ಉಳ್ಳಾಗಡ್ಡಿ ಖರೀದಿಸುವ ಉಳ್ಳವರು ನಾವ್!

ಉಳ್ಳಾಗಡ್ಡಿ ಖರೀದಿಸುವ ಉಳ್ಳವರು ನಾವ್!

ಕಳೆದ ಶುಕ್ರವಾರ ಸಾಯಂಕಾಲ ಟೈಮ್ಸ್ ವಾರ್ತೆ ನೋಡುತ್ತಿದ್ದ ನನ್ನ ಗಂಡ ಓಡಿ ಬಂದು ಈರುಳ್ಳಿ ಅಕ್ರಮ ದಾಸ್ತಾನುಕಾ(ಕೋ)ರರ ಮೇಲೆ ದಾಳಿ ಎಂಬ ಬ್ರೇಕಿಂಗ್ ನ್ಯೂಸನ್ನು ನನ್ನೆದುರು ಬ್ರೇಕ್ ಮಾಡಿದರು.


ಛೇ, ಹಾಗಾದರೆ ಈರುಳ್ಳಿ ಬೆಲೆ ಕಮ್ಮಿ ಆಗ್ತದಾ? ಧಾವಂತ ತೋರಿದೆ. ಅವರಿಗೆ ಅಚ್ಚರಿಯೋ ಅಚ್ಚರಿ! ಈಗಿನ ಕಾಲದ ಈ ಸಾಮಾನು ರೇಟಲ್ಲಿ ನಮ್ಮಂತವರು ಬದುಕುವುದು ಹೇಗೆಂದು ದಿನನಿತ್ಯ ಗೊಣಗುತ್ತಿದ್ದ ಇವಳಗೇನಾಯ್ತು ಅಂತ ಮತ್ತೆ ಹೋಗಿ ಟಿವಿ ಮುಂದೆ ಜೋತಾಡುತ್ತಾ ನಿಂತರು.


ಮನೆಗೆ ಊಟಕ್ಕೆ ಹೋದ ತಕ್ಷಣ ಏನೇನಿದೆ ಎಂಬುದಾಗಿ ವರದಿ ಒಪ್ಪಿಸುವುದು ಅ(ತ್ತೆ)ಮ್ಮನ ಪರಿಪಾಠ. ಅಂದೂ ಸಹ ಮಾಡಿದ ಖಾದ್ಯದ ವಿವರಣೆ ನೀಡುತ್ತಾ, ಖಾದ್ಯ ಒಂದನ್ನು ಹೇಗೆ ತಯಾರಿಸಿದ್ದು ಎಂದು ವಿವರಿಸಿ- ಒಳ್ಳೇದಾಗಿದೆ, ಒಂದಿಡೀ ಈರುಳ್ಳಿ ಹಾಕಿದ್ದೇನೆ ಅಂದರು. ಕ್ವಚಿತ್ತಾಗಿ ಹೇಳಿದ ಈ ಮಾತು ನನ್ನೊಳಗೆ ಸಾವಿರ ಬಲ್ಬುಗಳು (ಹೈ ವೋಲ್ಟೇಜಿದ್ದೇ) ಏಕಕಾಲಕ್ಕೆ ಬೆಳಗಿದಂತಾಯಿತು. ನಮ್ಮದು ತುಂಬ ಅಂದರೆ, ತುಂಬಾ ಸಾಧಾರಣವಾದ ಜೀವನ. ಕಾರಿಲ್ಲ, ಬಂಗ್ಲೆ ಇಲ್ಲ, ಏಸಿ ಇಲ್ಲ, ಐಷಾರಾಮಿ ವಸ್ತುಗಳು ಇಲ್ಲ. ಒಂದಿಷ್ಟು ನೆಮ್ಮದಿ ಮಾತ್ರ ಬಿಟ್ರೆ ಮತ್ತೇನೂ ಇಲ್ಲ. ಇದ್ದುದರಲ್ಲೇ ಎಷ್ಟು ಸಾಧ್ಯವೋ ಅಷ್ಟರಲ್ಲೇ ಬದುಕೋದು.


ಆದರೆ, ಏನೇ ಆದರೂ ಅಮ್ಮ ಮಾತ್ರ ಏನೇ ಬೇಕು ಅಂದರೂ ಇಲ್ಲ ಅನ್ನೊದಿಲ್ಲ ನನ್ನ ಶ್ರೀಪತಿ. (ಅಡುಗೆ ಸಾಮಾನು, ಸಿಹಿ, ಔಷಧಿ ಬಿಟ್ಟರೆ ಅವರಿಗೆ ಹೆಚ್ಚಿನ ಡಿಮಾಂಡುಗಳೂ ಇಲ್ಲ) ಹಾಗಾಗಿ ಎಷ್ಟೇ ರೇಟಾದರೂ, ಕಿಸೆಯ ತೂಕಕ್ಕೆ ಸಮನಾಗಿ ಈರುಳ್ಳಿ, ಬೆಳ್ಳುಳ್ಳಿ ಕಾಲು ಕೆಜಿ ತೂಕದಲ್ಲಾದರೂ, ಹೇಳಿದಾಗೆಲ್ಲ ಒಯ್ಯುತ್ತಿದ್ದೆವು. ಇದರಿಂದಾಗಿ ನಾವು ದಿನಾಲೂ ಇಷ್ಟು ದುಬಾರಿ ಈರುಳ್ಳಿ-ಬೆಳ್ಳುಳ್ಳಿಗಳನ್ನು ನಮ್ಮ ಅಡುಗೆಯಲ್ಲಿ ಬಳಸುತ್ತಿರುವ ಕಾರಣ ನಮ್ಮ ಅಂತಸ್ತು ಹೆಚ್ಚಿದೆ ಎಂಬುದಾಗಿ ನನಗೆ ನಾನೇ ಸಂಭ್ರಮಿಸುತ್ತಿದ್ದೆ. ಮಿಕ್ಕ ಸಮಯದಲ್ಲಿ ಯಾರಾದರೂ, ಊಟ ಆಯ್ತಾ? ಏನು ಸಾರು ಎಂದೆಲ್ಲ ಕೇಳಿದರೆ ನಂಗೆ ತುಂಬ ಸಿಲ್ಲಿ ಅನಿಸುತ್ತಿತ್ತು. ಆದರೆ ಈಗ ಹಾಗಲ್ಲ, ಯಾರಾದರೂ ನಮ್ಮ ಆಫೀಸಿಗೆ ಬಂದರೆ, ಅಥವಾ ಪೋನಲ್ಲಿ ಮಾತಾಡಿದರೂ ನಾನಾಗೇ ಊಟ, ಸಾರು- ಪಲ್ಯಗಳ ವಿಚಾರ ಎತ್ತುತ್ತೇನೆ. ನಮ್ಮಲ್ಲಿ ಈರುಳ್ಳಿ ಹಾಕಿದ ಗಷಿ, ಪಲ್ಯ, ಉಪ್ಕರಿ ಎಂದೆಲ್ಲಾ ಬೇಕಂತಲೇ ಒತ್ತಿ ಒತ್ತಿ ಹೇಳುತ್ತಿದ್ದೆ. ಈಗಲೂ ಹೇಳುತ್ತೇನೆ.


ಈರುಳ್ಳಿ, ಬೆಳ್ಳುಳ್ಳಿಯ ಒಗ್ಗರಣೆ ಘಮ್ಮೆನ್ನುತ್ತಾ ಪ್ರತಿನಿತ್ಯ ಮೂಗಿಗೆ ಬಡಿಯುವಾಗ, ನಮ್ಮನ್ನು ನಾನೇ ಭಾರೀ ಶ್ರೀಮಂತರ ಪಟ್ಟಿಗೆ ಸೇರಿಸಿಕೊಂಡಿದ್ದೆ. ಹೀಗಾಗಿ ಕೃತಕ ಬೆಲೆ ಏರಿಕೆಯಿಂದಾಗಿ, ಅದರಲ್ಲೂ ವಿಶೇಷವಾಗಿ ಈರುಳ್ಳಿ-ಬೆಳ್ಳುಳ್ಳಿಯ ಬೆಲೆಯಿಂದಾಗಿ ಅದನ್ನು ಸೇವಿಸುವ ನಮ್ಮ ಬೆಲೆಯೂ ಏರಿದೆ ಎಂಬ ಕೃತಕ ಖುಷಿಯ ಭ್ರಮಾಲೋಕದಲ್ಲೇ ತೇಲುತ್ತಿರುವಾಗ, ಈರುಳ್ಳಿಗೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿಯನ್ನು ಬಿತ್ತಿದರೆ ನನಗೆ ಹೇಗಾಗಬೇಡ?


ಈ ದಾಳಿಗಳ ದೆಸೆಯಿಂದಾಗಿ, ನಾವು ನ್ಯಾಯವಾಗಿ ಸಂಪಾದಿಸಿದ ದುಡ್ಡಲ್ಲಿ 'ದುಬಾರಿ ಉಳ್ಳಾಗಡ್ಡಿ ಖರೀದಿಸುವ ಉಳ್ಳವರು' ಎಂದು ಸಂಭ್ರಮಿಸುವ ನನ್ನ ಖುಷಿಗೆ ಕಲ್ಲು ಬಿತ್ತಲ್ಲಾ ಎಂಬ ವ್ಯಸನ ನನ್ನದು, ಛೇ!

Rating
No votes yet

Comments