ಬಾಳೊಂದು ಭಾವಗೀತೆ....

ಬಾಳೊಂದು ಭಾವಗೀತೆ....

ಬೀಸಿ ಬಂದ ತಂಗಾಳಿಯಲ್ಲಿ ಎಲ್ಲ ಮರೆಯಲು ಕುಳಿತೆ
ಮರುಕ್ಷಣ ನಾಳೆಯ ನೆನಪಾಗಿ ಆ ತಂಪಿನಲ್ಲೂ ಬೆವೆತೆ
ಮಾತು ಸಲ್ಲದಾದಾಗ ತೊಟ್ಟಿಕ್ಕುತ್ತಿತ್ತು  ಪುಟಕ್ಕೊಂದು ಕವಿತೆ
ಸುರಿವ ಮಳೆ ನಿಂತ ಮೇಲೆ ಮರದೆಲೆಯ ಹನಿ ಬೀಳುವಂತೆ !


ಮುಷ್ಟಿಯಗಲದ ಹೃದಯಕ್ಕೂ ಎಷ್ಟೆಲ್ಲಾ ನೋವು ,ಆತಂಕ
ಮುಗಿದು ಹೋದ ಅಧ್ಯಾಯಗಳನ್ನೇ ಮತ್ಯಾಕೋ ಓದುವ ತವಕ
ಜಾತ್ರೆ ಮುಗಿಸಿ ಹೋದವರು ಬಿಟ್ಟ ವಸ್ತುಗಳು ನನಗಷ್ಟೇ ಮುಡಿಪು
ನೆನಪಗುವುದ್ಯಾಕೆ ಆ ಹಳೆಯ ನೆನಪು.. ನೆನಪು....ಮತ್ತೆ ನೆನಪು?


 ದೂರದಲ್ಲಿನ ಹೂವ ಬಳಿಯಲ್ಲಿರುವ ಅಮ್ಮನ ಅರಸುತ್ತಾ
ಇಲ್ಲಿ ಮರಿ ಚಿಟ್ಟೆ ತಿರುಗುತ್ತಿದೆ ಬರೀ ಎಲೆಯ ಸುತ್ತಾ
ಮರಳಿ ಗೂಡು ಸೇರಲು ಹೋದ ಮೇಲೆ ಬೆಳ್ಳಕ್ಕಿಗಳು ತೇಲಿ
ಕ್ಷಣದ ಚಿತ್ತಾರ ಮುಗಿದು ನೀಲಿ ಬಾನೀಗ ಖಾಲಿ ಖಾಲಿ!


ಕತ್ತಲಾಯ್ತೆಂದು ಅನಿವಾರ್ಯವಾಗಿ ನಡೆವಾಗ ಮತ್ತೆ ಮನೆಯ ಕಡೆಗೆ 
ಆಗೆಲ್ಲಾ ತಲೆಯೆತ್ತಿ ನಿಂತ ಹುಲ್ಲು ಈಗ ಪುನಃ ನನ್ನ ಕಾಲ ಕೆಳಗೆ
ಇಲ್ಲಿ ಕೋಣೆಯಲ್ಲಿ ಕರಗುತ್ತಿರುವ ಮೊಂಬತ್ತಿಯ ಜೊತೆ ನಂಗೆ ಮಾತೇನು
ಕೊನೆಗೆ ಉಳಿದಿದ್ದು ನಾನು ಮತ್ತು ಅಕ್ವೇರಿಯಂನ ಒಂಟಿ ಮೀನು!


 

Rating
No votes yet

Comments