ಬಾಳ ಬೆಳದಿಂಗಳು (ಕಥೆ) - ಭಾಗ ೪

ಬಾಳ ಬೆಳದಿಂಗಳು (ಕಥೆ) - ಭಾಗ ೪

ಭಾಗ ೩


http://sampada.net/blog/shamzz/16/12/2010/29516


 


ಭಾಗ ೪


 


 


ಹಾಗೂ ಹೀಗೂ ಒಂದು ವಾರ ಕಳೆಯಿತು. ರಮೇಶ್ ಸಂಪೂರ್ಣವಾಗಿ ಮೊದಲಿನಂತಾಗದಿದ್ದರೂ ತನ್ನ ಮೊದಲಿನ ದಿನಚರಿಯನ್ನು ಪುನಃ ಪ್ರಾರಂಭಿಸಿದ್ದ. ಕೊನೆಗೂ ಸರೋಜಮ್ಮನವರು ಕಾಯುತ್ತಿದ್ದ ಭಾನುವಾರ ಬಂದೇ ಬಿಟ್ಟಿತು. ಅಂದು ಮುಂಜಾನೆಯಿಂದ ಎಷ್ಟು ಬೇಗ ಬೇಗವಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಇವರು ಇಲ್ಲಿ ಹಿರಿ ಹಿರಿ ಹಿಗ್ಗುತ್ತಿದ್ದರೆ, ಅಲ್ಲಿ ತನ್ನ ರೂಮಿನಲ್ಲಿ ಕುಳಿತಿದ್ದ ರಮೇಶನ ಸ್ಥಿತಿಯೇ ಬೇರಯಾಗಿತ್ತು. 'ಒಂದು ವೇಳೆ ಇಂದು ನೋಡುವ ಹುಡುಗಿ ಎಲ್ಲಾ ರೀತಿಯಲ್ಲಿ ನನ್ನಗೆ ತಕ್ಕ ಜೋಡಿಯಾಗಿದ್ದರೆ ಯಾವ ನೆಪ ಹೇಳಿ ನಿರಾಕರಿಸುವುದು? ಅಲ್ಲದೆ ಶಾಂತಕ್ಕನ ಅತ್ತೆಯ ಸಂಬಂಧಿಕರು ಬೇರೆ. ಅವರೆಲ್ಲ ಏನು ಅಂದುಕೊಳ್ಳಬಹುದು? ಅವರು ಇರಲಿ, ಸೂಷ್ಮ ಬುದ್ಧಿಯ ನನ್ನ ಅಪ್ಪ, ಅಮ್ಮನ ಹತ್ತಿರ ಯಾವ ಕಾರಣ ಹೇಳಲಿ ನನ್ನ ನಿರಾಕರಣೆಗೆ? ಪಾಪ ಆ ಹುಡುಗಿಯ ಬಗ್ಗೆ ಜನ ಏನು ಮಾತಾಡಿಕೊಂಡಾರು?' ಇದೆಲ್ಲಾ ಯೋಚಿಸಿದ ರಮೇಶನಿಗೆ ಬೇಸರವಾಯಿತು. ಆದರೂ ಅವನಿಗೆ ತನ್ನ ಬಾಳ ಸಂಗಾತಿಯ ಸ್ಥಾನದಲ್ಲಿ ತನ್ನ ಕನಸಿನ ಚೆಲುವೆಯನ್ನು ಬಿಟ್ಟರೆ ಬೇರೆ ಯಾರನ್ನೂ ಊಹಿಸಲು ಸಾಧ್ಯವಿರಲಿಲ್ಲ. ಕೊನೆಗೆ ಮನಸ್ಸನ್ನು ಗಟ್ಟಿ ಮಾಡಿ, ಹೊರಡಲನುವಾದನು.


 


ಸರೋಜಮ್ಮ, ರಾಯರು, ರಾಯರ ಅಣ್ಣ, ಅತ್ತಿಗೆ ಹಾಗೂ ರಮೇಶ್ ಎಲ್ಲರೂ ಜೊತೆಗೂಡಿ ಶಾಂತನ ಮನೆಗೆ ತಲುಪುವಷ್ಟರಲ್ಲಿ ಘಂಟೆ ೧೧:೦೦ ಆಗಿತ್ತು. ಅಲ್ಲಿಂದ ಶಾಂತನ ಕುಟುಂಬದವರನ್ನು ಸೇರಿಸಿಕೊಂಡು ಹುಡುಗಿ ಮನೆಗೆ ಬಂದರು. ಎಲ್ಲರನ್ನು ಗೌರವದಿಂದ ಬರಮಾಡಿಕೊಂಡ ಹರೀಶ್ ದಂಪತಿಗಳು ಹಾಗೂ ಹುಡುಗಿಯ ತಂದೆ, ತಾಯಿ ಬಂದವರಿಗೆ ತಿಂಡಿ, ಪಾನೀಯಗಳ ಉಪಾಚಾರ ಮಾಡಿದರು. ಎಲ್ಲರೂ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರೆ, ರಮೇಶ್ ಮಾತ್ರ ಮುಂದಿನದನ್ನು ಎನಿಸಿಕೊಂಡು ಪೆಚ್ಚುಮೋರೆ ಹಾಕಿ ಕುಳಿತಿದ್ದ. ಅವನ ಯೋಚನೆಯೆಲ್ಲ ತನ್ನ ಹುಡುಗಿಯ ಬಗ್ಗೆ ಆವರಿಸಿತ್ತು. 'ಎಲ್ಲಿದ್ದಾಳೆಯೋ? ಹೇಗಿದ್ದಾಳೆಯೋ? ನಾವು ಅವಳನ್ನು ಇವತ್ತು ಪತ್ತೆ ಹಚ್ಚುತ್ತೇವೆಯೋ?


 ಇಲ್ಲವೋ?' ಎಂದೆಲ್ಲ ಯೋಚಿಸುತ್ತಿದ್ದ ರಮೇಶನನ್ನು, "ಏನಪ್ಪಾ, ಏನು ಯೋಚಿಸುತ್ತಿದ್ದೀಯ?" ಎಂಬ ಹರೀಶರ ಧ್ವನಿ ಬಾಹ್ಯಲೋಕಕ್ಕೆ ತಂದಿತು. "ಆ ಆ ಏನಿಲ್ಲ" ಎಂದ ರಮೇಶ್ ಮುಖದಲ್ಲಿ ಬಲವಂತದ ನಗೆ ತಂದುಕೊಂಡು.


 


"ಸರಿ, ಉಪಚಾರ ಎಲ್ಲಾ ಆಯಿತು, ಬಂದ ಕೆಲಸವೂ ಬೇಗ ಆಗಿದ್ರೆ ಒಳ್ಳೇದಿತ್ತು " ರಮೇಶನ ದೊಡ್ಡಪ್ಪ ಹೇಳಿದರು. "ಖಂಡಿತವಾಗಿ" ಎಂದ ಹರೀಶ್, ತನ್ನ ಹೆಂಡತಿ ಹಾಗೂ ಅಕ್ಕನಿಗೆ ಕಣ್ಸನ್ನೆ ಮಾಡಿದರು. ರಮೇಶನಿಗೆ ಯಾಕೋ ಅಪರಾಧಿ ಭಾವನೆ ಕಾಡತೊಡಗಿತು. ಒಮ್ಮೆ ಎದ್ದು ಎಲ್ಲರೊಡನೆ ಸತ್ಯ ಹೇಳಲೇ ಅನಿಸಿತು. ಆದರೆ ಮರುಕ್ಷಣವೇ ತನ್ನನ್ನು ತಾನು ಸಂಭಾಳಿಸಿಕೊಂಡ. ತಲೆ ಕೆಳಗೆ ಹಾಕಿ ನೆಲವನ್ನೇ ನೋಡುತ್ತಿದ್ದ ರಮೇಶನಿಗೆ ಘಮ್ಮನೆ ಬಂದ ಮಲ್ಲಿಗೆಯ ಪರಿಮಳ ಹುಡುಗಿಯ ಆಗಮನವನ್ನು ತಿಳಿಸಿತು. "ಬಾಮ್ಮ, ಇಲ್ಲಿ ಬಂದು ನನ್ನ ಹತ್ತಿರ ಕುಳಿತುಕೋ, ನಾಚ್ಕೋ ಬೇಡ" ಎಂದರು ಸರೋಜಮ್ಮ ಪ್ರೀತಿಯಿಂದ. ಹುಡುಗಿ ಮೆಲ್ಲನೆ ಬಂದು ಸರೋಜಮ್ಮನ ಪಕ್ಕದಲ್ಲಿ ಕುಳಿತಳು. ರಾಯರು ದಂಪತಿಗಳು ಹಾಗು ಅವರ ಅಣ್ಣ, ಅತ್ತಿಗೆ ಎಲ್ಲರೂ ಹುಡುಗಿ ಜೊತೆ ಅವಳ ವಿದ್ಯೆ, ಕೆಲಸದ ಬಗ್ಗೆ ಮಾತನಾಡಿದರು. ರಮೇಶ ಮಾತ್ರ ಅವಳ ಕಡೆಗೆ ನೋಡಲೇ ಇಲ್ಲ. ಕೊನೆಗೆ ಹರೀಶ್ ಹೆಂಡತಿ ಅವಳ ಕೈಗೆ ಪಾನೀಯ ಕೊಟ್ಟು ಹುಡುಗನ ಕಡೆಯವರಿಗೆ ಕೊಡಲು ಹೇಳಿದರು. ಅವಳು ಅದರಂತೆ ಹಿರಿಯರಿಗೆಲ್ಲ ಕೊಟ್ಟು, ಕೊನೆಯಲ್ಲಿ ರಮೇಶನ ಹತ್ತಿರ ಬಂದಳು.


 


ರಮೇಶನಿಗೆ ಅವಳನ್ನು ನೋಡಲು ಧೈರ್ಯವಾಗಲಿಲ್ಲ. ಆಗ ಹರೀಶ್ ಅವರು, "ಏನಪ್ಪಾ, ಹುಡುಗಿಯರ ಹಾಗೆ ನಾಚ್ತಾ ಇದ್ದೀಯ? ನಮ್ಮ ಸೌಮ್ಯಳನ್ನು ಒಮ್ಮೆ ನೋಡು ಕಣಪ್ಪ" ಎಂದರು ಹಾಸ್ಯವಾಗಿ. ರಾಯರು, "ರಾಮು ಪಾನೀಯ ತಗೋ" ಎಂದರು. ರಮೇಶನಿಗೆ ಯಾಕೋ ಮೈಯೆಲ್ಲಾ ಬೆವರತೊಡಗಿತು. ‘ಏನಾದರೂ ಸರಿ, ಒಮ್ಮೆ ನೋಡೇ ಬಿಡೋಣ ಎಲ್ಲರ ಬಲವಂತಕ್ಕಾಗಿ, ದೇವರಿದ್ದಾನೆ' ಎಂದು ಯೋಚಿಸಿ ಹುಡುಗಿಯ  ಕಡೆಗೆ ನೋಡಿದ. ಏನಾಶ್ಚರ್ಯ! ರಮೇಶನ ಕನಸಿನ ಸುಂದರಿ ಅವನ ಎದುರಲ್ಲಿ ನಾಚುತ್ತ ನಿಂತಿದ್ದಾಳೆ. ಅವನಿಗೆ ಅವನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅವಳು ಮೆಲ್ಲನೆ ಕಣ್ಣೆತ್ತಿ ಅವನ ಮುಖ ನೋಡಿದಳು. ಅವಳ ಸ್ಥಿತಿಯೂ ಅದೇ ಆಯಿತು. ಬಿಡದೆ ಒಬ್ಬರನ್ನೊಬ್ಬರು ನೋಡುತ್ತಿದ್ದವರನ್ನು ಉಳಿದವರ ಜೋರಾದ ನಗು ಎಚ್ಚರಿಸಿತು. ಅವಳು ನಾಚಿಕೆಯಿಂದ ಒಳಗೋಡಿದಳು. ರಮೇಶನೂ ನಾಚಿಗೆಯಿಂದ ತಲೆ ತಗ್ಗಿಸಿದನು. ಅವರ ಹಾವ ಭಾವಗಳಿಂದಲೇ ಹಿರಿಯರಿಗೆ ಅವರ ಸಮ್ಮತಿ ಸಿಕ್ಕಿತು. ಮುಂದೆ ಅವರೆಲ್ಲ ಏನು ಮಾತನಾಡುತ್ತಿದ್ದಾರೆಂದು ಅವನಿಗೆ ಕೇಳಿಸಲಿಲ್ಲ. ಅವನಾಗಲೇ ಕನಸಿನ ಲೋಕಕ್ಕೆ ತೆರಳಿದ್ದ.


 


ಕೊನೆಗೂ ರಮೇಶನ ಬಾಳಿನಲ್ಲಿ ಬೆಳದಿಂಗಳು ಹರಡಿತು.:)


 


ಮುಗಿಯಿತು.

Rating
No votes yet

Comments