ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು

ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು

 


ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ ಹೆಚ್ಚುತ್ತಾ ಹೋಗುತ್ತೆ. ಅಷ್ಟೇ ಅಲ್ಲ ಅದು ನಮ್ಮ ನೆನಪಿನ ಖಜಾನೆಯಲಿ ಕೂಡುತ್ತಾ ಹೋಗುತ್ತೆ. ನನ್ನೀ  ಖಜಾನೆಯ ಇತ್ತೀಚೆಗೆ ಕೂಡಿದ್ದು ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್-ಸ್ಮಿತಾ ದಂಪತಿಗಳು, ದಟ್ಸ್ ಕನ್ನಡ ಸಂಪಾದಕ ಶ್ಯಾಮ್. ಇವರೆಲ್ಲರೂ ನವೆಂಬರ್ ೬ ಹಾಗೂ ೭ ರಂದು ಸಿಂಗಪುರದಲ್ಲಿ ಕರ್ನಾಟಕವೈಭವದ ಸಾಹಿತ್ಯ-ಸಂಸ್ಕೃತಿಯ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಅತಿಥೇಯರು.


ಜೋಗದ ಸಿರಿಯ ಬೆಳಕನ್ನು ನಾಡಿನಾದ್ಯಂತ ಬೆಳಗಿದ ನಿತ್ಯೋತ್ಸವದ ಕವಿ ಎಂದೇ ಹೆಸರಾದ ಫ್ರೊ. ನಿಸಾರ್ ಅವರು ತಮ್ಮ ಕವನಗಳ ಮೂಲಕ ಎಲ್ಲರಿಗೂ ಚಿರಪಚಿತರೇ. ಓದಿದವನೇ ಬಲ್ಲ ಅವರ ಕವನಗಳ ಸೊಗಡನ್ನು. ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ, ಕವನಗಳ ಬಗ್ಗೆ ನಾನರಿಯೆ. "ಅನಿಸುತಿದೆ ಯಾಕೋ ಇಂದು" ಮಾತ್ರ ಗೊತ್ತಿತ್ತು. ಸಂಪಾದಕ ಶ್ಯಾಮ್ ನನ್ನ ಬರಹಕ್ಕೆ ಪ್ರೋತ್ಸಾಹವನಿತ್ತವರು, ವರುಷಗಳಿಂದ ಪರಿಚಿತರು. ಪ್ರೊ. ನಿಸಾರ್, ಜಯಂತ್-ದಂಪತಿಗಳು ಹಾಗೂ ಶ್ಯಾಮ್ ಅವರೊಡನೆ ಕೆಲ ಸಮಯ  ಕಳೆವ ಸದವಕಾಶ ದೊರಕಿತು. "ಕನಸು ನನಸಾದಂತೆ" ಎಂದಾಯಿತು ನನ್ನ ಸ್ಥಿತಿ.


ಸಿಂಗಪುರದ ಸ್ವಚ್ಚತೆ, ವಾಹನ-ಸೌಕರ್ಯ, ಶಿಸ್ತು, ಹಸಿರಿನ ವನಸಿರಿ ಕಂಡು ಕೌತುಕಗೊಂಡರು ಪ್ರೊ.ನಿಸಾರ್. ಸೆಂತೋಸಾದಲ್ಲಿನ ಅಕ್ವೇರಿಯಂ‍ನಲ್ಲಿ ವಿಶಿಷ್ಟ ಜಲಚರ ಸಂಗ್ರಹಾಲಯ ಕಂಡು ಬೆರಗಾದರೆಲ್ಲರೂ, ಪ್ರೊ. ಫಾಸಿಲ್ಸ್‍ಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದರು. ಬರ್ಡ್‍ಪಾರ್ಕಿನಲಿ ವೈವಿಧ್ಯಮಯ ಪಕ್ಷಿಗಳ ಕಂಡು, ಅವುಗಳ ಕಲರವ, ಬಣ್ಣ, ಹಸಿರಿನ ನಿಸರ್ಗ ಪರಿಸರದಲಿ ಒಂದಾದರು. ಚಿಕ್ಕ ಚೊಕ್ಕದಾದ ನಾಡಿನಲಿ ಪ್ರವಾಸಿಗರಿಗೆ ಇರುವ ಸವಲತ್ತುಗಳನ್ನು ಕಂಡು ಬಹಳಷ್ಟು ಬಾರಿ "ನಮ್ಮೂರಲ್ಲೂ ಎಲ್ಲಾ ಇದೆ ಯಾಕೆ ಹೀಗೆ ಮಾಡಬಾರದು, ಇವರನ್ನು ನೋಡಿ ಕಲಿಯಬಾರದು, ಶ್ರೀಸಾಮಾನ್ಯನಿಗೆ ಸೌಲಭ್ಯಗಳನ್ನು ಕಲ್ಪಿಸಬಾರದು ಎಂದು ಹಲುಬಿದರು ಕೂಡ. ಪ್ರೊ.ನಿಸಾರರ ಎಪ್ಪತ್ತೈದರ ಹರೆಯದಲೂ-ಇಪ್ಪತ್ತೈದರ ಕುತೂಹಲ, ವಿಷಯ ಸಂಗ್ರಹಣೆ, ವಿಶ್ಲೇಷಣೆ, ಚೈತನ್ಯ ಕಣ್ಣೆದುರಿನಲಿ ಕಂಡಾಗ "ಬಿಡುವಿರದ ದುಡಿತದಲಿ ಬಲಿಯಾಗದಿರಲಿ ಬದುಕು" ಎಂದ ಮೇಷ್ಟ್ರ ಕಳಕಳಿ ಅರ್ಥವಾಯಿತು. ಈ ಕವಿ ಬದುಕನ್ನು ಪ್ರೀತಿಸಿ ಬದುಕೇ ಬರಹವಾದವರು ಎಂಬುದರ ಅರಿವಾಯಿತು. He is so full of Life ಈ ಉದ್ಗಾರ ನನ್ನಲ್ಲಿ ಹೊರಟಿದ್ದಂತೂ ಸತ್ಯ. ಕವನ, ಸಾಹಿತ್ಯ, ಜೀವನಗಳ ಬಗ್ಗೆ ನನ್ನ ಮನದಲಿ ಎದ್ದಿದ್ದ, ಏಳುತಿದ್ದ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ನಿಸಾರ್, ಜಯಂತ್-ದಂಪತಿಗಳು, ಶ್ಯಾಮ್ ಅವರೊಡನೆ ಕಳೆದ ಹೊತ್ತು. ಬಂದಿದ್ದ ಅತಿಥೇಯರೆಲ್ಲರೂ ಅವರವರ ಕ್ಷೇತ್ರದಲಿ ಹೆಸರು ಮಾಡಿದವರು, ಜನಪ್ರಿಯರು. ನಾವು ನಮ್ಮವರು ಎಂಬಂತಿರದೆ ಎಲ್ಲರೂ ನಮ್ಮವರು ಎಂಬ ಮನೋಭಾವ ಹೊಂದಿದವರು. ನಮ್ಮ ಹಾಗೂ ಅವರಲ್ಲಿನ ಸಮಾನಾಂತರ ಅಭಿರುಚಿ, ಸಾಹಿತ್ಯಾಸಕ್ತಿ, ಮಾಹಿತಿ, ಜೀವನದ ಅನುಭವಗಳ-ಆಗುಹೋಗುಗಳ ಹಂಚಿಕೆ, ಮನೋಭಾವ ನಮ್ಮೆಲ್ಲರನ್ನೂ ಆತ್ಮೀಯತೆಯ ಬಂಧನದಲಿ ಒಂದಾಗಿಸಿತು.


ನನ್ನ ನಿಸಾರ್ ಕವನಗಳ ನಂಟು: ೭೦ರ ದಶಕದಲಿ ಆಗತಾನೇ ಕ್ಯಾಸೆಟ್ ಕಾಲಿಟ್ಟಿತ್ತು. ಅನಂತ ವಾಣಿಯಲಿ ನಿತ್ಯೋತ್ಸವ ಮನೆ ಮಾತಾಗಿತ್ತು.  ಶಾಲಾ ದಿನಗಳಿಂದಲೂ ಕೆ.ಎಸ್.ನ. ನಿಸಾರ್ ಅವರ ಕವನಗಳು ಮನ ಮುಟ್ಟಿತ್ತು. ನನ್ನೊಂದಿಗೆ ಪ್ರೊ. ನಿಸಾರ್ ಅವರ ಕವನಗಳು ಎಂಬುದಕ್ಕೆ ಅವರ ನಿತ್ಯೋತ್ಸವ ಶಾಲೆಯ ನಿತ್ಯ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ" ಯಂತೆ, ಶಾಲೆಯ ಪ್ರತಿಯೊಂದು ಸಮಾರಂಭಗಳಲಿ ಖಾಯಂ. ಕಾಲೇಜಿನ ಕಡೆಯ ಬೆಂಚಿನಲಿ ಕೂತು ಕಾದಂಬರಿ ಓದುತ್ತಾ,  ಮೇಷ್ಟ್ರು ನನ್ನತ್ತ ನೋಡಿದಾಗ ಅರ್ಥವಾದಂತೆ ತಲೆ ಆಡಿಸಿದ್ರೆ ಏನ್ರೀ ಎಲ್ಲಕ್ಕೂ ಕುರಿತರ ತಲೆ ಆಡಿಸುತ್ತೀರಲ್ಲಾ ಹೋಗ್ಲಿ ನಿಸಾರ್ ಅವರ ಕುರಿಗಳು ಸಾರ್ ಕುರಿಗಳು ಓದಿ ಎಂದು ಅದೆಷ್ಟು ಬಾರಿ ಉಗಿಸಿಕೊಂಡಿದ್ದೇನೋ ಲೆಕ್ಕವಿಲ್ಲ. ಇದೀಗ ತಲೆ ಆಡಿಸುವುದು ಅಭ್ಯಾಸ ಬಲ ಆಗಿಹೋಗಿದೆ. ಖಂಡಿತವಾಗಿ ಕನಸಿನಲ್ಲೂ ಎಣಿಸಿರಲಿಲ್ಲ  "ಕುರಿಗಳು ಸಾರ್" ರಚಿಸಿದ ಕವಿಯೊಡನೆ ನಾಲ್ಕಾರು ಮಾತು ಆಡುವೆನೆಂದು.


ಯೌವನದಲಿ, ದಾಂಪತ್ಯದಲಿ ಅದೆಷ್ಟೋ ಬಾರಿ ನನ್ನವ ಊರಿಗೆ ಹೋದಾಗ "ಮತ್ತದೇ ಸಂಜೆ....ನೀನಿಲ್ಲದೆ ಬಿಮ್ಮೆನುತಿದೆ ರಮ್ಯೋದ್ಯಾನ" ಅನುಭವ ಆಗುವುದಂತೂ ಸತ್ಯ.  ಈಗಂತೂ ಬಿಡಿ, ನಾವು ಕೆಲವೊಂದು ಆಚಾರ-ವಿಚಾರಗಳನ್ನು ಬಿಡಲಾಗದೆ, ಹೊಸದನ್ನು ರ‍ೂಢಿ ಮಾಡಿಕೊಳ್ಳಲಾಗದೆ " ಅಲ್ಲೂ-ಇಲ್ಲ-ಇಲ್ಲೂ ಸಲ್ಲ ಈ ಎಡಬಿಡಂಗಿ" ಆದಾಗ ನಿಸಾರ್ ಅವರ ಅಮ್ಮ, ಆಚಾರ ಮತ್ತು ನಾನು" ನನ್ನಂಥವರಿಗಾಗೇ ಬರೆದದ್ದೇನೋ ಎನಿಸುವುದು. "ರಾಮನ್ ಸತ್ತ ಸುದ್ದಿ"ಯಲ್ಲಿನ ನೋವು ಕಣ್ಣೀರು ತರಿಸಿತ್ತು ಕೂಡ. ನನ್ನೀ ಅನುಭವಗಳು ನಿಮ್ಮಲ್ಲೂ ಆಗಿರಬಹುದು.


ಏಕೆಂದರೆ ಕವಿಯೊಬ್ಬ ತನ್ನಲ್ಲಿರುವ ಭಾವನೆಗಳನ್ನು ಕಾವ್ಯದ ಮೂಲಕ ಹೊರಗೆಡವುತ್ತಾನೆ. ಆದರೆ ಈ ಕಾವ್ಯ ತಲುಪುವುದು ಓದುವುದರಲ್ಲಿ ಆಸಕ್ತಿಯಿರುವ ಕೆಲವೇ ಕೆಲವು ಮಂದಿಗೆ ಮಾತ್ರ. ಶ್ರೀಯುತರಾದ ಬೇಂದ್ರೆ, ಕುವೆಂಪು, ಅಡಿಗ, ಕೆ.ಎಸ್.ನ, ನಿಸಾರ್, ಲಕ್ಷ್ಮೀನಾರಾಯಣ ಭಟ್ಟರುಗಳ ಬಹುತೇಕ ಕವನಗಳು ಹತ್ತಿರವಾಗುವುದು ನಮ್ಮ ಭಾವನೆಗಳೊಡನೆ ನೇರ ಸ್ಪಂದಿಸುವುದು. ಅದಕ್ಕಾಗೇ ಅನಿಸುವುದು ಕವನಗಳು ನಮ್ಮೊಟ್ಟಿಗೇ ಬೆಳೆಯುತ್ತಾ ನಮ್ಮ ಭಾವನೆಗಳಲಿ ಒಂದಾಗಿ ನಮಗಾಗೇ ಬರೆದಂತೆ ಅನಿಸುತ್ತದೆ. ಬಹಳಷ್ಟು ಕವನಗಳು ಮನದಾಳದಲಿ ನಿಲ್ಲುವುದು.


ಪ್ರೊ. ಅವರನು ಬೀಳ್ಕೊಡುವಾಗ ನೆನಪಾದದ್ದು ಪ್ರೊ. ನಿಸಾರೇ ಬರೆದ ಈ ಕವನದ ಸಾಲುಗಳು "ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ, ಶ್ರೀಗಂಧ ಬೆಳೆವಂಥ ನಾಡಿನಲ್ಲಿ; ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ ಸಿರಿವಂತ ನೆಲದೊಡಲ ಹಾಡಿನಲ್ಲಿ".


 

Comments