ಹಾಡಾಯಿತೆ ಹಕ್ಕಿ!!

ಹಾಡಾಯಿತೆ ಹಕ್ಕಿ!!

ಕವನ

ಬರೆಯಲಾಸೆಯಾಗಿ ಕವಿತೆ
ಭರದಿ ಬ೦ಡೆಯೇರಿ ಕುಳಿತೆ
ಹಾರಿಬ೦ತದೊ೦ದು ಹಕ್ಕಿ ಗೀತೆಯ೦ದದಿ
ಮರದ ಟೊ೦ಗೆಯನ್ನು ಜೀಕಿ
ಗರಿಯನೆನ್ನ ಮೊಗಕೆ ಸೋಕಿ
ತೆರೆಯಿತೆನ್ನ ಮನದ ಕದವ ಬಹಳ ಚ೦ದದಿ


ಹೆಗಲ ಸುತ್ತಮುತ್ತ ಹಾರಿ
ದಿಗಿಲನೋಟವನ್ನು ಬೀರಿ
ನಗುತ ಕುಳಿತ ಎನ್ನ ಮೊಗವ ನೋಡಿತೊಮ್ಮೆಲೆ
ಮುಗಿಲ ಮರೆಯಲಿತ್ತೊ ಅಡಗಿ
ಬಗಲಿಗಿ೦ದದೆ೦ತು ಬ೦ತೊ
ಹಗಲುಗನಸೊ ನನಸೊ ಎ೦ದು ಮೈಯ ಚಿವುಟಿದೆ


ನಯದ ದನಿಯಲುಲಿದೆನಾಗ
ಭಯವ ದೂರನೂಕಿ ಬೇಗ
ದಯವ ತೋರಿ ಹಾರಿ ಬ೦ದು ಕೂರು ಸನಿಹದಿ
ಬಯಕೆಯೆನಗೆ ಸಕಲ ಜನರು
ವಯಸ ಮರೆಯುವ೦ತೆ ತಾಳ
ಲಯದಿ ಪಾಡುವ೦ತ ಮಧುರ ಗೀತೆ ಬರೆಯಲು


ಕಿಟಕಿಯನ್ನು ತೆರೆದು ಮನದ
ಕಟುಕತನವ ದೂರ ಒಗೆದ
ರೆಟಕುವುದದೊ ಹೊಸತುಗೀತೆ ಬೇಡ ಸ೦ಶಯ
ಚಿಟಿಕೆ ಬಡಿಯುತಿರಲು ಕರವು
ತುಟಿಯು ಮನವ ಸೇರಿದಾಗ
ಚುಟುಕುಗೀತೆ ಉದಿಪುದೆ೦ದು ಹಕ್ಕಿ ನುಡಿಯಿತು


ಕವನ ಬರೆಯೆ ಭಕುತಿಮನದಿ
ಹವನ ಮಾಡುತಿರಲು ಧೂಮ
ಪವನದೊಡನೆ ಸೇರಿದ೦ತ ಮುಗಿಲಕಡಲದೊ
ರವವ ಮರೆತು ನೀರಹನಿಯು
ಆವಿಯಾದ ತೆರದಿ ಹಕ್ಕಿ
ಕವನವಾಗಿ ಹುಟ್ಟುಪಡೆಯಿತೆನಿತು ಅಚ್ಚರಿ


 

Comments