ಮುಂಜಾನೆ ವಾಕಿಂಗ್ ನ ಈ ಪರಿ !!! ನಾಕಂಡ ಹಾಸ್ಯ ಲೋಕ !!! ಇವ್ರೂ ಯಾಕಿಂಗೆ ವ್ಯಾಕಿಂಗ್ ಮಾಡ್ತಾರೆ !!!

ಮುಂಜಾನೆ ವಾಕಿಂಗ್ ನ ಈ ಪರಿ !!! ನಾಕಂಡ ಹಾಸ್ಯ ಲೋಕ !!! ಇವ್ರೂ ಯಾಕಿಂಗೆ ವ್ಯಾಕಿಂಗ್ ಮಾಡ್ತಾರೆ !!!

ಈಗೀಗ ಯಾಕೋ ಆರೋಗ್ಯದ ಕಡೆ ಗಮನ ಹರಿಸಬೇಕೂ ಅಂತಾ ನನ್ನ ಗೆಳೆಯ ವಾಕಿಂಗ್ ಶುರುಮಾಡಿದ್ದಾನೆ.ನಾನೇನು ಕಡಿಮೆ ಇಲ್ಲ ಬಿಡಿ. ಬೆಳಗಿನ ಜಾವ ಎದ್ದು ಮನೆಯ ಹತ್ತಿರ ವಿರುವ ಕುಕ್ಕರಹಳ್ಳಿ ಕೆರೆ ಸುತ್ತ ಒಂದು ಸುತ್ತು ಹಾಕಿ ಅಲ್ಲೇ ಸಿಗುವ ಹರ್ಬಲ್ ಜೂಸು ಕುಡಿದು ಬೆವರಿನ ವಾಸನೆಯೊಂದಿಗೆ ಮನೆಗೆ ಬಂದು ಕಂಪ್ಯೂಟರ್ ಮುಂದೆ ಕುಕ್ಕರಿಸುತ್ತೇನೆ.ಆಹಾ ಎಂತಾ ಪ್ರಪಂಚ ಗೊತ್ತ !!! ಮಬ್ಬಿನ  ಬೆಳಕಿನಲ್ಲಿ ವಾಕಿಂಗ್ ಮಾಡುವ ಸಮಯದಲ್ಲಿ ಅನೇಕ ವಿಚಿತ್ರ ವ್ಯಕ್ತಿಗಳು ,ಸನ್ನಿವೇಶಗಳನ್ನು ದಿನವೂ ನೋಡುತ್ತೇನೆ.ಬನ್ನಿ ಪರಿಚಯ ಮಾಡಿಕೊಳ್ಳೋಣ.  ಮುಂಜಾವಿನ ತಂಗಾಳಿ ನಡಿಗೆ, ಮನಸ್ಸಿಗೆ ಹರ್ಷ ಉಂಟುಮಾಡಿ,ಕೆರೆಯಲ್ಲಿ ಕಾಣಸಿಗುವ ಹಕ್ಕಿ ಪಕ್ಷಿಗಳ ಕಲರವ, ಸೂರ್ಯ ರಶ್ಮಿಯ ಚೆಲ್ಲಾಟ, ಸುಂದರ ನೋಟ ಮನಸಿಗೆ ಉಲ್ಲಾಸ ನೀಡಿ; ಪ್ರಶಾಂತ ಚಿತ್ತ ಮೂಡುತ್ತದೆ. ಆದ್ರೆ ಯಾಕೋ ಕೆಲವರು ಇದನ್ನು ಆನಂದಿಸದೇ ಅಲ್ಲೂ ವಿಚಿತ್ರವಾಗಿ ಆಡ್ತಾರೆ.

ಸನ್ನಿವೇಶ ಒಂದು : ಎದರುಗಡೆ ನಾಲ್ಕು ಜನ  ಬರುತ್ತಿದ್ದಾರೆ, ಅವರ ಬಳಿ ಇದ್ದ ಮೊಬೈಲ್ ನಲ್ಲಿ ವೆಂಕಟೇಶ್ವರ ಸುಪ್ರಭಾತ  ಬರುತ್ತಿದೆ !!! ಮಾತು ನೋಡಿ  ಇವತ್ತು "ಏನಾರ ಆಗ್ಲಿ ಅವ್ನ್ತವು ಬಡ್ಡಿ ವಸೂಲಿ ಮಾಡಲೇ ಬೇಕು ಕಣ್ಲಾ, ######@### !! "ಅಂತಾ ಇವರು ತಮ್ಮ   ಸುಪ್ರಭಾತ  ಹೇಳುತ್ತಾ, "ಇವತ್ತು ಎತ್ತಾಕಂಡು ಬದ್ನು ಎರಡು ತದುಕಿ ವಸೂಲಿ ಮಾಡುವ" ಅಂತಾ ಬಡ್ಡಿ ವ್ಯವಹಾರದ ಮಾತು ಆಡ್ತಾ ತಮ್ಮ ಗಿರಾಕಿಗಳನ್ನು ಬಯ್ತಾ  ಬಯ್ತಾ ವೆಂಕಟೇಶ್ವರ ಸುಪ್ರಭಾತ ದಜೋತೆಗೆ  ವಾಕಿಂಗ್ ಮಾಡುವ ಪರಿ ಆಹಾ ವೆಂಕಟೇಶ್ವರನಿಗೆ ಅರ್ಪಿತ.

ಸನ್ನಿವೇಶ ಎರಡು: ಒಮ್ಮೆ ವಾಕಿಂಗ್ ಹೋಗುವ ಮಾರ್ಗದಲ್ಲಿ ಒಬ್ಬ ಮಹಿಳೆ ಒಂದು ನಾಯಿಯೊಡನೆ  ಬರ್ತಿದ್ರೂ !!! ನಾಯಿಗೆ ವಾಕಿಂಗ  ಅಥವಾ ಅವರಿಗೆ ವಾಕಿಂಗಾ ಗೊತ್ತಾಗಲಿಲ್ಲ!!. ನಾಯಿ ಚೈನು ಬಿಡಿಸಿಕೊಂಡು ಓಡುವ ಆಸೆ ಇಂದಾ ಜೋರಾಗಿ ಎಳೆಯುತ್ತಿತ್ತು ಇವರು ಹರ ಸಾಹಸ ಮಾಡಿ ಅದನ್ನು ನಿಯಂತ್ರಿಸುತ್ತಿದ್ದರು , ಆದ್ರೆ ಅವ್ರ ಹತ್ತಿರ ಇದ್ದ ಮೊಬೈಲ್ '' ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವನೆಂದೂ "" ಅಂತಾ ಹಾಡುತ್ತಿತ್ತು.

ಸನ್ನಿವೇಶ ಮೂರು:ಮತ್ತೊಮ್ಮೆ ಎದುರಿನಿಂದ  ಇಂದ ಒಬ್ಬ ಹುಡುಗಿ  ಓಡಿಕೊಂಡು ಬರುತ್ತಿದ್ದಳು !!! ಅವಳ ಓಟಕ್ಕೆ  ತಕ್ಕ ಹಾಗೆ ಅವಳ  ಕಟ್ಟಿದ ಜುಟ್ಟು ಎಗರಾಡುತ್ತಿತ್ತು !! ಪಾಪ ಅವಳು ಯಾರಿಗೂ ತೊಂದರೆಯಾಗದಿರಲಿ ಅಂತಾ ತನಗೆ ತಾನೇ ತುಟಿ ಕುಣಿಸುತ್ತಾ ಎರಡೂ  ಕಿವಿಗಳಿಗೆ ಇಯರ್ ಫೋನ್ ಹಾಕಿಕೊಂಡು ಓಡಿ  ಬರುತ್ತಿದ್ದಳು,   ಅವಳ ಎದುರಾಗಿ ಹೋಗುತ್ತಿದ್ದ ವಯಸ್ಸಾದ ಮಹಿಳೆಯರಲ್ಲಿ ಒಬ್ಬರು '' ಅಲ್ನೋಡು  ಆ ದೇವರಿಗೆ ಒಂಚೂರು ಕರುಣೆ ಇಲ್ಲ !!  ಪಾಪ ಆ ಹುಡ್ಗಿಗೆ ಕಿವಿ ಕೇಳದಂಗೆ ಮಾಡಿ ಕಿವಿಗೆ ಮಿಸೀನು ಮಡಗಿ ಕೊಳ್ಳೋ ಹಂಗೆ ಮಾಡವ್ನೆ " ಅಂದ್ರೆ ಇನ್ನೊಬ್ಬರು  "ಅಯ್ಯೋ ಪಾಪ  ಸ್ವಲ್ಪ ತಲೇನೂ ಸರಿ ಇಲ್ಲ ಅನ್ನೋಹಂಗೆ  ಕಾಣ್ತದೆ ತನಗೆ ತಾನೇ ಮಾತಾಡ್ತಾ ಐತೆ"  ಅಂದ್ರೂ , ಪಾಪಾ ಆ ಹುಡುಗಿ ಇದ್ಯಾವುದರ ಪರಿವೆ ಇಲ್ಲದೆ  ಮೊಬೈಲ್ ಸಂಗೀತ ಕೇಳ್ತಾ ಹಾಡ್ಕೊತಾ  ಹೋಯ್ತು

ಸನ್ನಿವೇಶ ನಾಲ್ಕು::ನಾನು ದಿನಾ ನೋಡುವ ಒಬ್ಬ ಆಸಾಮಿಯದು ಇನ್ನೊದು ರೀತಿ !! ನಾನು ವಾಕಿಂಗ್ ಮಾಡ್ತಾ ಬರುವ ಸಮಯಕ್ಕೆ ಎದುರಾಗಿ ಬರುತ್ತಾರೆ. ಹಳೆಯ ಕನ್ನಡ ಚಿತ್ರ ಗೀತೆಗಳನ್ನು ಮೊಬೈಲ್ ನಲ್ಲಿ  ಕೇಳುತ್ತಾ !!ಅಲ್ಲಲ್ಲಾ ಬೇರೆಯವರಿಗೆ  ಕೇಳಿಸುತ್ತಾ ಸಾಗುವ ಈತ ಬಲು ವಿಚಿತ್ರ ಆಸಾಮಿ , ಅಶುದ್ದ ಗಾಳಿಯನ್ನು ಶಬ್ದ ಸಹಿತ  ದೇಹದಿಂದ ಬಿಡುವ ಹಾಗು ವಾಯು ಮಾಲಿನ್ಯ ಮಾಡುವುದರಲ್ಲಿ ನಿಸ್ಸೀಮ. ಒಮ್ಮೆ ನಡೆದು ಬರುವ ಹಾದಿಯಲ್ಲಿ ಹಾವು ಮಲಗಿದ್ದರೂ  ನೋಡದೆ ತನ್ನ ಲೋಕದಲ್ಲೇ ವಿಹರಿಸುತ್ತಾ  ಹಾವು  ದಾಟಿ ಅದು ಸರಿದಾಗ  ಬೆಚ್ಚಿ ಮುಗ್ಗರಿಸಿ ಬಿದ್ದರು.ಆದ್ರೆ  ಇವರ ಮೊಬೈಲ್ ನಿಂದ ಹಾಡು "ಚೆಲುವಾಂತ ಚೆನ್ನಿಗನೆ ನಲಿದಾಡು ಬಾ ಅಂತಾ ಹಾಡ್ತಿತ್ತು. ಇನ್ನೊಂದು ಮಜಾ.

ಹೇಳ್ತೀನಿ ತಾಳಿ !! ಇಲ್ಲೋಬ್ಬರಿದ್ದಾರೆ , ವಯಸ್ಸಾದ  ಇವರೂ ಮೊಬೈಲ್ ಗಿರಾಕಿನೆ !!! ಇವರು ಸುಂದರ ಹೆಂಗಸರು ಅಥವಾ  ಹುಡ್ಗೀರು ಬಂದ್ರೆ  ನಟಿಸುವ ಚೂಲುಗಾರ. ನಿಧಾನವಾಗಿ ನಡೆಯುವ ಇವರು ದೂರದಲ್ಲಿ ಸುಂದರ ಹೆಣ್ಣು ಕಂಡೊಡನೆ  ತನ್ನ ಮೊಬೈಲ್ ನಿಂದ ಪ್ರೀತಿಗೆ ಸಂಬಂದಿಸಿದ ಹಾಡನ್ನು ಜೋರಾಗಿ ಹಾಕಿಕೊಳ್ಳುತ್ತಾನೆ. ಈ ಯಪ್ಪನನ್ನು  ಕಾಯಲು ಚುಡಾಯಿಸಲು ಒಂದು ಎರಡು ಹುಡುಗರು ಕಾದಿರುತ್ತಾರೆ." ಏನ್ ತಾತ  ಭಾರಿ ಸ್ಮಾರ್ಟ್ ಆಗಿ  ಕಾಣ್ತಿದೀರಾ ಅಂದ್ರೆ ಸಾಕು ನಾಚಿ ನೀರಾಗುವ ಈತ  "ನಮ್ಮ ಕಾಲದಲ್ಲಿ ಹಿಂಗಿರ್ಲಿಲ್ಲಾ ಕಣ್ರಪ್ಪಾ ಹೆಂಗಸರೂ ಹಾಳಾಗ್ಬುಟ್ರೂಅಂತಾ ಪುರಾಣ ಹೇಳ್ತಾ   ಇರ್ತಾನೆ. ಜನ ಸಹ ಇವನ ಬಗ್ಗೆ ಗೊತ್ತಿರೋದ್ರಿಂದ  ವ್ಯಾಕರಿಸಿ ಹೋಗುತ್ತಾರೆ.  ಏನ್ ತಾತಾ ನಿಮಗೆ ಮದುವೆ   ªಮಾಡಿದ್ರೆ ಮಾಡ್ಕೊತೀರ ಅಂದ್ರೆ ಘಾಟಿ ಮುದುಕ " ನಮ್ಗ್ಯಾರಪ್ಪಾ ಹೆಣ್ಣು ಕೊಡ್ತಾರೆ ಅಂತಾನೆ. ಹೇಳ್ತಾ ಹೋದ್ರೆ ಮುಗಿಯೋದೇ ಇಲ್ಲಾ. 

ರೀ !!, ಅದ್ಸರೀ ನೀವು ಬೆಳಿಗ್ಗೆ ವಾಕಿಂಗ್ ಗೆ ಹೋಗ್ತೀರಾ ,ದಯವಿಟ್ಟು ವಾಕಿಂಗ್ ಗೆ ಹೋದ್ರೆ ನಿಮ್ಮ ಮೊಬೈಲ್ , ಐ ಪಾಡು ಗಳನ್ನೂ ಮನೆಯಲ್ಲೇ  ಬಿಟ್ಟು   ಹೋಗಿ, ಮುಂಜಾನೆ ವಾಕು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು  ಆದ್ರೆ ನಾವು ಪಟ್ಟಣದ ಮಂದಿ [ಅ ] ನಾಗರೀಕರು !!ಮುಂಜಾನೆಯ ತಂಗಾಳಿ ನಮ್ಮ ಕಿವಿ , ಕಣ್ಣು, ಮೂಗಿನಲ್ಲಿ ಸುಳಿದಾಡಲು  ಅವಕಾಶ ಕೊಡದೆ  ಜೋರಾಗಿ ಮಾತಾಡುತ್ತಾ, ಮೊಬೈಲ್ ಕಿರುಚಿಸುತ್ತಾ , ಅಸಹ್ಯವಾಗಿ ಆಡುತ್ತಾ  ವಾಕ್ ಮಾಡುತ್ತೇವೆ. ನೀವು ವಾಕ್ ಮಾಡುವಾಗ ಯಾರ ಜೊತೆಯಲ್ಲೂ ಮಾತನಾಡದೆ  ಒಬ್ಬರೇ ನಿಶಬ್ದವಾಗಿ ವಾಕ್ ಮಾಡಿ ನೋಡಿ ,ನಿಮ್ಮ ಮನಸ್ಸು  ಆರೋಗ್ಯ ವಾಗಿ ನಿಮ್ಮ ದೇಹದ ಆರೋಗ್ಯವೂ ಚೆನ್ನಾಗುತ್ತದೆ.ಏನಂತೀರ!!!

Comments