ಇಂದು ಭಾರತೀಯ ಧೀರ ಯುವಕರ ದಿನ
ಇಂದು ಭಾರತೀಯ ಧೀರ ಯುವಕರ ದಿನ
ಎಂಥ ಸುದಿನ ಎಂಥ ಸುದಿನ
ಇಂದಿನೀ ಶುಭದ ಸುದಿನ
ಭಾರತೀಯ ವ್ಯಾಘ್ರ ಸಿಂಹರುದಯದಾ ದಿನ ||
ಇಂದು ಭಾರತೀಯ ಧೀರ ಯುವಕರ ಸುದಿನ ||ಪ||
ಆತ್ಮ ಸ್ಥೈರ್ಯ ಕಳೆದುಕೊಂಡ
ಭಾರತೀಯ ಭೀತಿಯಿಂದ
ಮೊಗಲಗಂಜಿ ಬದುಕುತಿದ್ದ ಆ ಕಾಲವು |
ಹೆಮ್ಮೆಗೊಂಡು ಬೆಳೆದ ಯುವಕ
ದಿಟ್ಟ ತನದಿ ತನ್ನನರಿತ
ಸಿಂಹವಾಗಿ ಮೆರೆದ ಗೋವಿಂದನುದಯವು ||೧||
ಗುರುವು ತಾನು ಎಂಬುದರಿತು
ಹಗುರವಾದುದೆಲ್ಲ ತೊರೆದು
ಭಾರತೀಯ ಶೌರ್ಯ ಮೆರೆದನಪ್ರತಿಮನು
ಧೀರನಂತೆ ತೊಡುಗೆ ಉಡುಗೆ
ವೀರಖಡ್ಗವೊಂದು ಜೊತೆಗೆ
ಇರುಳು ಹಗಲು ಭೇದವಿರದೆ ದೇಶಕಾದನು ||೨||
ಸಿಕ್ಕರೆಂಬ ವೀರ ತಂಡ
ಕಟ್ಟಿ ನಾಡ ಪ್ರೀತಿಯಿಂದ
ಬಂದನಂದು ದೇಶದಲ್ಲಿ ಗುರುಗೋವಿಂದ |
ಸಿಂಗರಾಗಿ ಶೂರರಾಗಿ
ದುಡಿದು ನಾಡ ನೀತಿಗಾಗಿ
ಮಡಿದ ಧೀರಸೇನೆನೇತಗಿರಲಿ ಗೌರವ ||೩||
ಅಂಗ್ಲರಂದು ಭಾರತೀಯ
ರನ್ನು ಗೆದ್ದೆವೆಂದ ಕಾಲ
ಒಬ್ಬ ಭಾರತೀಯ ಮಾತ್ರ ವಿಶ್ವ ಗೆದ್ದನು
ವಿಶ್ವಮಾನ್ಯವಾದ ವೇದ
ಯೋಗ ಬ್ರಹ್ಮಚರ್ಯವೆಂದು
ಭಾರತೀಯ ಸೂತ್ರವನ್ನು ಜಗಕೆ ತೋರ್ದನು ||೪||
ಏಳಿರೆದ್ದೇಳಿರೆಂದು
ನಿದ್ದೆಗಣ್ಣಿನವರ ಬಡಿದು
ಹೇಳಿದಂಥ ಮಾತು ದೇಶದಲ್ಲಿ ಮೊಳಗಿತು |
ಕುರಿನರಿಗಳ ಮರಿಗಳಲ್ಲ
ನೀವು ಹುಲಿಯ ಪುತ್ರರೆಂದು
ಹೇಳಿದಾಗ ಯುವಕರೆದೆಗೆ ಮಿಂಚು ಸುಳಿಯಿತು ||೫||
ಸ್ವಾಮಿ ವಿವೇಕಾನಂದ
ಗುರು ಗೋವಿಂದರಂಥ
ವ್ಯಾಘ್ರ ಸಿಂಹರುದಿಸಿ ಬಂದರೀ ಶುಭ ದಿವಸ |
ಭಾರತೀಯರಾತ್ಮ ಸ್ಥೈರ್ಯ
ವೃದ್ಧಿಮಾಡಿದಂಥ ಕಾರ್ಯ
ವನ್ನು ನಾವು ಸ್ಮರಿಸಿ ನಮಿಸಿ ಈಗ ಜೈಸುವಾ ||೬||
( ಇಂದು 12/01/2011 ಸ್ವಾಮಿ ವಿವೇಕಾನಂದರ ಹಾಗು ಗುರು ಗೋವಿಂದ ಸಿಂಹರ ಜನ್ಮದಿನ )
- ಸದಾನಂದ
Comments
ಉ: ಇಂದು ಭಾರತೀಯ ಧೀರ ಯುವಕರ ದಿನ
In reply to ಉ: ಇಂದು ಭಾರತೀಯ ಧೀರ ಯುವಕರ ದಿನ by vivekannada
ಉ: ಇಂದು ಭಾರತೀಯ ಧೀರ ಯುವಕರ ದಿನ