ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ...!

ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ...!

ಕಾಲಗರ್ಭದಲಿ ಮರೆಯಾಗುತಿಹುದು ಮತ್ತೊಂದು ವರುಷ

 

ಕಾಲಗರ್ಭದಲಿ ಮರೆಯಾಗುತಿಹುದು ಈಗ ಮತ್ತೊಂದು ವರುಷ,
ನೋವು ಇದ್ದಿದ್ದರೂ, ತಂದಿತ್ತು ನಮ್ಮ ಬಾಳಲ್ಲಿ ಬಹಳಷ್ಟು ಹರುಷ;

ಆರ್ಥಿಕ ಹಿಂಜರಿತ ಹೋಗಿ, ತೂಗತೊಡಗಿತು ಸಂತಸದ ತೊಟ್ಟಿಲು,
ವೈದ್ಯೆಯಾಗುತ್ತಿರುವ ಮಗಳು ಏರಿಹಳು ಈಗ ಎರಡನೇ ಮೆಟ್ಟಿಲು;

ಅಲ್ಲಿ ಅಮ್ಮನವರ ಆರೋಗ್ಯ ಏರುಪೇರಿಲ್ಲದೇ ಒಂದೇ ಸಮನಾಗಿದೆ,
ಸದ್ಯಕ್ಕೆ ಮನೆಯಲ್ಲಿ, ಆರೋಗ್ಯ ನೆಮ್ಮದಿ ಮನೆ ಮಾಡಿರುವಂತೆ ಇದೆ;

ನ್ಯಾಯವಾದಿ ತಮ್ಮ, ನೋಟರಿಯಾಗಿ ಮೂಡಿಸಿದ ಈ ಮನದಿ ಹೆಮ್ಮೆ,
ಮಗನಿಲ್ಲದೆನಗೆ ಮಗನಲ್ಲವೇ ಆತ, ಎಂಬ ಭಾವನೆ ನನ್ನಲ್ಲಿ ಒಮ್ಮೊಮ್ಮೆ;

ಹೊಸ ಸಂಬಂಧ ಸೇರಿಕೊಂಡಿಲ್ಲ, ಕಳಚಿಕೊಂಡವು ಒಂದೆರಡು ಸದ್ಯ,
ಸ್ನೇಹಿತರ ಸಂಖ್ಯೆ ಹೆಚ್ಚಾಗಿ, ಅದರಲ್ಲಿ ಆಪ್ತರಾದರು ಹಲವರು ಈ ಮಧ್ಯ;

ಸಮಾಜ ಲಗಾಮಿಲ್ಲದೇ, ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗುತ್ತಿದೆ,
ಭ್ರಷ್ಟಾಚಾರ ಎನ್ನುವುದೇ ರಾಜಕೀಯಕ್ಕೆ ಪರ್ಯಾಯ ಪದವಾಗಿಬಿಟ್ಟಿದೆ;

ವರುಷದ ಬಹುಪಾಲು ನಮ್ಮ ನಾಡು, ಕಳೆಯಿತು ಅರಾಜಕತೆಯಲ್ಲಿಯೇ,
ಭ್ರಷ್ಟ ರಾಜಕಾರಣಿಗಳಲ್ಲೀಗ, ದುಸ್ತರವಾಗಿದೆ ನಿಷ್ಠಾವಂತರ ಆಯ್ಕೆಯೇ;

ಕಾಂಗ್ರೇಸಿನ ಅವಿವಾಹಿತ ಗೂಳಿ, ದೇಶದುದ್ದಕ್ಕೂ ಧೂಳೆಬ್ಬಿಸಿ ಸೋತಿತು,
ದೇಶೀಯರ ದೂಷಿಸಿ, ತಾನೊಬ್ಬ ವಿದೇಶಿ ಎಂಬುದ ಸಾಬೀತು ಪಡಿಸಿತು;

ದಿಲ್ಲಿಯಲಿ ಆಟ ಆಡಿಸಲು ನಿಂತವರೂ, ಕೋಟಿ ಕೋಟಿ ಕೊಳ್ಳೆ ಹೊಡೆದರು,
ಚೀನಾದಲಿ ಚಿನ್ನದ ಬೇಟೆಯಾಡಿ ಮರಳಿದರು, ಕನ್ನಡನಾಡಿನ ಕುವರಿಯರು;

ಎಲ್ಲರದೂ ಮುಖವಾಡ, ಹೇಳುವುದೊಂದಾದರೆ ಮಾಡುವುದು ಮತ್ತೊಂದು,
ಮಾಧ್ಯಮದವರು ಗುದ್ದಿದರು ಜನರನ್ನು, ದಿನವೂ ನೀಡಿ ಸುದ್ದಿ ಹೊಸತೊಂದು;

ಸತ್ಯಾಸತ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲು, ಅವಕಾಶವೇ ಇಲ್ಲವಾಗಿದೆ ಇಲ್ಲಿ,
ಒಂದರ ಹಿಂದೆ ಇನ್ನೊಂದು ಸುದ್ದಿ, ಸ್ಫೋಟಗೊಳ್ಳುತ್ತಲೇ ಇರುತ್ತದೀ ನಾಡಲ್ಲಿ;

ನಿತ್ಯಾನಂದ ಸ್ವಾಮಿಯ ಕಾಮಕಾಂಡದ ಮೇಲಿಂದ ಸರಿಯಿತು ಪರದೆ ಮೆಲ್ಲಗೆ,
ಪತ್ನಿ-ಮಿತ್ರನ ಅಕ್ರಮ ಸಂಬಂಧ, ಹಾದಿಯಾಯ್ತು ಅತ್ತ ಕೋಟಿಗಟ್ಟಲೆ ಸುಲಿಗೆಗೆ;

ಕನ್ನಡ ಪತ್ರಿಕೋದ್ಯಮದಲ್ಲಿ, ಸುಂಟರಗಾಳಿಯೇ ಬೀಸಿದಂತಾಯ್ತು ಒಮ್ಮೆಗೇ,
ಓದುಗರಿಗೂ ಬೇಸರವಾಯ್ತು,  ಭಟ್ಟರ ತಂಡ ವಿಕದಿಂದ ತೆರಳಿದಾಗ ಹೊರಗೆ;

ಸುಳ್ಳು ಅಪವಾದಕ್ಕೆ ಗುರಿಯಾದ, ಬೆತ್ತಲೆ ಜಗತ್ತಿನ ಸಿಂಹ ನೋಡ ನೋಡುತ್ತಲೇ,
ನೀತಿಯ ಪಾಠ ಮಾಡುತ್ತಿದ್ದ ರವಿಯ ಕಾಮ ಕಥೆ ಬಯಲಾಗಿ, ಆತನಾದ ಬೆತ್ತಲೆ;

ಹೊಸ ವರುಷ, ಹೊಸ ಹರುಷ ತರಲಿ, ನಮ್ಮೆಲ್ಲರ ಬಾಳಿನಲ್ಲೆಂಬುದೇ ಆಶಯ,
ಭ್ರಷ್ಟರ ದುಷ್ಟರ ಅರಾಜಕತೆ ಮುಗಿದು, ಜನ ಕಾಣುವಂತಾಗಲಿ ನೆಮ್ಮದಿಯ!

*************************************

Rating
No votes yet

Comments