ಬಾಳ ಬೆಳದಿಂಗಳು (ಕಥೆ) - ಭಾಗ ೩
ಭಾಗ ೨
http://sampada.net/blog/shamzz/15/12/2010/29496
ಭಾಗ ೩
'ಅರೆ ಆಗಲೇ ಘಂಟೆ ೧೦:೩೦ ಆಗಿ ಹೋಗಿದೆ. ಇಷ್ಟು ಹೊತ್ತು ಹೇಗೆ ನಿದ್ದೆ ಹತ್ತಿತು ನನಗೆ?' ರಮೇಶನಿಗೆ ಆಶ್ಚರ್ಯವಾಯಿತು. ಎದ್ದು ಬೇಗ ಸ್ನಾನ ಮಾಡಿ ಹೊರಗೆ ಬಂದ. ಮಗನನ್ನು ಕಂಡ ಕೂಡಲೇ ಸರೋಜಮ್ಮ ಬಿಸಿ ಬಿಸಿಯಾಗಿ ದೋಸೆ ಹುಯ್ದು ಕೊಟ್ಟರು. ಮೌನವಾಗಿ ತಿಂಡಿ ತಿಂದು ತನ್ನ ಕೋಣೆಗೆ ಹೋಗುತ್ತಿದ್ದ ರಮೇಶನನ್ನು ರಾಯರು ಕರೆದರು. ಇಷ್ಟವಿಲ್ಲದಿದ್ದರೂ ರಮೇಶ್ ತಂದೆಯ ಹತ್ತಿರ ಹೋಗಿ ಕುಳಿತ. "ಏನೋ ರಾಮು ಇದು? ಯಾಕೆ ಹೀಗೆ ಗಡ್ಡ ಬಿಟ್ಟಿದ್ದೀಯ?" ಎಂದು ಕೇಳಿದರು. "ಅದು ಅದು, ಇತ್ತೀಚಿಗೆ ಆಫೀಸಿನಲ್ಲಿ ಕೆಲಸ ಜಾಸ್ತಿ ಇದ್ದುದರಿಂದ ಸರಿಯಾಗಿ ಸಮಯ ಸಿಕ್ಕಲಿಲ್ಲ" ಎಂದ ರಮೇಶ್ ತಬ್ಬಿಬ್ಬಾಗಿ. "ನೋಡು ರಾಮು, ಎಷ್ಟು ಕೆಲಸವಿದ್ದರೂ ಇಂಥ ವಿಷಯದ ಕಡೆಗೆ ಸ್ವಲ್ಪ ಗಮನ ಕೊಡಬೇಕಪ್ಪ. ಏನಾದರೂ ತೊಂದರೆ ಇದೆಯಾದರೆ ನಮ್ಮ ಜೊತೆ ಹಂಚಿಕೋ ಕಣೋ, ಮನಸ್ಸು ಹಗುರವಾಗ್ತದೆ" ಎಂದರು ರಾಯರು ಕಳಕಳಿಯಿಂದ. "ಇಲ್ಲಪ್ಪ, ಇದ್ದರೆ ಖಂಡಿತ ನಿಮಗೆ ಹೇಳ್ತಿದ್ದೆ" ಎಂದ ರಮೇಶ್. ಇನ್ನು ಜಾಸ್ತಿ ಆ ವಿಷಯವನ್ನು ಕೆದಕಿ ಕೇಳುವುದು ಸರಿಯಲ್ಲವೆಂದು ಯೋಚಿಸಿದ ರಾಯರು ಬೇರೆ ವಿಷಯದ ಬಗ್ಗೆ ಮಾತನಾಡತೊಡಗಿದರು. ಸರೋಜಮ್ಮ ಅಡುಗೆ ಮನೆಯಿಂದಲೇ ಪತಿ ಹಾಗೂ ಮಗನ ಸಂಭಾಷಣೆಯನ್ನು ಕೇಳಿ ನಿರಾಶೆ ಹೊಂದಿದರು.
"ನಮಸ್ಕಾರ ಚಿಕ್ಕಪ್ಪ ಹಾಯ್ ರಾಮು " ಹೊರ ಬಾಗಿಲ ಹತ್ತಿರ ಧ್ವನಿ ಕೇಳಿ ತಂದೆ ಮಗ ಅತ್ತ ನೋಡಿದರು. ರಾಯರ ಅಣ್ಣನ ಮಗಳು ಶಾಂತ ತನ್ನ ಮಗುವಿನೊಂದಿಗೆ ಒಳ ಬಂದಳು. ಬಂದವಳೇ, "ಅರೆ ಇದು ಯಾರು ಸನ್ಯಾಸಿ? ನಿನಗೇನಾಯಿತೋ ರಾಮು" ಎಂದಳು ತಮಾಷೆಯಾಗಿ. ಅಷ್ಟರಲ್ಲಿ ಅಲ್ಲಿಗೆ ಬಂದ ಸರೋಜಮ್ಮ ಇನ್ನು ಇವಳೂ ಅವನ ಜೊತೆ ಆ ವಿಷಯ ಈಗಲೇ ಕೇಳೋದು ಬೇಡವೆಂದು, "ಹುಡುಗರು ಬಿಡು, ಏನೇನು ಫ್ಯಾಶನ್ ಬರುತ್ತೋ ಅದನ್ನೆಲ್ಲ ಮಾಡ್ತಾರೆ. ಅದೆಲ್ಲ ಇರಲಿ, ನೀನ್ಯಾಕೆ ಹೀಗೆ ಸುದ್ದಿ ಇಲ್ಲದೆ ಬಂದೆ? ಫೋನ್ ಮಾಡಬಾರದಿತ್ತ? ರಾಮು ಬಸ್ ಸ್ಟಾಂಡಿಗೆ ಬರ್ತಾ ಇರ್ಲಿಲ್ವಾ?" ಎಂದು ಕೇಳಿದರು. ಅದಕ್ಕೆ ಶಾಂತ "ಪರವಾಗಿಲ್ಲ ಚಿಕ್ಕಮ್ಮ, ಇಲ್ಲೇ ತಾನೇ ಬಸ್ ಸ್ಟಾಂಡ್, ಇವರು ಮತ್ತೆ ಅತ್ತೆ ದೂರದ ಒಬ್ಬರು ಸಂಬಂಧಿಕರನ್ನು ನೋಡ್ಲಿಕ್ಕೆ ಹೋಗಿದ್ದಾರೆ. ಸಣ್ಣ ಮಗು, ಹಾಗೆ ನಾನು ಹೋಗಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮನೂ ಇಲ್ಲ ತಾನೇ, ಅಕ್ಕನ ಮನೆಗೆ ಹೋಗಿದ್ದಾರಲ್ವಾ. ಆದ್ದರಿಂದ ನಿಮ್ಮನ್ನೆಲಾ ಒಮ್ಮೆ ನೋಡಿ ಸಂಜೆ ಅಲ್ಲಿಗೆ ಹೋಗೋಣ ಅಂತ ಇಲ್ಲಿಗೆ ಬಂದು ಬಿಟ್ಟೆ. ನೀವೆಲ್ಲ ಕ್ಷೇಮ ತಾನೇ?" ಎಂದಳು. ರಾಯರು, "ಹಾ ಕಣಮ್ಮ, ನಿಮ್ಮ ಚಿಕ್ಕಮ್ಮನ ಅಡುಗೆ ಇರುವಾಗ ನಮಗೆ ಏನಾಗುತ್ತೆ" ಎಂದು ತಮಾಷೆ ಮಾಡಿದರು. ಅಷ್ಟರಲ್ಲಿ ರಮೇಶನ ಕೋಣೆಯಿಂದ ಮೊಬೈಲ್ ರಿಂಗ್ ಕೇಳಿಸಿತು. ಇದೇ ಸರಿಯಾದ ಸಮಯವೆನ್ದರಿತ ರಮೇಶ್, "ಅಕ್ಕ, ಮಾತಾಡ್ತಾ ಇರಿ, ಈಗ ಬಂದೆ" ಎಂದು ತನ್ನ ಕೋಣೆ ಕೆಡೆಗೆ ನಡೆದ. ರಾಯರು ಶಾಂತನ ಮಗುವನ್ನು ಎತ್ತಿಕೊಂಡರು. ಸರೋಜಮ್ಮ, "ಬಾ ಶಾಂತ, ಅಡುಗೆ ಮನೆಗೆ ಹೋಗೋಣ, ಮಧ್ಯಾಹ್ನದ ಅಡುಗೆಗೆ ರೆಡಿ ಮಾಡ್ತಾ ಇದ್ದೇನೆ, ನೀನು ಏನಾದರು ತಂಪು ಪಾನೀಯ ಕುಡಿ, ಬಿಸಿಲಿನಲ್ಲಿ ಬಂದಿದ್ದೀಯ" ಎಂದು ಅಲ್ಲಿಂದ ನಡೆದರು. ಶಾಂತ ಅವರನ್ನು ಹಿಂಬಾಲಿಸಿದಳು.
ಕೋಣೆಗೆ ಬಂದ ರಮೇಶ್ ಫೋನ್ ರಿಸೀವ್ ಮಾಡಿದ. ಅತ್ತ ಗೋಪಿ, "ಹಾಯ್ ರಾಮು, ಚೆನ್ನಾಗಿದ್ದಿ ತಾನೇ? ನಾನು ನಾಳೆ ಆಫೀಸಿಗೆ ಬರ್ತಾ ಇದ್ದೇನೆ. ಊರು ಸುತ್ತುವ ನಡುವೆ ನಿನಗೆ ಫೋನ್ ಮಾಡುವುದನ್ನೇ ಮರೆತು ಬಿಟ್ಟಿದ್ದೆ. ಸಾರಿ ಕಣೋ" ಎಂದ. ಗೋಪಿ ಧ್ವನಿ ಕೇಳಿ ರಮೇಶನಿಗೆ ಸಂತೋಷವಾಯಿತು. "ಪರವಾಗಿಲ್ಲ ಗೋಪಿ, ನಾಳೆ ಸಿಗುವ, ನನಗೆ ನಿನ್ನ ಹತ್ರ ಒಂದು ವಿಷಯದ ಬಗ್ಗೆ ಮಾತಾಡ್ಲಿಕ್ಕೆ ಇದೆ" ಎಂದ. ಗೋಪಿ, "ಓಕೆ ಕಣೋ, ಈಗ ಚಿಕ್ಕಪ್ಪ ಚಿಕ್ಕಮ್ಮನವರನ್ನು ರೈಲ್ವೇ ಸ್ಟೇಷನ್ಗೆ ಬಿಡಲಿಕ್ಕೆ ಹೋಗ್ತಾ ಇದ್ದೇನೆ, ಬೈ" ಎಂದು ಫೋನಿಟ್ಟ. ರಮೇಶನಿಗೆ ಈಗ ನೆಮ್ಮದಿಯಾಯಿತು. 'ಅಯ್ಯೋ ನಾನು ತುಂಬಾ ಬದಲಾಗಿ ಬಿಟ್ಟಿದ್ದೇನೆ ಈ ೧ ವಾರದಲ್ಲಿ, ಶಾಂತಕ್ಕನನ್ನೂ ಸರಿಯಾಗಿ ಮಾತಾಡಿಸಿಲ್ಲ' ಎಂದು ನೆನಪಾಗಿ ಬಟ್ಟೆ ಧರಿಸಿ ನಡುಕೊಣೆಗೆ ಹೋಗಲು ನಿರ್ಧರಿಸಿದ.
ಇತ್ತ ಅಡುಗೆ ಕೋಣೆಗೆ ಬಂದ ಸರೋಜಮ್ಮ ಶಾಂತಳಿಗೆ ನಿಂಬೆ ಶರಬತ್ತು ಮಾಡಿ ಕೊಟ್ಟರು. ನಂತರ ಆ ದಿನದ ಅಡುಗೆಗೆ ಬೇಕಾದ ತರಕಾರಿಗಳನ್ನು ತಂದು ಶಾಂತನ ಹತ್ತಿರ ಕುಳಿತು, "ಶಾಂತ ನೀನು ಒಳ್ಳೆ ಸಮಯಕ್ಕೆ ಬಂದಿದ್ದೀಯ, ನನ್ನ ಮನಸಿನ ಬೇಜಾರನ್ನು ಯಾರ ಹತ್ರನಾದರೂ ಹೇಳಿಕೊಳ್ಳಬೇಕು ಅನ್ನಿಸುತ್ತಿತ್ತು" ಎಂದರು. ಅವರನ್ನು ದಿಟ್ಟಿಸಿದ ಶಾಂತ, "ಏನಾಯಿತು ಚಿಕ್ಕಮ್ಮ? ಏನಾದರೂ ತೊಂದರೆಯಾಗಿದೆಯಾ ಇಲ್ಲಿ?" ಎಂದು ಕೇಳಿದಳು. "ತೊಂದರೆಯೇನಿಲ್ಲ, ನೀನು ರಾಮೂನ ಗಮನಿಸಿದ್ದಿ ತಾನೇ? ಕಳೆದ ೧ ವಾರದಿಂದ ಅವನು ಯಾವುದರಲ್ಲಿಯೂ ಆಸಕ್ತಿ ತೋರಿಸ್ತಾ ಇಲ್ಲ, ಮಾತುಕತೆಯೂ ಕಮ್ಮಿ ಮಾಡಿದ್ದಾನೆ. ಕೇಳಿದರೂ ಏನು ಇಲ್ಲಮ್ಮ ಅಂತ ಮಾತು ಹಾರಿಸ್ತಾನೆ. ಇವತ್ತು ನಿನ್ನ ಚಿಕ್ಕಪ್ಪ ಕೇಳಿದರೂ ಏನು ಹೇಳಲಿಲ್ಲ." ಎಂದರು ಸರೋಜಮ್ಮ. ಸ್ವಲ್ಪ ಹೊತ್ತು ಯೋಚಿಸಿದ ಶಾಂತ ಮುಗುಳ್ನಕ್ಕು, "ಬಿಡಿ ಚಿಕ್ಕಮ್ಮ, ಈ ವಯಸ್ಸಿನಲ್ಲಿ ಹುಡುಗರು ಹೀಗೆಲ್ಲಾ ಆಡಿದರೆ, ಅವರಿಗೆ ಒಬ್ಬ ಸಂಗಾತಿ ಅಗತ್ಯ ಇದೆ ಅಂತ ಅರ್ಥ. ಹಾಗಾದರೆ ನಾನು ಬಂದ ಕಾರ್ಯವೂ ಸಾರ್ಥಕವಾಯಿತು" ಅಂದಳು. ಇದನ್ನು ಕೇಳಿದ ಸರೋಜಮ್ಮ, "ಓ ಇದೆ ಕಾರಣವಾಗಿರಬಹುದ? ನಾನಂತೂ ಈ ಬಗ್ಗೆ ಯೋಚಿಸಿಯೇ ಇಲ್ಲ. ೬ ತಿಂಗಳ ಮೊದಲೇ ನಾವು ಅವನ ಮದುವೆ ಸುದ್ದಿ ತೆಗೆದಿದ್ದೆವು. ಆಗ ಅವನೇ ಖಡಾಖಂಡಿತವಾಗಿ ಹೇಳಿದ್ದ ಇನ್ನು ೧ ವರ್ಷ ಹೋಗಲಿ, ಆಮೇಲೆ ನೋಡೋಣ ಅಂತ. ನಂತರ ನಾನು ಅದರ ಬಗ್ಗೆ ಯೋಚನೆ ಮಾಡಿಲ್ಲ" ಎಂದರು. "ಇಲ್ಲೇ ನೀವು ತಪ್ಪು ಮಾಡಿರೋದು, ಒಮ್ಮೆಯೇನೋ ಅವನು ನಕಾರ ಮಾಡಿದ ಅಂತ ಮತ್ತೆ ಅದರ ಬಗ್ಗೆ ಸುದ್ದಿ ತೆಗೆಯದೆ ಇರೋದ? ಅದೆಲ್ಲ ಇರಲಿ, ನನಗೆ ನೀವು ಹಾಗು ಚಿಕ್ಕಪ್ಪನ ಜೊತೆ ೧ ಸಂಬಂಧದ ಬಗ್ಗೆ ಮಾತಾಡಬೇಕು. ಬನ್ನಿ ಹೊರಗೆ ಹೋಗೋಣ" ಅಂದಳು.
ಸರೋಜಮ್ಮ ಹಚ್ಚಿದ ತರಕಾರಿಗಳನ್ನು ಕುಕ್ಕರ್ನಲ್ಲಿ ಬೇಯಲಿತ್ತು ಶಾಂತನ ಜೊತೆ ಹೊರಗೆ ನಡೆದರು. ರಾಯರು ಅದಾಗಲೇ ನಿದ್ದೆ ಬಂದಿದ್ದ ಮಗುವನ್ನು ಕೋಣೆಯಲ್ಲಿ ಮಲಗಿಸಿ ಬಂದಿದ್ದರು. ಸರೋಜಮ್ಮ, ಶಾಂತ ನಡುಕೊಣೆಗೆ ಬರುವಷ್ಟರಲ್ಲಿ ರಮೇಶನೂ ಅಲ್ಲಿಗೆ ಬಂದ. ಎಲ್ಲರೂ ಕುಳಿತು ಸ್ವಲ್ಪ ಹೊತ್ತು ಮಾತಾಡಿದ ನಂತರ ಶಾಂತ, "ಚಿಕ್ಕಪ್ಪ, ನಾನು ರಾಮೂಗೆ ಒಂದು ಸಂಬಂಧ ತಂದಿದ್ದೇನೆ. ನಮ್ಮ ಮನೆಯಾಚೆ ಹರೀಶ್ ಅಂತ ಒಬ್ಬರು ಇದ್ದಾರೆ. ತುಂಬಾ ಒಳ್ಳೆ ಮನುಷ್ಯ. ನನ್ನ ಅತ್ತೆಯ ದೂರದ ಸಂಬಂಧಿ ಕೂಡ. ಮೊನ್ನೆ ಮನೆಗೆ ಬಂದಿದ್ದ ಅವರು ಅತ್ತೆ ಜೊತೆ ತಮ್ಮ ಅಕ್ಕನ ಮಗಳು ಸೌಮ್ಯ ಎಂಬವಳಿಗೆ ವರ ಹುಡುಕುವುದರ ಬಗ್ಗೆ ಮಾತಾಡ್ತಾ ಇದ್ದರು. ಅವರು ಹೋದ ಬಳಿಕ ಅತ್ತೆ ನನ್ನ ಹತ್ರ ನಿನ್ನ ತಮ್ಮ ರಮೇಶನಿಗೆ ಈ ಸಂಬಂಧ ತಂದು ಕೊಡಬಹುದಲ್ಲ ಅಂತ ಹೇಳಿದರು. ನಾನು ಹುಡುಗಿ ಫೋಟೋ ನೋಡಿದ್ದೇನೆ. ತುಂಬಾ ಮುದ್ದಾಗಿದ್ದಾಳೆ. ಬಿ. ಕಾಂ. ಮಾಡಿ ಕೆಲಸದಲ್ಲಿದ್ದಾಳೆ. ನಮ್ಮ ರಾಮೂಗೆ ಸರಿಯಾದ ಜೋಡಿ ಅನ್ನಿಸಿತು" ಎಂದಳು. ಇದನ್ನು ಕೇಳಿದ ಸರೋಜಮ್ಮ. "ಸರಿ ಕಣಮ್ಮ, ನೀನು ಸರಿಯಾಗಿ ವಿಚಾರಿಸಿ ಹೇಳು, ಹುಡುಗಿಯನ್ನು ನೋಡೋಣ" ಅಂದರು. ಅಷ್ಟರಲ್ಲಿ ರಮೇಶ್, "ಅಮ್ಮ, ನನಗೆ ಇಷ್ಟು ಬೇಗ ಮದುವೆ ಬೇಡ, ಸ್ವಲ್ಪ ದಿನ ಹೋಗಲಿ" ಅಂದ. ನಡುವೆ ಬಾಯಿ ಹಾಕಿದ ರಾಯರು, "ನೋಡು ಕಣಪ್ಪ, ಹುಡುಗಿಯನ್ನು ನೋಡಿದ ತಕ್ಷಣ ಮದುವೆಯಾಗಲೇ ಬೇಕು ಅಂತ ಇಲ್ಲ. ನಮ್ಮ ಶಾಂತನ ಅತ್ತೆಯೇ ಹೇಳಿ ಕಳ್ಸಿದ್ದಾರೆ ಅಂದ ಮೇಲೆ ನಾವು ಹೋಗದೆ ಇರೋದು ಸರಿಯಲ್ಲ. ನಿನಗೆ ಇಷ್ಟವಾದರೆ ಸಂಬಂಧ ಮುಂದುವರಿಸೋಣ, ಇಲ್ಲಾಂದ್ರೆ ಬೇಡ ಅಂದರಾಯಿತು" ಎಂದರು. ಅಪ್ಪ ಹೇಳಿದ ನಂತರ ಏನು ಮಾತಾಡಿಯೂ ಪ್ರಯೋಜನವಿಲ್ಲ ಎಂದು ತಿಳಿದಿದ್ದ ರಮೇಶ್ ಸುಮ್ಮನಾದ.
ಸಂಜೆ ಹೊರಟು ನಿಂತ ಶಾಂತ, "ಇವತ್ತೇ ವಿಚಾರಿಸಿ ರಾತ್ರಿ ಫೋನ್ ಮಾಡ್ತೇನೆ" ಅಂದಳು. ರಾಯರು ದಂಪತಿಗಳು ಅದಕ್ಕೆ ಒಪ್ಪಿಗೆ ನೀಡಿದರು. ರಮೆಶನೆ ಅವಳನ್ನು ಬಸ್ ಸ್ಟಾಂಡಿನವರೆಗೆ ಬಿಟ್ಟು ಬಂದ. ರಾತ್ರಿ ೯:೦೦ ಘಂಟೆಗೆ ಫೋನ್ ಮಾಡಿದ ಶಾಂತ, "ಚಿಕ್ಕಪ್ಪ, ನಾನು ಅವರೊಂದಿಗೆ ಮಾತಾಡಿದೆ, ಮುಂದಿನ ಭಾನುವಾರ ತಮ್ಮ ಮನೆಯಲ್ಲೇ ಅಕ್ಕನನ್ನು ಕರೆಸಿ ಅಲ್ಲಿಯೇ ಹುಡುಗಿ ನೋಡುವ ಕಾರ್ಯಕ್ರಮ ನಡೆಸುವ ಅಂತ ಹರೀಶ್ ಹೇಳಿದ್ದಾರೆ. ನಿಮ್ಮ ಅಭಿಪ್ರಾಯವೇನು?" ಅಂತ ಕೇಳಿದಳು. ಅದಕ್ಕೆ ಪ್ರತಿಯಾಗಿ ರಾಯರು, "ಸರಿ ಕಣಮ್ಮ, ನಮ್ಮ ಅಭ್ಯಂತರವೇನೂ ಇಲ್ಲ. ಆ ದಿನವೇ ಹುಡುಗಿ ನೋಡಲು ಬರುತ್ತೇವೆ" ಅಂತ ಹೇಳಿ ಫೋನ್ ಇಟ್ಟರು. ವಿಷಯ ತಿಳಿದ ಸರೋಜಮ್ಮ ಸಂತೋಷಗೊಂಡರು. ಅಲ್ಲೇ ಟಿವಿ ನೋಡುತ್ತಿದ್ದ ರಮೇಶನೂ ಅದನ್ನು ಕೇಳಿಸಿಕೊಂಡ. ಅಂದು ರಾತ್ರಿ ಮಲಗಿದ ರಮೇಶನಿಗೆ ಪುನಃ ಅವಳ ಯೋಚನೆ ಹತ್ತಿತು. ಈಗೇನು ಮಾಡುವುದು ಎಂದು ಯೋಚಿಸಿ ತಲೆಬಿಸಿಯಾಯಿತು. ಕೊನೆಗೆ, 'ಯಾವುದಕ್ಕೂ ನಾಳೆ ಗೋಪಿ ಜೊತೆ ಮಾತನಾಡಿ ೧ ಪರಿಹಾರ ಹುಡುಕೋಣ' ಎಂದು ನಿರ್ಧರಿಸಿ ಮಲಗಿದ.
ರಮೇಶನ ಮಾತನ್ನೆಲ್ಲ ಆಲಿಸಿದ ಗೋಪಿಗೆ ಆಶ್ಚರ್ಯವಾಯಿತು. ಯಾವತ್ತೂ ಯಾವ ವಿಷಯವನ್ನೂ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳದ ರಮೇಶನನ್ನು ಇಂದು ಇಂಥ ಅವಸ್ಥೆಯಲ್ಲಿ ನೋಡಿದ ಗೋಪಿ, 'ನಿಜವಾಗಿಯೂ ಇವನು ಆ ಹುಡುಗಿಯನ್ನು ತುಂಬಾ ಹಚ್ಚಿಕೊಂಡಿದ್ದಾನೆ, ಅವಳನ್ನು ಮರೆಯಲು ಇವನಿಗೆ ಸಾಧ್ಯವಾಗಲಿಕ್ಕಿಲ್ಲ' ಎಂದು ಯೋಚಿಸಿದ. ಸೋಮವಾರ ಬೆಳಗ್ಗೆ ಆಫೀಸಿಗೆ ಬಂದವರೇ ಇಬ್ಬರು ಕ್ಯಾಂಟೀನ್ ಗೆ ಬಂದು ಕುಳಿತಿದ್ದರು. ೫ ನಿಮಿಷ ಯೋಚಿಸಿದ ಗೋಪಿ, "ನೀನು ಅವಳನ್ನು ಅಷ್ಟು ಪ್ರೀತಿಸ್ತಾ ಇರುವುದಾದರೆ, ಬರುವ ಭಾನುವಾರ ಅವಳ ಬಗ್ಗೆ ವಿಚಾರಿಸಬಹುದಿತ್ತು. ಆದರೆ ಅದಕ್ಕೆ ಈ ಹೊಸ ಸಂಬಂಧ ಅಡ್ಡಿ ಮಾಡಿದೆ ಈಗ. ಒಂದು ಕೆಲಸ ಮಾಡು, ನೀನು ಶಾಂತಕ್ಕ ಹೇಳಿದ ಹುಡುಗಿಯನ್ನು ನೋಡಲು ಹೋಗು. ಇಲ್ಲವಾದರೆ ನಿನ್ನ ಅಪ್ಪ ಅಮ್ಮ ನೊಂದುಕೊಳ್ಳಬಹುದು. ಏನಾದರೂ ನೆಪ ಹೇಳಿ ಆ ಹುಡುಗಿಯನ್ನು ನಿರಾಕರಿಸಬಹುದು. ಅಲ್ಲಿಂದ ಬಂದ ನಂತರ ಆ ಹುಡುಗಿ ಬಗ್ಗೆ ಪತ್ತೆ ಹಚ್ಚೋಣ. ಇದೇ ಒಂದು ಪರಿಹಾರ ಈಗಿನ ಸ್ಥಿತಿಗೆ. ನೀನು ಕೂಡ ಹೀಗೆ ವಿರಹಿಯಾಗಿ ಇರೋದು ಬಿಟ್ಟು, ಮನೆಯಲ್ಲಿ ಮೊದಲಿನಂತೆ ಇರಲು ಪ್ರಯತ್ನಿಸು." ಎಂದ. ರಮೇಶನಿಗೂ ಗೋಪಿಯ ಸಲಹೆ ಸರಿಯೆನಿಸಿತು. ಇಬ್ಬರೂ ಕಾಫಿ ಕುಡಿದು ತಮ್ಮ ತಮ್ಮ ಕೆಲಸಕ್ಕೆ ಮರಳಿದರು.
ಇನ್ನೂ ಇದೆ....
Comments
ಉ: ಬಾಳ ಬೆಳದಿಂಗಳು (ಕಥೆ) - ಭಾಗ ೩
In reply to ಉ: ಬಾಳ ಬೆಳದಿಂಗಳು (ಕಥೆ) - ಭಾಗ ೩ by abdul
ಉ: ಬಾಳ ಬೆಳದಿಂಗಳು (ಕಥೆ) - ಭಾಗ ೩