ಬದಲಾಗುವ ಬಣ್ಣಗಳು

ಬದಲಾಗುವ ಬಣ್ಣಗಳು

ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ ಬದಲಿಸೋ ಗಿಡ ಮರಗಳ ಬಗ್ಗೆ ಹೇಳ್ತಿದೀನಿ ನಾನು. ಭೂಮಧ್ಯರೇಖೆ ಇಂದ ದೂರ ಹೋದಷ್ಟೂ, ಚಳಿಗಾಲದಲ್ಲಿ ಎಲೆ ಉದುರಿಸೋ ಮರಗಳು ಹೆಚ್ಚುತ್ತಾ ಹೋಗುತ್ತವೆ. ಎಲೆ ಉದುರಿಸೋ ಮೊದಲು ಇವು ಹಳದಿ ಕೆಂಪು ಕಂದುಗಳ ನೂರಾರು ಛಾಯೆಗಳನ್ನು ತಾಳಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಎಷ್ಟೋ ಬಾರಿ ಹೀಗೆ ಬದಲಾಗುವ ಬಣ್ಣಗಳನ್ನ ನೋಡೋದಕ್ಕೇ ಅಂತಲೇ ನೂರಾರು ಮೈಲಿ ಹೋಗಿದ್ದೂ ಇದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಎಲೆ ಉದುರಿಸುತ್ತಾ ನವಂಬರ್ ಹೊತ್ತಿಗೆ ಮರಗಳೆಲ್ಲ, ಪಾಪ, ಬೋಳಾಗಿ ನಿಂತು ಬಿಡುತ್ತವೆ. ಮತ್ತೆ ಮಾರ್ಚ್ ತಿಂಗಳಲ್ಲಿ ವಸಂತ ಬಂದ ಮೇಲೆಯೇ ಇವು ಚಿಗುರಬೇಕು. ನಾನು ಇರುವ ಕಡೆ ಈ ದೇಶದ ಬೇರೆಡೆಗಳಿಗಿಂತ ಚಳಿ ಕಡಿಮೆ. ಹಾಗಾಗಿ ಇಲ್ಲಿ ಎಲೆ ಉದುರಿಸದ ಸೂಚೀಪರ್ಣ (ಕೋನಿಫರ್) ಮರಗಳೇ ಹೆಚ್ಚಾದ್ದರಿಂದ, ಎಲೆ ಉದುರಿಸುವ ಮರಗಳ ವರ್ಣ ವೈಭವ ಕಡಿಮೆಯಾದರೂ ಇಲ್ಲ ಅಂತಿಲ್ಲ. ಅದರಲ್ಲೂ, ರಸ್ತೆ ಬದಿಯಲ್ಲಿ ನೆಟ್ಟ ಮರಗಳು ಮೂಲವಾಗಿ ಇನ್ನೂ ಚಳಿಯಿರುವ ಕಡೆಯಿಂದ ಬಂದ ಮರಗಳಾಗಿದ್ದರೆ (ಉದಾ: ಕೆನೇಡಿಯನ್ ಮೇಪಲ್), ಇಲ್ಲೂ ಒಳ್ಳೊಳ್ಳೆ ಬಣ್ಣಗಳು ಬರುವುದುಂಟು. ಆದರೆ ಇಲ್ಲಿ ಅದಕ್ಕೆ ಸುಮಾರು ಡಿಸೆಂಬರ್ ವರೆಗೂ ಕಾಯಬೇಕು. ಕಳೆದ ಕೆಲವು ದಲ್ಲಿ ಮನೆಯ ಬಳಿ, ಕಚೇರಿ ಬಳಿ ಕಂಡ ಒಂದಷ್ಟು ಬಣ್ಣಗಳನ್ನ ಮೊಬೈಲಿನ ಕ್ಯಾಮರದಲ್ಲಿ ಸೆರೆಹಿಡಿದು, ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಚೆನ್ನಾಗಿದ್ರೂ, ಇಲ್ದಿದ್ರೂ ಎರಡಕ್ಕೂ ಅದೇ ಹೊಣೆ :)


-ಹಂಸಾನಂದಿ

Rating
No votes yet

Comments