ಬೇಕಾಗಿದೆ ಸಮಚಿತ್ತದ ವೈದ್ಯ

ಬೇಕಾಗಿದೆ ಸಮಚಿತ್ತದ ವೈದ್ಯ

ರಾಜೀವ್ ದೀಕ್ಷಿತರ ಬಗ್ಗೆ ಶುರುವಾದ ಬರಹವೊಂದರ ಚರ್ಚೆ ವೈದ್ಯ ಪಧ್ಧತಿಗಳತ್ತ ತಿರುಗಿತು. ಇದರಲ್ಲಿ ವೃತ್ತಿಯಿಂದ ವೈದ್ಯರಾದ ಶ್ರೀಯುತ ಶ್ರೀನಿವಾಸ ಕಕ್ಕಿಲ್ಲಾಯ ಅವರು ನನ್ನ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತಾ ಆಧುನಿಕ ವೈದ್ಯ ಪಧ್ಧತಿ ಮಾತ್ರ ವೈಜ್ನಾನಿಕ ಎಂತಲೂ ಉಳಿದ ಪಧ್ಧತಿಗಳಿಗೆ ಇರುವ ವೈಜ್ನಾನಿಕ ಪುರಾವೆ ತಮಗೆ ಸಿಕ್ಕಿಲ್ಲ ಎಂಬ ಅರ್ಥ ಬರುವ ಮಾತುಗಳನ್ನಾಡಿದ್ದಾರೆ. ಈ ವಾದ ವಿವಾದಗಳನ್ನೆಲ್ಲಾ ಬದಿಗಿಟ್ಟು, ಒಬ್ಬ ರೋಗಿಯ ದೃಷ್ಟಿಯಲ್ಲಿ ಎರಡು ಪ್ರಮುಖ ವೈದ್ಯ ಪಧ್ಧತಿಗಳ ತುಲನೆ ಮಾಡುವ ಒಂದು ಸಣ್ಣ ಪ್ರಯತ್ನ. ಮೊದಲನೆಯದ್ದು ಆಧುನಿಕ ವೈದ್ಯ ಪಧ್ಧತಿ, ಎರಡನೆಯದು ಆಯುರ್ವೇದಿಕ್, ನ್ಯಾಚುರೋಪತಿ, ಯೋಗ ಮತ್ತು ಪ್ರಾಣಾಯಾಮಗಳನ್ನೊಳಗೊಂಡ ಪಾರಂಪರಿಕ ಚಿಕಿತ್ಸಾ ಪಧ್ಧತಿ. ಇಲ್ಲಿ ರೇಖಿ ಆಕ್ಯುಪಂಕ್ಚರ್ ಇತ್ಯಾದಿಗಳನ್ನೆಲ್ಲ ಸೇರಿಸಿಲ್ಲ ಯಾಕೆಂದರೆ ಅವುಗಳ ಬಗ್ಗೆ ನನಗೆ ಕಿಂಚಿತ್ತೂ ತಿಳಿಯದು.

 

(ಯಾವ ಪಾಯಿಂಟುಗಳೂ ಆದ್ಯತೆ ಮೇರೆಗೆ ಬರೆದಿದ್ದು ಅಲ್ಲ ) 

 

ಮೊದಲಿಗೆ ಆಧುನಿಕ. ನನಗೆ ಕಂಡಂತೆ ಆಧುನಿಕ ಪಧ್ಧತಿಗಳ ಗುಣಗಳು (Benefits) :

೧. ಆಧುನಿಕ ವೈದ್ಯ ಜೊತೆಗೆ ಬೆಳೆದು ಬಂದ ಅಗಾಧ ಶರೀರ ರಚನೆ ಜ್ನಾನ ಮತ್ತು ಅದರ ಮೂಲಕ ರೋಗ ಪತ್ತೆ ವಿಧಾನಗಳು (ರಕ್ತ ಪರೀಕ್ಷೆ, ಎಂಡೋಸ್ಕೊಪಿ ಇತ್ಯಾದಿ)

೨. ಆಧುನಿಕ ವೈದ್ಯದ ಸಂಶೋಧನೆಗಳು ಸರಿಯಾಗಿ ಪ್ರಮಾಣೀಕೃತ ಹಾಗೂ ಗ್ರಂಥೀಕೃತವಾಗಿವೆ. ಆದ್ದರಿಂದ ಪ್ರಪಂಚದ ಎಲ್ಲಾ ಕಡೆ ಹೆಚ್ಚು ಕಮ್ಮಿ ಒಂದೇ ರೀತಿಯ ಬಳಕೆ ಸಾಧ್ಯವಾಗಿದೆ. 

೩. ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಗಳು ಆಧುನಿಕ ವೈದ್ಯ ಪಧ್ಧತಿಯ ಕೊಡುಗೆಯೇ. ಶುಶ್ರುತ ಆ ಕಾಲದಲ್ಲೇ ಶಸ್ತ್ರ ಚಿಕಿತ್ಸೆ ಮಾಡಿದ್ದನೆಂದು ಉಲ್ಲೇಖಗಳಿದ್ದರೂ ಅವು ಇಂದಿನವಕ್ಕೆ ಹೋಲಿಸಿದಲ್ಲಿ ತೀರಾ ಸರಳವಾದವುಗಳು. ಹಾಗೂ ಎಲ್ಲರಿಗೂ ಲಭ್ಯವಿದ್ದಂತಹವಲ್ಲ.

೪. ತತ್ ಕ್ಷಣದ ಪರಿಣಾಮ ಬೀರುವ ಔಷಧಗಳು. ಇವು ಹೆಚ್ಚಾಗಿ Symptoms ಅನ್ನು ನಿವಾರಿಸುವಂಥವು. ಉದಾ ಅತಿಯಾದ ಜ್ವರ ಇಳಿಸಲು ಪಾರಾಸಿಟಮೊಲ್, ಮಿತಿಮೀರಿದ ಉರಿಯೂತ ಇಳಿಸಲು ಆಂಟಿ ಇನ್ಫ್ಲಾಮೇಟರಿ ಔಶಧಿಗಳು, ಉಬ್ಬಸ ಇತ್ಯಾದಿಗಳನ್ನು ಹತೋಟಿಗೆ ತರಲು ಸ್ಟಿರಾಯ್ಡ್ ಗಳು ಮತ್ತು ಸಾಮಾನ್ಯ ನೋವಿಗೆ ನೋವು ನಿವಾರಕಗಳು, ಅರಿವಳಿಕೆಗಳು ಇತ್ಯಾದಿ. ಇವೆಲ್ಲ ಬೇರಾವುದೇ ಪಧ್ಧತಿಗಳಲ್ಲಿ ಇದ್ದಂತಿಲ್ಲ.

೫. ಅಸಾಮಾನ್ಯ ರೋಗಗಳಿಗೆ ಮದ್ದು ಕಂಡುಹಿಡಿದ ಕೀರ್ತಿಯೂ ಇದಕ್ಕೆ ಸಲ್ಲುತ್ತದೆ. ಉದಾ ಮಲೇರಿಯಾ, ಟೆಟೆನಸ್ ಇತ್ಯಾದಿ. ಆದರೆ ಕೆಲವೊಂದು ರೋಗಗಳಿಗೆ ಪರಿಣಾಮಕಾರಿ ಔಷಧಿಗಳು ಇನ್ನೂ ಲಭ್ಯವಿಲ್ಲ. ಇದಾ ಕ್ಯಾನ್ಸರ್ ಇತ್ಯಾದಿ.

 

ಇನ್ನು ಅವಗುಣಗಳು :

೧. ಕೆಲವು ಸಾಮಾನ್ಯ ರೋಗಗಳನ್ನು ಗುಣಪಡಿಸಿಕೊಳ್ಳುವ ದೇಹದ ಶಕ್ತಿಯನ್ನು ಆಧುನಿಕ ಪಧ್ಧತಿ ಗುರುತಿಸುವುದಿಲ್ಲ. ಅಥವಾ ಗೊತ್ತಿದ್ದೂ ಅದನ್ನು ಪ್ರೋತ್ಸಾಹಿಸುವುದಿಲ್ಲ. ಏನಿದ್ದರೂ ಔಷಧ ಕೊಡಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂತಾರಲ್ಲ, ಹಾಗೆ.

೨. ಆಧುನಿಕ ವೈದ್ಯ ತುಟ್ಟಿ. ಸಣ್ಣ ಪುಟ್ಟ ಔಷಧಿಗಳೂ ಕೂಡ ಕಾರ್ಖಾನೆಯಲ್ಲೇ ತಯಾರಾಗಬೇಕು. ಆಗ ಇಲ್ಲಿ ಲಾಭ ನಷ್ಟದ ಪ್ರಶ್ನೆ ನುಸುಳಿಕೊಳ್ಳುತ್ತದೆ.

೩. ಆಧುನಿಕ ವೈದ್ಯ ಪಧ್ಧತಿಯಲ್ಲಿ ವೈದ್ಯಕೀಯ ಜ್ನಾನ ವೈದ್ಯನಲ್ಲೇ ಉಳಿದುಕೊಳ್ಳುತ್ತದೆ. ರೋಗಿಗೆ ತಾನು ಏನು ತಿನ್ನುತ್ತಿದ್ದೇನೆಂಬುದೇ ಗೊತ್ತಿರುವುದಿಲ್ಲ. ರೋಗಿ ತಿಳಿಯಬಯಸಿದರೂ ಅದು ಆತನಿಗೆ ಮೀರಿದ್ದಾಗಿರುತ್ತದೆ. ಇದು ತೀವ್ರತರ ರೋಗಗಳ ವಿಷಯದಲ್ಲಿ ಒಳ್ಳೆಯದೇ. ಯಾಕೆಂದರೆ ರೋಗಿ ತಾನು ಅರೆಬರೆ ತಿಳಿಯುವುದಕ್ಕಿಂತ ವೈದ್ಯ ಹೇಳಿದಂತೆ ಕೇಳುವುದೇ ವಾಸಿ. ಆದರೆ ಇದರಿಂದ ಸಾಮಾನ್ಯ ಸಮಸ್ಯೆಗಳಿಗೂ ವೈದ್ಯರನ್ನೇ ಅವಲಂಬಿಸಬೇಕಾಗುತ್ತದೆ ಎನ್ನುವುದೂ ನಿಜ.

೪. ರೋಗ ಗುಣವಾಗುವುದೇನಿದ್ದರೂ ರೋಗಿಯ ಪ್ರಯತ್ನದಿಂದಲೇ, ಔಶಧಿಗಳೇನಿದ್ದರೂ ರೋಗಿಗೆ ಸಹಾಯ ಮಾಡಲು ಎಂಬುದು ಆಧುನಿಕ ವೈದ್ಯಕ್ಕೆ ಗೊತ್ತಿಲ್ಲ. ಎಲ್ಲಾ ತನ್ನ ಔಷಧಿಯಿಂದಲೇ ಗುಣವಾಗುತ್ತದೆ/ಗುಣವಾಗಬೇಕು ಎಂಬುದು ಆಧುನಿಕ ವೈದ್ಯನ ಆಗ್ರಹ. ಅದಕ್ಕೇ ಎಷ್ಟೋ ಬಾರಿ ಔಷಧಿ ದೇಹಕ್ಕೆ ಒಗ್ಗುವುದಿಲ್ಲ ಅಥವಾ ಗುಣವಾದ ರೋಗ ಮತ್ತೆ ಮರುಕಳಿಸುತ್ತದೆ. ಯಾಕೆಂದರೆ ರೋಗಕ್ಕೆ ಕಾರಣವಾದ ಅಂಶಗಳನ್ನು ನಿವಾರಿಸಲು ರೋಗಿಗೆ ವೈದ್ಯ ಮನದಟ್ಟು ಮಾಡಿಲ್ಲ ಅದಕ್ಕೆ. 

೬. ಸೈಡ್ ಇಫೆಕ್ಟ್ಸ್ ಎಲ್ಲರಿಗೂ ತಿಳಿಸಿರುವ ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಇತರ ಪಧ್ಧತಿಗಳಲ್ಲಿ ಅಷ್ಟಾಗಿ ಇಲ್ಲ. (ಇಲ್ಲವೇ ಇಲ್ಲ ಎಂದು ಹೇಳಲಾಗದು)

 

 

ಇನ್ನು ಬದಲಿ ವೈದ್ಯಪಧ್ಧತಿಗಳದ್ದು ಗುಣಗಳು :

೧. ರೋಗ ಗುಣಪಡಿಸುವುದರಲ್ಲಿ ಆಧುನಿಕ ಪಧ್ಧತಿಗಿಂತ ಹೆಚ್ಚು ಅನುಭವ (ಸಾವಿರಾರು ವರ್ಷಗಳ). ಲೆಬೋರೇಟರಿಯಲ್ಲಿ ಮಾಡುವ ಕೃತಕ ಪರೀಕ್ಷೆಗಳಿಗಿಂತ ನಿಜ ಜೀವನದ ಅನುಭವವೇ ಇಲ್ಲಿ ಮೇಲುಗೈ (ಅದಕ್ಕೇ ಸೈಡ್ ಎಫೆಕ್ಟ್ಸ್ ಕಮ್ಮಿ ಇರಬಹುದೋ ಏನೋ)

೩. ಅನುಭವಜನ್ಯ ತತ್ವಗಳಾದ ತ್ರಿದೋಶಗಳು, ರಕ್ತಶುಧ್ಧಿ ಮುಂತಾದವುಗಳಿಂದ ರೋಗದ ಸಂಪೂರ್ಣ ಶಮನ ಸಾಧ್ಯವಾಗುತ್ತದೆ. ರೋಗ ಮರುಕಳಿಸುವುದಿಲ್ಲ.

೪. ಕ್ಲಿಷ್ಟಕರವಾದ Symptoms ಇರುವ ಸಮಸ್ಯೆಗಳಿಗೆ ಸರಳ ವೈದ್ಯ ಲಭ್ಯವಿದೆ. ಹೆಚ್ಚಿನ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. (ನನ್ನ ತಾಯಿಯವರಿಗೆ ಆಯುರ್ವೇದ ಔಷಧಿ ಮೂಲಕ ಗರ್ಭಕೋಶದ ಕಲ್ಲಿನ ಸಮಸ್ಯೆ ಪರಿಹಾರವಾಗಿತ್ತು. ಶಸ್ತ್ರಚಿಕಿತ್ಸೆಯ ಅಗತ್ಯವೇ ಬೀಳಲಿಲ್ಲ)

೫. ಸಣ್ಣ ಪುಟ್ಟ ಸಮಸ್ಯೆಗಳಿಗೆ (ಜ್ವರ, ಶೀತ ಇತ್ಯಾದಿ) ಮನೆಮದ್ದು ಲಭ್ಯ. ಧನಪಿಶಾಚಿ ಔಷಧಿ ಕಂಪೆನಿಗಳ ಹಂಗಿನ ಅಗತ್ಯವಿಲ್ಲ (ಕಂಪೆನಿಗಳು ಯಾವ ಔಷಧಿ ತಯಾರಿಸಿದರೂ - ಅಲೋಪಥಿ ಇರಲಿ ಅಥವಾ ಆಯುರ್ವೇದಿಕ್ - ಅವು ಧನಪಿಶಾಚಿಗಳೇ)

೬. ಪರ್ಯಾಯ ವೈದ್ಯ ಪಧ್ಧತಿಗಳು ಒಂದು ಕ್ರಮಬಧ್ಧ ಜೀವನವನ್ನು ನಡೆಸಲು ಆಗ್ರಹಿಸುತ್ತವೆ. ಉದಾ ಆಹಾರ ಪಥ್ಯಗಳು. ಬೇಕಾಬಿಟ್ಟಿಯಾಗಿ ಬದುಕಿ ನಂತರ ಅದರಿಂದುಂಟಾದ ಸಮಸ್ಯೆಗಳನ್ನು ನಿವಾರಿಸುವುದು ಇವುಗಳ ಫಿಲಾಸಫಿಯಲ್ಲಿ ಇಲ್ಲ.

 

ಬದಲಿ ಚಿಕಿತ್ಸಾ ಪಧ್ಧತಿಯ ಅವಗುಣಗಳು :

೧. ಅನುಭವಕ್ಕಿಂತ ಎಲ್ಲಕ್ಕೂ ಸಾಕ್ಷಿ ಕೇಳುವ ಆಧುನಿಕ ಮನೋಭಾವದವರಿಗೆ ಇಲ್ಲಿ ಕೆಲವು ವಿಷಯಗಳಿಗೆ ಸಾಕ್ಷಿ ಸಿಕ್ಕುವುದಿಲ್ಲ. ಉದಾಹರಣೆಗೆ ವಾತ ಪಿಥ್ಥ ಕಫ ಗಳನ್ನು ಲೆಬೋರೇಟರಿಯಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲ.

೨. ಬದಲಿ ಚಿಕಿತ್ಸಾ ಪಧ್ಧತಿಗಳ ಬಗ್ಗೆ ಹೆಚ್ಚಿನ Documentation ಇಲ್ಲ. ಇದರಿಂದ ಎಲ್ಲಾ ಕಡೆ ಒಂದೇ ರೀತಿಯ ಪರಿಹಾರಗಳಿಲ್ಲ. (ಒಂದು ರೀತಿಯಿಂದ ಇದು ಒಳ್ಳೆ ಗುಣವೂ ಹೌದು. Diversity ಅನ್ನುವುದು ಪ್ರಕೃತಿಯ ಗುಣ. ಎಲ್ಲವೂ ಲೆಬೋರೇಟರಿಯಲ್ಲಿ ಇದ್ದಂತೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಆಯಾಯಾ ಪ್ರದೇಶದಲ್ಲಿ ಪ್ರಕೃತಿಗನುಗುಣವಾಗಿ ಈ ವೈದ್ಯ ಪಧ್ಧತಿಗಳು ಬೆಳೆದಿವೆ).

೩. ಬದಲಿ ವೈದ್ಯ ಪಧ್ಧತಿಗಳನ್ನು ಅನುಸರಿಸಲು ಕಷ್ಟ. ಬರೇ ಒಂದು ಮಾತ್ರೆ ನುಂಗಿದರೆ ಸಮಸ್ಯೆ ನೀಗಿಸುವುದಿಲ್ಲ ಇವು. ನಾಲಗೆ ಚಪಲಕ್ಕೆ ತಡೆ, ಶಿಸ್ತುಬಧ್ಧ ಜೀವನ ಕ್ರಮ ಇವನ್ನೆಲ್ಲ ಕೇಳುತ್ತದೆ. ಸ್ವೇಚ್ಛಾಚಾರಿಗಳಿಗೆ ಇದು ಒಗ್ಗದು. 

೪. ಹಿಂದಿನ ಕಾಲದಲ್ಲಿ ಅಷ್ಟಾಗಿ ಕಂಡುಬರದ ರೋಗಗಳು ಇಂದಿನ ಜೀವನದಲ್ಲಿ ಸಾಮಾನ್ಯವಾಗಿವೆ. ಇವುಗಳಿಗೆ ಒಳ್ಳೆಯ ವೈದ್ಯ ಸುಲಭದಲ್ಲಿ ಲಭ್ಯವಿಲ್ಲ. ಉದಾ ಹೃದಯದ ತೊಂದರೆಗಳು, ಕ್ಯಾನ್ಸರ್ ಇತ್ಯಾದಿ. ಇವುಗಳೆಲ್ಲ ಮೊದಲು ಇರಲೇ ಇಲ್ಲವೆಂದಲ್ಲ. ಇದ್ದಿದ್ದರೂ ಕಡಿಮೆ ಸಂಖ್ಯೆಯಲ್ಲಿದ್ದಿರಬಹುದು ಹಾಗೂ ಅಂತಹ ಅಸಹಜ ಸಾವುಗಳು ಗಮನಕ್ಕೆ ಬರದೆ ಹೋಗಿರಬಹುದು. ಆದರಿಂದ ಅವುಗಳಿಗೆ ಸರಿಯಾದ ಚಿಕಿತ್ಸೆಗಳು ಲಭ್ಯವಿಲ್ಲ. (ಈ ರೋಗಗಳಲ್ಲಿ ಹೆಚ್ಚಿನವು ಆಧುನಿಕ ಜೀವನ ಶೈಲಿಯಿಂದ ಬಂದವು ಎಂಬುದು ಬೇರೆ ಮಾತು)

 

 

ಇನ್ನು ಇವೆರಡಕ್ಕೂ ಸಂಬಂಧಿಸದ, ಆದರೆ ಈಗಿನ ವೈದ್ಯಕೀಯ ವ್ಯವಸ್ಥೆಯಲ್ಲಿ, ಅದೂ ಭಾರತದಲ್ಲಿರುವ ಕೆಲವು ಸಮಸ್ಯೆಗಳು :

೧. ಢೋಂಗಿ ವೈದ್ಯರುಗಳನ್ನು ಗುರುತಿಸುವ ವ್ಯವಸ್ಥೆಗಳು ಇಲ್ಲಿ ಸರಿಯಾಗಿ ಅನುಷ್ಟಾನ ಆಗಿಲ್ಲ. ಆಧುನಿಕ ಮತ್ತು ಪರ್ಯಾಯ ಎರಡೂ ಪಧ್ಧತಿಗಳಲ್ಲೂ ಢೋಂಗಿ ವೈದ್ಯರಿದ್ದಾರೆ ಎಂಬುದನ್ನು ಗಮನಿಸಬೇಕು. 

೨. ಔಷಧೀಯ ಕಂಪೆನಿಗಳು ತಮ್ಮ ಲಾಭಕ್ಕಾಗಿ ನಡೆಸುವ ಕುತಂತ್ರಗಳು (ಕಳಪೆ ಔಷಧಗಳು), ಮತ್ತು ಸುಳ್ಳು ಜಾಹೀರಾತುಗಳು (ಐ-ಪಿಲ್ ಜಾಹೀರಾತು ನೆನಪಿದೆಯಾ) ಇವುಗಳಿಗೆ ಲಗಾಮಿಲ್ಲ.

೩. ವೈದ್ಯರುಗಳು ದುಡ್ಡಿನ ದಾಸರಾಗಿದ್ದಾರೆ. ಧನಪಿಶಾಚಿಗಳಾಗಿದ್ದಾರೆ. ಅನಗತ್ಯ ಪರೀಕ್ಷೆಗಳನ್ನು ನಡೆಸುವುದು, ಬೇರೆ ಔಷಧಿಗಳು ಲಭ್ಯವಿದ್ದೂ ದುಬಾರಿ ಔಶಧವನ್ನೇ ಕೊಡುವುದು, ಸಹಜ ಹೆರಿಗೆ ಸಾಧ್ಯವಿದ್ದೂ ಸಿಸೇರಿಯನ್ ಮಾಡಿಸುವುದು ಇತ್ಯಾದಿ.

 

 

ಈ ಬರಹದ ಉದ್ದೇಶ ವೈದ್ಯ ಪಧ್ಧತಿಗಳ ಬಗ್ಗೆ ನನ್ನ ಈವರೆಗಿನ ತಿಳುವಳಿಕೆಯನ್ನು ದಾಖಲಿಸುವುದು ಅಷ್ಟೆ. ರಾಜೀವ್ ದೀಕ್ಷಿತರ ಚರ್ಚೆಯಲ್ಲಿರುವ ಹೇಸಿಗೆಯನ್ನು ಇಲ್ಲಿ ತರುವ ಉದ್ದೇಶವಲ್ಲ. ಈ ಮೇಲಿನ ಅಂಶಗಳಲ್ಲಿ ತಪ್ಪಿದ್ದರೆ ದಯವಿಟ್ಟು ತಿಳಿಸಿ.

 

ಕೊನೆಯದಾಗಿ ಒಂದು ಮಾತು - ವೈದ್ಯ ಪಧ್ಧತಿ ಮಾನವನ ಬೌಧ್ಧಿಕ ವಿಕಾಸದ ಒಂದು ಅಂಗ. ಇಲ್ಲಿ ಯಾವುದೂ ಅಂತಿಮವಲ್ಲ. ಹಿಂದಿನ ಜ್ನಾನವೊಂದು ಈಗ ಇತಿಹಾಸದ ಪದರಗಳಲ್ಲಿ ಮುಚ್ಚಿಹೋಗಿರುವುದನ್ನು ಅಲ್ಲಗಳೆಯಲಾಗದು. ಸಾಕ್ಷಿ ಇಲ್ಲವೆಂದ ಮಾತ್ರಕ್ಕೆ ಅದನ್ನು ಅಲ್ಲಗಳೆಯುವವರು ಪ್ರಗತಿವಾದಿಗಳಾಗದೆ ವಿತಂಡವಾದಿಗಳೆನಿಸಿಕೊಳ್ಳುತ್ತಾರೆ. ಹಾಗೆಯೇ ಈ ವಿಕಾಸದ ಮುಂದಿನ ಹಂತದಲ್ಲಿ ಈ ಮೊದಲು ತಿಳಿದಿರದ ಹೊಸ ವಿಧಾನಗಳನ್ನು ಕಂಡುಹಿಡಿಯಬಹುದು/ಹಿಡಿದಿರಬಹುದು. ಇದನ್ನು ಒಪ್ಪದವರು ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವವರು ಅಂಧಕಾರದಲ್ಲಿ ಮುಳುಗುತ್ತಾರೆ. ಈ ಎರಡೂ ಪಂಗಡಗಳಲ್ಲಿ ಆದಷ್ಟು ಕಮ್ಮಿ ಜನ ಇದ್ದರೆ ಎಲ್ಲರಿಗೂ ಒಳ್ಳೆಯದು.

Rating
No votes yet

Comments