ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ...(ಕಥೆ)

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ...(ಕಥೆ)

 


"ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ತನ್ನ ಸಿಸ್ಟಮ್ ನಲ್ಲಿ ಪುರಂದರ ದಾಸರ ಕೀರ್ತನೆಯನ್ನು ಕೇಳುತ್ತ ಕುಳಿತ ಸಂತೋಷ್ ಗೆ ಈ ಕೀರ್ತನೆ ವಾಸ್ತವಕ್ಕೆ ಬಹಳಷ್ಟು ಹತ್ತಿರವಿದೆ ಎಂದು ಅನಿಸುತಿತ್ತು. ಅಪ್ಪ, ಅಮ್ಮ, ಹುಟ್ಟಿ ಬೆಳೆದ ಮನೆ ಎಲ್ಲವನ್ನೂ ಬಿಟ್ಟು ಇಷ್ಟು ದೂರ ಈ ನಾಗರೀಕತೆಯ ಸೋಗಿನಲ್ಲಿ ಯಾಂತ್ರಿಕ ಬದುಕು ಬದುಕುವುದು ಅವನಿಗೂ ಬೇಡವಾಗಿತ್ತು . ಆದರೂ ಹೊಟ್ಟೆ ಹೊರೆಯುವುದಕ್ಕಾಗಿ ಅವನು ಈ ಉದ್ಯೋಗಕ್ಕೆ ಅಂಟಿಕೊಂಡಿದ್ದ. ತನ್ನ ಊರಿನ ಓರಗೆಯ ಹುಡುಗರಂತೆ, ತಾನೂ ಕಂಪ್ಯೂಟರ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಊರಿನಲ್ಲಿ ಅಪ್ಪ ಬಹಳಷ್ಟು ಹೆಸರು ಗಳಿಸಿದ್ದರು. ತಂದೆಯವರು ಹೇಳಿದ್ದರೆ, ಅವನಿಗೆ ಊರಿನಲ್ಲಿಯೇ ಒಂದು ಕೆಲಸ ಸಿಗಬಹುದಿತ್ತು ಆದರೂ ತಾನೇ ಸ್ವಂತವಾಗಿ ಏನಾದರೂ ಸಾಧಿಸಬೇಕೆಂದು ನೆನೆದು ಈ ಮಹಾನಗರಿಯಲ್ಲಿ ಉಳಿದುಕೊಂಡಿದ್ದ.

 

ಈ ನಡುವೆ ಅವನಿಗೆ ಕೆಲಸದಲ್ಲಿ ಮನಸಿರಲಿಲ್ಲ. ತಂದೆ- ತಾಯಿ ಇಬ್ಬರೇ ಊರಿನಲ್ಲಿರುವಾಗ ಅವರ ಬಗೆಗೆ ಯಾವಾಗಲೂ ಯೋಚಿಸತೊಡಗಿದ್ದ. ಕೆಲವೊಮ್ಮೆ ಬಹಳಷ್ಟು ಬೇಜಾರು ಅನಿಸಿದಾಗ, ಅಲ್ಲಿಯೇ ಅವನು ಉಳಿದುಕೊಂಡಿದ್ದ ರೂಮಿನ ಬಳಿಯಲ್ಲಿದ್ದ ದೇವಸ್ಥಾನ, ಪಾರ್ಕುಗಳ ಕಂಬ, ಮರಗಳಿಗೆ ತನ್ನ ಕಷ್ಟ ಹೇಳಿಕೊಳ್ಳುತ್ತಾ ಸಮಾಧಾನ ಪಟ್ಟುಕೊಳ್ಳುತ್ತಿದ್ದ. ಹಲವಾರು ಬಾರಿ ಎಲ್ಲವನ್ನೂ ನೆನೆದು, (ಕೆಲಸದ ಒತ್ತಡವನ್ನೂ, ತಂದೆ ತಾಯಿಯರನ್ನು ) ಚೆನ್ನಾಗಿ ಅತ್ತುಬಿಡಬೇಕೆನ್ದೆನಿಸಿದರೂ, ಅದಕ್ಕೂ ಒಬ್ಬಂಟಿಯ ಭಾವ ಜೊತೆಯಾಗುತ್ತಿತ್ತು. ಹಲವಾರು ಬಾರಿ, ಈ ಕಷ್ಟ ಪಡುವುದಕಿಂತ, ಊರಿಗೆ ಮರಳಿ ಹೋಗಿ ತಂದೆ ಹೇಳಿದ ಕೆಲಸಕ್ಕೆ ಸೇರಿ, ಸಣ್ಣ ಪುಟ್ಟ ಸಂಬಳದ ಕೆಲಸವಾದರೂ ಸರಿ ಸೇರಿಬಿಡೋಣ ಅಂತ ಅಂದುಕೊಂಡದ್ದೂ ಇದೆ. ಆದರೆ ಮತ್ತಾವುದೋ ಜವಾಬ್ದಾರಿಯ ನೆನಪಾಗಿ ತನ್ನನು ತಾನು ಹತೋಟಿಗೆ ತಂದುಕೊಳ್ಳುವನು.

 

ಅಂದ ಹಾಗೆ, ಜವಾಬ್ದಾರಿ ಎಂದರೆ ಅದು ಅವನ ಇಬ್ಬರು ತಮ್ಮಂದಿರು. ಮಹಾನಗರಿಯಲ್ಲಿ ಇವನ ಜೊತೆಯಲ್ಲಿಯೇ ಇದ್ದರು. ಒಬ್ಬ ತಮ್ಮನು, ಸ್ನಾತಕೋತ್ತರ ಪದವಿ ಗಳಿಸಿದ್ದರೂ ಕೆಲಸಕ್ಕಾಗಿ ಹುಡುಕುವಂತಾಗಿತ್ತು. ಇನ್ನೊಬ್ಬ ತಮ್ಮನ ಓದು ಇನ್ನೂ ಮುಗಿದಿರಲಿಲ್ಲ. ಹಾಗಾಗಿ ಈ ಜವಾಬ್ದಾರಿಯನ್ನು ಬಹಳಷ್ಟು ಗಂಭೀರವಾಗಿ ತನ್ನ ಹೆಗಲಿಗೆ ಆನಿಸಿಕೊಂಡಿದ್ದನು. ತಾನು ಚಿಕ್ಕವನಾಗಿದ್ದಾಗಿನಿಂದ ಇಲ್ಲಿಯವರೆಗೂ ಪಟ್ಟ ಕಷ್ಟಗಳ ನೆನಪಾಗಿ ಕಣ್ಣಲ್ಲಿ ಒಂದು ಸಣ್ಣ ಹನಿ ಮೂಡಿತ್ತು. ಆದರೂ ಒಂದು ದಿನ ಈ ಕೆಲಸಕ್ಕೆ ಕೈಮುಗಿದು, ತನ್ನ ನೆಚ್ಚಿನ ಪ್ರಾಧ್ಯಾಪಕ ಅಥವಾ ಪತ್ರಕರ್ತ ವೃತ್ತಿಯನ್ನು ಆಯ್ದುಕೊಳ್ಳುವುದೆಂದು ಯೋಚಿಸಿ ಮನಸು ಹಗುರಾಯಿತು.

 

ಇಷ್ಟೆಲ್ಲಾ ಭಾವಗಳು ಮನದಲ್ಲಿ ತೊಯ್ದಾಡುತ್ತಿದ್ದಂತೆಯೇ, ತನ್ನ ಮೊಬೈಲ್ನ ಕರೆಧ್ವನಿ " ಲೈಫು ಇಷ್ಟೇನೆ" ಮೊಳಗಲು ಮೊದಲಾಯಿತು ಯಾರದಿರಬಹುದೆಂದು ಯೋಚಿಸುತ್ತಿರುವಂತೆಯೇ, ಮೊಬೈಲ್ ಸಂಖ್ಯೆ ಕಂಡು ಮತ್ತೆ ಅವನ ಮುಖ ಗಂಟಿಕ್ಕಿತು .ನೋಡಿದರೆ, ಅದು ಅವನ ಮ್ಯಾನೇಜರ್ನ ಸಂಖ್ಯೆ. shuffle ನಲ್ಲಿದ್ದ ಹಾಡುಗಳ ಲಿಸ್ಟ್ ಮತ್ತೆ ಮೊದಲಾಗಿ, "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ಮತ್ತೆ ಮೊಳಗಲಾರಂಭಿಸಿತು..... 
Rating
No votes yet

Comments