ಸೇವಾ ಪುರಾಣ -31: ಹೊಳೆನರಸಿಪುರ -ಅನುಭವ ಭರಪೂರ -5

ಸೇವಾ ಪುರಾಣ -31: ಹೊಳೆನರಸಿಪುರ -ಅನುಭವ ಭರಪೂರ -5

ಹೀಗೊಬ್ಬ ತಯಾರಾದ!
     ಸಮಾಜ ನಮ್ಮನ್ನು ಕಾಣುವ, ನಡೆಸಿಕೊಳ್ಳುವ ರೀತಿಯಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂಬುದಕ್ಕೆ ನಾನು ಈಗ ಪ್ರಸ್ತಾಪಿಸುವ ಸಂಗತಿ ಪೂರಕವೆನಿಸುತ್ತದೆ. ರಮೇಶ (ಹೆಸರು ಬದಲಿಸಿದೆ) ಇತರರಂತೆ ಒಬ್ಬ ಸಾಮಾನ್ಯ ಯುವಕ. ಒಂದು ದಿನ ಸ್ನೇಹಿತನೊಂದಿಗೆ ಸಾಯಂಕಾಲದ ಹೊತ್ತಿನಲ್ಲಿ ಸಿನೆಮಾ ನೋಡಲು ಹೋಗಿದ್ದ. ಸಿನೆಮಾ ಪ್ರಾರಂಭವಾಗಿ ಹತ್ತು ನಿಮಿಷಗಳಾಗಿರಬಹುದು. ಆ ಯುವಕ ಕುಳಿತಿದ್ದ ಸೀಟಿನ ಹಿಂದಿನ ಸಾಲಿನಲ್ಲಿ ಮೊದಲೇ ಯಾರೂ ಕುಳಿತುಕೊಳ್ಳದಂತೆ ನೋಡಿಕೊಂಡು ಕಾದಿರಿಸಿದ್ದ ಎರಡು ಸೀಟುಗಳಲ್ಲಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಆತನ ಪತ್ನಿ ಆಸೀನರಾದರು.  ಸಬ್‌ಇನ್ಸ್‌ಪೆಕ್ಟರ್ ಯೂನಿಫಾರಮ್ಮಿನಲ್ಲೇ ಇದ್ದರು. ಹಳೆಯ ಕಾಲದ ಟಾಕೀಸುಗಳಲ್ಲಿ ಆಸನಗಳ ವ್ಯವಸ್ಥೆ ಹೇಳಿಕೊಳ್ಳುವ ಮಟ್ಟದಲ್ಲಿದ್ದಿರದೆ ಹಿಂದೆ ಕುಳಿತವರಿಗೆ, ಅದರಲ್ಲೂ ಕುಳ್ಳರಿಗೆ, ಮುಂದಿನವರ ತಲೆಗಳು ಅಡ್ಡವಾಗಿ ಅಕ್ಕ ಪಕ್ಕ ಬಗ್ಗಿ ನೋಡುವ ಸಂದರ್ಭಗಳು ಸಾಮಾನ್ಯವಾಗಿತ್ತು. ರಮೇಶ ಮತ್ತು ಅವನ ಸ್ನೇಹಿತ ಪರಸ್ಪರ ನೋಡಿಕೊಂಡು ಮಾತನಾಡುತ್ತಾ ಸಿನೆಮಾ ನೋಡುತ್ತಿದ್ದರಿಂದ  ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಅವನ ತಲೆ ಅಡ್ಡ ಬಂದು ಸಿನೆಮಾ ನೋಡಲು ಅಡಚಣೆಯಾಗುತ್ತಿತ್ತೆಂದು ತೋರುತ್ತದೆ.  ಸಬ್‌ಇನ್ಸ್‌ಪೆಕ್ಟರ್‌ರು ತಮ್ಮ ಲಾಠಿಯಿಂದ ರಮೇಶನ ತಲೆ ಸರಿಸಿದರು. ರಮೇಶ ಹಿಂತಿರುಗಿ ದುರುಗುಟ್ಟಿ ನೋಡಿ ಸುಮ್ಮನಾದ. ಸಬ್‌ಇನ್ಸ್‌ಪೆಕ್ಟರ್ ರಮೇಶನ ಸೀಟಿನ ಹಿಂಭಾಗದ  ಮೇಲೆ ಬೂಟುಕಾಲಿರಿಸಿ ಕುಳಿತಿದ್ದು ಅವನಿಗೆ ಅಸಹನೀಯವೆನಿಸಿದರೂ ಸುಮ್ಮನೆ ಇರಬೇಕಾಗಿದ್ದ ಸ್ಥಿತಿ ಅವನದಾಗಿತ್ತು. ಮತ್ತೆ ಹತ್ತು ಹದಿನೈದು ನಿಮಿಷಗಳಾಗಿರಬಹುದು. ಉದ್ದವಾಗಿ ಧೃಢಕಾಯನಾಗಿದ್ದ ರಮೇಶನ ಹಿಂದೆ ಕುಳಿತಿದ್ದ ಸಬ್‌ಇನ್ಸ್‌ಪೆಕ್ಟರ್‌ರ ಪತ್ನಿಗೆ ಸರಿಯಾಗಿ ಸಿನೆಮಾ ನೋಡಲಾಗದೆ ಚಡಪಡಿಸುತ್ತಿದ್ದರೆಂದು ತೋರುತ್ತದೆ. ಸಬ್‌ಇನ್ಸ್‌ಪೆಕ್ಟರ್‌ರು ಪುನಃ ಲಾಠಿಯಿಂದ ಸ್ವಲ್ಪ ಬಿರುಸಾಗಿ ಅವನ ತಲೆ ತಳ್ಳಿ 'ಸರಿಯಾಗಿ ಕೂತು ನೋಡಲೇ ಬದ್ಮಾಶ್' ಎಂದರಂತೆ. ರಮೇಶನಿಗೆ ತಲೆ ಕೆಟ್ಟುಹೋಯಿತು. ಎದ್ದು ತಿರುಗಿ ನಿಂತವನೇ ಸಬ್‌ಇನ್ಸ್‌ಪೆಕ್ಟರ್ ಕೈಲಿದ್ದ ಲಾಠಿ ಕಿತ್ತುಕೊಂಡವನೇ ಅವರಿಗೆ ಎರಡು ಬಾರಿಸಿಬಿಟ್ಟ. ಸಬ್‌ಇನ್ಸ್‌ಪೆಕ್ಟರ್ ಸಹ ಅವನಿಗೆ ಹೊಡೆದರು. ಜಗಳ ಜೋರಾಯಿತು. ರಮೇಶ ಸಬ್‌ಇನ್ಸ್‌ಪೆಕ್ಟರ್ ಕುತ್ತಿಗೆ ಪಟ್ಟಿ ಹಿಡಿದು ಹೊಡೆಯುತ್ತಾ ಅವರನ್ನು ಬಾಲ್ಕನಿಯಿಂದ ಕೆಳಕ್ಕೆ ಎಳೆದು ತಂದ. ಅವರ ಪತ್ನಿ ಇಬ್ಬರನ್ನೂ ಸುಮ್ಮನಿರಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಆಕೆ ಟಾಕೀಸಿನ ಹತ್ತಿರದಲ್ಲೇ ಇದ್ದ ಪೋಲಿಸ್ ಠಾಣೆಗೆ ಓಡಿಹೋಗಿ ಸುದ್ದಿ ಕೊಟ್ಟಿದ್ದೇ ತಡ ಧಾವಿಸಿ ಬಂದ ಪೋಲಿಸ್ ಪೇದೆಗಳು ರಮೇಶನನ್ನು ಬಂಧಿಸಿದರು. ಅಂದು ರಾತ್ರಿ ಠಾಣೆಯಲ್ಲಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಲಿಲ್ಲ ಎಂದರೆ ಯಾರೂ ಒಪ್ಪುವುದಿಲ್ಲ. ಮರುದಿನ ಬೆಳಿಗ್ಗೆ ಅವನನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿ ಜೈಲಿಗೆ ದಾಖಲಿಸಿದರು. ಸ್ಥಳೀಯ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಮುಖವಾಗಿ ಪ್ರಕಟವಾಯಿತು. ಜನರು ಸಬ್‌ಇನ್ಸ್‌ಪೆಕ್ಟರ್‌ರ ದೌರ್ಜನ್ಯ ಖಂಡಿಸಿ ಹೊಳೆನರಸಿಪುರ ಬಂದ್ ನಡೆಸಿದರು. ತಾಲ್ಲೂಕು ಕಛೇರಿಯ ಮುಂದೆ ಸಭೆ ನಡೆಸಿ ಭಾಷಣಗಳನ್ನು ಮಾಡಿ ರಮೇಶನನ್ನು ಬಿಡುಗಡೆಗೊಳಿಸಲು ಮನವಿ ಸಲ್ಲಿಸಿದರು. ಎರಡು ದಿನಗಳ ನಂತರ ಅವನು ಜಾಮೀನಿನ ಮೇಲೆ ಬಿಡುಗಡೆ ಹೊಂದುವ ವೇಳೆಗಾಗಲೇ ಅವನು 'ಹೀರೋ' ಎನ್ನಿಸಿಕೊಂಡಿದ್ದ.


     ಧೃಢ ಮೈಕಟ್ಟಿನ ಆದರೆ ಹುಂಬನಾದ ರಮೇಶನ ವ್ಯಕ್ತಿತ್ವವೇ ಬದಲಾಗಿತ್ತು. ಅವನನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರಿಗೆ ಕಡಿಮೆಯಿರಲಿಲ್ಲ. ನಂತರದ ದಿನಗಳಲ್ಲಿ ಪೋಲಿಸರೂ, ರಾಜಕಾರಣಿಗಳೂ, ಬಲಾಢ್ಯರೂ ಅವನಿಂದ ಉಪಯೋಗ ಪಡೆಯಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಅವನ ಸ್ವಭಾವ ಬದಲಾಯಿತು. ಆಗಾಗ್ಯೆ ಪ್ರಕರಣಗಳು ದಾಖಲಾಗುತ್ತಿತ್ತು. ಒಮ್ಮೆ ಆತ ನನ್ನನ್ನು ಉದ್ದೇಶಿಸಿ "ಗುರುಗಳೇ, ಏನಾದರೂ ಕೆಲಸ ಇದ್ದರೆ ಸಂಕೋಚ ಮಾಡಿಕೊಳ್ಳದೆ ಕೇಳಿ. ನಿಮಗೆ ಯಾರಾದರೂ ತೊಂದರೆ ಕೊಟ್ಟರೆ ಹೇಳಿ, ಹೆದರಬೇಡಿ, ನಾನಿದ್ದೇನೆ. ಅವರ ಬೆಂಡೆತ್ತಿಬಿಡುತ್ತೇನೆ" ಎಂದು ಹೇಳಿದ್ದ. ಮುಗುಳ್ನಗೆ ಮಾತ್ರ ನನ್ನ ಪ್ರತಿಕ್ರಿಯೆಯಾಗಿತ್ತು.

Comments