ಅರಬ್ ನಾಡಿನಲ್ಲಿ ಪಯಣಗಳು -೧ ಒಂದು ವೀಸಾ ಕತೆ

ಅರಬ್ ನಾಡಿನಲ್ಲಿ ಪಯಣಗಳು -೧ ಒಂದು ವೀಸಾ ಕತೆ

ಹೊಟ್ಟೆಪಾಡಿಗಾಗಿ  ಪರದೇಶ ಸುತ್ತುವ ಅನೇಕ ಭಾರತೀಯರಲ್ಲಿ ನಾನೂ ಒಬ್ಬ. ಐಟಿ ಉದ್ಯಮದಲ್ಲಿ ಕೆಲಸ ಮಾಡುವ ಜನ “ಜೆಟ್-ಸೆಟ್ಟರ್ಸ್” ಎಂದು ಖ್ಯಾತಿ ಬಹಳ ಇದೆ. ನನಗೂ ಒಂದು ಕಾಲದಲ್ಲಿ ಸುತ್ತುವ ಮೋಹ ಬಹಳ ಇತ್ತು. ಆದರೆ ಹೆಂಡರು- ಮಕ್ಕಳನ್ನು ( ಆ ಸರದಿಯಲ್ಲಿ) ಕಟ್ಟಿಕೊಂಡ ಮೇಲೆ ಅದು ಅಷ್ಟೇನು ಆಕರ್ಷಕವಾಗಿ ಕಾಣುತ್ತಿಲ್ಲ.

ಅಮೆರಿಕ-ಯುರೋಪು-ಬ್ಯಾಂಕಾಕುಗಳಿಗೆ ಕಳಿಸುತ್ತಿದ್ದ ಕಂಪನಿಗಳನ್ನು ಬಿಟ್ಟು ಇಲ್ಲಿಗೆ ಸೇರಿದ ಮೇಲೆ ಸುತ್ತುವ ನಶೆ ಪೂರಾ ಇಳಿದಿದೆ. ಕಂಪೆನಿ ಸಣ್ಣದು ಆದರೆ ಜವಾಬುದಾರಿ ದೊಡ್ದದು ಎಂದು ಸೇರಿಕೊಂಡಾಯಿತು. ಕೆಲದದಲ್ಲಿ ಪೂರಾ “ಅಟಾನಮಿ”  ಆದರೆ ಸೀಟು ಮಾತ್ರ “ಎಕಾನಮಿ”! ಈಗ ಒಂದು ವರ್ಷದಲ್ಲಿ ಹೆಚ್ಚು ತಿರುಗುವುದು ಕೊಲ್ಲಿ ದೇಶಗಳಲ್ಲೇ. ಒಳ್ಳೆಯ ಸಂಗತಿ ಏನೆಂದರೆ ಅಹಮದಾಬಾದಿನಿಂದ ಕೊಲ್ಲಿಯ ನಗರಗಳಿಗೆ ಮೂರು-ನಾಲ್ಕು ಗಂಟೆಗಳಲ್ಲಿ ಹೋಗಬಹುದು. ಅವುಡುಗಚ್ಚಿ ಹೊರಟರೆ ಬೆಳಗ್ಗಿನ ಜಾವ ಹೊರಟು ,ಒಂದೆರಡು ಮೀಟಿಂಗುಗಳನ್ನೂ ಮುಗಿಸಿಯೂ ಮರುದಿನ ಬೆಳಗಿನ ಹೊತ್ತಿಗೆ ಮರಳಿ ಬರಬಹುದು.

ದುಬೈ ಹೆಚ್ಚು –ಕಡಿಮೆ ಭಾರತದ ಹೊರಗಿರುವ ಭಾರತೀಯ ಸುಸಜ್ಜಿತ ನಗರವೆನ್ನಬಹುದು. ಅಲ್ಲಿನ ವಾತಾವರಣ ಯಾವುದೇ ಅಂತರಾಷ್ಟ್ರೀಯ ವಾಣಿಜ್ಯಕೇಂದ್ರಗಳಿಗಿಂತ ಹೆಚ್ಚು ಭಿನ್ನವೇನಲ್ಲ.

ಆದರೆ ಸೌದಿ ಅರೇಬಿಯಾ ಹಾಗಲ್ಲ. ಅದರ ಬಗ್ಗೆ ಬಗೆಬಗೆಯಾದ ಕತೆಗಳಿವೆ. ಕೆಲವು ನಿಜವಾದರೂ ಹಲವು ಉತ್ಪ್ರೇಕ್ಷೆಗಳೂ ಸೇರಿವೆ. ನಮ್ಮ ಕಂಪೆನಿಯ ಹುಡುಗರು ಅದನ್ನು ಅರೆ-ಕುಚೋದ್ಯದಿಂದ “ಹೋಲಿ  ಲ್ಯಾಂಡ್” ಎಂದು ಕರೆಯುತ್ತಾರೆ. ಏಕೆಂದರೆ ಅಲ್ಲಿಗೆ ಪ್ರಾಜೆಕ್ಟಿನ ಮೇಲೆ ಹೋದವರೆಲ್ಲ ವಾಪಸು ಬರುವವರೆಗೆ “ಅಪವಿತ್ರ”ಗಳಿಂದ ಬಲವಂತವಾಗಿ ದೂರ ಉಳಿದಿರುತ್ತಾರೆ! ಆದರೆ ಕುತೂಹಲವಿರುವ ಎಲ್ಲರಿಗೂ ಸೌದಿ ಅರೇಬಿಯಾ ಖಂಡಿತಾ ಒಮ್ಮೆಯಾದರೂ ನೋಡಬೇಕಾದ ಜಾಗ. ನಿಮಗೆ ಖಂಡಿತವಾಗಿ ನಿರಾಸೆಯಾಗುವುದಿಲ್ಲ. ನನಗೆ ಸೌದಿಯ ಬಗ್ಗೆ, ಅರಬ್ಬರ ನಡೆನುಡಿ ಮತ್ತು ಇತಿಹಾಸದ ಬಗ್ಗೆ ವಿಚಿತ್ರ ಆಕರ್ಷಣೆ ಹುಟ್ಟಿದೆ. ಇವುಗಳ ಬಗ್ಗೆ ಇನ್ನೊಮ್ಮೆ ಬರೆಯುವೆ. ಆದರೆ ಇಂದಿನ ವಿಷಯ ಬೇರೆ. ಇದು ನನ್ನ ವೀಸಾ ಕತೆ.

ಸೌದಿಗೆ ಈಗಾಗಲೇ ಮೂರು ಬಾರಿ ಹೋಗಿ ಬಂದಾಗಿತ್ತು. ಆದರೆ ಪ್ರತಿ ಸಲ ನಮ್ಮ ಸಹೋದ್ಯೋಗಿ ಅರ್ಶದ್ ಜೊತೆಗಿರುತ್ತಿದ್ದರು. ಆತ ಸುಮಾರು ಹದಿಮೂರು ವರ್ಷಗಳಿಂದ ಅಲ್ಲೇ ನೆಲೆಸಿರುವ ಭಾರತೀಯ. ಆತನ ಮಾತಿನಲ್ಲೇ ಹೇಳುವುದಾದರೆ “ಕ್ಯಾಮಲೇಜೈಷನ್”  ಅರ್ಥಾತ್ ಒಂಟೆಯಾಗುವಿಕೆ ಸಂಪೂರ್ಣಗೊಂಡಿದೆ. ಸುಮಾರಾಗಿ ಅರಬ್ಬಿಯನ್ನು ಮಾತಾಡಬಲ್ಲ ಅರ್ಶದ್ ಉಪನಾಮಗಳಿಂದಲೇ ಸೌದಿ ಜನರ ಪಂಗಡ ಮತ್ತು ಮೂಲಸ್ಥಾನವನ್ನು ಊಹಿಸಬಲ್ಲರು.

ದುಬೈನಲ್ಲಿ ಬೇರೆ ಕೆಲಸದ ಮೇಲಿರುವಾಗ ಅರ್ಶದ್ ಕರೆ ಬಂತು. ನಾವು ಕಾಡಿ ಬೇಡಿ ಹಿಂದೆ ಅಲೆಯುತ್ತಿದ್ದ ದೊಡ್ಡ ಗಿರಾಕಿಯೊಡನೆ ಭೇಟಿಗೆ  ಸಮಯ ಸಿಕ್ಕಿತ್ತು. ಕೂಡಲೆ ಹೊರಟುಬರಲು ಸೂಚನೆ ಸಿಕ್ಕಿತ್ತು. ಮೀಟಿಂಗಿಗೆ ಸಮಯ ನಿಗದಿಪಡಿಸಲು ನಮಗೆ ಅವಸರವಿದ್ದರೆ ಗಿರಾಕಿಗಳಿಗೇನು ಅವಸರ? ಈ ಆಸಾಮಿ ಕೇಳಿದಾಗಲೆಲ್ಲಾ “ ಇನ್ಷಾ ಅಲ್ಲಾ, ಮುಂದಿನ ವಾರ ಕರೆ ಮಾಡಿ”  ಎಂದು ತಳ್ಳಿಹಾಕುತ್ತಿದ್ದ. ಅಂತೂ ಅಲ್ಲಾಹುವಿಗೆ ನಮ್ಮಿಬ್ಬರ ಮೇಲೆ ಕರುಣೆ ಬಂದಿತ್ತು.

ನಾನು ಹೋಗಬೇಕಾಗಿದ್ದ ಜಾಗ ದಮ್ಮಾಮ್. ದಮ್ಮಾಮ್ ಪಟ್ಟಣ  ಸೌದಿ ಅರೇಬಿಯಾದ  ಪೂರ್ವ ಪ್ರಾಂತ್ಯದಲ್ಲಿದೆ. ಪೂರ್ವ ಪ್ರಾಂತ್ಯ ಹಲವಾರು ಕಾರಣಗಳಿಂದ ಮಹತ್ವಪೂರ್ಣವಾಗಿದೆ. ಸೌದಿ ಅರೇಬಿಯಾದ ಸಂಪೂರ್ಣ ತೈಲನಿಕ್ಷೇಪಗಳು ಈ ಪ್ರಾಂತ್ಯದಲ್ಲಿವೆ. ಇದು ಪರ್ಶಿಯದ ಕೊಲ್ಲಿಗೂ ಹಾಗೂ ಇತರ ಕೊಲ್ಲಿ ದೇಶಗಳಿಗೂ ಹೊಂದಿಕೊಂಡಿದೆ. ಈ ಪ್ರಾಂತ್ಯದ ದಕ್ಷಿಣ ಭಾಗಗಳೆಲ್ಲವೂ “ರುಬ್-ಅಲ್- ಖಾಲಿ”... ಖಾಲಿ ಮರಳುಗಾಡು. ಆದರೆ ಈ ಮರಳಿನ ತಳದಲ್ಲಿ ಕಪ್ಪುಚಿನ್ನವಾದ ತೈಲವಿದೆ. ಅಲ್-ಹಸ್ಸಾ ಇಲ್ಲಿನ ಒಂದು ಹಳೆಯ ನಗರ. ಇಲ್ಲಿರುವ “ಓಯಸಿಸ್”ನಿಂದಾಗಿ ಹೇರಳವಾಗಿ ಖರ್ಜೂರ ಬೆಳೆಯುತ್ತಾರೆ. ಕೊಲ್ಲಿಯ ದಡದಲ್ಲಿರುವ ಖೋಬರ್ ನಗರ ಸೌದಿ ಅರೇಬಿಯಾದ ಅತ್ಯಂತ ಪ್ರಮುಖ ಬಂದರು. ಹತ್ತಿರದಲ್ಲೇ ಇರುವ ದಮ್ಮಾಮ್ ಇಡೀ ಪ್ರಾಂತ್ಯದ ರಾಜಧಾನಿ. ದಮ್ಮಾಮ್ ಜನರು ಸೌದಿ ಅರೇಬಿಯಾದಲ್ಲೇ ಹೆಚ್ಚು ವಿದ್ಯಾವಂತರು ಮತ್ತು ನಯ ನಾಜೂಕಿನ ಜನ ಎಂದು ಹಲವರ ಅನಿಸಿಕೆ.

ಬೆಳಗ್ಗೆ ಬೇಗ ಎದ್ದು ಐದು ಗಂಟೆಗೆ ದುಬೈ ಬಿಟ್ಟು ಶಾರ್ಜಾ ವಿಮಾನನಿಲ್ದಾಣ ತಲುಪಿದೆ. ದುಬೈ ವಿಮಾನನಿಲ್ದಾಣ ನೋಡಿ ದಂಗಾದವರಿಗೆ ಶಾರ್ಜಾ ನೋಡಿ ನಿರಾಸೆಯಾಗುತ್ತದೆ. ಬೆಂಗಳೂರಿನ ಹಳೆ ಹೆಚ್.ಏ.ಎಲ್  ನಿಲ್ದಾಣದ ನೆನೆಪುಗಳು ಬಂದರೆ ಅಚ್ಚರಿಯೇನಿಲ್ಲ. ಒಳಗೆ ಹೋಗಿ ಏರ್-ಅರೇಬಿಯಾದ ಕೌಂಟರಿನ ಮುಂದೆ ನೆರೆದಿದ್ದ ಹನುಮನ ಬಾಲದಲ್ಲಿ ಸೇರಿಕೊಂಡೆ.ನನ್ನ ಸರದಿ ಬಂದಾಗ ಪಾಸ್ ಪೋರ್ಟು, ಟಿಕೆಟ್ಟುಗಳನ್ನು   ಕೌಂಟರಿನಲ್ಲಿದ್ದ  ದಢೂತಿ ಮಹಿಳಾಮಣಿಗೆ ಕೊಟ್ಟೆ. ನನ್ನ ಪಾಸ್ ಪೋರ್ಟನ್ನು ಇಸಿದುಕೊಂಡ ಆ ತಾಯಿ ನನ್ನನ್ನೂ ಅಪಾದಮಸ್ತಕವಾಗಿ ಘುರ್ರಾಯಿಸಿದಳು. ಇದು ನನಗೆ ಹೊಸದಲ್ಲ. ನನ್ನ ಪಾಸ್ ಪೋರ್ಟಿನ ಚಿತ್ರ, ವೀಸಾದ ಚಿತ್ರ ಮತ್ತು ನನ್ನ ಪ್ರತ್ಯಕ್ಷ ರೂಪಕ್ಕೂ ಯಾವತ್ತೂ ಹೊಂದಾಣಿಕೆಯಾಗಿಲ್ಲ. ಮೂರು ತಿಂಗಳಿಗೊಮ್ಮೆ ನನ್ನ ಮುಖ ಬದಲಾಗುವುದಾದರೆ  ಬೇರೆಯವರೆಲ್ಲಾ ನನ್ನನ್ನು ಹೇಗೆ ಗುರುತು ಹಿಡಿಯುತ್ತಾರೆ ಎನ್ನುವುದು ಯಕ್ಷಪ್ರಶ್ನೆ. ಅದೇಕೋ ನನ್ನ ಮುಖವನ್ನು ಸರಿಯಾಗಿ ಹಿಡಿಯುವ ಕ್ಯಾಮೆರಾ ಇನ್ನು ಬಂದಿಲ್ಲ.  ಇದಕ್ಕಾಗಿ ನನ್ನ ಪ್ಯಾನ್ ಚೀಟಿಯನ್ನು ಹತ್ತಿರ ಇಟ್ಟುಕೊಂಡಿರುತ್ತೇನೆ. ಅದರಲ್ಲಿರುವ ಚಿತ್ರವೂ ನನ್ನ ಹಾಗೆ ಇಲ್ಲ. ಆದರೆ ಸಣ್ಣದಾಗಿ ಇರುವುದರಿಂದ ಯಾಕೋ ನಾನೇ ಇರಬಹುದು ಅನ್ನಿಸುತ್ತೆ.

ಆದರೆ, ಈಕೆ ಬೇರೆ ಏನನ್ನೂ ಕೇಳಲಿಲ್ಲ. “ನೀನು ಯುಏಈ ನಿವಾಸಿಯೆ?” ಎಂದು ಕೇಳಿದಳು. “ಇಲ್ಲ.ಭೇಟಿ ವೀಸಾ ಮೇಲೆ ಬಂದಿರುವೆ” ಎಂದೆ.  “ಹಾಗಿದ್ದರೆ ಸೌದಿಗೇಕೆ ಹೋಗುತ್ತಿದ್ದೀಯ?” ಎಂಬ ಪ್ರಶ್ನೆ. ಹೊಳೆ ದಾಟಲು ದೊಣೆ ನಾಯಕನ ಅಪ್ಪಣೆ ಬೇಕೆ? ಸಿಟ್ಟು ಬಂದರೂ ತಾಳ್ಮೆಯಿಂದ ಈ ದೊಣೆ ನಾಯಕಿಗೆ ಉತ್ತರಿಸಿದೆ. ನನ್ನ ಪಾಸುಪೋರ್ಟಿನಲ್ಲಿರುವ ಸೌದಿ ವೀಸಾ ತೋರಿಸಿ, ನನ್ನ ಟಿಕೆಟ್ಟು ( ಸೌದಿಯಿಂದ ಮರಳಲು)  ಕೂಡ ಕೊಟ್ಟೆ. ಆಕೆ ಸೌದಿ ವೀಸಾವನ್ನು ದುರುಗುಟ್ಟಿಕೊಂಡು ನೋಡಿದಳು. ಇದು  ಸುಮಾರು ನಾಲ್ಕು ತಿಂಗಳ ಹಿಂದೆ ಮಾಡಿಸಿದ್ದು.  ಈ ಹೊಸ ವೀಸಾದಲ್ಲಿ ಇದೇ ಮೊದಲ ಪಯಣ. ವೀಸಾದಲ್ಲಿ ಹೆಸರು , ದಿನಾಂಕಗಳನ್ನು ಬಿಟ್ಟರೆ ಉಳಿದದ್ದೆಲ್ಲಾ ಅರಬ್ಬಿಯಲ್ಲಿದೆ. ನನಗೂ ಓದಲು ಬಾರದು. ಆಕೆಗೂ ಬಾರದು. ತುಸು ಹೊತ್ತಿನ ನಂತರ ನಿಧಾನವಾಗಿ ಬೋರ್ಡಿಂಗ್ ಪಾಸನ್ನು ಕೈಗಿಟ್ಟಳು. ಯಾಕೋ ಶಕುನಗಳು ಸರಿಯಾಗಿರಲಿಲ್ಲ.

 ಸರಸರನೆ ಇಮ್ಮಿಗ್ರೇಷನ್ ದಾಟಿ  ಹೋಗಿ ಸುರಕ್ಷಾ ಕ್ರಮಗಳನ್ನು ಮುಗಿಸಿ  ಒಳಸೇರಿದೆ. ಮತ್ತೆ ಎಲ್ಲೂ ಹೆಚ್ಚು ಕಾಯಬೇಕಾಗಲಿಲ್ಲ. ಒಳಗೆ ಕಾಫಿ ಅಂಗಡಿಯಲ್ಲಿ ಕೂತು ಕಾಫಿ ಹೀರುತ್ತಾ ನನ್ನ  ಪ್ರೆಸೆಂಟೇಷನ್ನನ್ನು ಮನದಲ್ಲೇ ಮೆಲೆಕು ಹಾಕತೊಡಗಿದೆ. ಸೌದಿಯಿಂದ ಮರಳಿ ಅಹಮದಾಬಾದಿಗೆ ಹೋಗುವ ಟಿಕೆಟ್ಟಿನ ಮೇಲೆ ಆಗಲೇ ಮೊದಲ ಬಾರಿ ಕಣ್ಣು ಹಾಯಿಸಿದ್ದು. ನೋಡಿದ್ದರೆ ರಾತ್ರಿಯ ವಿಮಾನದಲ್ಲಿ  ದಮ್ಮಾಮಿನಿಂದ ಶಾರ್ಜಾಗೆ ಮರಳಿ ಬಂದು  ನಡುರಾತ್ರಿ ಕಳೆದ ನಂತರ ತಾಯ್ನಾಡಿನ ವಿಮಾನ ಹತ್ತಬೇಕು. “ಲಾಂಗ್ ಡೇ ಅಹೆಡ್” ಎಂದು ಯಾರೋ ಹೇಳುತ್ತಿದ್ದರು. ನಾನು ಒಳಗೊಳಗೆ ಹೂಗುಟ್ಟಿದೆ.

ಅರ್ಶದನಿಂದ ಇನ್ನೊಂದು ಕರೆ ಬಂತು. ಆತ ಶರವೇಗದಲ್ಲಿ ( ೨೦೦ ಕಿ.ಮೀ)  ರಿಯಾಧಿನಿಂದ ದಮ್ಮಾಮಿಗೆ ಕಾರು ಓಡಿಸುತ್ತಿದ್ದ. “ಎಲ್ಲಾ ತಯಾರಾಗಿದೆಯಾ?” ಎಂದ. “ಯೋಚಿಸಬೇಡ. ಬರ್ತಾ ಇದ್ದೀನಿ” ಅಂದೆ. ಆಷ್ಟರೊಳಗೆ ಸಮಯ ಎಂಟು ಗಂಟೆಯಾಗಿತ್ತು.  ದಮ್ಮಾಮಿನ ವಿಮಾನ ಹತ್ತಲು  ಬೋರ್ಡಿಂಗ್  ಬಾಗಿಲಿಗೆ ಹೋದೆ.  ಒಳಗೆ ಹೋಗುವ ಮುನ್ನ  ಏರುಲೈನಿನ ನೌಕರನೊಬ್ಬ  ಪಾಸುಪೋರ್ಟು ಮತ್ತು ಬೋರ್ಡಿಂಗ್ ಪಾಸುಗಳನ್ನು  ಪರಿಶೀಲಿಸುತ್ತಿದ್ದ. ನನ್ನ ದಾಖಲೆಗಳನ್ನು ಕೊಟ್ಟೆ. ಅದನ್ನು ಪರಿಶೀಲಿಸಿ ಕೈ ಬೀಸಿದ. ಒಳಗೆ ಕಾಲಿಟ್ಟು, ಹೊರಡಲನುವಾದಾಗ ಅವನ ಕೈ ಮತ್ತೆ ಅಡ್ಡ ಬಂತು. ನನ್ನ  ಪಾಸುಪೋರ್ಟು ಇಸಿದುಕೊಂಡು ವೀಸಾವನ್ನು ಮತ್ತೊಮ್ಮೆ ನೋಡಿದ. ಆಮೇಲೆ, ನನ್ನ ಕಡೆ ತಿರುಗಿ, ನೀನು ಹೋಗಲಾಗದು ಎಂದ.

"ಈತನ ಸಾಮಾನುಗಳನ್ನು ಇಳಿಸಿ.ಇವರನ್ನು ಆಫ್ ಲೋಡ್ ಮಾಡಬೇಕು" ಅಂತ ಹೇಳಿದ.

 

ಯಾಕೆ?ಇದೇನು ಗ್ರಹಚಾರ? ಬರೇ ಇಳಿಸುತ್ತಿದ್ದಾರಾ ಅಥವಾ ಇನ್ನೇನಾದರೂ ತೊಂದರೆ?ದುಬೈನ ದೊರೆಗಳನ್ನು  ಎಲ್ಲಿಯಾದರೂ ಬೈದಿದ್ದೆನಾ? ಹಾಗೆ ಬೈದಿದ್ದರೂ ಅದನ್ನು ಅವರಿಗೆ ಹೇಳಿದವರು ಯಾರು?  ಇಲ್ಲಿ ತಡವಾದರೆ ಅರ್ಶದಗೆ ಏನು ಹೇಳುವುದು? ಹೇಗೆ ತಿಳಿಸಿವುದು? ಅಲ್ಲಿ ಕಾಯುತ್ತಿರುವ ಆಸಾಮಿಗೆ ಏನು ಸಬೂಬು ಹೇಳುವುದು?  ಹೀಗೆ ಒಮ್ಮೆಲೆ ನೂರೆಂಟು ಯೋಚನೆಗಳು ನನ್ನ ತಲೆಯಲ್ಲಿ ಹಾದುಹೋದವು.

 

"ಏನಾಯಿತು? ಏನು ತೊಂದರೆ" ಎಂದು ನಮ್ಮ ದ್ವಾರಪಾಲಕನನ್ನು ಕೇಳಿದೆ. "ಈ ವೀಸಾ ಸರಿಯಿಲ್ಲ" ಎಂದ. "ಇದು ಸೌದಿ ವೀಸಾ ತಾನೆ? ಇದು ರದ್ದಾಗಲು ಇನ್ನು  ಒಂದು ತಿಂಗಳಿದೆ"  ಎಂದು ವಾದಿಸಿದೆ. ಆತ ಹರಕು-ಮುರಕು ಇಂಗ್ಲಷಿನಲ್ಲಿ ಹೇಳಿದ್ದು " ವೀಸಾ ಸೌದಿಯದ್ದೇ ನಿಜ. ಆದರೆ ನೀನು  ಈ ಫ್ಲೈಟಿನಲ್ಲಿ ಸೌದಿಗೆ ಹೋಗುವಂತಿಲ್ಲ. ಈ ವೀಸಾ ಅದಕ್ಕೆ ಸರಿ ಹೋಗುವುದಿಲ್ಲ". ಸದ್ಯಕ್ಕೆ ದುಬೈ ದೊರೆಗಳಿಗೆ ನನ್ನ ಮೇಲೆ ಅನುಮಾನ ಇಲ್ಲವೆಂದು ತಿಳಿದಾಗ ನಿರಾಳವಾಯಿತು. ಆದರೆ  ವೀಸಾದ ಗೋಜಲು ಏನೆಂಬುದು ಇನ್ನೂ  ಅರ್ಥವಾಗಲಿಲ್ಲ.

 

(ಮುಂದುವರಿಯುವುದು)

Rating
No votes yet

Comments