ಫೊಟೋಕಾಪಿ ಡಾಕ್ಟರಿಕೆ

ಫೊಟೋಕಾಪಿ ಡಾಕ್ಟರಿಕೆ

ಮೊನ್ನೆ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ನನ್ನ ಡಿಪಾರ್ಟ್‌ಮೆಂಟಿನ ಹನುಮಪ್ಪ ಎದುರಿಗೆ ಸಿಕ್ಕಿದ.
"ಏನ್ ಹನುಮಪ್ಪಾ, ಟೌನಿಗ್‍ಹೋಗಿ ಬರ್ತಿರೋದಾ?" ಎಂದು ಉಪಚಾರಕ್ಕೆ ವಿಚಾರಿಸಿದೆ.
"ಹೂಂ, ಸಾರ್! ಅದೇ ನನಗೊಂದ್ ಬೆನ್ನ್‌ನೋವಿದ್ಯಲ್ಲಾ, ತೋರ್ಸೋಣಾಂತ ಮೂರ್ತಿ ಕ್ಳಿನಿಕ್ಕಿಗೆ ಹೋಗಿದ್ದೆ. ನಿನ್ನೆ ಶಿಫ್ಟ್ ಮುಗ್‌ಸ್ಕೊಂಡು ಹೋಗಿದ್ದೆ. ಡಾಕ್ಟರ್ ಮೂರ್ತೀನೇ ಇದ್ರು... ಪರೀಕ್ಷೆ ಮಾಡೀ ಒಂದ್ ಯಕ್ಸ್‌ರೇ ತೆಗ್‌ಸಿ ಕಳಿಸಿದ್ರು...‘ನಾಳೆ ಬಾ’೦ತ ಹೇಳೀ... ಅದ್ಕೇ ಇವತ್ ಹೋಗಿದ್ದೆ...ಯಕ್ಸ್‌ರೇ ನೋಡಿ, ‘ಅಂಥಾ ಸೀರಿಯಸ್ ಪ್ರಾಬ್ಲಮ್ ಏನೂ ಇಲ್ಲಾ’ ಅಂತಂದ್ರು... ಅದೇ.. ನಾನು ಏನ್ ಕೆಲ್ಸಾ ಮಾಡ್ತೀನಿ ಫ್ಯಾಕ್‌ಟ್ರೀಲೀ ಅಂತ ಕೇಳಿ ತಿಳ್ಕೊಂಡು, ಹೆಚ್ಚ್ ಹೊತ್ತು ನಿಂತ್ಕೊಂಡೇ ಇರೋದ್ರಿಂದ ಈ ರೀತಿ ಆಗುತ್ತೇ, ಸಾಧ್ಯವಾದಷ್ಟೂ ನಿಂತ್ಕೊಂಡಿರೋದನ್ನ ಅವಾಯ್ಡ್ ಮಾಡೂಂತೆಲ್ಲಾ ಹೇಳಿ,...ಒಂದ್ ಇಂಜೆಕ್ಶನ್ ಬರ್ಕೊಟ್ರು. ಅಲ್ಲೇ ಬಾಲಾಜೀ ಮೆಡಿಕಲ್ಸ್‌ಗೆ ಹೋಗಿ ತಗಂಡ್ ಬಂದು ಕೊಟ್ಟೆ...ಏನಿಲ್ಲಾ ಒಂಭತ್ತ್ ರೂಪಾಯಿ ಅರುವತ್ತ್ ಪೈಸೆ ಆಯ್ತು... ನರ್ಸಮ್ಮ ಚುಚ್ಚಿದ್ಳು...ಐದ್ ನಿಮಿಶಾನೂ ಇಲ್ಲ, ನೋಡೀ ಸಾರ್...ಸರ್ರ್s ಅಂತ ನೋವು ಇಳದೋಯ್ತು... ಅಷ್ಟೇ... ಈಗ್ನೋಡೀ ಹಾಕ್ಸ್‌ಕೊಂಡು ವನ್ನವರಾಯ್ತು, ಆ ಥರಾ ನೋವಿತ್ತೂಂತನ್ನೋದೇ ಮರ್ತೋದಂಗಾಗಿದೆ," ಎಂದೆಲ್ಲಾ ವಿವರವಾಗಿ ಹೇಳಿದ.
"ಹೌದಾ?! ಸಂತೋಷಾ...ಸ್ವಲ್ಪ ಎಚ್ಚರಿಕೆಯಿಂದಿರು...ಭಾರಾ ಗೀರಾ ಎತ್ತೋವಾಗ ಎಚ್ಚರಿಕೆಯಿಂದಿರು..." ಅಂತಂದೆ.
"ಡಾಕ್ಟರೂ ಅದೇ ಹೇಳಿದ್ರು...ಭಾರ ಎತ್ತೋಕೇ ಹೋಗ್ಬೇಡಾಂತ...ಸ್ವಲ್ಪ ಸಮಯ ಸ್ಕೂಟಿ ಓಡಿಸ್ಬೇಡಾಂತೆಲ್ಲಾ ಹೇಳಿದ್ರು...ಮತ್ತೆನೋಡಿ ಸಾರ್...ಕ್ಳಿನಿಕ್ಕಿಂದ ಬರ್ತಾ ಬಸ್ಟಾಂಡ್ ಹತ್ರ ನಮ್ಮ ಸೀನಾ, ಅದೇ ಸೀಯನ್‌ಸೀ ಮೆಶೀನಲ್ಲಿದ್ದಾನಲ್ಲಾ, ಶ್ರೀನಿವಾಸಾ...ಅವನ್ ಸಿಕ್ದಾ...ಅವನ್ಗೂ ಇದೇ ಥರಾ ಬೆನ್ನ್‌ನೋವೂ...ಅವ್ನೆಲ್ಲೋ ಬೇರೇ ಕಡೆ ತೋರ್ಸಿದ್ದಾ... ಏನೂ ಪ್ರಯೋಜನ ಕಂಡ್‌ಬಂದಿಲ್ಲಾ.. ಅವನ್ಗೆ ನನ್ ಕೇಸನ್ನ ಹೇಳ್ದೆ... ಮತ್ತ್ ಅಂದೆ, ‘ನೋಡು, ನೀಯೇನೂ ಮಾಡ್ಬೇಡ...ಡಾಕ್ಟರ್ ಮೂರ್ತಿ ಬರ್ಕೊಟ್ಟ ಚೀಟಿ ನೋಡು, ಇಲ್ಲಿದೆ...ನೆಟ್ಟ್‌ಗೆ ಬಾಲಾಜೀ ಮೆಡಿಕಲ್ಸಿಗ್ ಹೋಗು...ಇಲ್ಲಾ ಇಲ್ಲೇ ಯಾವ್ದಾರಾ ಮೆಡಿಕಲ್ ಶಾಪಲ್ಲಿ ವಿಚಾರ್ಸಿ ನೋಡು...ಈ ಇಂಜೆಕ್ಶನ್ ಬಾಟಲ್ ಕೊಂಡ್ಕೋ...ಅದ್ರ ಬಿಲ್ಲೂ ಇಲ್ಲಿದೆ...ಒಂಭತ್ತ್ ರೂಪಾಯಿ ಅರುವತ್ತ್ ಪೈಸೆ ಅಷ್ಟೇ...ತಗಂಡ್‌ ಹೋಗಿ ನಿಮ್ಮ್ ಪಕ್ಕದ್ ಮನೇಲೇ ಇದ್ದಾಳಲ್ಲ, ನರ್ಸಮ್ಮ...ಅವಳಿಗ್ ಕೊಟ್ಟು ಸೂಜೀ ಹಾಕಿಸ್ಕೋ...ಫಟ್ಟಂತ ಎರಡ್ ನಿಮಿಶ್‌ದಲ್ಲಿ ನಿನ್ನ್ ಬೆನ್ನ್ ನೋವ್ ಹೋಗ್ಲಿಲ್ಲಾ, ಆಗ್ ನನ್ನ್ ಕೇಳೂ’೦ತ ಚೀಟಿ ಕೊಟ್ಟ್ ಕಳಿಸ್ದೆ...ನನ್ ಜತೇನೇ ಬಂದ್ ಈಗ ಮನೇಗ್ ಹೋದ..."
"ಏನು, ಇಂಜೆಕ್ಷನ್ನೂ ತೊಗಂಡ್ ಹೋದ್ನಾ?" ನಾನು ತುಸು ಆತಂಕದಿಂದಲೇ ಕೇಳಿದೆ.
"ಹೂಂ, ಸಾರ್. ಅವನ್ ಪಕ್ಕದ್ ಮನೇಲೇ ನರ್ಸಮ್ಮ ಇದ್ದಾಳೇ, ಅದೇ ನಮ್ ನಾಯರ್ ಮಿಸೆಸ್ಸೂ..."
"ಇಲ್ಲ, ಹನುಮಪ್ಪ. ನೀನ್ ತಪ್ಪ್ ಕೆಲ್ಸಾ ಮಾಡ್ದೆ...ಹಾಗೆಲ್ಲಾ ಡಾಕ್ಟರಿಕೆ ಮಾಡ್ಬಾರ್ದು...ಅಲ್ಲಾ ನಿನಗ್ ನೋವಿದ್ದದ್ದಕ್ಕೇ ನೀನು ಡಾಕ್ಟರ್ ಹತ್ರ ಹೋದೆ, ಅವ್ರು ನಿನ್ನ ಪೂರ್ತಿಯಾಗಿ ಪರೀಕ್ಷೆ ಮಾಡೀ, ಎಕ್ಸ್ ರೇ ತೆಗ್ಸೀ, ಆಮೇಲೆ ಇಂಜೆಕ್ಷನ್ ಬರಕೊಟ್ರು. ಅಲ್ವಾ?"
"ಹೂಂ ಸಾರ್!... ನನ್ಗೊತ್ತಾಯ್ತು ನೀವೇನ್ ಹೇಳ್ತಿದ್ದೀರಾಂತ... ಆದ್ರೆ ಸೀನನ್ಗೂ ನನ್ ಥರದ್ದೇ ಬೆನ್ನ್ ನೋವೂ...ಅವನ್ಗೂ ಆಯ್ತು, ನಾಲ್ಕಾರು ತಿಂಗ್ಳು...ನಿಂತ್ರೆ ಬಗ್ಲಿಕ್ಕಾಗಲ್ಲಾ, ಬಗ್ಗ್‌ದ್ರೆ ನಿಂತ್‌ಕೊಳ್ಳೋಕ್ಕಾಗಲ್ಲಾ... ಈಗ್ ನೋಡೀ...ಇಷ್ಟೊತ್ತಿಗೆಲ್ಲಾ ಇಂಜೆಕ್ಶನ್ ಹಾಕಿಸ್ಕೊಂಡಿರ್ತಾನೆ...ಬೆನ್ನ್ ನೋವಿದ್ರೆ ಕೇಳಿ," ಎಂದ ಹನುಮಪ್ಪ ವಿಶ್ವಾಸದಿಂದ.
"ಆಯ್ತಪ್ಪಾ... ಇಂಜೆಕ್ಶನ್ ಹಾಕಿಸ್ಕೊಂಡಿರ್ತಾನೆ, ಬೆನ್ನ್ ನೋವು ಹೊರ್ಟೋಗಿದ್ರೂ ಹೋಗಿರ್ಬಹುದೂ...ಆದ್ರೆ ನಾನ್ ಹೇಳೋದೂ, ನೀನು ಡಾಕ್ಟರ್ ಹತ್ರ ಹೋಗಿದ್ದಾಗ ಅವ್ರು ನಿನ್ನ ಪರೀಕ್ಷಿಸೀ, ನಿನ್ನ ವಯಸ್ಸೂ, ನಿನ್ನ ಫ್ಯಾಮಿಲಿ ಬ್ಯಾಕ್‌ಗ್ರೌಂಡೂ, ನಿನ್ನ ಉದ್ಯೋಗಾ, ಎಲ್ಲಾ ಕೇಳಿ ತಿಳ್ಕೊಂಡೂ, ಬೀಪೀ, ನಾಡಿ ಚೆಕ್ ಮಾಡೀ, ಎಕ್ಸ್‌ರೇ ತೆಗ್ಸಿ ನೋಡೀ, ಆsಮೇಲೇ ಇಂಜೆಕ್ಶನ್ ಬರ್ಕೊಟ್ಟ್ರಲ್ವಾ? ನನ್ಗೊತ್ತು, ಡಾಕ್ಟರ್ ಮೂರ್ತಿ ಥರೋ ಚೆಕಪ್ ಮಾಡ್ದೇನೇ ಏನನ್ನೂ ಪ್ರಿಸ್ಕ್ರೈಬ್ ಮಾಡಲ್ಲಾಂತ...ಆಮೇಲೆ ಪುನಃ ನೋವು ಕಾಣಿಸ್ಕೊಂಡ್ರೆ ಮತ್ತಿರ್ಗಾ ‘ಬಂದು ನೋಡೂ’೦ತ ಹೇಳಿದ್ದಾರಲ್ವಾ, ನಿನ್ಗೆ?"
"ಹೂಂ, ಸಾರ್..." ಏನೋ ಅಪಚಾರ ಮಾಡಿಬಿಟ್ಟ ಕಳವಳದ ದನಿಯಲ್ಲಿ ಉಲಿದ.
"ಈಗ ನೀನು ಸೀದಾ ನಿನ್ನ ಔಷಧಿ ಚೀಟೀನ ಶ್ರೀನಿವಾಸ್ಗೆ ಕೊಟ್ಟು, ‘ಇಂಜೆಕ್ಶನ್ ಹಾಕಿಸ್ಕೋ’, ಅಂತ ಕಳಿಸ್ಬಿಟ್ಟೆ...ಅವ್ನಿಗೆ ಬೀಪಿ ಇದ್ಯೋ, ಶುಗರ್ ಇದ್ಯೋ...ಏನೂ ನೋಡ್ದೇನೇ..."
ನಡುವೇ ಹನುಮ ಬಾಯಿ ಹಾಕಿದ, "ಬೀಪೀ, ಶುಗರೂ ಏನೂ ಇದ್ದಂಗಿಲ್ಲಾ, ಸಾರ್!"
" ಗೊತ್ತಿಲ್ಲ. ಗೊತ್ತಿದ್ರೂ ಡಾಕ್ಟ್ರು ಚೆಕ್ ಮಾಡ್ತಾರಲ್ವಾ?" ನಾನು ಮುಂದುವರೆಸಿದೆ: "ನೀನು ಕ್ಲಿನಿಕ್ಕಲ್ಲಿ ಇಂಜೆಕ್ಶನ್ ಹಾಕಿಸ್ಕೊಂಡೆ...ಏನಾದ್ರೂ ಸೈಡ್ ಎಫೆಕ್ಟೋ, ಎಲರ್ಜೀನೋ ಆಗಿದ್ರೆ ಅಲ್ಲೇ ಅವ್ರಿಗೆ ಗೊತ್ತಾಗ್ತಿತ್ತು..."
"ಅಯ್ಯೋ ರಾಮಾ!" ಹನುಮಪ್ಪ ಇನ್ನಷ್ಟು ಕಳವಳದಿಂದ ಉದ್ಗರಿಸಿದ: "ಹಂಗೆಲ್ಲಾಗ್‌ಬುಡುತ್ತಾ? ಆಂ?...ಇಲ್ಲಾ, ನನ್ಗೂ ಈ ಬೆನ್ನ್‌ನೋವಿರ್ತಿರ್ಲಿಲ್ಲಾ... ಟೀವೀ ನೋಡ್ಕೊಂಡು ಯೋಗಾ ಮಾಡ್ತಿದ್ದೇ...ದಿನಾ ಸಂಜೆ... ಯಾವ್ದೋ ಪತ್ರಿಕೇಲಿ ಒಂದು ಆಸನದ್ ವಿಶ್ಯ ಬರ್ದಿತ್ತು...ಹಾಕೋಕ್ ಪ್ರಯತ್ನಪಟ್ಟೆ..ಸಳಕ್ ಅಂತ ಹಿಡ್ಕೊಂಡ್ತು ನೋಡಿ, ಇಲ್ಲೇ...ಈ ಜಾಗದಲ್ಲಿ...ನನ್ ಮಗಂದು ಉಡಾ ಹಿಡ್ಕೊಂಡಂಗೆ...ಬಿಡ್ಲೇ ಇಲ್ಲಾ.."
"ನೋಡ್ದಾ, ಅದೂ ತಪ್ಪು...ಯೋಗವನ್ನಾ ಗುರುಗಳ ಮಾರ್ಗದರ್ಶನದಲ್ಲೇ ಹೇಳಿಸ್ಕೋಬೇಕು ಅಂತ ಇದೆ...ಟೀವೀ ನೋಡ್ಕೊಂಡ್ ಮಾಡಿದ್ರೂ ಪರ್ವಾಗಿಲ್ಲಾಂತ ಹೇಳ್ತಾರೆ. ಆದ್ರೆ ಪುಸ್ತ್‌ಕಾ ನೋಡ್ಕೊಂಡು ಕಲಿಯೋದೂ ಮಾಡೋದು ಸರಿಯಲ್ಲಾಂತ ನನ್ಗನಿಸ್ತಪ್ಪಾ..."
"ಸಾರ್, ಒಳ್ಳೇ ಮ್ಯಾಗಜೈನೇ, ಸಾರ್...ಫೋಟೋನೂ ಹಾಕಿದ್ದಾರೆ ಆಸನದ್ದೂ..."
"ಅದಿರ್ಲೀ...ನೀನೀಗ ಆ ಶ್ರೀನಿವಾಸ್ ಮನೆಗೆ ಹೋಗಿ ಅವನ್ ಹೆಂಗಿದ್ದಾನೇಂತ ನೋಡ್ಕೊಂಡ್ ಬಾ. ಏನೂ ಆಗಿರಲ್ಲಾ...ನೋವೇನಾದ್ರೂ ಹೋಗ್ದಿದ್ರೆ ಅವನ್ನ ಡಾಕ್ಟರ್ ಹತ್ರ ಹೋಗೋದಕ್ಕೆ ಹೇಳು..ನೀನೂ ಬೇಕಾದ್ರೆ ಜತೇಲಿ ಹೋಗು...ಗಾಬ್ರಿಯಾಗೋದಕ್ಕೇನೂ ಇಲ್ಲ," ಎಂದೆ ನಾನು ಧೈರ್ಯ ತುಂಬುತ್ತಾ. "ಮತ್ತಿನ್ನೇನಾದ್ರೂ ಡಾಕ್ಟರಿಕೆ ಮಾಡ್ಬೇಡ...ಇವೆಲ್ಲಾ ಮನೆವೈದ್ಯದ್ ಥರಾ ಅಲ್ಲ. ಮನೆವೈದ್ಯಾಂತ ಸೊಪ್ಪು-ಸದೇದ್ದು ರಸ ಕುಡಿದ್ರೇನೇ ಕಷ್ಟಾ...ಹಾಗಿರೋವಾಗ ನೇರವಾಗಿ ರಕ್ತಕ್ಕೇ ಸೇರೋ ಹಂಗೆ ಇಂಜೆಕ್ಶನ್ ಮಾಡಿಸ್‌ದ್ರೆ...? ಹೆದ್ರ್‌ಕೋಬೇಕಾಗಿಲ್ಲ...ಸಾಮಾನ್ಯವಾಗಿ ಆ ನರ್ಸಮ್ಮನೂ ಡಾಕ್ಟರ್ ಚೀಟಿ ನೋಡೀ, ಹಿಂದೆ ಮುಂದೆ ವಿಚಾರಿಸೀನೇ ಇಂಜೆಕ್ಶನ್ ಹಾಕ್ತಾಳೆ...ಆದ್ರೂ ನೀನೊಂದ್ ಸಾರಿ ಹೋಗಿ ನೋಡು.."
ಹನುಮಪ್ಪ ಬಿರಬಿರನೆ ಶ್ರೀನಿವಾಸನ ಮನೆಯ ಕಡೆ ನಡೆಯತೊಡಗಿದ.

Comments