ಆಗಸದಲ್ಲೊಬ್ಬ ಹೊಸ ಅತಿಥಿ!

ಆಗಸದಲ್ಲೊಬ್ಬ ಹೊಸ ಅತಿಥಿ!

ಆಗಸದಲ್ಲೊಬ್ಬ ಹೊಸ ಅತಿಥಿ ಕಾಣಿಸಿಕೊಂಡಿದ್ದಾನೆ! ಹೋಮ್ಸ್ ಧೂಮಕೇತು ಒಂದೆರಡು ದಿವಸದಲ್ಲಿ ಪ್ರಕಾಶದಲ್ಲಿ ಸುಮಾರು ಹತ್ತುಲಕ್ಷ ಪಟ್ಟು ಹೆಚ್ಚಾಗಿ, ಬರಿಕಣ್ಣಿಗೆ ಸುಲಭವಾಗಿ ಕಾಣುವ ನಕ್ಷತ್ರದಂತಾಗಿದೆ. ಇನ್ನೂ ಮುಂದೆ ಇದರ ಬೆಳವಣಿಗೆ ಹೇಗಾಗಿತ್ತೋ ಕಾದು ನೋಡಬೇಕಾದ ಸಂಗತಿ.

ಇನ್ನೂ ಸದ್ಯಕ್ಕೆ ಬಾಲ ಏನೂ ಕಾಣದಿದ್ದರೂ, ಸುಮಾರು ಇಪ್ಪತ್ತೈದು ವರ್ಷಗಳಿಂದ ಬಂದಿರುವ ಧೂಮಕೇತುಗಳಲ್ಲೆಲ್ಲ ಇದು ಅತೀ ಪ್ರಕಾಶಮಾನವಾದದ್ದು ಅನ್ನುವುದು ಮಹತ್ವದ ಸಂಗತಿ.

ಇದು ಈಗ ಪರ್ಸಿಯಸ್ ತಾರಾಪುಂಜದಲ್ಲಿದೆ. ಆಕಾಶದ ರಾಶಿಗಳ ಪರಿಚಯವಿದ್ದವರಿಗೆ, ಇದು ಒಂದು ಹೊಸ ಹಳದಿ ಬಣ್ಣದ ನಕ್ಷತ್ರದಂತೆ ತೋರುತ್ತದೆ. ಇಲ್ಲದವರಿಗೆ ಇದರಲ್ಲೇಪ್ಪ ಹೆಚ್ಚುಗಾರಿಕೆ ಎನ್ನಿಸಬಹುದು. ಆದರೆ, ಮುಂಬರುವ ದಿನಗಳಲ್ಲಿ ಇದು ಯಾವ ರೀತಿ ಬದಲಾಗಬಹುದು ಎನ್ನುವುದರ ಮೇಲೆ, ಇದು ಜನಮನದಲ್ಲಿ ಉಳಿಯುತ್ತೋ ಇಲ್ಲವೋ ಅನ್ನೋದು ನಿರ್ಧಾರವಾಗುತ್ತೆ.

ಬೆಂಗಳೂರಿನಿಂದ (ಅಥವಾ ಭಾರತದಲ್ಲಿ ಸುಮಾರು ಎಲ್ಲೇ ಆಗಲಿ) ನೋಡುವವರಿಗೆ, ಪರ್ಸಿಯಸ್ ಈಗ ಸಂಜೆ ಸೂರ್ಯ ಮುಳುಗಿ ಎರಡು ಮೂರು ಗಂಟೆಗಳಲ್ಲಿ ಉತ್ತರ-ವಾಯುವ್ಯ ದಿಸೆಯಲ್ಲಿ ಹುಟ್ಟುತ್ತೆ. ನಡು ರಾತ್ರಿಯ ಹೊತ್ತಿಗೆ ಉತ್ತರಾಕಾಶದಲ್ಲಿ, ಧ್ರುವ ನಕ್ಷತ್ರದ ಮೇಲೆ ನೋಡಲು ಅನುಕೂಲವಾದ ಸ್ಥಾನದಲ್ಲಿರುತ್ತೆ. (ಇದು ನನ್ನ ಅಂದಾಜು).

ನೆನ್ನೆ ರಾತ್ರಿ ಚಂದ್ರನ ಅಬ್ಬರದ ಬೆಳಕಿನಲ್ಲೇ ಇದು ಸೊಗಸಾಗಿ ಬರಿಗಣ್ಣಿಗೇ ಕಂಡಿತು. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಇದರಿಂದ ಒಳ್ಳೇ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇನೆ. ಕಳೆದ ೪೮ ಗಂಟೆಗಳಲ್ಲಾದ ಬದಲಾವಣೆ ಮುಂದುವರೆದರೆ, ಇದು ಬಹಳ ಪ್ರಕಾಶಮಾನ ಧೂಮಕೇತುವಾಗಬಹುದೆಂಬ ಊಹೆ ಇದೆ.

ಆಸಕ್ತರು ಇದರ ಮೇಲಿರುವ ಅಂತರ್ಜಾಲ ಕೊಂಡಿಗಳನ್ನು ನೋಡಿ, ಓದಿ. ನಮ್ಮ ಕಣ್ಣ ಮುಂದಿರುವ ಸೋಜಿಗವನ್ನು ನೋಡಲು ಮರೆಯದಿರಿ!

-ಹಂಸಾನಂದಿ

ಕೆಳಗಿರುವುದು ಸ್ಕೈ ಅಂಡ್ ಟೆಲಿಸ್ಕೋಪ್ ಪತ್ರಿಕೆಯಿಂದ, ಈ ಧೂಮಕೇತುವನ್ನು ಎಲ್ಲಿ ನೋಡಬಹುದೆಂದು ನೋಡಲು ಅನುಕೂಲವಾಗುವ ಉತ್ತರಾಕಾಶದ ಪಟ.

Rating
No votes yet

Comments