ಗುರುವೇ ಸಿದ್ಧೇಸನ ಜಾತ್ರೆ

ಗುರುವೇ ಸಿದ್ಧೇಸನ ಜಾತ್ರೆ

ನಮ್ಮೂರ ಸಿದ್ದೇಸನ ಜಾತ್ರೆ ಅಂದರೆ ಸಾನೇ ಪೇಮಸ್, ಊರ್ನಾಗಿಂದ ನಮ್ಮ ಸಂಬಂಧಿಕರು, ಐಕ್ಳು ಎಲ್ಲಾ ಬಂದಿದ್ವು. ನಾಳೆ ಜಾತ್ರೆ ಅಂದರೆ ಮುಂಡೇವು ಒಂದು ತಿಂಗಳ ಮುಂಚೆನೇ ಬಂದಿದ್ವು, ಯಾಕ್ರಲಾ ಅಂದ್ರೆ ಹಳ್ಳಿ ನೋಡಕ್ಕೆ ಸಂದಾಗೈತೆ ಅನ್ನೋವು. ಏನು ನಮ್ಮ ಹಳ್ಳಿ ಬೆಂಗಳೂರು. ವಿಧಾನಸೌಧ ನೋಡಕ್ಕೆ ಅಂದೆ. ಆಟೊತ್ತಿಗೆ ನನ್ನ ಹೆಂಡರು ಬಂದು, ಏಯ್ ಅದ್ಯಾಕೆ ಅಂಗೆ ಆಡ್ತೀಯಾ. ಮಕ್ಕಳು ಬಂದಾವೆ ಆಡ್ಕಳಿ ಬಿಡು ಅಂದ್ಲು ಒಂದು ಕಿತ ಸೌಟನ್ನ ತಲೆ ಮೇಲೆ ಕುಟ್ಟಿ ಹೋದ್ಲು. ಪ್ರತೀ ತಿಂಗಳು ಸಂಬಳ ಹಂಗೂ ಹಿಂಗೂ ಒಂದು ತಿಂಗಳು ಬರೋದು. ಇವು ಬಂದ್ ಮ್ಯಾಕೆ 20ನೇ ತಾರೀಖಿಗೆ ಸಾಲ ಮಾಡಿದ್ದೆ. ಅಂಗೆ ಪೋಣಿಸೋವು. ಹಪ್ಪಳ, ಸಂಡಿಗೆ ಮಾಡಿ ಅತ್ತೆ ಅನ್ನೋವು. ಮಾಂಸ ನೋಡದೆ ಸಾನೇ ದಿನ ಆಗೈತೆ ಅನ್ನೋವು. ಹೂಂ ಕನ್ರಲಾ ನಾಳೆ ಡೈನೋಸಾರಸ್ ತರ್ತೀನಿ, ತಿಂದು ಸಾಯ್ರಲಾ ಅಂದು ಕೆಲಸಕ್ಕೆ ಹೊಂಟೆ.

ಎದುರಿಗೆ ಪ್ರಾಣೇಶರಾಯರು, ಏನ್ರೀ ಕೋಮಲ್, ನಿಮ್ಮನೇಲಿ ಏನಾದ್ರೂ ಹೋಮ ಇದೆಯಾ. ಯಾಕೆ. ಇಷ್ಟೊಂದು ಮಕ್ಕಳು ಬಂದಿದಾರೆ. ಇಲ್ಲಾ ನಮ್ಮಪ್ಪನ ತಿಥಿ. ಹಾಗಾದ್ರೆ ಒಂದು ದಿನ ಮುಂಚೆ ಹೇಳಿಪಾ. ನಾನು ನನ್ನ ಹೆಂಡ್ತಿ ಮಡಿ ಹರವುಕೊಬೇಕು ಅಂದ್ರು. ವಡೆ, ಪಾಯಸ ತಿನ್ನದೆ ಎಷ್ಟು ದಿನ ಆಗಿದೆ ಅನ್ನೋ ಹಾಗೆ. ಅಂಗಡಿಯೋನು ಯಾವಾಗಲೂ ಏನ್ ಸಾರ್ ಅಂತಿದ್ದ, ಇವಾಗ ಲೇ ಬ್ಲಾಲೆನ್ಸ್ ಯಾವಾಗ ಕೊಡ್ತಿಯೋ, ಇಲ್ಲಾಂದ್ರೆ ಮನೆ ಹತ್ತಿರ ಹುಡಗರನ್ನ ಕಳಿಸ್ತೀನಿ ಅಂತಾನೆ. ಸರಿ ನನ್ನ ಹೆಂಡರು ಸಂಭು ಬಂದಿದ್ದ. ಏನಲಾ ಯಾವಾಗ ಬಂದೆ. ನಾನು ಬೆನಳಗ್ಗೆ ಹುದಯರಂಗ ಬಂಸ್ಸಿಗೆ ಬನದೆ ಅಂದ. ಲೇ ಯಾಕೆ ಹಿಂಗೆ ಮಾತಾಡ್ತಾನೆ. ಮೂಗು ಆಪರೇಸನ್ ಆಗೈತೆ ರೀ. ಏ ಥೂ, ಇವನಿಗೆ ಅಂತಾ ಹುಡುಗಿ ನೋಡಿದ್ದೆ ನೆಗೆದು ಬಿದ್ದು ಹೋಯ್ತು ಹೋಗು. ಮೂಗು ಹಾಳಾದ್ರೆ ಏನಂತೆ ಅಂದ್ಲು ಹೆಂಡರು. ಮೂಗೇನೇ ಬಾಯಿ, ಭಾಸೆ ಎರಡೂ ಹಾಳಾಗೈತೆ ಹೋಗು ಅಂದೆ.

ಸರಿ ಜಾತ್ರೆ ದಿನ ಬಂದೇ ಹೋತು. ಹಳ್ಳಿ ಎಂದ ಮೇಲೆ ಕೇಳಬೇಕಾ. ಎಲ್ಲಾರೂ ಮನೆ ಮುಂದೆ ಎರಡು ಬುಟ್ಟಿ ಸಗಣಿ ಹಾಕಿ ಸಾರಿಸಿದ್ದೇ ಸಾರಿಸಿದ್ದು. ಯಾರ ಮನೆ ಮುಂದೆ ಜಾರಲಿಲ್ಲವೋ ಅವರು ಊರಲಿಲ್ಲ ಅಂತ ಅರ್ಥ ಅಂದ್ಲು ನನ್ನ ಹೆಂಡರು. ಬೆಳಗ್ಗೆ 7ಕ್ಕೆ ಮೇಕಪ್್ಗೆ ಕೂತೋಳು 10ಕ್ಕೆ ಎದ್ಲು. ಲೇ ನಿನ್ನನ್ನ ಯಾರೇ ನೋಡಬೇಕು. ಅಯ್ಯೋ ಕಟ್ಕಂಡೋರಿಗೆ ಯಾವತ್ತು ಪಕ್ಕದ ಮನೆಯೋರೆ ಇಷ್ಟ ಬುಡಿ. ನಿಮಗೇನು ಗೊತ್ತು ಹೆಂಗಸರ ಸೌಂದರ್ಯ ಅಂದ್ಲು. ಲೇ ಬ್ಲೇಡ್ ತಗೊಂಡು ಕೆರೆದರೆ ಒಂದು ಅರ್ಧ ಕೆಜಿ ಫೇಸ್ ಕ್ರೀಮ್. ಕಾಲು ಕೆಜಿ ಪಾಂಡ್ಸ್ ಪೌಡರು ಬತ್ತದೆ ಅಂದೆ. ಹೂಂ ಸಾಕು ನಡೀರಿ ಅಂದು ಹೊಂಟ್ವಿ.

ಯಾವನೋ ಬಡ್ಡೆ ಐದ ನನ್ನ ಹೆಂಡರನ್ನ ನೋಡಿ ಲೇ ನೋಡಲೇ ಮಸ್ತ್ ಫಿಗರ್, ಆದ್ರೆ ಪಕ್ಕದಾಗೆ ಅವನ ಅಣ್ಣ ನೋಡು ಒಳ್ಳೆ ಪೆಂಗ ಇದ್ದಂಗೆ ಅವ್ನೆ ಅಂತಿದ್ದ. ಲೇ ನಾನು ಅವರ ಅಣ್ಣ ಅಲ್ಲಾ ಕಣೋ ಗಂಡ ಅಂತಿದ್ದಾಗೆನೇ ಹಂಗಾರೆ ಪೆಂಗ ಅಲ್ಲ. ಮನೆ ಮುಂದೆ ಕಟ್ಟಿರೋ ದೃಷ್ಟಿ ಗೊಂಬೆ. ಯಾಕಲಾ ಹೆಂಗೈತೆ ಮೈಗೆ. ಐಕ್ಳು ಅಪ್ಪ, ಅಪ್ಪ ಪೀಪಿ ಕೊಡಿಸು, ಬಾಂಬೆ ಮಿಠಾಯಿ ಕೊಡಿಸು ಅಂತಿದ್ವು, ಸಂಭು ನಿಮ್ನಗೆ ಯಾವುದು ಬ್ನೇಕು ಹೇಳಿ ಅಂತಿದ್ದ. ಬಡ್ಡೆ ಐದ ಿವನು ಮಾತಡೋದು ಒಂದು ಕೇಳೋದು ಒಂದು ಆಗಿತ್ತು. ಸಿದ್ದೇಸನ ಗುಡಿಗೆ ಹೋದ್ರೆ ಸಾನೇ ಜನಾ. ಯಾಕ್ರಲಾ ಅಣ್ಣಾ ಊಟದ ಕ್ಯೂ. ಲೇ ಮನೆಯಲ್ಲಿ ಅಲ್ವೇನ್ಲಾ ಊಟ ಮಾಡೋದು ಅಂದ್ರೆ, ಇಷ್ತ್ರಿ ರಂಗ, ನಾವೇನೂ 10ರೂಪಾಯಿ ಧರ್ಮಕ್ಕೆ ಕೊಟ್ಟಿರೋದು ಅಂದ. ಮಗಾ ಕೊಟ್ಟಿರೋ 10ರೂಪಾಯಿಗೆ ಮನೆ ಮಂದಿ ಸೇರಿ ಒಂದು 3ಒಜನನ್ನ ಕರ್ಕಂಡು ಬಂದು ತಿಂದಿಸಿದ್ದ. ಪೂಜಾರಿ ಬಂದು ಕಾಯಿ ಚೀಲ ತಗೊಂಡು ಹೋದ. ಕೊಡೋ ಬೇಕಾದ್ರೆ ಅರ್ಧ ಕಾಯಿ ಹೊಳಕೆ, ಹಂಗೇ ಒಂದು ಬಾಳೆಹಣ್ಣು ಕೊಟ್ಟ. ನೋಡಿದ್ರೆ ಇನ್ನರ್ಧ ಕಾಯಿನಾ ಬಸ್ಟಾಂಡ್ ಹೋಟೆಲ್್ಗೆ ಅಂಗೇ ಒಂದು ಬಾಳೆಹಣ್ಣನ್ನ ಬಾಳೇಮಂಡಿಗೆ ಕೊಡ್ತಾನೆ ಅಂತ ಗೊತ್ತಾತು. ಲೇ ಇಲ್ಲೂ ಮೋಸ ಏನ್ರಲಾ ಅಂದೆ. ಏಯ್ ನಾನು ಮೋಸ ಎಲ್ಲಿ ಮಾಡಿದೀನಿ. ನೀವು ಮತ್ತೆ ಕಾಸು ಕೊಟ್ರೆ ನಿಮಗೆ ವಾಪಾಸ್ ಕೊಡ್ತಾರೆ ಅಂದ ಬಡ್ಡೆ ಐದ.

ಸರಿ ಈ ಬಾರಿ ವಿಶೇಷ ಜಾತ್ರೆ ಅಂತ ಕಾರ್ಯಕ್ರಮ ಅಂತಾ ಸಿಡಿ ಮಡಗಿದ್ರು, ಅಂಗಂದ್ರೆ ಬೆನ್ನಿಗೆ ತಂತಿ ಹಾಕಿ ಮೇಲಕ್ಕೆ ಎತ್ತಿ ಊರ್ನಾಗೆ ಒಂದು ರವಂಡ್ ಹಾಕೋದು. ನನ್ನ ಹೆಂಡರು ತಗೊಂಡು ಹೋಗಿ ಅಲ್ಲಿ ನಿಲ್ಲಿಸ ಬಿಟ್ಲು. ಮಗಂದು ಹಮಾಲಿ ಚೀಲ ಎತ್ತೋ ಕೊಕ್ಕೆ ಹಾಕಿ ಎತ್ತೇ ಬಿಟ್ರು. ಅಲ್ಲಿದ್ದವೆಲ್ಲಾ ದೇವರು ಬಂದೈತೆ ಅಂತ ಸಾನೇ ನಮಸ್ಕಾರ ಮಾಡಿದ್ದೇ ಮಾಡಿದ್ದು. ನನ್ನ ಚರ್ಮ ಅನ್ನೋದು ನಾಯಿ ನಾಲಗೆ ಆದಂಗೆ ಆಗಿತ್ತು. ಬೆನ್ನಿನ ಮೂಳೆಗೂ ಸೇರಿಸಿ ಹಾಕಿದ್ರು. ಇನ್ನು ಒಂದು ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ರೆ, ಸ್ಪೈನಲ್ ಕಾರ್ಡ್ ಹೋಗಿ ಸಾಯೋಗಂಟ ಗೂನು ಬೆನ್ನು ಮಾಡಕಂಡು ನಡೀಬೇಕಾಗಿತ್ತು. ಆಗ ನನ್ನ ಹೆಂಡರನ್ನ ಯಾರ್ಯಾರು ಚುಡಾಯಿಸ್ತಾ ಇದ್ರೋ, ಆ ದೇವರಿಗೇ ಗೊತ್ತು. ಇಳಿಸ್ರೋ ಕೆಳಗೆ, ನಿಮ್ಮನೆ ಕಾಯೋಗ. ಏ ಇನ್ನೂ ಅರ್ಧ ರವಂಡ್ ಬಾಕಿ ಐತೆ ಸುಮ್ಕಿರಣೋ, ಲೇ ಇನ್ನು ಅರ್ಧ ರವಂಡ್ ಮುಗಿಯೋ ಹೊತ್ತಿಗೆ ನಮ್ಮನೆ ಮುಂದೆ ಹೊಗೆ ಹಾಕಸ್ರೋ, ಅಣ್ಣಾ ನೀನು ಬೆಂಕಿ ಕೆಂಡನೂ ಹಾಯ್ತೀಯಾ, ಸಾನೇ ಭಕ್ತಿ ಕಣಣ್ಣೋ, ಏ ಥೂ ಲೇ ಇಳಿಸ್ರೋ ಅಂದ್ ಮ್ಯಾಕೆ ಇಳಿಸಿದ್ರು. ಬೆನ್ನಾಗೆ ಎರಡು ಭರ್ಜಿ ಹಾಕಿದಂಗೆ ಆಗಿತ್ತು.

ಹಚ್ರಲಾ ಅರಿಸಿನ ಅಂದ್ರೆ ಮುಂಡೇವು ಯಾವುದೋ ಹಳೆ ಅರಿಸಿನ ಹಚ್ಚಿದ್ವು. ಮಗಂದು ಉರೀ ಅಂದ್ರೆ ಉರಿ, ಡಿಡಿಟಿ ಪೌಡರ್ , ಸಬೀನಾ ಮಿಕ್ಸ್ ಆಗಿತ್ತಂತೆ. ನೀರು ಹಾಕಿದ್ದೇ ಹಾಕಿದ್ದು. ಕೀವಾಗಿ, ಅದಕ್ಕೆ ಟೆಟಾನಸ್ ಇಂಜೆಕ್ಸನ್ ಕೊಡಿಸಿ ತಿಂಗಳು ಆದ್ ಮ್ಯಾಕೆ ಗಾಯ ವಾಸಿಯಾತು. ಆಟೊತ್ತಿಗೆ ಸುಗರ್ ಬಂದಿತ್ತು.  ಈಗ ಗಾಯ ವಾಸಿಯಾದ್ರೂ ಅದರ ಗುರುತು ಅಂಗೇ ಐತೆ. ಏನಾದ್ರೂ ದಬ್ಬಾಕ್ಕಂಡು ಮಲಗಿದ್ರೆ ನನ್ನ ಮಕ್ಕಳು ಸ್ಕೆಚ್ ಪೆನ್ ತಂದು ಮುಖದ ಚಿತ್ರ ಬರೆದು ಆಟ ಆಡ್ತಾವೆ. ಅಂತೂ ನನ್ನ ಬೆನ್ನು ಒಂದು ತರಾ ಸ್ಲೇಟ್ ಆದಂಗೆ ಆಗಿ ಹೋತು ಅನ್ನೋದು ಬೇಜಾರು. ಆದರೆ ನನ್ನ ಹೆಂಡರು ತಮ್ಮ ಸಂಭು ಮಾತ್ರ, ಬ್ನಾವ ಬ್ನೆಂಗಳ್ನೂರಿಗೆ ಬಂದು ತೋರಿಸಿ. ಇಲ್ಲಾ ಗ್ಯ್ನಾಂಗ್ರ್ನಿನ್ ಆಯ್ತದೆ ಅಂತಾನೆ. ಈಗ ಸಿದ್ದೇಸ ಜಾತ್ರೆ ಅಂದ್ರೆ, ಸ್ವೆಟರ್ ಹಾಕ್ಕಂಡು ಹೋಯ್ತೀನಿ. ಯಾಕೇ ಅಂದ್ರೆ ಕೊಕ್ಕೆ ಸ್ವಟರ್್ಗೆ ಸಿಕ್ಕಿ ಹಾಕಕೊಳ್ಳಲಿ ಅಂತ, ಹೆಂಗೆ ನನ್ನ ಐಡಿರೀಯಾ. ನನ್ನ ಹೆಂಡರಿಗೆ ಹೇಳಬೇಡ್ರೀ, ಆ ಮ್ಯಾಕೆ ಜಾತ್ರೇಲಿ ಬೆಂಕಿ ಕೆಂಡ ಹಾಯಿಸಿ ಬಿಟ್ಟಾಳು.

Comments