ಕನ್ನಡಿಗರ ಅತಿದೊಡ್ಡ ಸಮಸ್ಯೆ

ಕನ್ನಡಿಗರ ಅತಿದೊಡ್ಡ ಸಮಸ್ಯೆ

ನ್ನಡಿಗರ ಅತಿದೊಡ್ಡ ಸಮಸ್ಯೆ ಎಂದರೆ ತಮ್ಮೊಳಗೇ ಮಾತನಾಡಿಕೊಳ್ಳಲು ಕಷ್ಟಪಡುವುದು. ಇ-ಕನ್ನಡಿಗರು ಈ ದೌರ್ಬಲ್ಯವನ್ನು ಮೀರಿದ್ದಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಈಗ ಅವರನ್ನೂ ಸಾಮಾನ್ಯ ಕನ್ನಡಿಗರ ರೋಗ ಬಾಧಿಸುತ್ತಿದೆ. ಪತ್ರಿಕೆಗಳಲ್ಲಿ ಓದುಗರ ಕಾಲಂ ತುಂಬಿಸಲು ಉಪ ಸಂಪಾದಕರು ಪಡುವ ಪಾಡು ಅರಿತವರಿಗೆ ಕನ್ನಡಿಗರ ಪ್ರತಿಕ್ರಿಯಿಸುವ ಗುಣದ ಬಗ್ಗೆ ತಿಳಿದಿರುತ್ತದೆ.

ಸಂಪದದಲ್ಲಿ ಲೇಖನ ಬರೆಯುವವರು ಮತ್ತು ಪ್ರತಿಕ್ರಿಯಿಸುವವರನ್ನು ನೋಡಿದರೇ ಇದು ಅರ್ಥವಾಗುತ್ತದೆ. ಈ ಎಲ್ಲರ ಹೆಸರುಗಳನ್ನೂ ಪಟ್ಟಿ ಮಾಡಿದರೆ ಇಪ್ಪತ್ತು ಮೀರುವುದಿಲ್ಲ ಎನಿಸುತ್ತದೆ. ಆದರೆ ಸಂಪದದ ಸದಸ್ಯರ ಸಂಖ್ಯೆ ಇದರ ಹತ್ತು ಪಟ್ಟಿಗೂ ಹೆಚ್ಚಿದೆಯಲ್ಲಾ?

ಪ್ರತೀ ಬರೆಹಗಾರನಲ್ಲೊಬ್ಬ ಓದುಗ, ಪ್ರತೀ ಓದುಗನಲ್ಲೊಬ್ಬ ಬರೆಹಗಾರನಿರುತ್ತಾನೆ. ಬರೆಹಗಾರನೊಳಗಿರುವ ಓದುಗ ಕ್ರಿಯಾಶೀಲನಾಗಿದ್ದಾನೆ. ಆದರೆ ಓದುಗನ ಒಳಗಿರುವ ಬರೆಹಗಾರ ಮಾತ್ರ ಚಿಪ್ಪಿನಿಂದ ಹೊರಬರಲು ಒಪ್ಪುತ್ತಿಲ್ಲವೇಕೆ?

ನಾನು ಕಳೆದ ಆರೇಳು ವರ್ಷಗಳಿಂದ ಬರೆಯುವ ಮತ್ತು ಬರೆಯಿಸುವ ವೃತ್ತಿಯಲ್ಲಿ ಇರುವುದರಿಂದ ಕೆಲವು ಕಾರಣಗಳು ತಿಳಿದಿವೆ. ಅನೇಕ ವಿಷಯಗಳ ಅರಿವಿರುವವರು, ನಾವು ಓದುವ ಸಾಮಾನ್ಯ ಬರೆಹಗಳಲ್ಲಿ ಕಾಣುವದಕ್ಕಿಂತ ಎಷ್ಟೋ ಪಟ್ಟು ಉತ್ತಮ ಗುಣಮಟ್ಟದ ವಿಶ್ಲೇಷಣೆ ಮಾಡಬಲ್ಲವರೂ 'ಬರೆವಣಿಗೆ ನಮ್ಮಂಥವರಿಗಲ್ಲ' ಎಂದು ಕೊಂಡಿರುತ್ತಾರೆ. ಬರೆಯುವುದೆಂದರೆ ಮಿಂದು ಮಡಿಯುಟ್ಟು ಅದರ ತೇವಾಂಶ ಆರುವ ಮೊದಲು ಮುಗಿಸಬೇಕಾದ ಕ್ರಿಯೆಯೇನೂ ಅಲ್ಲ. ಮಾತಿನಲ್ಲಿ ಹೇಳುವುದನ್ನು ಅಕ್ಷರಗಳಲ್ಲಿ ಬರೆಯುವುದು ಎಂದು ಅವರಿಗೆ ಹೇಳಿದರೂ ಅರ್ಥವಾಗುವುದಿಲ್ಲ. ಆದರೆ ಒಮ್ಮೆ ಅವರು ಬರೆಯಲು ಆರಂಭಿಸಿದರೆ ಅದು ಓತ ಪ್ರೋತವಾಗಿ ಹರಿಯತೊಡಗುತ್ತದೆ.

ಸಂಪದದ ಓದುಗರಲ್ಲಿ ಅನೇಕರಿಗೆ ಪ್ರತಿಕ್ರಿಯಿಸುವ ಆಸೆ ಇದೆ. ಆದರೆ ಈ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿಬಿಡಬಹುದೇ? ಎಂಬಂಥ ಅರ್ಥಹೀನ ಭಯಗಳು ಅವರನ್ನು ಕಾಡುತ್ತಿರುವಂತಿದೆ. ಇನ್ನು ಕೆಲವರಿಗೆ ತಂತ್ರಜ್ಞಾನದ ತೊಂದರೆಗಳು ಕಾಡುತ್ತಿರಬಹುದು. ಈ ತೊಂದರೆಗಳಿಗೆಲ್ಲಾ ಪರಿಹಾರವಿದೆ. ಹಲವು ಸಾಮಾನ್ಯ ತೊಂದರೆಗಳಿಗೆ [:FAQ|ಸಂಪದ FAQ ] ಪರಿಹಾರಗಳನ್ನು ನೀಡುತ್ತದೆ. ತುಂಬಾ ಸಂಕೀರ್ಣವಾಗಿರುವವಕ್ಕೆ [:user/1|WEB MASTER] ಇದ್ದಾರೆ. ಸಂಪದದ ಸದಸ್ಯರಲ್ಲಿ ತಂತ್ರಜ್ಞಾನಿಗಳ ಸಂಖ್ಯೆಯೇನೂ ಸಣ್ಣದಲ್ಲ.

ಈ ಬಗೆಯ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಪ್ರತಿಕ್ರಿಯಿಸೋಣ. ಏನಂತೀರಿ?

ಇಸ್ಮಾಯ್ಲ್

Rating
No votes yet

Comments