಾಗಕ್ಕೆ ಹೆಚ್ಚು ಘಾಸಿಯಾಗದಂತೆಯೂ ಅದು ತಡೆಯುತ್ತಾದರಿಂದ ಮಿಲಿಟರಿ ಶಿಬಿರಗಳಲ್ಲಿ ಅವುಗಳು ಮೂಲಭೂತ ಧಾರಣಾ ಸಾಧನಗಳು. ಮಿಲಿಟರಿ ವಿಮಾನ ಪ್ರಯಾಣದಲ್ಲಿ ಈ ಸಾಧನಗಳನ್ನು ಧರಿಸುವುದು ಕಡ್ಡಾಯ ಕೂಡ. ಒಂದು ಕೈನಲ್ಲಿ ಇವುಗಳನ್ನೂ, ಇನ್ನೊಂದು ಕೈನಲ್ಲಿ ನನ್ನ ಲಗೇಜ್ ಚೀಲವನ್ನೂ ಹಿಡಿದು ಒಳ ನಡೆದೆ. ಬಹಳವೇ ಚಿಕ್ಕದಾದ್ದು ಎನ್ನಬಹುದಾದ ಹೊಸದಾಗಿ ನಿರ್ಮಿಸಲಾಗಿದ್ದ ಸುಸಜ್ಜಿತವಾದ ಒಳಾಂಗಣ. ಸಾಮಾನ್ಯ ವಿಮಾನ ನಿಲ್ದಾಣಗಳಂತೆ ಯಾವುದೇ ಬಗೆಯ ವೈಭವೀಕರಣವಿರಲಿಲ್ಲ. ಅಲ್ಲಿದ್ದದ್ದು ಒಂದೇ ಒಂದು ಸ್ಕ್ಯಾನಿಂಗ್ ಸಾಧನ. ಅದರ ನಂತರ ಚೆಕ್ ಇನ್ ಬ್ಯಾಗೇಜನ್ನು ಸಾಗಿಸಲು ಪುಟ್ಟ ಕನ್ವೇಯರ್ ಪಟ್ಟಿ. ಮೇಲ್ವಿಚಾರಕರೆಲ್ಲಾ ನ್ಯಾಟೊ ಪಡೆಯ ಮಿಲಿಟರಿ ಅಧಿಕಾರಿಗಳೇ. ಪ್ರತಿಯೊಬ್ಬರೂ ಗಂಭೀರವದನರಾಗೇ ಇದ್ದುದು ಸ್ವಲ್ಪ ಆಶ್ಚರ್ಯವೆಂಬಂತಿತ್ತು. ಎಷ್ಟೇ ಆಗಲಿ ಸೈನಿಕರ ತಾಣ, ಶಿಸ್ತು ಪಾಲನೆ ಎಲ್ಲರ ಆದ್ಯ ಕರ್ತವ್ಯ! ಮಿಲಿಟರಿ ಅಧಿಕಾರಿಯೊಬ್ಬಳು ಕೈನಲ್ಲಿ ಬಿಳಿಯ ಹಾಳೆಯೊಂದನ್ನು ಹಿಡಿದು ಹೆಸರು ಕೂಗಲು ಆರಂಭಿಸಿದಳು. ಒಬ್ಬಬ್ಬರಾಗೇ ತಮ್ಮ ಲಗೇಜುಗಳನ್ನ ಸ್ಕ್ಯಾನಿಂಗ್ ಸಾಧನದ ಬಾಯಿಗೆ ಹಾಕಿ ಮುಂದೆ ಹೋಗುತ್ತಿದ್ದರು. ವಿಶೇಷವೆಂದರೆ ಅವರೆಲ್ಲಾ ಸೈನಿಕರೇ. ಅವರಿಗೇ ಮೊದಲ ಆದ್ಯತೆ ಅಲ್ಲಿ! ಅವರ ನಂತರ ಇತರೆ ನಾಗರೀಕರ ಪಾಳಿ, ಅದರಲ್ಲೂ ಮೊದಲು ಕಾಯ್ದಿರಿಸಿದವರೆಗೆ ಮೊದಲ ಆದ್ಯತೆ. ನನ್ನ ಹೆಸರನ್ನು ಕರೆಯಲು ಆಕೆ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅದು ನಾನೇ ಎಂದು ಮುಂದೆ ಹೋದೆ. NATO ISAF ಗುರುತಿನ ಚೀಟಿಯನ್ನು ಪರೀಕ್ಷಿಸಿ ಒಳಬಿಟ್ಟರು. ನನ್ನನ್ನು ಫೆಟಾನ್ ಹಿಂಬಾಲಿಸಿದ. ನಮ್ಮ ಹೊರೆ ಚೀಲವನ್ನು ಅಲ್ಲಿಳಿಸಿ, ಮೈ-ತಲೆಯ ಕವಚಗಳನ್ನು ಹಿಡಿದು ಒಮ್ಮೆ ಹಿಂದು ತಿರುಗಿ ಗಾಝ್ಮೆಂಡ್ ಗೆ ಕೈ ಬೀಸಿ ಮುನ್ನಡೆದೆವು.
ನಾಮ ಫಲಕಗಳನ್ನು ಓದುತ್ತಾ ಅದು ನಿರ್ದೇಶಿಸಿದೆಡೆಗೆ ಎಲ್ಲರೂ ಸಾವಧಾನವಾಗಿ ಮುನ್ನಡೆಯುತ್ತಿದ್ದೆವು. "ಆರ್ ಯು ಇಂಡಿಯನ್?" ಇದ್ದಕ್ಕಿದ್ದ ಹಾಗೆ ಅಶರೀರವಾಣಿಯಂತೆ ಬಂದೆರಗಿತು. ನಮ್ಮ ಹಿಂದೆಯೇ ಬರುತ್ತಿದ್ದ ನ್ಯಾಟೊ ಮಿಲಿಟರಿ ಅಧಿಕಾರಿಯೊಬ್ಬ ನನ್ನನ್ನು ಉದ್ದೇಶಿಸಿಯೇ ಕರೆಯುತ್ತಿದ್ದ. ಹಿಂದೆ ತಿರುಗಿ ಹೌದೆಂದು ತಲೆಯಾಡಿಸಿದೆ. "ಬಾಲಿವುಡ್ssss.........." ಎನ್ನುವ ಉದ್ಗಾರ ಮಾಡುತ್ತಾ ನರ್ತಿಸುವವನಂತೆ ವಿಚಿತ್ರವಾಗಿ ಕೈಕಾಲುಗಳನ್ನು ಕುಣಿಸುತ್ತಾ ನಗೆ ಬೀರುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದ. ಆ ಕ್ಷಣ ನಾನಂತೂ ವಿಚಲಿತನಾಗಿದ್ದೆ. ನನ್ನ ಛೇಡಿಸುವಿಕೆಯೋ ಅಥವಾ ಅವ ನಿಜವಾಗ್ಯೂ ಭಾರತ ಸಿನೆಮಾಗಳನ್ನು ಇಚ್ಚಿಸುವ ತೋರ್ಪಡಿಕೆಯೋ ಅರ್ಥವಾಗಲಿಲ್ಲ. ಆ ಕ್ಷಣ ಅಲ್ಲಿ ಮಿಲಿಟರಿ ಶಿಸ್ತು ಮಣ್ಣು ಪಾಲಾಗಿತ್ತು! "ನನ್ನನ್ನು ಮೂದಲಿಸುತ್ತಿರುವೆಯಾ?" ಯಾವ ಅಂಜಿಕೆಯಿಲ್ಲದೆ ಕೇಳಿದೆ. "ಅಲ್ಲಲ್ಲಾ.. ನನಗೆ ಬಾಲಿವುಡ್ ಸಿನೆಮಾ ತುಂಬಾ ಇಷ್ಟ" ಎಂದು ನನಗೆ ಸಮಜಾಯಿಷಿ ಕೊಡುತ್ತಾ ನನ್ನ ಸಮಾನಾಂತರವಾಗಿ ನಡೆದು ಬರುತ್ತಿದ್ದ. ಆತನ ಹೆಸರು ’ಮಾರ್ಕ್ ಹಿಲ್ಮನ್’ಎಂದು. ಆಸ್ಟ್ರೇಲಿಯಾದ ಸೈನಿಕ. ಮೂವತ್ತರ ಪ್ರಾಯವಿರಬಹುದು. ಹಿಂದೆ ಕಂದಹಾರ್ ಏರ್ ಬೇಸ್ ನಲ್ಲಿದ್ದವ. ಕಾಬೂಲ್ ಗೆ ಸ್ಥಳಾಂತರವಾಗಿ ಮೂರು ತಿಂಗಳಾಗಿವೆಯಷ್ಟೆ. ಚೆಕ್ ಇನ್ ಆದ ನಂತರ ಮಿಲಿಟರಿ ವಿಮಾನದೊಳಗೆ ಎಲ್ಲರನ್ನೂ ಕರೆದೊಯ್ಯುವ ಕೆಲಸವನ್ನು ಆತನಿಗೆ ಕೊಟ್ಟಿದ್ದಾರೆ. ಗಡುಸಾದ ಧ್ವನಿ. ಆರಡಿ ಎತ್ತರದ ಅಜಾನುಬಾಹು ದೇಹ. ಅವನ ಸ್ಫುಟ ನಗು, ಲವಲವಿಕೆಯನ್ನು ನೋಡಿದರೆ ಎಂತಹವರಿಗೂ ಜೀವನೋತ್ಸಾಹ ಉಕ್ಕಿ ಬರುತ್ತೆ ಅನ್ನಿಸ್ಸುತ್ತೆ. ಸಾವನ್ನು ಬಹಳ ಹತ್ತಿರದಿಂದ ನೋಡಿರುವ ಅವರೆಲ್ಲಾ ಬಹುಶಃ ಹಾಗೆಯೇ ಎನೋ? ಮೊದಲ ಬಾರಿ ಸೈನಿಕನೊಬ್ಬ ನನ್ನೊಡನೆ ತುಂಬಾ ಹತ್ತಿರದವರಂತೆ ಮಾತನಾಡಿದ್ದು ನನಗೆ ಅದೇನೋ ವಿಚಿತ್ರ ರೋಮಾಂಚನವೆನಿಸಿತ್ತು. ನನ್ನ ನೂರಾರು ಪ್ರಶ್ನೆಗಳಿಗೆ ಅವ ಉತ್ತರವಾಗಬಲ್ಲನೇನೋ ಎಂಬ ಕುತೂಹಲವಿತ್ತು. ಇದ್ದಕ್ಕಿದ್ದಂತೆ ಇಲ್ಲಿ ಕೂರಿರೆಂದು ನಮಗೆ ಹೇಳಿ ಬಿರಬಿರನೆ ಎತ್ತಲೋ ನಡೆದ. ಆ ಕ್ಷಣ ನನಗೆ ತಣ್ಣೀರೆರಚಿದ ಅವನ ಕರ್ತವ್ಯ ಪ್ರಜ್ಞೆಗೆ ನಾ ಹಿಡಿ ಶಾಪ ಹಾಕುತ್ತಿದ್ದೆ.
ಸುಮಾರು ಐವತ್ತರಿಂದ ಅರವತ್ತು ಜನರು ಕುಳಿತುಕೊಳ್ಳಬಹುದಾದಷ್ಟು ಆಸನಗಳುಳ್ಳ ಸುಸಜ್ಜಿತ ನಿರೀಕ್ಷಣಾ ಕೊಠಡಿಯದು. ಮಾರ್ಕ್ ಹಿಲ್ಮನ್ ಕರೆಯುವವರೆಗೂ ಎಲ್ಲರೂ ಅಲ್ಲಿಯೇ ಕುಳಿತಿರಬೇಕು ಎಂದು ನನಗೆ ವೇದ್ಯವಾಗಿತ್ತು. ಗೋಡೆಗೆ ನೇತುಹಾಕಿದ್ದ ದೂರದರ್ಶನಗಳೆರಡು ನನ್ನತ್ತ ನೋಡಿರೆಂದು ಹಠ ಹಿಡಿದವರಂತೆ ಶಬ್ದ ಮಾಡುತ್ತಿತ್ತು. ಯಾವುದೋ ಆಫ್ಘಾನಿ ಜನಪದ ಸಂಗೀತ-ನೃತ್ಯ ಬಿತ್ತರವಾಗುತ್ತಿತ್ತು. ಅಲ್ಲಿರುವ ಯಾರಿಗೂ ಅದನ್ನು ನೋಡುವ ಒತ್ತಾಸೆ ಇದ್ದಂತಿರಲಿಲ್ಲ. ಬಹುಶಃ ನಾನೊಬ್ಬನೇ ಇರಬೇಕು ಅದನ್ನು ನೋಡುತ್ತಿದ್ದುದು. ಪದೇ ಪದೇ ಅದೇ ರೀತಿಯ ಹಾಡುಗಳು ಬೇಸರವನ್ನಿತ್ತಿತ್ತಷ್ಟೆ. ಇನ್ನೆಷ್ಟು ಹೊತ್ತು ಕಾಯಬೇಕೋ ಏನೋ? ಎಂದು ಚಡಪಡಿಸುತ್ತಾ ಕುಳಿತಿದ್ದೆ. ಇದ್ದಕ್ಕಿದ್ದಂತೆ "ತೇರೆ ಅಂಗನೇ ಮೇ..." ಹೆಣ್ಣಿನ ಧ್ವನಿಯ ಹಾಡು ಶುರುವಾಗಿತ್ತು. ರಾಖಿ ಕುಣಿಯಲಾರಂಭಿದ್ದಳು. ಏನಾಶ್ಚರ್ಯ! ಹಿಂದಿ ಹಾಡು ಅದರಲ್ಲೂ ಇಲ್ಲಿಯ ದೇಸೀ ಟಿವಿ ಚಾನಲ್ ನಲ್ಲಿ. ನಂತರ ಹೃತ್ತಿಕ್ ರೋಶನನ ಒಂದು ಹಾಡು. ಒಮ್ಮೆಗೇ ಪ್ರತ್ಯಕ್ಷನಾದ ಮಾರ್ಕ್ ಹಿಲ್ಮನ್ ನನ್ನತ್ತ ನೋಡಿ ನಕ್ಕು ನಯವಾಗಿ ಕತ್ತನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಾ ಅವನದೇ ಧಾಟಿಯಲ್ಲಿ ಆನಂದಿಸುತ್ತಿದ್ದ. ಇವನ ಬಾಲಿವುಡ್ ಮೋಹದ ರಹಸ್ಯ ನನಗೆ ತಿಳಿದುಬಿಟ್ಟಿತ್ತು!
ಎಲ್ಲರೂ ಸಾಲಾಗಿ ನಿಲ್ಲಲು ಅಪ್ಪಣೆಯಾಯ್ತು. ಅಲ್ಲಿದ್ದದ್ದು ಒಂದೇ ದ್ವಾರ. ಸಾಮಾನ್ಯ ವಿಮಾನ ನಿಲ್ದಾಣಗಳಲ್ಲಿ ’GATE”ಎಂದು ಕರೆಯಲ್ಪಡುವ ದ್ವಾರ. ಅದೂ ಸಾಮಾನ್ಯ ರೀತಿಯ ಸ್ವಲ್ಪ ಹಿರಿದಾದ ಕಬ್ಬಿಣದ ಬಾಗಿಲು ಅಷ್ಟೆ. ಆ ಮಿಲಿಟರಿ ವಿಮಾನಗಳ ದ್ವಾರ ತುಂಬಾ ಕಿರಿದಾಗಿದ್ದು. ಒಮ್ಮೆಗೆ ಒಬ್ಬರು ಮಾತ್ರ ಪ್ರವೇಶಿಸಬಹುದಾದಷ್ಟು ಮಾತ್ರವಾದ್ದರಿಂದ ಏರೋ ಬ್ರಿಡ್ಜ್ ಕಟ್ಟುವ ಅವಶ್ಯಕತೆ ಅಲ್ಲಿರಲಿಲ್ಲ. ಎಲ್ಲರೂ ಸಾಲಾಗಿ ಹೊರಬಂದೆವು. ಮಿಲಿಟರಿ ಹೆಲಿಕಾಪ್ಟರ್ ಸೇರಿದಂತೆ ವಿಮಾನಗಳೆನೇಕವು ಬಹಳ ಹತ್ತಿರವೇ ನಿಂತಿದ್ದವು. ಎದುರಿಗೆ ತುಂಬಾ ದೂರದಲ್ಲಿ ಸಾರ್ವಜನಿಕ ವಿಮಾನ ನಿಲ್ದಾಣದ ಕಟ್ಟಡ ಗೋಚರಿಸುತ್ತಿತ್ತು. ಇನ್ನೊಂದು ಆಶ್ಚರ್ಯವೆಂದರೆ ಏರ್ ಇಂಡಿಯಾ ವಿಮಾನವು ಟ್ಯಾಕ್ಸಿ ವೇ ನಲ್ಲಿ ಚಲಿಸುತ್ತಿದ್ದುದನ್ನು ನೋಡಿದೆ. ಕಾಬುಲ್ ನಿಂದ ದೆಹಲಿಗೆ  ವಿಮಾನ ಸೇವೆ ಇದೆಯೆಂಬುದು ಮೊದಲೇ ತಿಳಿದಿತ್ತು. ಎದೆಗವಚ ಮತ್ತು ಶಿರಸ್ತ್ರಾಣಗಳನ್ನು ಧರಿಸಲು ಮಾರ್ಕ್ ಹಿಲ್ಮನ್ ಆದೇಶಿಸಿದ. ಇನ್ನೇನು ವಿಮಾನ ಹೊರಡುವುದೆಂದೂ, ವಿಮಾನ ಏರುವಾಗ ಮತ್ತು ಪ್ರಯಾಣ ಮಾಡುವಾಗ ಅನುಸರಿಸಬೇಕಾದ ಸುರಕ್ಷಾ ನಿಯಮಗಳನ್ನು ವಿವರಿಸಿ ಅಲ್ಲಿದ್ದ ಸೈನಿಕರಿಗೆಲ್ಲಾ ತಮ್ಮಲ್ಲಿರುವ ಗುಂಡುಗಳೆನ್ನೆಲ್ಲಾ ಅಲ್ಲಿಗೆ ಹಾಕಿರೆಂದು ಕೈ ತೋರಿಸುತ್ತಾ ಆದೇಶಿಸಿದ. ಹಿಂದೆ ಚೆಕ್ ಪೋಸ್ಟ್ ನ ಬಳಿ ನೋಡಿದ್ದಂತಹುದೇ ’Ammunition Bin' ಎಂದು ಬರೆಯಲಾದ ಕಾಂಕ್ರೀಟ್ ಪೆಟ್ಟಿಗೆ ಇಲ್ಲಿಯೂ ಇತ್ತು. ಪ್ರಯಾಣಿಕ ಸೈನಿಕರೆಲ್ಲರೂ ಅವನಾದೇಶಿಸಿದಂತೆ ಮಾಡಿ ತಮ್ಮ ಸಾಲಿನ ಸ್ಥಾನದಲ್ಲಿ ಬಂದು ನಿಂತರು. ನನ್ನನ್ನು ಹಿಂಬಾಲಿಸಿರೆಂದು ಸೂಚಿಸಿ ಮುಂದೆ ಹೆಜ್ಜೆ ಹಾಕುತ್ತಿದ್ದ ಹಿಲ್ಮನ್ ನನ್ನು ಯಮಭಾರದ ಮೈ-ತಲೆ ಕವಚವನ್ನು ಹೊತ್ತ ನಾವು ಹಿಂಬಾಲಿಸಿದೆವು.
ವಿಶಾಲ ಆವರಣದಲ್ಲಿ ನಿಂತಿದ್ದ ಆ ದೈತ್ಯ ವಿಮಾನಕ್ಕೆ ಇಂಧನವನ್ನು ತುಂಬಿದ ಕುಬ್ಜ ವಾಹನವೊಂದು ತನ್ನ ಕೆಲಸಯಾಯಿತೆಂದು ಪಕ್ಕಕ್ಕೆ ಸರಿಯುತ್ತಿತ್ತು. ಆ ವಾಹನ ಚಲಾಯಿಸುತ್ತಿದ್ದ ಸೈನಿಕ ಚಾಲಕನು ನಮ್ಮತ್ತ ಕೈ ಬೀಸಿ ಶುಭ ಪ್ರಯಾಣವೆಂದು ಸಣ್ಣಗೆ ಕೂಗುತ್ತಿದ್ದ. ’ಸಣ್ಣದೋ ದೊಡ್ಡದೋ, ಕೆಲಸವೆಂದರೆ ಕೆಲಸವಷ್ಟೇ!’ ಎಂಬ ಉಕ್ತಿ ಆ ನ್ಯಾಟೊ ಮಿಲಿಟರಿ ಸೈನಿಕರಿಗೆ ಬಹುವಾಗಿ ಅನ್ವಯುಸುತ್ತಿತ್ತು ಎನ್ನಬಹುದು. ಎಲ್ಲರನ್ನೂ ಮುಗುಳ್ನಗೆಯೊಂದಿಗೆ ಬೀಳ್ಕೊಡುತ್ತಿದ್ದ ಮಾರ್ಕ್ ಹೆಲ್ಮನ್ ಗೆ ಹಸ್ತ ಲಾಘವವನಿತ್ತೆ. ಅವನ ಬೃಹತ್ ಹಸ್ತದಲ್ಲಿ ನನ್ನ ಪುಟ್ಟ ಹಸ್ತ ಆ ಕ್ಷಣ ಮುಚ್ಚಿ ಹೋಗಿತ್ತು! ಅಂದಹಾಗೆ ನಾನೇನೂ ಸಣಕಲ ಅಲ್ಲ. ಸರಿಸುಮಾರು ತೊಂಭತ್ತು ಕಿಲೊ ತೂಗುವ ಟೊಣಪ ದೇಹ. ಅಂದರೆ ಆತನ ಆ ಅಜಾನುಬಾಹು ದೇಹವನ್ನು ಊಹೆಮಾಡಿಕೊಳ್ಳಬಹುದು.


ಸಾಮಾನ್ಯ ವಿಮಾನಗಳಿಗೆ ತುಲನೆ ಮಾಡಿದಲ್ಲಿ ಸರಾಸರಿ ಉದ್ದ ಕಡಿಮೆಯೇ ಆದರೂ ದೈತ್ಯ ಗಾತ್ರದ ಮಿಲಿಟರಿ ವಿಮಾನವದು. ರೆಕ್ಕೆಗಳಿಗಿಂತ ಆಕಾಶಕ್ಕೆ ಗುರಿ ಮಾಡಿದ್ದ ಪುಕ್ಕವೇ ದೊಡ್ಡದಾಗಿತ್ತು. ಕೆನಡಾ ದೇಶದ ಮಿಲಿಟರಿ ವಿಮಾನವದು. ವಿಮಾನದ ಒಂದು ಪಾರ್ಶ್ವದಲ್ಲಿ ISAF C -130 ಎಂದು ದಪ್ಪನೆಯ ಅಕ್ಷರಗಳಲ್ಲಿ ಬರೆಯಲಾಗಿತ್ತು. ಸಾಮಾನ್ಯವಾಗಿ ಏರೋಬ್ರಿಡ್ಜ್ ಇಲ್ಲದ ಪಕ್ಷದಲ್ಲಿ ಒಂದಂತಸ್ತೆತ್ತರದ ಮೆಟ್ಟಿಲನ್ನು ವಿಮಾನಕ್ಕಾನಿಸಿ ಪ್ರಯಾಣಿಕರು ಅದನ್ನು ಹತ್ತಿ ಒಳಗೆ ಹೋಗಲನುವು ಮಾಡಲಾಗುತ್ತದಲ್ಲವೇ? ಆದರೆ ಈ ವಿಮಾನದ ದ್ವಾರಕ್ಕೆ ಕೇವಲ ಮೂರು ಹೆಜ್ಜೆ ಮೆಟ್ಟಿಲುಗಳ ಹೊಂದಿಕೆಯಿತ್ತಷ್ಟೆ. ಅಂದರೆ ಈ ವಿಮಾನಕ್ಕೆ ಇದ್ದದ್ದು ಒಂದೇ ಅಂತಸ್ತು. ಪ್ರಯಾಣಿಕರು ಮತ್ತು ಸರಕು ಸರಂಜಾಮುಗಳನ್ನೆಲ್ಲಾ ಆ ಒಂದೇ ಅಂತಸ್ತಿನ ನಿರ್ಧಿಷ್ಟ ಸ್ಥಳಗಳಲ್ಲಿ ಕೂರಿಸಿ/ಇರಿಸಲಾಗುತ್ತದೆ. ಒಮ್ಮೆಗೆ ಒಬ್ಬರೇ ಪ್ರವೇಶಿಸಬಹುದಾದ ಕಿರಿದಾದ ದ್ವಾರದಲ್ಲಿ ನಾವೆಲ್ಲರೂ ಸರತಿಯಂತೆ ಒಳ ಪ್ರವೇಶಿಸಿದೆವು.
ಮಿಲಿಟರಿ ವಿಮಾನದ ಒಳಾಂಗಣ ಸಾಮಾನ್ಯ ವಿಮಾನಗಳಂತೆ ಸುಸಜ್ಜಿತವಾದವುಗಳಲ್ಲ. ಸುಖಾಸನಗಳು, ಸಾಮಾನು ಇರಿಸುವ ಸಜ್ಜಾದಂತಹ ಪೆಟ್ಟಿಗೆಗಳು, ಮನರಂಜನಾ ಸಾಧನಗಳು, ಹೊರ ದೃಶ್ಯಗಳನ್ನಿಣುಕಲು ಕಿಟಕಿಗಳು ಇವ್ಯಾವೂ ಇಲ್ಲಿರಲಿಲ್ಲ. ಗಗನ ಸಖಿಯರ ಮಂದಸ್ಮಿತ ಸ್ವಾಗತ ಹಾಗೂ ಸೇವೆಯಂತೂ ಬಹು ದೂರದ ಮಾತೇ ಸರಿ! ಇಲ್ಲಿ ಒಮ್ಮೆ ಸೊಂಟ ಪಟ್ಟಿಯನ್ನು ಬಿಗಿಯಾಗಿಸಿ ಪಟ್ಟಾಗಿ ಕುಳಿತರೆ ಮತ್ತೆ ಮೇಲೆ ಏಳುವುದು ಕಂದಹಾರ್ ನಲ್ಲಿಯೇ. ಪ್ರಯಾಣದ ಮಧ್ಯೆ ಯಾರೂ ಅತ್ತಿಂದಿತ್ತ ಅಲುಗಾಡುವ ಪ್ರಶ್ನೆಯೇ ಇರಲಿಲ್ಲ. ಕಡಿಮೆ ನೀರನ್ನು ಸೇವಿಸಿದಷ್ಟೂ ಒಳ್ಳೆಯದು ಎಂಬ ಅನುಭವ ಈಗಾಗಲೇ ಆಗಿತ್ತು. ಏಕೆಂದರೆ ಅಲ್ಲಿ ಶೌಚಾಲಯವೂ ಇರುವುದಿಲ್ಲ. ಮೂರು ಬೆರಳಗಲದ ಚಪ್ಪಟೆಯಾಕಾರದ ನೈಲಾನ್ ಪಟ್ಟಿಯನ್ನು ಬಲೆ ಹೆಣೆದಂತೆ ಕಟ್ಟಿ ಅದರ ಮೇಲೆ ಟಾರ್ಪಲಿನ್ ನ ಹೊದಿಕೆ ಹಾಸಿ ಆಸನಗಳನ್ನು ಮಾಡಲಾಗಿತ್ತು. ಮೂವತ್ತರಿಂದ ನಲವತ್ತು ಜನರು ಅಕ್ಕ-ಪಕ್ಕದಲ್ಲಿ ಎದುರು-ಬದರು ಸಾಲಿನಲ್ಲಿ ಕುಳಿತುಕೊಳ್ಳಬಹುದಾದ ವ್ಯವಸ್ಥೆಯದು. ಒಟ್ಟು ನಾಲ್ಕು ಸಾಲುಗಳಿದ್ದವು. ವಿಮಾನದ ಮೂರನೇ ಒಂದು ಭಾಗದಷ್ಟು ಜಾಗವನ್ನು ಸರಕು-ಸರಂಜಾಮು ತುಂಬಲು ಮೀಸಲಿಟ್ಟಿದ್ದರು. ವಿಮಾನ ಬಾಲವು ತೆರೆದುಕೊಂಡು ಅದರಿಂದ ಹೊರ ಚಾಚಿದ್ದ ಕಬ್ಬಿಣದ ಜಾರುಪಟ್ಟಿಯು(ramp) ನೆಲವನ್ನು ತಾಕಿಸುತ್ತಾ ನಿಂತಿತ್ತು. ಹೊರಗಿದ್ದ ಕೆಲ ಸೈನಿಕರು ಸಾಮಾನು ಸರಂಜಾಮುಗಳನ್ನೆಲ್ಲಾ ಫೋರ್ಕ್ ಲಿಫ್ಟ್ ನಂತಹ ಕುಬ್ಜ ಯಂತ್ರಗಳ ನೆರವಿನಿಂದ ಆ ಜಾರು ಪಟ್ಟಿಯ ಮೇಲೆ ತಂದಿಡುತ್ತಿದ್ದರು. ಒಳಗಿದ್ದ ವಿಮಾನದ ಸೈನಿಕ ಸಿಬ್ಬಂದಿ ಅವನ್ನು ಮೇಲೇರಿಸುವ ಯಂತ್ರಗಾರಗಳನ್ನು ಚಲಾಯಿಸುತ್ತಿದ್ದರು. ನೋಡು ನೋಡುತ್ತಿದ್ದಂತೆ ಕೆಲಸವು ಮುಗಿದು, ಕಬ್ಬಿಣದ ಜಾರುಪಟ್ಟಿ ಒಳ ಸೇರಿಕೊಂಡಿತು ಮತ್ತು ವಿಮಾನದ ಬಾಲ ತಂತಾನೆ ಮುಚ್ಚಿಕೊಂಡಿತ್ತು. ಬಲವಾದ ನೈಲಾನ್ ಹಗ್ಗದಲ್ಲಿ ಸಾಮಾನುಗಳನ್ನು ಬಿಗಿದ ಆ ಇಬ್ಬರು ಸೈನಿಕರು, ಪಕ್ಕದಲ್ಲಿದ್ದ ವಾಕಿ-ಟಾಕಿಯಂತಿದ್ದ ಸಂದೇಶ ವಾಹಕದಲ್ಲಿ ಎಲ್ಲವೂ ಮುಗಿಯಿತೆಂಬ ಸೂಚನೆಯನ್ನ ಪೈಲಟ್ ಗೆ ಇತ್ತರು.
ಈಗಾಗಲೇ ವಿಮಾನದ ಇಂಜಿನ್ ಚಾಲನೆಯಲ್ಲಿದ್ದು ಯಾರು ಏನು ಮಾತಾಡಿದರೂ ಕೇಳಿಸುವ ಸ್ಥಿಯಿರದ ಭಯಂಕರ ಶಬ್ದದಿಂದ ಆವೃತವಾಗಿತ್ತು ಅಲ್ಲಿನ ವಾತಾವರಣ. ವಿಮಾನದೊಳಗೆ ದೊರೆಯುತ್ತಿದ್ದ ಸ್ಪಂಜಿನಂತಿದ್ದ ’ಇಯರ್ ಪ್ಲಗ್’ಗಳನ್ನು ಸಣ್ಣಗಾಗುವಂತೆ ಹಿಂಡಿ ಕಿವಿಯಲ್ಲಿಟ್ಟ ಮೇಲೆ ಸಹಿಸಿಕೊಳ್ಳುವಂತಾಯ್ತು. ಶಬ್ದ ನಿರೋಧಕ ಕವಚಗಳು ಈ ವಿಮಾನದಲ್ಲಿ ಇರಲಿಲ್ಲ. ವಿಮಾನದ ವಿದ್ಯುತ್ ಮತ್ತು ವಿದ್ಯುನ್ಮಾನ ವಾಹಕ ಕೇಬಲ್ಲುಗಳು, ಹೈಡ್ರಾಲಿಕ್ ಪೈಪುಗಳು ಹಾಗೂ ಇನ್ನಿತರೇ ತಾಂತ್ರಿಕ ಸಲಕರಣೆಗಳು ಅಸ್ಥಿಪಂಜರದಂತೆ ವಿಮಾನದ ಗೋಡೆಗೆ ಅಂಟಿಸಲ್ಪಟ್ಟಂತೆ ಕಾಣುತ್ತಿತ್ತು. ಬೇಕಂತಲೇ ಯಾರಾದರೂ ಯಾವುದಾದರೂ ಕೇಬಲ್ಲನ್ನು ತುಂಡರಿಸಿದರೆ? ಕಥೆ ಅಲ್ಲಿಗೆ ಮುಗಿಯಿತು! ಬಹುಶಃ ಅದಕ್ಕೆಂದೇ ಯಾರೂ ಕುಳಿತ ಜಾಗದಿಂದ ಅಲುಗಾಡಬಾರದೆಂಬ ನಿಯಮವೋ ಎನೋ? ಮನಸ್ಸಿನಲ್ಲೇ ನಾನಾ ರೀತಿ ಯೋಚನಾ ಲಹರಿ ಹರಿಯುತ್ತಿತ್ತು. "ವಿಮಾನ ಹಾರಲು ಸನ್ನದ್ಧವಾಗಿದೆ. ಸುಮಾರು ಒಂದು ಘಂಟೆಯ ಪ್ರಯಾಣ. ವಿಮಾನ ಕಂದಹಾರ್ ನಲ್ಲಿ ಇಳಿಯುವವರೆಗೆ ತಮ್ಮ ತಮ್ಮ ಸುರಕ್ಷಾ ಕವಚಗಳನ್ನು ಕಡ್ಡಾಯವಾಗಿ ಧರಿಸಬೇಕು, ಆಮ್ಲಜನಕದ ಮಾಸ್ಕ್ ನಿಮ್ಮ ಆಸನದ ಮೇಲೆ ಸಿಕ್ಕಿಸಲಾಗಿದೆ." ಎಂದು ಅಲ್ಲಿದ್ದ ಮಿಲಿಟರಿ ಮೇಲ್ವಿಚಾರಕ ಧ್ವನಿವರ್ಧಕದಲ್ಲಿ ಅರಚುತ್ತಿದ್ದರೂ ಸ್ಪಷ್ಟವಾಗಿ ಕೇಳುಸುತ್ತಿರಲಿಲ್ಲ. ಆತ ಹೇಳೀದ ಇನ್ನೂ ಕೆಲ ಸೂಚನಾ  ವಾಕ್ಯಗಳು ನನಗಂತೂ ಅರ್ಥವಾಗಲಿಲ್ಲ. ಗಗನ ಸಖಿಯರು ಮೂಕಾಭಿನಯ ಮಾಡುವಂತೆ ಮಾಡಿದ್ದರೆ ಬಹುಶಃ ಅರ್ಥವಾಗುತ್ತಿತ್ತೋ ಏನೋ? ವಿಮಾನ ರನ್ ವೇ ಯತ್ತ ನಿಧಾನವಾಗಿ ಹೊರಟಿತ್ತು. ವಿಮಾನದಲ್ಲಿದ್ದ ಇಬ್ಬರು ಸೈನಿಕ ಮೇಲ್ವಿಚಾರಕರು ಹೆಡ್ ಫೋನಿನಂತಹ ಸಾಧನವನ್ನು ತಲೆಯ ಮೇಲೆ ಏರಿಸಿಕೊಂಡು ಸಂದೇಶ ವಾಹಕಗಳಿದ್ದ ಜಾಗದಲ್ಲಿ ಎದುರು ಬದುರು ನಿಂತು ಪೈಲಟ್ ಗೆ ಸೂಚನೆಗಳನ್ನು ಕೊಡುತ್ತಿದ್ದರು. ಅವರಿಗೆ ಹೊರಗಿಣುಕುವ ಕಿಟಕಿಗಳಿದ್ದುವು. ಕೆಲವೇ ನಿಮಿಷಗಳಲ್ಲಿ ವಿಮಾನ ತನ್ನ ವೇಗ ಹೆಚ್ಚಿಸಿಕೊಂಡು ಭರ್ರನೇ ಗಗನಕ್ಕೆ ಹಾರಿ ಅದರೊಂದಿಗೆ ಐಕ್ಯವಾಗಲೆತ್ನಿಸುತ್ತಿತ್ತು.  
ಈ ಮಿಲಿಟರಿ ವಿಮಾನಗಳಲ್ಲಿ ಪ್ರಯಾಣ ಮಾಡುವುದೆಂದರೆ ರೋಲರ್ ಕೋಸ್ಟರ್ ನಲ್ಲಿ ಭರ್ರನೆ ತಿರುಗುವಂತಾ ಭಯಾನಕ ಅನುಭವ! ನಿಲ್ದಾಣದ ಸುತ್ತಲೂ ಪರ್ವತಗಳಿರುವುದರಿಂದ ಹಾಗೂ ಆ ಪರ್ವತಗಳೆಡೆಯಿಂದ ರಾಕೆಟ್ ಧಾಳಿಯಾಗುವ ಸಂಭವ ಹೆಚ್ಚಾದ್ದರಿಂದ ವಿಮಾನವನ್ನು ಒಂದೇ ಬಾರಿಗೆ ರಾಕೆಟ್ ಉಡಾಯಿಸುವಂತೆ ಟೇಕ್ ಆಫ್ ಮಾಡಲಾಗುತ್ತದೆ. ಹೃದಯ ಬಾಯಿಗೆ ಬಂದಂತೇ ಭಾಸವಾಗುತ್ತೆ ಆ ಕ್ಷಣದಲ್ಲಿ. ನಿಗದಿತ ಮಟ್ಟಕ್ಕೇರಿದ ಮೇಲೂ ವಿಮಾನದ ಹೊಯ್ದಾಟ ನಿಲ್ಲುವುದಿಲ್ಲ, ಆಫ್ಘಾನಿಸ್ತಾನದ ಪರ್ವತ ಶ್ರೇಣಿಯ ಬೃಹತ್ ಜಾಲ ಮತ್ತು ವಾಯು ಭಾರಗಳೊಂದಿಗೆ ಪೈಲಟ್ ಸಮನ್ವಯ ಕಾಪಾಡಿಕೊಳ್ಳಲೋಸುಗ ಆ ತಾಂಡವ ನೃತ್ಯ! ಯಾವುದಾದರೂ ಪರ್ವತಕ್ಕೆ ಹತ್ತಿರವಾಗುತ್ತಿದ್ದಂತೆಯೇ ಪ್ರಸ್ತುತ ಹವಾಮಾನಕ್ಕನುಗುಣವಾಗಿ ತನ್ನ ಹೊಯ್ದಾಟವನ್ನ ಏರುಪೇರಾಗಿಸಿ ರಾಕೆಟ್ ಧಾಳಿಯಿಂದ ತಪ್ಪಿಸಿಕೊಳ್ಳುವುದು ಇದರ ಮುಖ್ಯ ಉದ್ದಿಶ್ಯ. ಅಷ್ಟೆತ್ತರಕ್ಕೂ ರಾಕೆಟ್ ಚಿಮ್ಮಿಸಿ ವಿಮಾನಗಳನ್ನುಡಾಯಿಸುವ ಕಲೆ ತಾಲಿಬಾನರಿಗಲ್ಲದೆ ಮತ್ಯಾರಿಗೂ ತಿಳಿದಿಲ್ಲವೇನೋ? ಆಫ್ಘಾನಿಸ್ತಾನದಲ್ಲಿ ನಾವು ಭೂಮಿಯ ಮೇಲಾಗಲೀ ಅಥವಾ ಆಕಾಶದಲ್ಲಾಗಲೀ ಸುರಕ್ಷಿತವಲ್ಲ ಎಂಬುದು ನನಗೆ ವೇದ್ಯವಾಗಿಟ್ಟಿತ್ತು!  
ಕಂದಹಾರ್ ನಿಂದ ಕಾಬುಲ್ ಗೆ ಬರುವಾಗ ಇನ್ನೇನು ವಾಂತಿಯಾಗೇಬಿಟ್ಟಿತ್ತು ಎನುವಷ್ಟರಲ್ಲಿ ಇಲ್ಲಿಗೆ ತಲಪಿದ್ದೆವಾದ್ದರಿಂದ ಯಾವ ಆಭಾಸವೂ ಉಂಟಾಗಿರಲಿಲ್ಲ. ಈ ಬಾರಿ ನನ್ನ ಮನಸ್ಸು ಅದೇಕೋ ತೋಯ್ದಾಡುತ್ತಿತ್ತು. ಯಾವ ಅಚಾತುರ್ಯವಾಗುವುದೋ ಏನೋ ಎಂಬ ಆತಂಕ ಬೇರೆ. ಅಕ್ಕ-ಪಕ್ಕ ಕುಳಿತಿದ್ದವರಿಗೆ ತಾವು ಧರಿಸಿದ್ದ ದೇಹಗವಚಗಳ ಪರಸ್ಪರ ಸಂಘರ್ಷವೇರ್ಪಟ್ಟು ಏನೋ ತೊಂದರೆಗೊಳಗಾದವರಂತೆ ಬೈದುಕೊಳ್ಳುವ ವಾತಾವರಣ ಉಂಟಾಗಿದ್ದುದು ನನಗಂತೂ ಸಣ್ಣಗೆ ನಗು ತರಿಸುತ್ತಿತ್ತು. ಅಲ್ಲಿದ್ದದ್ದು ನಾನೊಬ್ಬನೇ ಏಸಿಯಾ ಮೂಲದ ಪ್ರಜೆ. ಬಹುತೇಕ ಎಲ್ಲರೂ ಬಿಳಿ ತೊಗಲಿನವರೇ. ಬಹುಪಾಲು ಜನರ ಮುಖ ಕಪ್ಪಿಟ್ಟಿತ್ತು. ಪರಸ್ಪರ ಕಣ್ಣು ಮಿಲಾಯಿಸಿದಾಗ ಪ್ರಯತ್ನಪೂರ್ವಕ ನಗು ಅಷ್ಟೇ. ಎಲ್ಲರಿಗೂ ನನ್ನ ಹಾಗೆಯೇ ತಳಮಳವೇನೋ ಎಂಬಂತೆ ತೋರುತ್ತಿದ್ದ ಅಲ್ಲಿನ ಮಂದ ಬೆಳಕಿನ ವಾತಾವರಣ ಕಳೆಹೀನವಾಗಿತ್ತು. ನನಗಂತೂ ತಲೆ ಧಿಮ್ಮೆನ್ನುತ್ತಿದ್ದ ಅನುಭವ. ಹಾಳಾದ್ದು ಮಣ ಭಾರದ ಶಿರಸ್ತ್ರಾಣ ಬೇರೆ. ಹಲವು ಬಾರಿ ತೆಗೆದು ಪಕ್ಕಕ್ಕಿಡಲು ಪ್ರಯತ್ನಿಸಿ ಆ ಮೇಲ್ವಿಚಾರಕ ಸೈನಿಕರಿಂದ ಬಲು ಗಂಭೀರವಾದ ಬೈಗುಳ ಕೇಳಿದ್ದಾಗಿತ್ತು.
ಫೆಟಾನ್ ಸೆಫ ಸರಿಯಾಗಿ ನನ್ನೆದುರಿಗೇ ಕುಳಿತಿದ್ದ. ಅವನ ಮುಖವಂತೂ ನೋಡಲಾಗದಷ್ಟು ಕೆಳಜಾರಿದೆ. ಕಣ್ಣನ್ನು ಅಗತ್ಯಕ್ಕಿಂತ ಹೆಚ್ಚೇ ಬಲವಾಗಿ ಮುಚ್ಚಿಕೊಂಡು ಏನನ್ನೋ ಸಹಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾನೆನೆಸುತ್ತಿತ್ತು. "ಎಲ್ಲಾ ಸರಿಯಿದೆಯೇ?" ಅವನನ್ನು ಸ್ವಲ್ಪ ತಿವಿದು ಮಾತಾಡಿಸಿದೆ ಅಷ್ಟೇ. ನನ್ನ ಮುಖವನ್ನೊಮ್ಮೆ ಕಣ್ಣಗಲಿಸಿ ನೋಡಿ ವ್ಯಾಕ್ ಅನ್ನುವ ಶಬ್ದ ಮಾಡಿದ! ಗುರಿ ಹಿಡಿಯುವ ಅವಶ್ಯಕತೆಯೇ ಇಲ್ಲ! ಅವನಿಗೆ ಸರಿಯಾಗಿ ನೇರವಾಗಿ ತೀರ ಸನಿಹದಲ್ಲಿಯೇ ಇದ್ದೆ. ಅಬ್ಬಾ... ನನ್ನ ಅದೃಷ್ಟ ಚೆನ್ನಾಗಿತ್ತು, ಈ ಬಾರಿ ಶಬ್ದದ ಹೊರತು ಮತ್ತೇನೂ ಹೊರ ಬಂದಿರಲಿಲ್ಲ! ನೋಡನೋಡುತ್ತಿದ್ದಂತೆ ಆತುರಾತುರವಾಗಿ ತನ್ನ ಶಿರಸ್ತ್ರಾಣವನ್ನು ಕಳಚಿದವನೇ ಅದರೊಳಗೆ ತಿಂದದ್ದೆಲ್ಲವನ್ನೂ ಕಕ್ಕಿಬಿಟ್ಟ. ಯಾರೊಬ್ಬರೂ ಅವನ ಆ ಸ್ಥಿತಿ ನೋಡಲು ಸಿದ್ಧರಿರಲಿಲ್ಲ. ಸಾಂಕ್ರಾಮಿಕದಂತೆ ಎಲ್ಲರಿಗೂ ಹಬ್ಬುವ ಸ್ಥಿತಿಯಿದ್ದರಿಂದ ಎಲ್ಲರೂ ಕಣ್ಮುಚ್ಚಿ ಯೋಚನೆಯನ್ನು ಬೇರೆಡೆ ಹೊರಳಿಸಲು ಯತ್ನಿಸುತ್ತಿದ್ದರು. ಆದ್ದಾಗ್ಯೂ ಅಲ್ಲೆಲ್ಲೋ ಸಾಲಿನ ಕೊನೆಯಲ್ಲಿ ವ್ಯಾಕ್.. ವ್ಯಾಕ್ ಅನ್ನುವ ಶಬ್ದ ಒಂದೆರಡು ಬಾರಿ ಕೇಳಿಸಿತ್ತು. ನಾನಂತೂ ನನಗೆ ಗೊತ್ತಿದ್ದ ಉಸಿರು ನಿಯಂತ್ರಿಸುವ ಪ್ರಾಣಾಯಾಮದ ಪಟ್ಟುಗಳನ್ನೆಲ್ಲಾ ಹಾಕಿ ಅದನ್ನು ತಡೆಯುವ ಭಗೀರಥ ಪ್ರಯತ್ನ ಜಾರಿಯಲ್ಲಿಟ್ಟಿದ್ದೆ. ಇತ್ತ ಫೆಟಾನ್ ಮುಖ ನೋಡಲಾಗುತ್ತಿರಲಿಲ್ಲ. ಮಾಡಬಾರದ್ದನ್ನು ಮಾಡಿಬಿಟ್ಟೆನೆಂಬ ಮನಸ್ಥಿತಿ ಮುಖದಲ್ಲೇ ಗೋಚರಿಸುತ್ತಿತ್ತು. ಯಾರೊಬ್ಬರ ಕೈ ಚೀಲಗಳೂ ಸುಲಭವಾಗಿ ಎಟಕುವಂತಿರಲಿಲ್ಲ. ಸರಕು ಸರಂಜಾಮುಗಳೊಟ್ಟಿಗೆ ಬಿಗಿಯಾಗಿ ಕಟ್ಟಲಾಗಿತ್ತಾದ್ದರಿಂದ ಅದರೊಳಗಿನ ಬಟ್ಟೆಯನ್ನು ಹೆಕ್ಕಿ ತೆಗೆದು ಇವನಿಗೆ ಕೊಡುವ ಯಾವುದೇ ಅವಕಾಶ ಇರಲಿಲ್ಲ. ಮಿಲಿಟರಿ ಮೇಲ್ವಿಚಾರಕರು ಫೆಟಾನ್ ಅವಸ್ಥೆಯನ್ನ ಗಮನಿಸಿ ಸಹಾಯಕ್ಕೆ ಬರಬಹುದೆಂದು ಎಣಿಸಿ ಅವರನ್ನು ಕರೆದಿದ್ದು ಇನ್ನೊಂದು ದೊಡ್ಡ ಪ್ರಮಾದವಾಗಿಬಿಟ್ಟಿತ್ತು. ಒಬ್ಬನಂತೂ ತಲೆಯ ಸನ್ನೆ ಮಾಡುತ್ತಾ "ಹೆಲ್ಮೆಟ್ ಹಾಕಿಕೋ" ಎಂದು ಧ್ವನಿವರ್ಧಕದಲ್ಲಿ ಗಂಟಲು ಹರಿಯುವಂತೆ ಕಿರುಚಾಡತೊಡದ. ಇತ್ತ ನಿತ್ರಾಣನಾದಂತಾಗಿದ್ದ ಫೆಟಾನ್ ಗೆ ಏನು ಮಾಡುವುದೆಂದು ತೋಚದೆ ಅವನ ಮುಖವನ್ನೇ ನೋಡುತ್ತಾ ಕುಳಿತುಬಿಟ್ಟಿದ್ದ. ತಮ್ಮೆರಡು ಕಿವಿಗಳನ್ನು ಕವಚಗಳಿಂದಾವೃತಗೊಳಿಸಿಕೊಂಡು ಕಿಟಕಿಯಿಂದಾಚೆ ಹೊರಗಿಣುಕಿ ಬಹು ಗಂಭೀರವಾಗಿ ಪೈಲಟ್ ನೊಂದಿಗೆ ಸಂದೇಶ ಸಂವಹಿಸುತ್ತಾ ತಮ್ಮ ಕರ್ತವ್ಯ ಪಾಲಿಸುತ್ತಿದ್ದ ಅವರಿಗೆ ಇಲ್ಲಿ ಏನು ನಡೆದಿದೆಯೆಂಬ ವಾಸ್ತವತೆಯ ಅರಿವು ಇರಲಿಲ್ಲವಾದದ್ದೇ ಸಮಸ್ಯೆಗಾಗಿಬಿಟ್ಟಿತ್ತು. ಕಣ್ಮುಚ್ಚಿ ಕುಳಿತಿದ್ದ ಯಾರೊಬ್ಬರೂ ಅವರಿಗೆ ನಡೆದ ಘಟನೆಯನ್ನು ವಿವರಿಸುವ ಅಥವಾ ಸಾಕ್ಷಿ ಹೇಳುವ ಗೋಜಿಗೆ ಹೋಗಲಿಲ್ಲ. ಕೂಗಳತೆಗೆ ಎಟುಕದ ದೂರದಲ್ಲಿದ್ದ ಅವರಿಗೆ ’ವ್ಯಾಕ್’ ಎಂದು ಸನ್ನೆ ಮಾಡಿ ಕೂಗಿ ಹೇಳಿದೆನಾದರೂ ಪ್ರಯೋಜನವಾಗಲಿಲ್ಲ. ಇನ್ನೇನು ಹೊಡೆಯಲು ಬಂದೇನೆಂಬ ಗತ್ತಿನಲ್ಲಿ ಹೆಲ್ಮೆಟ್ ಹಾಕಿಕೊಳ್ಳಲು ಒತ್ತಾಯಿಸುತ್ತಿದ್ದರವರು. ಅವರ ಒತ್ತಡ ತಾಳಲಾರದೆ ಫೆಟಾನ್ ಶಿರಸ್ತ್ರಾಣದಲ್ಲಿದ್ದ ತನ್ನೆಲ್ಲಾ ಉದರ ಸಂಪತ್ತನ್ನು ತನ್ನ ಸೀಟಿನ ಕೆಳಗೆ ಒಮ್ಮೆಲೆ ಸುರಿದವನೇ ಹಾಗೆಯೇ ಅದನ್ನು ತಲೆಯ ಮೇಲೇರಿಸಿಕೊಂಡು ಅವರತ್ತ ಬಿರು ದೃಷ್ಟಿಯನ್ನೀಯುತ್ತಾ ಕುಳಿತುಬಿಟ್ಟ. ಅದೇನೋ ಸೇಡು ತೀರಿಸಿಕೊಂಡ ಭಾವ ಅವನ ಮುಖದಲ್ಲಿತ್ತು! ಈ ಹಠಾತ್ ಪ್ರಕ್ರಿಯೆಯಿಂದ ಆ ಸೈನಿಕರು ಒಮ್ಮೆ ಗೊಂದಲಗೊಂಡರಾದರೂ ನಂತರ ಎಲ್ಲವೂ ಅರ್ಥವಾದಂತಾಗಿ ಒಮ್ಮೆ ಫೆಟಾನ್ ನತ್ತ ನಗೆಯನ್ನು ಬೀರಿ ಪರಸ್ಪರ ಎನೋ ಗುಸುಗೊಟ್ಟುಕೊಂಡು ಸಣ್ಣಗೆ ನಗುತ್ತಿದ್ದರು. ನನಗೋ ತಡೆಯಲಾರದ ನಗು ಉಮ್ಮಳಿಸಿ ಬರುತ್ತಿತ್ತು. ಅಕಸ್ಮಾತ್ ನನ್ನ ದೇಹ ಮತ್ತು ಮನಸ್ಥಿತಿ ಆ ಕ್ಷಣ ಸರಿಯಾಗಿದ್ದದ್ದೇ ಆಗಿದ್ದಲ್ಲಿ ಖಂಡಿತವಾಗಿ ಹೊಟ್ಟೆ ಬಿಗಿಹಿಡಿದು ನಕ್ಕುಬಿಡುತ್ತಿದ್ದೆನೋ ಏನೋ! ಸದ್ಯ ಆ ಒಂದು ಪ್ರಮಾದ ಜರುಗಿರಲಿಲ್ಲವಷ್ಟೇ. ಇಷ್ಟೆಲ್ಲಾ ವಿಚಿತ್ರ ನಡಾವಳಿಗೆ ಸಾಕ್ಷಿಯಾಗಿದ್ದ ನಾನು ಹಾಗೇ ಕಣ್ಮುಚ್ಚಿ ಒರಗಿ ಸಮಯ ಕರಗುವುದನ್ನೇ ತಾಳ್ಮೆಯಿಂದ ಕಾಯುವುದರ ಹೊರತು ಮತ್ಯಾವ ವಿಧಿಯಿಲ್ಲವೆಂದು ಆಲೋಚಿಸುತ್ತಲೇ ನಿದ್ದೆಗೆ ಜಾರಿಬಿಟ್ಟಿದ್ದೆ.

ಚಿತ್ರ ಕೃಪೆ: 

http://www.contractmedic.com/

 

(ಮುಂದುವರೆಯುವುದು....)

 

Comments