ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
ಶನಿವಾರ ಬೆಳಿಗ್ಗೆಗೆ ಮೊಬೈಲಿನಲ್ಲಿ (ಎಂದಿನಂತೆ)ಏಳೆಂಟು ಅಲಾರ್ಮ್ ಇಟ್ಟುಕೊಂಡಿದ್ದೆ.ರಾತ್ರಿ ಸುಮಾರು ಮೂರುವರೆ ಗಂಟೆಗೆ ಮಲಗಿದ್ದರೂ ಬೆಳಿಗ್ಗೆ ಮೂರನೇ ಅಲಾರ್ಮಿಗೇ ಅದು ಹೇಗೋ ಎಚ್ಚರವಾಗಿಬಿಟ್ಟಿತ್ತು. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದ್ದರೂ ಅಷ್ಟು ಬೇಗ ಎಚ್ಚರವಾಗಿದ್ದು ಬಹುಶಃ ಬೆಳಿಗ್ಗೆ ಎಚ್ಚರವಾಗದೆ ಆ ದಿನದ ಈವೆಂಟ್ ಮಿಸ್ ಮಾಡಿಕೊಂಡ್ರೆ ಅವಿವೇಕದ ಕೆಲಸವಾಗತ್ತೆ ಎಂಬ ವಿಷಯ ತಲೆಯಲ್ಲಿದ್ದದ್ದರಿಂದ.
ಸುಮಾರು ಎರಡು ವಾರಗಳ ಹಿಂದೆ ಅನ್ಸತ್ತೆ - ಸುದರ್ಶನ್ ಆಸ್ಟ್ರೇಲಿಯದಿಂದ ಫೋನ್ ಮಾಡಿದ್ದಾಗ "ಬೆಂಗ್ಳೂರಿಗೆ ಬರ್ತಿದ್ದೀರಾ? ಹಾಗಾದ್ರೆ ನಿಮ್ಮ ಸಿನಿಮಾ ಸ್ಕ್ರೀನಿಂಗ್ ಮಾಡ್ಬೋದ್ರೀ... ಚೆನ್ನಾಗಿರತ್ತೆ!" ಅಂದಿದ್ದೆ. ಇವರು ಮಾಡಿರುವ ಸಿನಿಮಾ ಹೇಗಿರಬಹುದು ನೋಡಬೇಕಲ್ಲ ಎಂಬ ಕುತೂಹಲದಿಂದ ಹುರಿದುಂಬಿಸಿದ್ದೆ. ಹೀಗೆ ಸ್ಕ್ರೀನಿಂಗ್ ಮಾಡಿಸಿ ಸುದರ್ಶನರ ಜೋಬಿಗೆ ಸ್ವಲ್ಪ ಕತ್ತರಿ ಹಾಕಿಸಿದರೂ ಮಾಡಿದ್ದು ಬಹಳ ಒಳ್ಳೆಯ ಕೆಲಸ ಎಂದನಿಸಿದ್ದು ನನಗೆ ಸಿನಿಮಾ ನೋಡಿದ ಮೇಲೆ.
"ಅನಿವಾಸಿ"ಯೆಂದೇ 'ಸಂಪದ'ದಲ್ಲಿ ಚಿರಪರಿಚಿತರಾಗಿರುವ ಸುದರ್ಶನ್ ನಿರ್ದೇಶಿಸಿರುವ ಕನ್ನಡ ಚಿತ್ರದ ಹೆಸರು "ಮುಖಾಮುಖಿ".ಚಿತ್ರದ ಡೈಲಾಗಿಗೆ ೨೦೦೬ರ ರಾಜ್ಯ ಪ್ರಶಸ್ತಿ ಬಂದಿದೆ. ಶನಿವಾರ "ಸುಚಿತ್ರ"ದಲ್ಲಿ ಈ ಚಿತ್ರದ ಸ್ಕ್ರೀನಿಂಗ್ ಕಾರ್ಯಕ್ರಮ ಇಟ್ಟುಕೊಂಡಿದ್ದೆವು.
ಸಿನಿಮಾ ಇತ್ತೀಚೆಗೆ ನಾ ನೋಡಿದ ಕನ್ನಡ ಸಿನಿಮಾಗಳಿಗಿಂತ ಎಷ್ಟೋ ಉತ್ತಮವಾಗಿದೆ ಎಂದು ನನಗನಿಸಿತು. ಬಜೆಟ್ ಹಾಗೂ ತಂತ್ರಜ್ಞಾನದ ಮಿತಿಯಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಸಿನಿಮಾ ನೋಡಲು ಬಂದವರ ಸಂಖ್ಯೆ ಬೆಳಿಗ್ಗೆ ಇಟ್ಟುಕೊಂಡ ಸ್ಕ್ರೀನಿಂಗ್ ಮಟ್ಟಿಗೆ ಪರವಾಗಿರಲಿಲ್ಲ. ಬಂದವರು ಸಿನಿಮಾ ನೋಡಿ ಸಂತೋಷಪಟ್ಟದ್ದು ಕಾರ್ಯಕ್ರಮದ ಯಶಸ್ಸನ್ನು ಬಿಂಬಿಸಿದಂತಿತ್ತು.
ಸಿನಿಮಾ ಮುಗಿದ ನಂತರ ಸುದರ್ಶನ್ ವೀಕ್ಷಕರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಸಿನಿಮಾ ನೋಡಿದ ಮೇಲಂತೂ ಇಂತಹ ಸಿನಿಮಾ ಯಾಕೆ ಕರ್ನಾಟಕದಲ್ಲಿ ತೆರೆ ಕಾಣುವುದು ಕಷ್ಟ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲವಿತ್ತು. ಹಾಡು ಕುಣಿತವಿಲ್ಲದ ಇಂತಹ ಗಂಭೀರ ಚಿತ್ರಗಳಿಂದ ಸಿನಿಮಾ ವಿತರಕರು ದೂರ ಓಡುವ ವಿಷಯವನ್ನು ಸುದರ್ಶನ್ ಸೂಕ್ಷ್ಮವಾಗಿ ವಿವರಿಸಿದರು (ಸಿನಿಮಾ ವಿತರಕರು ಒಲ್ಲೆ ಎಂದರೆ ಚಿತ್ರ ತೆರೆಕಾಣುವುದೇ ಇಲ್ಲ. ತೆರೆ ಕಾಣದ ಚಿತ್ರ ಹೆಚ್ಚು ಜನರನ್ನು ತಲುಪದೇ ಹೋಗಿಬಿಡುತ್ತದೆ).
ನಂತರ ಇಸ್ಮಾಯಿಲ್ ಮತ್ತು ನಾನು ಇಬ್ಬರೂ ಸಂಪದ ಫೌಂಡೇಶನ್ ಬಗ್ಗೆ ಮಾತನಾಡಿದೆವು. ನಾನು ತೊದಲುತ್ತ ಸ್ವಲ್ಪ ಅದೂ ಇದೂ ನಮ್ಮ ಸಮುದಾಯದ ಬಗ್ಗೆ ಹೇಳಿದೆ. ನಿದ್ರೆಯಿಲ್ಲದ ಹ್ಯಾಂಗ್ ಓವರ್ ಕಾಡಿತ್ತು. ಇಸ್ಮಾಯಿಲ್ ಬಹಳ ಚೆನ್ನಾಗಿ ಫೌಂಡೇಶನ್ನಿನ ಉದ್ದೇಶದ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಬೆಳಗ್ಗೆ ಮಧ್ಯಾಹ್ನದೆಡೆಗೆ ಓಡುತ್ತಿದ್ದಂತೆ, ನನ್ನಂತೆ "ಮಲಗೋದು ಲೇಟು ಏಳೋದೂ ಲೇಟು" ಅನ್ನೋ ಜೀವನಶೈಲಿಗೆ ಅಂಟಿಕೊಂಡ ಹಲವರು "ಲೇಟಾಯ್ತು, ಬರಲಾಗಲಿಲ್ಲ" ಎಂದು ಮೆಸೇಜ್ ಮಾಡಿದರು, ಕೆಲವರು ಫೋನ್ ಮಾಡಿ ತಿಳಿಸಿದರು. ಇವರಿಗೆಲ್ಲ ಉತ್ತರಿಸುವಾಗ ನಾನು ಮಾತ್ರ ಇವತ್ತು ಈ ಕಾರ್ಯಕ್ರಮ ಮಿಸ್ ಮಾಡಿಕೊಳ್ಳಲಿಲ್ಲ ಎಂಬ ಖುಷಿಯಲ್ಲಿ ಹಲ್ಲು ಕಿರಿದಿದ್ದೆ. ಒಂದು ವಾರ ಮುಂಚಿತ ಅನೌನ್ಸ್ ಮಾಡಿದ್ದು ತಡ ಆಯ್ತು ಎಂದೂ ಸಲಹೆಗಳು ಕೇಳಿಬಂದವು. ಈ ಸಾರಿ ಹೆಚ್ಚು ಸಮಯವಿಲ್ಲದ್ದರಿಂದ ಅಡಾಉಡಿಯಲ್ಲಿ ಮಾಡಿದ್ದಾಯ್ತು - ಮುಂದೊಮ್ಮೆ ಸ್ಕ್ರೀನಿಂಗ್ ಹಮ್ಮಿಕೊಂಡರೆ ಇನ್ನೂ ಮುಂಚಿತವಾಗಿ ಅನೌನ್ಸ್ ಮಾಡಬಹುದು.
ಒಟ್ಟಾರೆ ಸಂಪದದ ಹಲವು ಸದಸ್ಯರನ್ನು ಅವರ ಯೂಸರ್ ಐಕಾನ್ ನೋಡಿ ಅಥವ ಯೂಸರ್ ಐಡಿ ನೋಡಿ ಈ ಸೈಬರ್ ಜಗತ್ತಿನಲ್ಲಿ ಗುರುತಿಸುತ್ತಿದ್ದ ಎಲ್ಲರಿಗೂ ಅವರುಗಳ ಮುಖಪರಿಚಯ ಆಯ್ತು. ಒಂದು ಉತ್ತಮ ಸಿನಿಮಾ ನೋಡುತ್ತ ಕಳೆದ ಸಮಯ ನೆನಪಿನ ಪುಟದಲ್ಲಿ (ಜೊತೆಗೆ ಈ ಬ್ಲಾಗಿನಲ್ಲಿ) ಅಚ್ಚಾಯ್ತು.
ಚಿತ್ರಗಳು: [:http://www.sampada.net/user/sunil_jayaprakash|ಸುನೀಲ]
Comments
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
In reply to ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" by Abhaya Simha
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
In reply to ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" by tarlesubba
ಉ:
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
In reply to ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ" by ಸಂಗನಗೌಡ
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"
ಉ: ಸಂಪದ ಸದಸ್ಯರೊಂದಿಗೆ ಅನಿವಾಸಿಯವರ "ಮುಖಾಮುಖಿ"