ಅಮರ ಪ್ರೇಮ (ಕಥೆ)
ನನ್ನ ಅವಳ ಭೇಟಿ ಅನಿರೀಕ್ಷಿತವಾಗಿತ್ತು. ಪ್ರವಾಸಕ್ಕೆಂದು ಮಂಗಳೂರಿಗೆ ಹೋಗಿದ್ದಾಗ ನಮ್ಮ ರೂಮಿನ ಪಕ್ಕದಲ್ಲೇ ಅವಳ ರೂಮಿತ್ತು. ನಾವು ಹುಡುಗರೆಲ್ಲರೂ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅವಳು ತನ್ನ ಕುಟುಂಬದವರ ಜೊತೆ ಬಂದಳು. ಅವಳು ನಕ್ಕರೆ ಅಪ್ಸರೆ, ಅವಳ ಧ್ವನಿ ಕೋಗಿಲೆ ಕೂಗಿನಂತಿತ್ತು. ಒಟ್ಟಿನಲ್ಲಿ ಮೊದಲ ನೋಟಕ್ಕೆ ನಾನು ನನ್ನ ಮನಸನ್ನು ಅವಳಿಗೆ ಒಪ್ಪಿಸಿಬಿಟ್ಟಿದ್ದೆ. ಅವಳು ಅವಳ ತಮ್ಮ ಆಟವಾಡುತ್ತಿದ್ದ ಚೆಂಡು ನನ್ನ ಬಳಿ ಬಂದು ಬಿತ್ತು. ಅದನ್ನು ತೆಗೆದುಕೊಳ್ಳಲು ಅವಳೇ ಬಂದಳು. ನನಗೆ ಎಲ್ಲಿತ್ತೋ ಧೈರ್ಯ ಗೊತ್ತಿಲ್ಲ ನಿಮ್ಮ ಹೆಸರು ಏನೆಂದು ಕೇಳಿದೆ. ಅವಳು ತೀಕ್ಷ್ಣವಾದ ನೋಟವೊಂದನ್ನು ಬೀರಿ ಹೊರಟು ಹೋದಳು. ಅಲ್ಲಿಂದ ವಾಪಸ್ ರೂಮಿಗೆ ಬಂದು ಅವಳದೇ ನೆನಪಿನಲ್ಲೇ ಆಚೆ ಬಂದು ಕುಳಿತಿದ್ದೆ. ಎಲ್ಲರೂ ಒಳಗೆ ಮಲಗಿದ್ದರು. ನನಗೆ ಅವಳ ನೆನಪಿನಲ್ಲಿ ನಿದ್ದೆ ಬರಲಿಲ್ಲ. ಆಚೆ ಸಣ್ಣಗೆ ಮಳೆ ಹನಿ ಬೀಳುತ್ತಿತ್ತು, ತಣ್ಣನೆ ಗಾಳಿ ಬೀಸುತ್ತಿತ್ತು. ಇದ್ದಕ್ಕಿದ್ದಂತೆ ಹಿಂದುಗಡೆಯಿಂದ excuse me ಎಂದು ಯಾರೋ ಕರೆದಂತಾಯಿತು. ತಿರುಗಿ ನೋಡಿದರೆ ಆಶ್ಚರ್ಯ.
ಅದೇ ಹುಡುಗಿ ಮುಗುಳುನಗುತ್ತ ನಿಂತಿದ್ದಳು. ನನಗೆ ಮಾತುಗಳೇ ಹೊರಡಲಿಲ್ಲ. ಹಾಗೆ ಹೇಳಿ ಎಂದೆ. ಅವಳಿಗೆ ನನ್ನ ಪರಿಸ್ಥಿತಿಯ ಅರಿವಾಯಿತು ಅನಿಸತ್ತೆ, ಅವಳೇ ಮಾತಿಗೆ ಶುರು ಮಾಡಿದಳು. ಬೆಳಿಗ್ಗೆ ನೀವು ಸಮುದ್ರದ ಬಳಿ ನನ್ನ ಹೆಸರು ಕೇಳಿದಿರಲ್ಲ ಏಕೆ ಎಂದಳು. ನಾನು, ಅದೇನೋ ಗೊತ್ತಿಲ್ಲ ನಿಮ್ಮನ್ನು ನೋಡಿದ ತಕ್ಷಣ ಮಾತಾಡಿಸಬೇಕು ಎಂದು, ನಿಮ್ಮ ಜೊತೆ ಗೆಳೆತನ ಬೆಳೆಸಬೇಕು ಎಂದು ಅನಿಸಿ ನಿಮ್ಮ ಹೆಸರು ಕೇಳಿದೆ. ಆಕೆ ತನ್ನ ಕೈ ಮುಂದೆ ಮಾಡಿ ನನ್ನ ಹೆಸರು ಹರಿಣಿ ಎಂದಳು, ನಾನು ನನ್ನ ಕೈ ಮುಂದೆ ಮಾಡಿ ಹರ್ಷ ಎಂದೆ. ಹಾಗೆ ಸ್ವಲ್ಪ ಹೊತ್ತು ಮಾತನಾಡಿ, ಅವಳದು ನಮ್ಮದೇ ಜಾತಿ (ಮುಂದೆ ಜಾತಿ ಸಮಸ್ಯೆ ಇಲ್ಲವೆಂದು) ಎಂದು ತಿಳಿದು ಖುಷಿಯಾಯಿತು. ಇಬ್ಬರದೂ ಬೆಂಗಳೂರು ಎಂದು ಕೇಳಿ ಇನ್ನೂ ಸಂತೋಷವಾಯಿತು.
ಅಂದು ರಾತ್ರಿ ನಾವು ಬೆಂಗಳೂರಿಗೆ ವಾಪಸ್ ಹೊರಡುತ್ತಿದ್ದಾರೆ, ಅವಳು ಮರುದಿನ ಹೊರಡುತ್ತಿದ್ದಳು. ಹೊರಡುವ ಮುನ್ನ ಅವಳಿಗೆ ನನ್ನ ಮೊಬೈಲ್ ನಂಬರ್ ಕೊಟ್ಟು ಬೆಂಗಳೂರಿಗೆ ಬಂದ ಮೇಲೆ ಭೇಟಿಯಾಗುವ ಎಂದು ಹೇಳಿ ಭಾರವಾದ ಮನಸಿನಿಂದ ಬೆಂಗಳೂರಿಗೆ ಹೊರಟೆ.
ಬೆಂಗಳೂರಿಗೆ ಬಂದು ಎರಡು ದಿನವಾದ ನಂತರ ನನ್ನ ಮೊಬೈಲ್ ಗೆ ಒಂದು ಕರೆ ಬಂತು, ನಿರೀಕ್ಷೆಯಂತೆ ಅದು ಅವಳದ್ದೇ ಕರೆ ಆಗಿತ್ತು. ನಾವಿಬ್ಬರೂ ಬೆಂಗಳೂರಲ್ಲೇ ಇದ್ದರೂ ಅವಳು ಇದ್ದಿದ್ದು ವಿಜಯನಗರದಲ್ಲಿ, ನಾನು ಇದ್ದಿದ್ದು ಜಯನಗರದಲ್ಲಿ. ಅವಳು ಕರೆ ಮಾಡಿದ್ದು ಏಕೆಂದರೆ ನಾನು ಜಯನಗರದ ಕಡೆ ಬರುತ್ತಿದ್ದೇನೆ ಹಾಗೆ ನಿನ್ನ ಭೇಟಿ ಮಾಡೋಣ ಎಂದುಕೊಂಡೆ ಎಂದಳು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಅವಳು ಜಯನಗರಕ್ಕೆ ಬಂದು ಕರೆ ಮಾಡಿದಳು, ನಾನು ಒಂದು ಚಾಕಲೇಟ್ ಹಿಡಿದು ಹೊರಟೆ, ಹೊರಡುವಾಗ ನನ್ನ ಮನದಲ್ಲಿ ಅವಳ ಬಗ್ಗೆ ಇದ್ದ ಪ್ರೀತಿಯನ್ನು ಹೇಳಿಬಿಡುವ ಉದ್ದೇಶದಿಂದಲೇ ಹೊರಟೆ ಆದರೂ ಅವಳನ್ನು ನೋಡಿದ ಕೂಡಲೇ ಮಾತುಗಳೇ ಬರದಾದದವು. ಅವಳು ಊರಿನಲ್ಲಿ ಕಂಡಿದ್ದಕ್ಕಿಂತ ಸುಂದರವಾಗಿದ್ದಳು. ಸುಮಾರು ಹೊತ್ತು ಅದೂ ಇದೂ ಮಾತಾಡಿ ಅವಳನ್ನು ಬೀಳ್ಕೊಟ್ಟು ನಾನು ವಾಪಸ್ ಮನೆಗೆ ಬಂದೆ.
ನಂತರ ದಿನ ಮೊಬೈಲಿನಲ್ಲಿ ಮಾತುಗಳು, ಅವಾಗವಾಗ ಭೇಟಿಗಳು ನಡೆದರೂ ಯಾಕೋ ಅವಳ ಬಳಿ ನನ್ನ ಮನಸಿನಲ್ಲಿದ್ದ ಪ್ರೇಮವನ್ನು ಮಾತ್ರ ಹೇಳಲು ಸಾಧ್ಯವಾಗಿರಲಿಲ್ಲ. ಒಮ್ಮೆ ಹರಿಣಿಯನ್ನು ಭೇಟಿ ಮಾಡಲು ಹೋಗಿದ್ದಾಗ ಅವಳ ಜೊತೆ ಅವಳ ಗೆಳತಿಯೂ ಜೊತೆಯಲ್ಲಿದ್ದಳು, ಹರಿಣಿ ಅವಳನ್ನು ನನಗೆ ಪರಿಚಯ ಮಾಡಿಕೊಟ್ಟು ಸ್ವಲ್ಪ ಹೊತ್ತು ಮಾತನಾಡಿ ಹೊರಟಳು. ನಾನು ಒಂದು ದಿನ ಕೆಲಸದಿಂದ ವಾಪಸ್ ಮನೆಗೆ ಬರುತ್ತಿದ್ದಾಗ ಹರಿಣಿ ಪರಿಚಯ ಮಾಡಿಕೊಟ್ಟ ಗೆಳತಿ ಸಿಕ್ಕಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವಳು, ನೀವು ಹರಿಣಿಯನ್ನು ಇಷ್ಟಪಡುತ್ತಿದ್ದೀರಂತೆ ಹೌದೆ? ಎಂದಳು. ನನಗೆ ಆಶ್ಚರ್ಯವಾಗಿ ಯಾರು ಹೇಳಿದ್ದು ಎಂದಾಗ ಹರಿಣಿಯೇ ಎಂದಳು. ಆಗ ನನಗೆ ಗೊತ್ತಾಯಿತು ಹರಿಣಿಗೆ ನಾನು ಇಷ್ಟ ಆಗಿದ್ದೇನೆಂದು. ಆದರೂ ನಾನು ಹರಿಣಿಯನ್ನು ಇದರ ಬಗ್ಗೆ ಏನು ಕೇಳಲಿಲ್ಲ.
ಒಂದು ದಿನ ಎಂದಿನಂತೆ ಹರಿಣಿಗೆ ಫೋನ್ ಮಾಡಿದರೆ ಮೊಬೈಲ್ ಸ್ವಿಚ್ ಆಫ ಎಂದು ಬಂತು. ಬಹುಷಃ ಏನೋ ಬ್ಯುಸಿ ಇರಬಹುದು ಅಥವಾ ಬ್ಯಾಟೆರಿ ಖಾಲಿ ಆಗಿರಬಹುದು, ನಂತರ ಮಾಡೋಣ ಎಂದುಕೊಂಡು ಸುಮ್ಮನಾದೆ. ಮತ್ತೆ ಸಂಜೆ ಮಾಡಿದರೆ ಆಗಲೂ ಆಫ್ ಅಂತಾನೆ ಬಂತು. ನಾನು ಜಾಸ್ತಿ ಯೋಚನೆ ಮಾಡದೆ ಸರಿ ಬೆಳಿಗ್ಗೆ ಮಾಡೋಣ ಎಂದುಕೊಂಡು ಸುಮ್ಮನಾದೆ. ಮರುದಿನವೂ ಅದೇ ಕಥೆ, ಯಾವುದೋ ಊರಿಗೆ ಹೋಗಿರಬಹುದು ಬಂದ ಮೇಲೆ ಯಾಕೆ ನನಗೆ ಹೇಳದೆ ಹೋದೆ ಎಂದು ದಬಾಯಿಸಿ ಕೇಳಬೇಕು ಎಂದುಕೊಂಡೆ. ಆದರೆ ಒಂದು ವಾರವಾದರೂ ಯಾವ ಸುದ್ದಿಯೂ ಇಲ್ಲ. ಆಗ ನನಗೆ ಏನೋ ತೊಂದರೆ ಆಗಿರಬಹುದು ಎಂದು ಅನಿಸಲು ಶುರುವಾಯಿತು. ಆದರೆ ಅವಳ ಮೊಬೈಲ್ ಬಿಟ್ಟರೆ ಅವಳನ್ನು ಸಂಪರ್ಕಿಸಲು ಬೇರೆ ಯಾವುದೇ ಮಾರ್ಗವಿರಲಿಲ್ಲ. ಅವಳ ಮನೆ ವಿಜಯನಗರ ಅಂತಷ್ಟೇ ಗೊತ್ತಿತ್ತು ಹೊರತೂ ಸರಿಯಾದ ವಿಳಾಸ ಇರಲಿಲ್ಲ. ನನಗೆ ದಿಕ್ಕೇ ತೋಚದಂತಾಯಿತು. ವಾರಗಳು ಕಳೆದವು, ಎರಡು ತಿಂಗಳಾಯಿತು ಅವಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಹೀಗಿರುವಾಗ ಒಮ್ಮೆ ನನ್ನ ಮೊಬೈಲ್ ಗೆ ಒಂದು ಕರೆ ಬಂತು, ಅದು ಲ್ಯಾಂಡ್ ಲೈನ್ ನಂಬರ್ ಆಗಿತ್ತು. ನಾನು ಹಲೋ ಎಂದೆ ಆ ಕಡೆಯ ಧ್ವನಿ ಕೇಳಿ ನನಗೆ ಸಂತೋಷ ಕೋಪ ಒಟ್ಟಿಗೆ ಬಂತು. ಯಾಕೆಂದರೆ ಅದು ಹರಿಣಿ ಧ್ವನಿ ಆಗಿತ್ತು. ಮೊದಲು ಕೋಪದಿಂದ ಎಲ್ಲಿ ಹೋಗಿದ್ದೆ ಇಷ್ಟು ದಿನ ಅದೂ ಇದೂ ಎಲ್ಲ ಕೇಳಿದ್ದಕ್ಕೆ ಅವಳು ಹೇಳಿದ್ದನ್ನು ಕೇಳಿ ನನ್ನ ಕೈಯ್ಯಿಂದ ಫೋನ್ ಕೆಳಗೆ ಬೀಳುವಂತಾಗಿ ಹಾಗೆ ಹಿಡಿದುಕೊಂಡೆ, ಅವಳಿಗೆ ಮತ್ತೊಮ್ಮೆ ಹೇಳು ಎಂದಿದ್ದಕ್ಕೆ, ನನಗೆ Brain Tumour ಆಗಿತ್ತು, ಈಗ ಆಪರೇಷನ್ ಆಗಿದೆ ಎಂದಳು. ನನಗೆ ಏನು ಮಾತಾಡಬೇಕೆಂದು ತಿಳಿಯದೆ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಬಿಟ್ಟೆ. ಅವಳು ತುಸು ನಕ್ಕು ನನಗೆ ಆ ವಿಷಯ ಗೊತ್ತು ಆದರೆ ಈಗ ನನ್ನ ಪರಿಸ್ಥಿತಿ ಮುಂಚಿನ ಹಾಗಿಲ್ಲ, ಈಗಿನ್ನೂ ಆಪರೇಷನ್ ಆಗಿದೆ. ನಾನು ಸುಧಾರಿಸಲೂ ಬಹುದು, ಅಥವಾ ಸಾಯಲೂಬಹುದು ಎಂದು ಡಾಕ್ಟರ ಹೇಳಿದ್ದರೆ ಎಂದಳು. ನಾನು ನಿನ್ನನ್ನು ನೋಡಬೇಕು ಎಂದಿದ್ದಕ್ಕೆ ಬೇಡ ಕಣೋ ಈಗ ಆಪರೇಷನ್ ಗೆಂದು ನೀನು ಯಾವಾಗಲೂ ನಿನ್ನ ತಲೆ ಕೂದಲು ತುಂಬಾ ಸುಂದರ, ನೀ ಹೂ ಮುಡಿದರೆ ತುಂಬಾ ಸುಂದರ ಎಂದು ಹೇಳುತ್ತಿದ್ದೆಯಲ್ಲ ಈಗ ಅದನ್ನು ತೆಗೆದಿದ್ದಾರೆ ಆಮೇಲೆ ನೀನು ಹೆದರಿಕೊಂಡು ಬಿಡುತ್ತೀಯ ಎಂದು ನಗು ನಗುತ್ತಲೇ ಹೇಳಿದಳು. ನನಗೆ ಅಳು ಒತ್ತರಿಸಿಕೊಂಡು ಬಂದು ಬಿಟ್ಟಿತು, ಆದರೂ ಸಮಾಧಾನ ಮಾಡಿಕೊಂಡು ಸರಿ ನಿನ್ನನ್ನು ನೋಡಲೇಬೇಕು ಎಂದಾಗ ಈಗ ಬೇಡ ನಾನು ಆಸ್ಪತ್ರೆಯಿಂದ ಮನೆಗೆ ಹೋದ ಮೇಲೆ ನಾನೇ ಕರೆ ಮಾಡುತ್ತೇನೆ ಅಲ್ಲಿವರೆಗೂ ಕಾಯಿ ಎಂದು ಇಟ್ಟುಬಿಟ್ಟಳು.
ಅದಾಗಿ ಒಂದು ವಾರದ ನಂತರ ಅವಳು ಆಸ್ಪತ್ರೆಯಿಂದ ಮನೆಗೆ ಹೋಗಿ ಮನೆಯಿಂದ ಕರೆ ಮಾಡಿದಳು, ಸ್ವಲ್ಪ ಹೊತ್ತು ಕುಶಲೋಪರಿ ಮಾತಾಡಿ ಮೊದಲು ನಿನ್ನನ್ನು ನೋಡಬೇಕು ಎಂದಾಗ ಮನೆಗೆ ಬರುವುದು ಬೇಡ ನಾನು ಸ್ವಲ್ಪ ಸುಧಾರಿಸಿಕೊಂಡು ಆಚೆ ಓಡಾಡುವ ಹಾಗೆ ಆದಾಗ ನಾನೇ ಕರೆಯುತ್ತೇನೆ ಎಂದಳು. ಅಂದಿನಿಂದ ಬರೀ ಫೋನಿನಲ್ಲಿ ಅದೂ ವಾರಕ್ಕೊಮ್ಮೆ, ಎರಡು ಬಾರಿ ಅಷ್ಟೇ ಮಾತುಕತೆ ನಡೆಯುತ್ತಿತ್ತು. ಒಂದು ದಿನ ಯಾವುದೋ ಕಾರ್ಯಕ್ರಮದ ಸಲುವಾಗಿ ಆಚೆ ಬರುತ್ತಿದ್ದೇನೆ ಬೇಕಾದರೆ ನೀನು ಅಲ್ಲಿ ನನ್ನ ನೋಡಬಹುದು ಆದರೆ ಅಪ್ಪ ಅಮ್ಮ ಜೊತೆಯಲ್ಲಿ ಇರುತ್ತಾರೆ ಆದ್ದರಿಂದ ಮಾತಾಡಲು ಸಾಧ್ಯವಿರುವುದಿಲ್ಲ ಎಂದಳು. ನಾನು ಮೊದಲು ನಿನ್ನನ್ನು ನೋಡಿದರೆ ಸಾಕು ಎಂದು ಅವಳು ಹೇಳಿದ ದಿನ ಆ ಜಾಗಕ್ಕೆ ಹೋದೆ. ಸ್ವಲ್ಪ ಹೊತ್ತು ಹುಡುಕಿದ ನಂತರ ಅವಳು ಕಂಡಳು. ನನಗೆ ಕುಸಿದು ಬೀಳುವ ಅನುಭವವಾಯಿತು. ಸೀದಾ ಅಲ್ಲಿಂದ ವಾಪಸ್ ಬಂದು ಬಿಟ್ಟೆ. ನಂತರ ಅವಳು ಕರೆ ಮಾಡಿ ಯಾಕೋ ಬರಲಿಲ್ಲ ಎಂದಾಗ, ನಾನು ಬಂದಿದ್ದೆ ಆದರೆ ಜಾಸ್ತಿ ಹೊತ್ತು ಅಲ್ಲಿರಲಾಗಲಿಲ್ಲ ಎಂದಿದ್ದಕೆ ಅವಳು ನಾನು ಅದಕ್ಕೆ ನಿನ್ನನು ನೋಡುವುದು ಬೇಡ ಎಂದಿದ್ದು ಎಂದಳು.
ಹೀಗೆ ಸಾಗಿರಲು ನಾನು ಎರಡು ಮೂರು ಬಾರಿ ಅವಳಿಗೆ ನಿನ್ನನ್ನು ಮದುವೆ ಮಾಡಿಕೊಳ್ಳಬೇಕು ಎಂದಾಗಲೆಲ್ಲ ತಮಾಷೆ ಮಾಡಬೇಡ ದಯವಿಟ್ಟು ಯಾವುದಾದರೂ ಒಳ್ಳೆ ಹುಡುಗಿಯನ್ನು ನೋಡಿ ಮದುವೆ ಮಾಡಿಕೊ ಎನ್ನುತ್ತಿದ್ದಳು. ಹಾಗೆ ಅವಳು ಅವಾಗವಾಗ ತುಂಬಾ ತಲೆ ನೋವು ಎಂದು ಫೋನಿನಲ್ಲಿ ಅಳುತ್ತಿದ್ದಾಗ ನನಗೆ ಬಹಳ ಸಂಕಟವಾಗುತ್ತಿತ್ತು. ಒಂದು ದಿನ ಮತ್ತೆ ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದೇನೆ, ಈ ಬಾರಿ ಮರಳಿ ವಾಪಾಸ್ ಬರುವೇನೋ ಇಲ್ಲವೋ ಗೊತ್ತಿಲ್ಲ, ವಾಪಸ್ ಬಂದರೆ ಮತ್ತೆ ಕರೆ ಮಾಡುತ್ತೇನೆ ಎಂದು ನಕ್ಕು ಇಟ್ಟುಬಿಟ್ಟಳು.
ಅದಾಗಿ ಸುಮಾರು ಒಂದೂವರೆ ವರ್ಷವಾಯಿತು. ಇಂದಿಗೂ ಅವಳ ಕರೆಗೆ ಕಾಯುತ್ತಿದ್ದೇನೆ.
Comments
ಉ: ಅಮರ ಪ್ರೇಮ (ಕಥೆ)
In reply to ಉ: ಅಮರ ಪ್ರೇಮ (ಕಥೆ) by gopaljsr
ಉ: ಅಮರ ಪ್ರೇಮ (ಕಥೆ)
ಉ: ಅಮರ ಪ್ರೇಮ (ಕಥೆ)
ಉ: ಅಮರ ಪ್ರೇಮ (ಕಥೆ)
ಉ: ಅಮರ ಪ್ರೇಮ (ಕಥೆ)
In reply to ಉ: ಅಮರ ಪ್ರೇಮ (ಕಥೆ) by siddhkirti
ಉ: ಅಮರ ಪ್ರೇಮ (ಕಥೆ)
ಉ: ಅಮರ ಪ್ರೇಮ (ಕಥೆ)
In reply to ಉ: ಅಮರ ಪ್ರೇಮ (ಕಥೆ) by malathi shimoga
ಉ: ಅಮರ ಪ್ರೇಮ (ಕಥೆ)