ತುಕ್ರ ಬೆಂಗಳೂರಿಗೆ ಹೋದದ್ದು..
ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್ ತುಂಡಾಗಿರುವ ಟೈಟಾನ್ ಕಂಪನಿಯ ವಾಚ್ ತೆರೆದು ಗಂಟೆ ನೋಡಿಕೊಂಡ. ಇನ್ನೂ ಆರೂವರೆಯಷ್ಟೇ. ಏಳುವರೆಗೆ ಮೆಜೆಸ್ಟಿಕ್ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು. ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ. ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು. `ಸಾಬ್ ಬೀಡಿ’ ಅಂತ ಮುದುಕನೊಬ್ಬ ಇವನ ಪಕ್ಕ ಕುಳಿತುಕೊಂಡಾಗ ಅವನಿಗೂ ಒಂದು ತೆಗೆದುಕೊಟ್ಟ. ಆತ ಸಹ ಬಾಗಿಲ ಪಕ್ಕದಲ್ಲಿ ಇವನಿಗೆ ಒರಗಿ ಕುಳಿತ. ಸ್ವಲ್ಪ ಸಮಯವಾದಗ ಒಂದಿಷ್ಟು ತೂಕಡಿಕೆ ಬಂದಂತಾಗಿ ಅಲ್ಲಿಂದ ಎದ್ದು ಬಂದ ತುಕ್ರ ಸೀಟ್ನಲ್ಲಿ ಕುಳಿತುಕೊಂಡ.
****
ದಿನಾ ಕುಡಿದು ಬರುವುದನ್ನು ತುಕ್ರಾನ ಹೆಂಡತಿ ಕಮಲ ಆಕ್ಷೇಪಿಸುತ್ತಿದ್ದಳು. ಇದೇ ಕಾರಣಕ್ಕೆ ದಿನನಿತ್ಯ ಸಣ್ಣಪುಟ್ಟ ಜಗಳವೂ ಆಗುತ್ತಿತ್ತು. ನಿನ್ನೆ ರಾತ್ರಿ ಹೆಂಡತಿ ಏನೋ ಹೇಳಿದ್ದು ಇವನ ಪಿತ್ತವನ್ನು ನೆತ್ತಿಗೇರಿಸಿತ್ತು. ನೀನು ಒಬ್ಬಳೇ ಇಲ್ಲಿರು. ನಾನು ಮಗನಲ್ಲಿಗೆ ಹೋಗ್ತಿನಿ ಅಂದಾಗ ಕಮಲ ಮೊದಲು ಕುಡಿದ ಅಮಲಿಗೆ ಹೇಳುತ್ತಿದ್ದಾನೆ ಅಂದುಕೊಂಡಳು. ಕ್ವಿಂಟಾಲ್ ಅಕ್ಕಿ ತರಲೆಂದು ಕಪಾಟ್ನಲ್ಲಿಟ್ಟಿದ್ದ ಒಂದು ಸಾವಿರ ರೂಪಾಯಿಯನ್ನು ಕಿಸೆಗೆ ಹಾಕಿಕೊಂಡು ಅಂಗಿ ಹಾಕಿದಾಗ ಕಮಲ ಕಳವಳಗೊಂಡು ಕ್ಷಮೆ ಕೇಳಿದರೂ ತುಕ್ರ ಹಠ ಬಿಡಲಿಲ್ಲ. ಯಾಕೋ ಎಂದು ನೋಡಿರದ ಬೆಂಗಳೂರು ಕುಡಿದ ಅಮಲಿನಲ್ಲಿ ತುಕ್ರನಿಗೆ ಸುಂದರವಾಗಿ ಕಾಣಿಸಿತ್ತು. ಮತ್ತೆ ಒಂದಿಷ್ಟು ಜಗಳ ಮಾಡಿ ಸೀದಾ ಪುತ್ತೂರು ರೈಲ್ವೆ ಸ್ಟೇಷನ್ಗೆ ಬಂದಿದ್ದ. ಸ್ಟೇಷನ್ವರೆಗೆ ಹೂವಿನ ಅಂಗಡಿಯ ಗಡಂಗ್ ಗೆಳೆಯ ನಾರಾಯಣನನ್ನು ಕರೆದುಕೊಂಡು ಹೋಗಿದ್ದ.
****
ಪುತ್ತೂರು ರೈಲ್ವೆ ಸ್ಟೇಷನ್ಗೆ ಬಂದವನೇ ಕ್ವಾಯಿನ್ ಬಾಕ್ಸ್ನಲ್ಲಿ ಯಾರಿಂದಲೋ ನಂಬರ್ ಡಯಲ್ ಮಾಡಿಸಿ ಮಗನಲ್ಲಿ ಮಾತನಾಡಿದ್ದ. ನಾನು ಬೆಂಗಳೂರಿಗೆ ಬರ್ತಿನಿ ಅಂತ ಮಗನಲ್ಲಿ ಹೇಳಿದಾಗ ಇವರು ತಮಾಷೆಗೆ ಹೇಳುತ್ತಿದ್ದಾರೆ ಅಂತ ತಿಳಿದುಕೊಂಡು ಏನು ಕುಡಿದದ್ದು ಜಾಸ್ತಿ ಆಗಿದೆಯಾ ಅಂತ ಮಗ ಚಂದ್ರಕಾಂತ್ ನಕ್ಕ. ಈಗಲೇ ಬರುತ್ತಿದ್ದೇನೆ ಅಂದಾಗ ಇವನಿಗೆ ತಬ್ಬಿಬ್ಬಾಯಿತು. ತಂದೆಗೆ ಬುದ್ಧಿ ಹೇಳುವಂತೆ ನಾರಾಯಣನ ಮೂಲಕ ಹೇಳಿಸಿದರೂ ತುಕ್ರ ಕಿವಿಗೆ ಹಾಕಿಕೊಳ್ಳಲಿಲ್ಲ. `ನೀನು ನನ್ನ ಮಗ ಆಗಿದ್ರೆ ನಾಳೆ ರೈಲ್ವೆ ಸ್ಟೇಷನ್ಗೆ ಬಂದು ಕರ್ಕೊಂಡು ಹೋಗು’ ಅಂತ ಮತ್ತಿನಲ್ಲಿ ಹೇಳಿದ್ದ. ಕೊನೆಗೆ ಚಂದ್ರಕಾಂತ, ರೈಲು ಎಷ್ಟು ಗಂಟೆಗೆ ಬರುತ್ತೆ, ಎಲ್ಲಿ ನಿಲ್ಲಬೇಕು. ಬಂದ ಕೂಡಲೇ ಫೋನ್ ಮಾಡಬೇಕು ಅಂತ ತುಂಬಾ ಎಚ್ಚರಿಕೆ ಹೇಳಿದ. ಅವನು ಕಿವಿಗೆ ಹಾಕಿಕೊಂಡನೋ ಬಿಟ್ಟನೋ ಕಿಸೆಯಲ್ಲಿದ್ದ ಕ್ವಾಯಿನ್ ಮುಗಿದಾಗ ಫೋನ್ ಕೆಳಗಿಟ್ಟು ಟಿಕೇಟ್ ಮಾಡಿ ರೈಲು ಹತ್ತಿಬಿಟ್ಟ. ಎಚ್ಚರವಾದಾಗ ಆರುಗಂಟೆ ಕಳೆದಿತ್ತು.
****
ಒಮ್ಮೆಗೆ ರೈಲು ನಿಂತಿತ್ತು. ಮೈಮೇಲೆ ಯಾರು ಬಿದ್ದಂತಾಗಿ ಎದ್ದು ಕುಳಿತ ತುಕ್ರ ಹೊರಗಿನ ಪರಿಸರವನ್ನು ಅಚ್ಚರಿಯಿಂದ ನೋಡುತ್ತ ಕುಳಿತ. ಇದು ಯಾವ ಸ್ಥಳ ಅಂತ ಅಲ್ಲಿ ಯಾರೋ ಒಬ್ಬರನ್ನು ಕೇಳಿದ. ಮೆಜೆಸ್ಟಿಕ್ ಅಂದಾಗ ಗಡಿಬಿಡಿಯಿಂದ ಎದ್ದು ರೈಲಿನಿಂದಿಳಿದ. ಅಬ್ಬಾ ಎಷ್ಟೊಂದು ರೈಲುಗಳು, ಎಷ್ಟು ಜನರಿದ್ದಾರೆ. ಪುತ್ತೂರಿನಲ್ಲಿ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆಯಲ್ಲೂ ಇಷ್ಟು ಜನ ಇರಲಿಕ್ಕಿಲ್ಲ ಅಂದುಕೊಂಡ. ಆತ ಮಂಗಳೂರಿಗೆ 2 ಬಾರಿ ಹೋಗಿದ್ದ ಅಷ್ಟೇ. ಬೆಂಗಳೂರೆಂದರೆ ಮಂಗ್ಳೂರಿಗಿಂತ ಸ್ವಲ್ಪ ದೊಡ್ಡದಿರಬಹುದು ಅಂದುಕೊಂಡಿದ್ದ. ಯಾವುದಕ್ಕೂ ಮಗನಿಗೆ ಫೋನ್ ಮಾಡಬೇಕು ಅಂತ ಯೋಚಿಸಿ ಎಲ್ಲಿಯಾದರೂ ಕ್ವಾಯಿನ್ ಬಾಕ್ಸ್ ಕಾಣಿಸುತ್ತದೆಯೇ ಎಂದು ಹುಡುಕಿದ. ಅಲ್ಲಿ ಯಾರೋ ಕಾಫಿ ಮಾರುತ್ತಿರುವುದನ್ನು ಕಂಡು ಒಂದು ಚಾ ಅಂದ. ಅವನು ಪ್ಲಾಸ್ಟಿಕ್ ಗ್ಲಾಸ್ಗೆ ಟೀ ಹಾಕುತ್ತಿದ್ದಾಗ ಹಣ ತೆಗೆಯಲು ಅಂತ ಕಿಸೆ ನೋಡಿಕೊಂಡವನೇ ರಾಮ ರಾಮ ಅಂತ ಬೊಬ್ಬೆ ಹಾಕಿದ.
ಆತನ ಮುಂಡಿನ ಒಳಗಡೆಯಿದ್ದ ಅಂಡರ್ವೇರ್ನ ಕಿಸೆಯನ್ನೇ ಕಟ್ ಮಾಡಲಾಗಿತ್ತು. ಟೀಯವನನ್ನು ಅಲ್ಲೇ ಬಿಟ್ಟು ಪಕ್ಕದಲ್ಲಿದ್ದ ಬೆಂಚಿನಲ್ಲಿ ಕುಸಿದು ಕುಳಿತ ತುಕ್ರನಿಗೆ ಆಕಾಶವೇ ಬಿದ್ದಾಂತಾಯಿತು. ದೇವರೇ ಅಕ್ಕಿಗಿಟ್ಟ ದುಡ್ಡು ಬೇವರ್ಸಿಗಳು ಕದ್ದು ಬಿಟ್ಟರಲ್ಲ ಅಂತ ಶಾಪ ಹಾಕುತ್ತಿದ್ದಾಗ ಅದೇ ಪರ್ಸ್ನಲ್ಲಿ ಮಗನ ಮೊಬೈಲ್ ನಂಬರ್ ಇದ್ದದ್ದು ನೆನಪಾಯಿತು. ಇನ್ನೇನೂ ಮಾಡಲಿ ದೇವರೇ ಅಂತ ತಲೆಮೇಲೆ ಕೈಹೊತ್ತುಕೊಂಡು ಅಲ್ಲಿಯೇ ಕುಳಿತ. ಕುಳಿತಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೇ `ಪಾಶಾನಮೂರ್ತಿ ದೈವವೇ ಕಾಪಾಡು’ ಅಂತ ಅಲ್ಲಿಯೇ ಹುಚ್ಚನಂತೆ ತಿರುಗಾಡತೊಡಗಿದ.
****
ಮಂಗಳೂರು ರೈಲು ಬಂದಾಗ ಚಂದ್ರಕಾಂತ್ ಫ್ಲಾಟ್ಫಾರ್ಮ್ನಲ್ಲಿಯೇ ಇದ್ದ. ಇನ್ನೂ ಯಾಕೆ ಇವರು ಫೋನ್ ಮಾಡಿಲ್ಲ ಅಂತ ಮೊಬೈಲನ್ನೇ ನೋಡುತ್ತಿದ್ದ. ರೈಲು ಹೋಗಿ ಹತ್ತು ನಿಮಿಷ ಆದರೂ ಅಪ್ಪ ಫೋನ್ ಮಾಡದೇ ಇದ್ದಾಗ ಒಂದಿಷ್ಟು ಕಳವಳದಿಂದ ಫ್ಲಾಟ್ಫಾರ್ಮ್ನಲ್ಲಿ ಹುಡುಕಾಡತೊಡಗಿದ. ಇವರು ನಿದ್ದೆ ಮಾಡಿ ಮೆಜೆಸ್ಟಿಕ್ ಬಂದದ್ದೇ ಗೊತ್ತಿಲ್ಲದೇ ಯಶವಂತಪುರದಲ್ಲಿ ಇಳಿದರೋ ಎಂಬ ಸಂಶಯವೂ ಉಂಟಾಯಿತು.
ರೈಲು ಹೋಗಿ ಅರ್ಧಗಂಟೆ ಕಳೆಯಿತು. ಒಂದು ಕಡೆ ಕೋಪನೂ ಬಂತು. ನಾನು ಬರಬೇಡ ಅಂದಿದ್ದೆ. ಕೇಳದೆ ಬಂದ್ರು. ಥಕ್ ಒಳ್ಳೆ ಪಿಕಳಾಟ ಆಯ್ತಲ್ಲ ಅಂತ ಗೊಣಗಿಕೊಂಡ. ಎಲ್ಲ ಕಡೆ ಸುತ್ತಾಡಿ ಸಾಕಾಗಿ ಅಲ್ಲೇ ಬೆಂಚಿನ ಮೇಲೆ ಕುಳಿತ. ಅಥವಾ ಬರ್ತಿನಿ ಅಂತ ಹೇಳಿ ಬಂದಿಲ್ಲವೋ ಹೇಗೆ ಅಂದುಕೊಂಡು ಮನೆಗೆ ಫೋನ್ ಮಾಡಿ ಕೇಳಿದ. ಅವನ ಅಮ್ಮ ಅಳುತ್ತ `ನಿನ್ನೆಯೇ ಹೊದ್ರಂತೆ. ಹೂವಿನಂಗಡಿಯ ನಾರಾಯಣನೇ ರೈಲು ಹತ್ತಿಸಿ ಬಂದದಂತೆ’ ಅಂತ ತಿಳಿಸಿದರು. ಅಮ್ಮನಿಗೆ ಸಮಧಾನ ಹೇಳಿ ಫೋನ್ ಇಟ್ಟ.
****
ಗಂಟೆ ಒಂಬತ್ತಾಗುತ್ತ ಬಂತು. ಅವನು ಫ್ಲಾಟ್ಫಾರ್ಮ್ನಲ್ಲಿ ಹುಡುಕದೇ ಉಳಿದ ಸ್ಥಳ ಯಾವುದೂ ಉಳಿಯಲಿಲ್ಲ. ಅಯ್ಯೋ ಈ ಬೆಂಗಳೂರಲ್ಲಿ ಅವರನ್ನು ಎಲ್ಲಿ ಅಂತ ಹುಡುಕಲಿ ಎಂದು ಗೊತ್ತಾಗದೇ ತಲೆ ಕೆರೆದುಕೊಂಡ. ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಅಂತ ಅಮ್ಮ ಹೇಳಿದ್ದು ನೆನಪಾಗಿ ಸ್ವಲ್ಪ ಸಮಧಾನವೂ ಆಯಿತು. ದುಡ್ಡಿದ್ದರೆ ಹೇಗಾದರೂ ಇಲ್ಲಿ ಬದುಕಬಹುದು. ಅಥವಾ ವಾಪಸ್ ಮನೆಗೆ ಹೋಗಬಹುದು ಅಂದುಕೊಂಡ. ಸಂಜೆ ತನಕ ಇಲ್ಲೇ ಕಾಯುವುದು ಅಂತ ತೀರ್ಮಾನಿಸಿದ ಚಂದ್ರಕಾಂತ್ ಹುಡುಕಾಟ ಮುಂದುವರೆಸಿದ. ಆತ ತನ್ನ ಕೆಲವು ಸ್ನೇಹಿತರಿಗೂ ವಿಷಯ ತಿಳಿಸಿದ. ಅವರೂ ಮೆಜೆಸ್ಟಿಕ್ಗೆ ಬರುವುದಾಗಿ ಹೇಳಿದ್ರು.
****
ಚಂದ್ರಕಾಂತ್ಗೆ ಬೆಳಗ್ಗಿನಿಂದ ಹುಡುಕಿ ಸಾಕಾಗಿ ಹೋಗಿತ್ತು. ಚಿಕ್ಕದಿನಿಂದ ಅವನಿಗೆೆ ಅಪ್ಪನೆಂದರೆ ಪ್ರೀತಿ ಜಾಸ್ತಿ. ಅಪ್ಪ ದುಡಿದ ಹಣದಿಂದಲೇ ಕಷ್ಟಪಟ್ಟು ಡಿಪ್ಲೋಮ ಓದಿದ್ದ. ಅಂತಹ ಬಡತನದಲ್ಲೂ ಬೆಂಗಳೂರಿನಲ್ಲಿ ಒಳ್ಳೆ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಲು ಅಪ್ಪನ ದುಡಿತವೇ ಕಾರಣವಾಗಿತ್ತು. ಆದ್ರೆ ಅಪ್ಪ ದುಡುಕಿಬಿಟ್ಟ ಅಂತ ಅನಿಸಿತ್ತು. ಒಂದು ಕಡೆ ಅಮ್ಮನ ಮೇಲೂ ಕೋಪ ಬಂತು. ಆದರೆ ಅಮ್ಮ ಇಲ್ಲದಿದ್ದರೆ ಅಪ್ಪ ಮಹಾ ಕುಡುಕನಾಗುತ್ತಿದ್ದ ಅಂತ ಸಮಧಾನ ಮಾಡಿಕೊಂಡ.
****
ಗೆಳೆಯರೊಂದಿಗೆ ಸೇರಿ ಮುಂದೆ ಏನು ಮಾಡೋದೆಂದು ಚರ್ಚಿಸಿದ. ನಾಳೆಯವರೆಗೆ ಕಾಯೋಣ ಅಂತ ಒಬ್ಬ ಸಲಹೆ ನೀಡಿದರೆ ಮತ್ತೊಬ್ಬ ಪೋಲಿಸ್ ಕಂಪ್ಲೇಟ್ ಕೊಡೋದು ಒಳ್ಳೆಯದೆಂದು ತಿಳಿಸಿದ. ಕೊನೆಗೆ ಎಲ್ಲರೂ ಚರ್ಚಿಸಿ ಪೋಲಿಸ್ ಕಂಪ್ಲೇಟ್ ಕೊಡುವುದು ಸೂಕ್ತ ಎಂದು ತೀರ್ಮಾನಿಸಿದರು. `ಅವರು ಕಂಪ್ಲೇಟ್ ಪಡೆದುಕೊಂಡು ಹುಡುಕದೇ ಇದ್ರೆ’ ಅಂತ ಒಬ್ಬ ವರಾತ ತೆಗೆದಾಗ ಚಂದ್ರಕಾಂತನಿಗೆ ಹೌದೆನಿಸಿತು. ಇಲ್ಲಿ ದಿನಕ್ಕೆ ಎಷ್ಟು ಸಾವಿರ ಇಂತಹ ಪ್ರಕರಣ ಬರುತ್ತದೆಯೋ ಯಾರಿಗೆ ಗೊತ್ತು ಅಂತ ಅಂದುಕೊಂಡ. ಈ ಸಮಸ್ಯೆಗೆ ಸ್ನೇಹಿತನೊಬ್ಬನ ಮೂಲಕ ಪರಿಹಾರ ಸಿಕ್ಕಿತು. ಆತನ ಸಂಬಂಧಿಕರೊಬ್ಬರು ಬೆಂಗಳೂರು ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ಮೂಲಕವೇ ಕಂಪ್ಲೇಟ್ ಕೊಡಲಾಯಿತು. ಶೀಘ್ರದಲ್ಲಿ ಹುಡುಕಿಕೊಡುವ ಭರವಸೆಯೇನೂ ಸಿಕ್ಕಿತು.
****
ಎರಡು ದಿನ ಕಳೆದವು. ಪೋಲಿಸ್ ಸ್ಟೇಷನ್ನಿಂದ ಏನೂ ಮಾಹಿತಿ ಸಿಗಲಿಲ್ಲ. ಈತ ಆಗಾಗ ಸ್ಟೇಷನ್ಗೆ ಫೋನ್ ಮಾಡಿ ವಿಚಾರಿಸುತ್ತಿದ್ದ. ಪೇಪರ್ನಲ್ಲಿ ಕಾಣೆಯಾಗಿದ್ದಾರೆ ಅಂತ ಫೋಟೊ ಹಾಕಿಯೂ ಆಗಿತ್ತು. ಅಂದೊಂದು ದಿನ ಮೆಜೆಸ್ಟಿಕ್ ಸಮೀಪದಲ್ಲಿ ಅಪರಿಚಿತ ಹೆಣವೊಂದನ್ನು ನೋಡಿದ ಪೋಲಿಸರು ಈತನಿಗೆ ಫೋನ್ ಮಾಡಿದ್ರು. ಚಂದ್ರಕಾಂತ್ ಭಯದಿಂದಲೇ ಅದನ್ನು ನೋಡಲು ಹೋದ. ಕೊನೆಗೂ ಅದು ಆತನ ಅಪ್ಪನದ್ದಲ್ಲ ಅಂತ ಗೊತ್ತಾಯಿತು. ಕೊನೆಗೆ ಟಿವಿಯಲ್ಲೂ ಜಾಹೀರಾತು ನೀಡಿದ. ಬಿಕ್ಷುಕರ ಮರುವಸತಿ ಕೇಂದ್ರಕ್ಕೂ ಹೋಗಿ ಬಂದ. ಅಲ್ಲೂ ಇರಲಿಲ್ಲ. ಇನ್ನು ನಾನು ಮಾಡುವುದು ಏನು ಇಲ್ಲ ಅಂತ ದೇವರ ಮೇಲೆ ಭಾರ ಹಾಕಿ ಕುಳಿತುಕೊಂಡ. ದಿನಗಳು ಕಳೆಯುತ್ತಿದ್ದವು. ಅಪ್ಪನ ನೆನಪಿನಲ್ಲಿಯೇ ದುಃಖದಿಂದ ಮತ್ತೆ ಆಫೀಸ್ಗೆ ಹೋಗಲು ಸುರು ಮಾಡಿದ.
****
ಚಂದ್ರಕಾಂತ್ ಅಪ್ಪನನ್ನು ಕಳೆದುಕೊಂಡು ಸುಮಾರು ಎರಡು ತಿಂಗಳು ಕಳೆದಿತ್ತು. ಅದೊಂದು ದಿನ ಪೋಲಿಸ್ ಸ್ಟೇಷನ್ನಿಂದ ಅರ್ಜೆಂಟ್ ಫೋನ್ ಬಂದಾಗ ಸೀದಾ ಅಲ್ಲಿಗೆ ಹೋದ. ಇನ್ಸ್ಪೆಕ್ಟರ್ ಆತನನ್ನು ಸೀದಾ ಶವಾಗಾರಕ್ಕೆ ಕರೆದುಕೊಂಡು ಹೋದರು. ಮುಖ ಜಜ್ಜಿದ ಸ್ಥಿತಿಯಲ್ಲಿದ್ದ ಒಂದು ಹೆಣ ತೋರಿಸಿ ನೋಡಲು ಹೇಳಿದ್ರು. ಅದು ಎರಡು ದಿನದ ಹಿಂದೆ ಆನಂದ್ ರಾವ್ ಸರ್ಕಲ್ ಪಕ್ಕದ ಚರಂಡಿಯಲ್ಲಿ ಸಿಕ್ಕಿದಂತೆ. ಹೆಣ ಸಿಕ್ಕಪಟ್ಟೆ ಊದಿಕೊಂಡಿತ್ತು. ಮುಖ ಜಜ್ಜಿದರಿಂದ ಗುರುತು ಸಿಕ್ಕಿರಲಿಲ್ಲ. ಆ ಹೆಣದೊಂದಿಗೆ ಸಿಕ್ಕಿದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಇಟ್ಟಿದ್ದರು. ಒಂದಿಷ್ಟು ಬಟ್ಟೆಗಳೊಂದಿಗೆ ಒಂದು ಬೆಲ್ಟ್ ತುಂಡಾದ ಟೈಟಾನ್ ವಾಚ್ ಕೂಡ ಇತ್ತು. ಅದನ್ನು ನೋಡಿದ ಚಂದ್ರಕಾಂತ್ ಅಲ್ಲೇ ಕುಸಿದು ಕುಳಿತ. ಯಾಕೆಂದರೆ ಅದು ಆತ ಕೆಲಸ ಸಿಕ್ಕ ಖುಷಿಯಲ್ಲಿ ಅಪ್ಪನಿಗೆ ನೀಡಿದ್ದ ವಾಚಾಗಿತ್ತು. ಈತನಿಗೆ ಸಿಕ್ಕ ವಾಚ್ ಆಧಾರದಲ್ಲಿ ಆ ಹೆಣ ಅವನ ತಂದೆಯದ್ದೇ ಎಂದು ತೀರ್ಮಾನಿಸಿದರು.
ಒಂದಿಷ್ಟು ಸಮಯದ ನಂತರ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿದರು. ಸಾವರಿಸಿಕೊಂಡ ನಂತರ ಚಂದ್ರಕಾಂತ್ ಊರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಆಫೀಸ್ಗೆ ಫೋನ್ ಮಾಡಿ 20 ದಿನ ರಜೆ ಹಾಕಿ ಹೆಣದೊಂದಿಗೆ ಅಂಬ್ಯುಲೆನ್ಸ್ನಲ್ಲಿ ಊರಿಗೆ ಮರಳಿದ.
****
ನಾನು ಎಷ್ಟು ಹೇಳಿದರೂ ಕೇಳದೇ ಬೆಂಗ್ಳೂರಿಗೆ ಹೋದಿ ಅಂತ ಬೊಬ್ಬೆ ಹಾಕುತ್ತ ಹೆಣದ ಮುಂದೆ ಕಮಲ ಹಣೆ ಬಡಿದುಕೊಂಡು ಅತ್ತರು. ಚಂದ್ರಕಾಂತನೂ ದುಃಖದಿಂದ ಅಂತಿಮ ಸಂಸ್ಕಾರ ಮಾಡಿ ಮುಗಿಸಿದ. ಎಲ್ಲ ಮುಗಿದ ನಂತರ ಎಷ್ಟು ಹೇಳಿದರೂ ಚಂದ್ರಕಾಂತ್ನ ಅಮ್ಮ ಬೆಂಗಳೂರಿಗೆ ಬರಲು ಒಪ್ಪಲಿಲ್ಲ. ಒಬ್ಬನೇ ಮಗನಾಗಿದ್ದರಿಂದ ಅಮ್ಮನನ್ನು ಒಬ್ಬರನ್ನೇ ಬಿಟ್ಟು ಬರುವುದು ಚಂದ್ರಕಾಂತ್ಗೆ ಸರಿಬರಲಿಲ್ಲ. ಸಂಸ್ಕಾರ ನಡೆಸಿ 11ನೇ ದಿನದ ಎಲ್ಲ ಕಾರ್ಯಗಳು ಮುಗಿದವು.
ಅದೊಂದು ದಿನ ಹೂವಿನಂಗಡಿಯ ನಾರಾಯಣ ರಿಕ್ಷಾದಲ್ಲಿ ಮನೆಗೆ ಬಂದ. ಆತನೊಂದಿಗೆ ಉದ್ದವಾದ ಗಡ್ಡದ, ಕೆದರಿದ ಕೂದಲಿನ ಹುಚ್ಚನಂತೆ ಕಾಣುವ ವ್ಯಕ್ತಿಯೊಬ್ಬ ನಿಂತಿದ್ದ. `ಚಂದ್ರ ಇವ್ರು ನಿಮ್ಮಪ್ಪ ಕಣೋ’ ಅಂದಾಗ ಚಂದ್ರಕಾಂತ್ಗೆ ಒಮ್ಮೆಗೆ ಶಾಕ್! ಮತ್ತೆ ಮತ್ತೆ ನೋಡಿದ. ಹೌದು ಅಪ್ಪನೇ. ಕಣ್ಣು ತೇವಗೊಂಡಿತ್ತು. ಹಾಗಾದರೆ ಈಗ ಅಂತ್ಯಸಂಸ್ಕಾರ ಮಾಡಿದ್ದು ಬೇರೆ ಯಾರದ್ದೋ ಹೆಣ ಆಗಿರಬೇಕು ಅಂದುಕೊಂಡ. ಇದ್ಯಾವುದೋ ಕನಸು ಎಂಬಂತೆ ಭಾಸವಾಯಿತು. ಹೋಗಿ ಅಪ್ಪನನ್ನು ಅಪ್ಪಿಕೊಂಡು ಉಪಚರಿಸಿದ. ಅಪ್ಪನ ಮೈಕೈಗಳಲ್ಲಿ ಒಂದಿಷ್ಟು ಹುಣ್ಣಾಗಿತ್ತು. ಚಂದ್ರಕಾಂತ್ ಸೀದಾ ಆತನನ್ನು ಮನೆಯೊಳಗೆ ಕರೆದುಕೊಂಡು ಹೋದ.
ಸ್ವಲ್ಪ ಸಮಯ ಕಳೆಯಿತು. ಹೇಗೋ ತುಕ್ರ ಒಂದಿಷ್ಟು ಗಂಜಿ ತಿಂದ. ಒಂದೆರಡು ಗಂಟೆಯಲ್ಲಿ ತುಕ್ರ ಸುಧಾರಿಸಿಕೊಂಡ. ಆಮೇಲೆ ಆತ ಹೇಳಿದ ಕತೆ ಹೀಗಿತ್ತು. ಪರ್ಸ್ ಕಳೆದ ಚಿಂತೆಯಲ್ಲಿ ತುಕ್ರಾ ತುಂಬಾ ಹೊತ್ತು ರೈಲು ಪ್ಲಾಟ್ಫಾರ್ಮ್ನಲ್ಲಿ ತಿರುಗಿದ. ಮತ್ತೆ ಏನು ಮಾಡುವುದೆಂದು ಗೊತ್ತಾಗದೇ ರೈಲ್ವೇ ಸ್ಟೇಷನ್ನಿಂದ ಹೊರಗಡೆ ಬಂದ. ಅಲ್ಲಿ ಜನರು ಸಾಲಾಗಿ ಹೋಗುತ್ತಿರುವುದನ್ನು ಕಂಡು ಅವರ ಹಿಂದೆಯೇ ಹೋಗಿ ಬಿಎಂಟಿಸಿ ಬಸ್ಸ್ಟಾಂಡ್ ತಲುಪಿದನಂತೆ. ಹೊಟ್ಟೆ ತೊಳೆಸಿದಂತಾಗಿ ಪಕ್ಕದಲ್ಲಿ ಕಂಡ ಟಾಯ್ಲೆಟ್ಗೆ ನುಗ್ಗಿದ. ಬರುವಾಗ ಇವನಲ್ಲಿ ದುಡ್ಡಿಲ್ಲ ಅಂತ ತಿಳಿದಾಗ ಅಲ್ಲಿದ್ದ ರೌಡಿಯಂತಹ ವ್ಯಕ್ತಿ ಮುಖ ಮೂತಿ ನೋಡದೆ ಹೊಡೆದನಂತೆ. ಬದುಕಿದರೆ ಸಾಕು ಅಂತ ಅಲ್ಲಿಂದ ಓಡಿ ಹೋದ. ಸಂಜೆವರೆಗೆ ಅಲ್ಲೇ ಬಸ್ಸ್ಟಾಂಡ್ನಲ್ಲಿಯೇ ಕಾದನಂತೆ.
****
ಆಮೇಲೆ ಯಾವ ಕಡೆ ನಡೆದ ಅಂತ ನೆನೆಪಿರಲಿಲ್ಲ. ಯಾವುದೋ ಹೋಟೆಲ್ ಪ್ರವೇಶಿಸಿ. ತನಗೆ ಗೊತ್ತಿದ್ದ ಕನ್ನಡದಲ್ಲಿ ಅಲ್ಲಿನವರೊಂದಿಗೆ ತನ್ನ ಪರಿಸ್ಥಿತಿ ವಿವರಿಸಿದನಂತೆ. ಅಲ್ಲಿನವರಿಗೆ ಇವನ ಭಾಷೆ ಗೊತ್ತಾಯಿತೋ ಇಲ್ಲವೋ ತಿನ್ನಲು ಒಂದಿಷ್ಟು ಚಿತ್ರಾನ್ನ ನೀಡಿ ಸೀದಾ ಮೋರಿಯಲ್ಲಿ ಪಾತ್ರೆ ತೊಳೆಯಲು ಬಿಟ್ಟರಂತೆ. ಒಂದು ವಾರದಲ್ಲಿಯೇ ಈ ಕೆಲಸದ ಸಹವಾಸ ಸಾಕು ಅಂತ ತುಕ್ರನಿಗೆ ಅನಿಸಿತ್ತು. ಅಲ್ಲಿ ಪಾತ್ರೆಗಳು ತೊಳೆದಷ್ಟು ಮುಗಿಯುತ್ತಿರಲಿಲ್ಲ. ಮೋರಿಯಲ್ಲಿ ಕುಳಿತು ಕುಳಿತು ಮೈಕೈ ಹುಣ್ಣಾಗಿತ್ತು. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಉಳಿದವರು ಇವನಿಗೆ ಅಲ್ಲಿಯ ಸ್ಥಿತಿ ಹೇಳಿದಾಗ ಭಯಗೊಂಡನಂತೆ.
ಈ ಮೋರಿಗೆ ಬಂದವರನ್ನು ಮತ್ತೆ ಮನೆಗೆ ಹೋಗಲು ಬಿಡುತ್ತಿರಲಿಲ್ಲವಂತೆ. ಕದ್ದುಮುಚ್ಚಿ ಕೆಲವರು ಓಡಿ ಹೋಗುತ್ತಾರಂತೆ. ಅವರಲ್ಲಿ ಒಬ್ಬ ಕಾಲು ತುಂಡಾದವನೊಬ್ಬ ಇದ್ದ. ಆತ ಒಮ್ಮೆ ಓಡಿ ಹೋದದ್ದಕ್ಕೆ ಹೋಟೆಲ್ನ ಕ್ರೂರಿಗಳು ಆತನ ಕಾಲನ್ನೇ ತುಂಡು ಮಾಡಿದರಂತೆ. ಹೋಟೆಲ್ನ ಓನರ್ ದೊಡ್ಡ ರೌಡಿಯಂತೆ..ಹೀಗೆ ಅಂತೆಕಂತೆಗಳನ್ನು ಕೇಳಿ ತುಕ್ರನಿಗೆ ಭಯವಾಯಿತು. ಎಷ್ಟು ಆರಾಮವಾಗಿ ಮನೆಯಲ್ಲಿದ್ದೆ. ಪಾಪ ಅವಳೊಂದಿಗೆ ಸುಮ್ಮನೆ ಜಗಳ ಮಾಡಿದ್ದು. ಅವಳು ಎಷ್ಟೇ ಬಯ್ದರೂ ಹೊಟ್ಟೆಗೆ ಒಂದು ತುತ್ತು ಕಮ್ಮಿ ಉನ್ನಲು ಬಿಡುತ್ತಿರಲಿಲ್ಲ. ಹೆಂಡತಿ ಮತ್ತು ಮಗನನ್ನು ನೆನಪಿಸಿಕೊಂಡು ತುಂಬಾ ದಿನ ಅಳುತ್ತಾ ಕುಳಿತುಕೊಳ್ಳುತ್ತಿದ್ದಾನಂತೆ. ಅದೊಂದು ದಿನ ಹೋಟೆಲ್ನ ಓನರ್ ಮತ್ತು ರೌಡಿಗಳು ಇಲ್ಲದ ದಿನ ತಿಳಿದಾಗ ‘ಬದುಕಿದರೆ ಬಿಕ್ಷೆ ಬೇಡಿ ಬದುಕಬಹುದು’ ಅಂತ ಜೀವ ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಓಡಿಬಂದನಂತೆ.
ಕಿಸೆಯಲ್ಲಿ ಒಂದು ರೂಪಾಯಿ ಇರಲಿಲ್ಲ. ಆಗ ಅವನಿಗೆ ಮಗ ಕೊಟ್ಟ ವಾಚ್ ನೆನಪಾಯಿತು. ತುಂಬಾ ಅಂಗಡಿಯವರಿಗೆ ತೋರಿಸಿದರೂ ಯಾರು ಖರೀದಿಸಲಿಲ್ಲವಂತೆ. ಮಾರ್ಗ ಸೈಡ್ನಲ್ಲಿದ್ದ ವಾಚ್ ಅಂಗಡಿಯವನೊಬ್ಬ ಕೊನೆಗೆ ಅದನ್ನು ಖರೀದಿಸಿ 100 ರೂಪಾಯಿ ನೀಡಿದನಂತೆ.
ಪುತ್ತೂರಿಗೆ ಹೋಗಲು ಬಸ್ ಟಿಕೇಟ್ಗೆ 300 ರೂಪಾಯಿ ಆಗುತ್ತದೆ ಅಂದಾಗ ಏನು ಮಾಡುವುದೆಂದು ಆತನಿಗೆ ತಿಳಿಯಲಿಲ್ಲ. ಓ ರೈಲ್ನಲ್ಲಿ 100 ರೂಪಾಯಿ ಅಲ್ವ ಅಂತ ನೆನಪಾಗಿ ಸೀದಾ ರೈಲು ಟಿಕೇಟ್ ಮಾಡಲು ನೋಡಿದ. ಆದರೆ ಪುತ್ತೂರಿಗೆ 103 ರೂಪಾಯಿ ಅಂತಗೊತ್ತಾಯಿತು. ಮೂರು ರೂಪಾಯಿ ಇಲ್ಲದೆ ಇದ್ದರಿಂದ ಸುಬ್ರಹ್ಮಣ್ಯಕ್ಕೆ ಟಿಕೇಟ್ ಮಾಡಿದ. ಸುಬ್ರಹ್ಮಣ್ಯದಲ್ಲಿ ಚಕ್ಕಿಂಗ್ನವರು ಹತ್ತಿದರಿಂದ ಅಲ್ಲಿ ಇಳಿದು ಇಲ್ಲಿವರೆಗೆ ನಡೆದುಕೊಂಡು ಬಂದನಂತೆ ತುಕ್ರ.
****
`ಪಾಸಾನಮೂರ್ತಿ ದೈವದ ದಯೆ. ಕೊನೆಗೂ ಜೀವಂತವಾಗಿ ಬಂದೆ’ ಅಂತ ತುಕ್ರಾ ಹೇಳಿ ನಿಟ್ಟುಸಿರು ಬಿಟ್ಟ.
****
ತಕ್ಷಣ ಏನೋ ನೆನಪಾದಂತೆ ಕಮಲ ಒಳಗೆ ಓಡಿ ದೇವರ ಕೋಣೆ ಪ್ರವೇಶಿಸಿ ದೇವರಿಗೆ ಕೈಮುಗಿದು ದೊಡ್ಡದಾಗಿ ಕುಂಕುಮದ ಬೊಟ್ಟು ಇಟ್ಟುಕೊಂಡರು.
ಪ್ರವೀಣ ಚಂದ್ರ ಪುತ್ತೂರು
Comments
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by raghumuliya
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by bpchand
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by raghumuliya
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by bpchand
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by raghumuliya
ಉ: ತುಕ್ರ ಬೆಂಗಳೂರಿಗೆ ಹೋದದ್ದು..
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by Jayanth Ramachar
ಉ: ತುಕ್ರ ಬೆಂಗಳೂರಿಗೆ ಹೋದದ್ದು..
ಉ: ತುಕ್ರ ಬೆಂಗಳೂರಿಗೆ ಹೋದದ್ದು..
In reply to ಉ: ತುಕ್ರ ಬೆಂಗಳೂರಿಗೆ ಹೋದದ್ದು.. by asuhegde
ಉ: ತುಕ್ರ ಬೆಂಗಳೂರಿಗೆ ಹೋದದ್ದು..