ಕರುಳಿನ ಕೂಗು (ಕಥೆ)
ಅನುವಾದಿತ ಕಥೆ.
ಶಂಕರನ ತಾಯಿಗೆ ಕೇವಲ ಒಂದೇ ಕಣ್ಣಿದ್ದು ಶಂಕರ ತನ್ನ ತಾಯಿಯನ್ನು ಬಹಳ ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದ. ಅವರದ್ದು ತೀರಾ ಬಡ ಕುಟುಂಬ. ಶಂಕರನ ತಾಯಿ ಒಂದು ಸಣ್ಣ ಗೂಡಂಗಡಿ ನಡೆಸುತ್ತಿದ್ದಳು. ಅದರ ಸಂಪಾದನೆಯಿಂದಲೇ ಮನೆ ನಡೆಯಬೇಕಿತ್ತು. ಒಂದು ದಿನ ಶಂಕರನ ತಾಯಿ ಊಟ ಮರೆತು ಹೋಗಿದ್ದ ಮಗನಿಗೆ ಊಟ ತೆಗೆದುಕೊಂಡು ಶಾಲೆಗೆ ಹೋದಳು. ಅವಳು ಅಲ್ಲಿಗೆ ಬಂದಿದ್ದನ್ನು ಸಹಿಸದ ಶಂಕರ ಮನೆಗೆ ಬಂದುಬಿಟ್ಟ. ಮರುದಿನ ಶಾಲೆಯಲ್ಲಿ ಕೆಲ ಹುಡುಗರು ಶಂಕರನಿಗೆ ನಿನ್ನ ತಾಯಿಗೆ ಒಕ್ಕಣ್ಣು ಎಂದು ಚುಡಾಯಿಸಲು ಶುರು ಮಾಡಿದರು.
ಶಂಕರ ಕೆಲವೊಮ್ಮೆ ತನ್ನ ತಾಯಿ ಈ ಪ್ರಪಂಚದಿಂದ ಹೊರಟುಹೋದರೆ ಸಾಕು ಎಂದುಕೊಳ್ಳುತ್ತಿದ್ದ. ತನ್ನ ತಾಯಿಯ ಬಳಿ ಹೋಗಿ ನಿನ್ನ ಒಂಟಿ ಕಣ್ಣಿನಿಂದ ನಾನು ಶಾಲೆಯಲ್ಲಿ ನಗೆಪಾಟಲಿಗೀದಾದೆ. ನೀನು ಯಾಕೆ ಸಾಯಬಾರದು ಎಂದು ಕೇಳಿದ. ಆದರೆ ಆ ತಾಯಿ ಏನೂ ಮಾತಾಡದೆ ಮೌನವಾಗಿದ್ದಳು. ನನ್ನ ಮಾತಿನಿಂದ ಆಕೆಗೆ ಬೇಸರವಾಗಿರಬಹುದೇ ಎಂದು ಕೊಂಡರೂ ಮರು ಕ್ಷಣದಲ್ಲಿ ತನ್ನ ಮನದಲ್ಲಿದ್ದ ಮಾತನ್ನು ಹೇಳಿದೆನಲ್ಲ ಎಂಬ ವಿಕೃತ ಸಂತೋಷದಿಂದ ಆಚೆ ಬಂದುಬಿಟ್ಟ ಶಂಕರ. ಆ ದಿನ ರಾತ್ರಿ ನೀರು ಕುಡಿಯಲು ಅಡಿಗೆ ಮನೆಗೆ ಹೋದಾಗ ಅಲ್ಲಿ ಅವನ ತಾಯಿ ಅಳುತ್ತ ಕುಳಿತಿದ್ದಳು. ಎಷ್ಟು ನಿಧಾನವಾಗಿ ಅಳುತ್ತಿದ್ದಳೆಂದರೆ ಜೋರಾಗಿ ಅತ್ತರೆ ಎಲ್ಲಿ ತನ್ನ ಮಗನಿಗೆ ಎಚ್ಚರವಾಗುತ್ತದೆ ಎಂದು ಅಷ್ಟು ಮೆದುವಾಗಿ ಅಳುತ್ತಿದ್ದಳು. ಅವನು ಅವಳೆಡೆಗೆ ನೋಡಿ ತಿರುಗಿಬಿಟ್ಟೆ. ಅವನ ಹೃದಯದ ಮೂಲೆಯಲ್ಲಿ ಅವಳಿಗೆ ಹಾಗೆ ಅಂದಿದ್ದಕ್ಕೆ ಚುಚ್ಚುತ್ತಿದ್ದರೂ ಮರುಕ್ಷಣದಲ್ಲಿ ಈ ಬಡತನದಲ್ಲಿದ್ದರೆ ನನ್ನ ಹಣೆಬರಹ ಇಷ್ಟೇ ಎಂದು ನಿರ್ಧರಿಸಿ ಅಂದು ರಾತ್ರಿಯೇ ಅವಳಿಗೆ ಹೇಳದೆ ಕೇಳದೆ ಮನೆ ಬಿಟ್ಟು ಹೊರಟುಬಿಟ್ಟ.
ಶಂಕರ ಆಚೆಬಂದು ಅಲ್ಲಿ ಇಲ್ಲಿ ಸಾಲ ಮಾಡಿ ಬಹಳ ಕಷ್ಟ ಪಟ್ಟು ಓದಿ ಪದವಿ ಪಡೆದು, ಒಳ್ಳೆಯ ನೌಕರಿ ಸಂಪಾದಿಸಿ ಬಹು ಬೇಗ ಉನ್ನತ ಸ್ಥಾನಕ್ಕೇರಿದ. ಹಾಗೆ ಸ್ವಂತ ಮನೆ, ಮದುವೆ, ಮಕ್ಕಳು ಎಂದು ಸಂತೋಷದಿಂದ ಜೀವನ ಸಾಗುತ್ತಿದ್ದ. ತನ್ನ ತಾಯಿಯನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದ. ಹೀಗೆ ಆತನ ಸಂತೋಷ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿರಲು ಒಂದು ದಿನ ಅವನನ್ನು ನೋಡಲು ಒಬ್ಬರು ಹುಡುಕಿಕೊಂಡು ಬಂದಿದ್ದರು. ಆ ಬಂದವರನ್ನು ನೋಡಿ ಶಂಕರನ ಮಗಳು ಹೆದರಿಕೊಂಡು ಓಡಿ ಒಳಗೆ ಹೋದಳು. ಬಂದವರು ಶಂಕರನ ತಾಯಿ ಆಗಿದ್ದರು. ಅವಳನ್ನು ನೋಡಿ ಆಕಾಶವೇ ಕಳಚಿ ಬಿದ್ದಂತಾಯಿತು ಶಂಕರನ ತಲೆ ಮೇಲೆ. ಕೂಡಲೇ ಅವಳನ್ನು ನೋಡಿ ನೀನು ಯಾರು? ನೀನು ಯಾರೆಂದು ಗೊತ್ತಿಲ್ಲ. ಯಾಕೆ ಇಲ್ಲಿಗೆ ಬಂದು ನನ್ನ ಮಗಳನ್ನು ಹೆದರಿಸಿದೆ ಹೊರತು ಹೋಗು ಇಲ್ಲಿಂದ ಎಂದು ಜೋರಾಗಿ ಕಿರುಚಿಕೊಂಡ. ಕೂಡಲೇ ಅವಳ ತಾಯಿ ದಯವಿಟ್ಟು ಕ್ಷಮಿಸಿ ಬಹುಷಃ ನಾನು ತಪ್ಪು ವಿಳಾಸಕ್ಕೆ ಬಂದಿದ್ದೇನೆ ಎಂದು ಅಲ್ಲಿಂದ ಹೊರಟುಹೋದಳು. ಅಬ್ಬ ಸಧ್ಯ ಅವಳು ನನ್ನನ್ನು ಗುರುತಿಸಲಿಲ್ಲ ಎಂದು ನಿಟ್ಟುಸಿರು ಬಿಟ್ಟ ಶಂಕರ.
ಅದಾಗಿ ಒಂದು ವಾರದ ನಂತರ ಶಂಕರನಿಗೆ ಅವನ ಶಾಲೆಯಿಂದ ಶಾಲೆಯ ವಾರ್ಷಿಕೋತ್ಸವಕ್ಕೆ ಆಹ್ವಾನ ಬಂದಿತ್ತು. ಅದನ್ನು ನೋಡಲು ಬಂದ ಶಂಕರ ಹಾಗೆ ತನ್ನ ಮನೆಯನ್ನು ನೋಡೋಣ ಎಂದುಕೊಂಡು ಮನೆಯ ಬಳಿ ಬಂದಾಗ ಅದೇ ಹಳೆ ಮುರುಕಲು ಮನೆ ಇನ್ನೂ ಹಾಳಾಗಿತ್ತು. ಹಾಗೆ ಬಗ್ಗಿ ನೋಡಿದಾಗ ಒಳಗೆ ಅವನ ತಾಯಿ ನೆಲದ ಮೇಲೆ ಮಲಗಿದ್ದಳು. ಒಳಗೆ ಬಂದ ಶಂಕರ ಅವಳನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವಳು ಇಹಲೋಕ ತ್ಯಜಿಸಿದ್ದಳು. ಅವಳ ಪಕ್ಕದಲ್ಲೇ ಒಂದು ಪತ್ರ ಬಿದ್ದಿತ್ತು. ಅದನ್ನು ಎತ್ತಿ ಓದಿದಾಗ ಅದರಲ್ಲಿ ಹೀಗಿತ್ತು..
ಮಗನೆ,
ನನಗನಿಸುತ್ತಿದೆ ನನ್ನ ಜೀವನ ಮುಗಿಯುತ್ತ ಬರುತ್ತಿದೆ ಎಂದು. ಇನ್ನು ಯಾವತ್ತೂ ನಾನು ನಿನ್ನನ್ನು ನೋಡಲು ಬರುವುದಿಲ್ಲ. ಆದರೆ ನೀನಿಲ್ಲದ ಕೊರಗು ನನ್ನನ್ನು ಅತಿಯಾಗಿ ಕಾಡುತ್ತಿದೆ. ದಯವಿಟ್ಟು ಒಮ್ಮೆ ನನ್ನನ್ನು ನೋಡಲು ಬರುವೆಯ? ನೀನು ನಿನ್ನ ಶಾಲೆಗೆ ಬರುವ ವಿಷಯ ಕೇಳಿ ಬಹಳ ಸಂತೋಷವಾಯಿತು. ನಾನು ನಿನ್ನ ಶಾಲೆಯ ಬಳಿ ಬರೋಣ ಎಂದುಕೊಂಡೆ ಆದರೆ ನನ್ನ ಈ ಒಂಟಿ ಕಣ್ಣಿನಿಂದ ಮತ್ತೆ ನಿನಗೆ ಬೇಸರ ಮಾಡುವುದು ಬೇಡ ಎಂದೆನಿಸಿತು. ನೀನು ಒಮ್ಮೆ ನನ್ನನ್ನು ಕೇಳಿದೆ ನಿನಗೇಕೆ ಒಂಟಿ ಕಣ್ಣು ಎಂದು ನೆನಪಿದೆಯ.. ನೀನು ಬಹಳ ಸಣ್ಣವನಿದ್ದಾಗ ಒಂದು ಅಪಘಾತದಲ್ಲಿ ನಿನ್ನ ಕಣ್ಣಿಗೆ ಬಹಳ ಪೆಟ್ಟು ಬಿದ್ದು ನಿನ್ನ ದೃಷ್ಟಿ ಹೊರತು ಹೋಯಿತು. ನಾನು ನಿನ್ನ ತಾಯಿಯಾಗಿ ನಿನ್ನನು ಆ ಅವಸ್ಥೆಯಲ್ಲಿ ನೋಡಲು ಆಗದೆ ನನ್ನ ಕಣ್ಣನ್ನು ನಿನಗೆ ಕೊಟ್ಟೆ. ನನ್ನ ಮಗ ನನ್ನ ಕಣ್ಣಿನಿಂದ ಪ್ರಪಂಚ ನೋಡುವಂತಾಯಿತು ಎಂದು ಬಹಳ ಹೆಮ್ಮೆ ಪಟ್ಟೆ. ನೀನು ಎಷ್ಟೇ ನನಗೆ ಬೈದರು ನನಗೆ ಬೇಸರವಾಗುತ್ತಿರಲಿಲ್ಲ. ಏಕೆಂದರೆ ನಿನಗೆ ನನ್ನ ಮೇಲೆ ಅಕ್ಕರೆ ಎಂದು ಭಾವಿಸಿದ್ದೆ. ನೀನು ನನ್ನ ಬಿಟ್ಟು ಹೋದಾಗಲು ಬೇಸರವಾಗಿರಲಿಲ್ಲ. ನೀನೆ ನನ್ನ ಪ್ರಪಂಚ ಎಂದು ಭಾವಿಸಿದ್ದೆ.
ಆದರೆ ನೀನು ನನ್ನನ್ನು ಯಾರು ಎಂದೆಯಲ್ಲ ಅಂದು ನನ್ನ ಮನಸ್ಸು ಒಡೆದು ಚೂರು ಚೂರಾಯಿತು.
ಪತ್ರ ಓದಿ ಮುಗಿಸಿದ ಶಂಕರನ ಕಣ್ಣುಗಳು ತೇವವಾಗಿದ್ದವು
Comments
ಉ: ಕರುಳಿನ ಕೂಗು (ಕಥೆ)
In reply to ಉ: ಕರುಳಿನ ಕೂಗು (ಕಥೆ) by kamath_kumble
ಉ: ಕರುಳಿನ ಕೂಗು (ಕಥೆ)
ಉ: ಕರುಳಿನ ಕೂಗು (ಕಥೆ)
In reply to ಉ: ಕರುಳಿನ ಕೂಗು (ಕಥೆ) by malathi shimoga
ಉ: ಕರುಳಿನ ಕೂಗು (ಕಥೆ)
ಉ: ಕರುಳಿನ ಕೂಗು (ಕಥೆ)
In reply to ಉ: ಕರುಳಿನ ಕೂಗು (ಕಥೆ) by gopaljsr
ಉ: ಕರುಳಿನ ಕೂಗು (ಕಥೆ)