ಎಮ್ಮೆ ನಿನಗೆ ಸಾಟಿ ಇಲ್ಲ
ಮೊನ್ನೆ ಹೀಗೆ ಜಯನಗರದಲ್ಲಿ ರಸ್ತೆ ದಾಟೋಣವೆಂದು ಹುಶಾರಿನಿಂದ ಹೊರಟೆ ಅರ್ದ ದಾಟಿದ ಮೇಲೆ ಗಮನಿಸಿದೆ ನಾನು ಮಾಡಿದ ಯೋಚನೆಯೆ ಎದುರು ಬಾಗದಲ್ಲಿದ್ದ ಮೂರು ಎಮ್ಮೆ ಗಳಿಗೂ ಬಂತೇನೊ ಅವುಗಳು (ಹೆಸರು ತಿಳಿದಿಲ್ಲ) ಈ ಕಡೆಗೆ ಹೊರಟವು. ನಡುರಸ್ತೆಯಲ್ಲಿ ಎದುರಾದ ಎಮ್ಮೆಗಳನ್ನು ಗಮನಿಸಿ ನಾನು ಅವುಗಳ ಪಕ್ಕದಲ್ಲಿ ಬರುವಾಗ ಅನ್ನಿಸಿತು ನಾವು ಅದನ್ನು ಗಮನಿಸುತ್ತೇವೆ ಅಷ್ಟೆ , ಅದಕ್ಕಾದರೆ ನಮ್ಮನ್ನು ಗಮನಿಸುವ ಯಾವ ವ್ಯವದಾನವು ಇಲ್ಲ. ಅಷ್ಟೆ ಅಲ್ಲ ನಮ್ಮನ್ನು ಅದು ಯಾವ ಲೆಕ್ಕದಲ್ಲು ಇಟ್ಟಿಲ್ಲ ಅಂತ.ಕಾಡು ತೊರೆದು ನಾಡಿಗೆ ಬಂದು ಊರ ಪ್ರಾಣಿಯಾಗಿ ಹಲವು ಸಾವಿರ ವರ್ಷಗಳು ಕಳೆದರು ನನಗೆ ಅನ್ನಿಸುವಂತೆ ಈ ಎಮ್ಮೆಗಳು ಮನುಷ್ಯನನ್ನು ಒಂದು ಪ್ರಾಣಿ ಅಂತ ಲೆಕ್ಕಕ್ಕೆ ಇಟ್ಟಿಲ್ಲ ನಾವು ಪಕ್ಕದಲ್ಲಿ ಹೋಗುವಾಗ ನಮ್ಮ ಹುಶಾರಿನಲ್ಲಿರಬೇಕು ಅದು ಕಾಲು ತುಳಿದರೆ ಕಷ್ಟ ಅಂತ. ಈ ಎಮ್ಮೆಗಳನ್ನು ನೋಡುತ್ತಿರುವಾಗ ನನ್ನ ಮನ ಚಿಕ್ಕ ವಯಸ್ಸಿಗೆ ಜಾರಿತು.
ಚಿಕ್ಕವಯಸ್ಸಿನಲ್ಲಿ ನಾನು ನಮ್ಮ ತಾತನ ಮನೆಗೆ , ಹಳ್ಳಿಗೆ ಹೋಗುತ್ತಿದ್ದೆ. ಮನೆಯಲ್ಲಿ ಹಲವು ದನಗಳ ಜೊತೆ ಒಂದು ಎಮ್ಮೆಯು ಇತ್ತು. ಕಾಳಿಯೊ ಮತ್ತೇನೊ ಅದರ ಹೆಸರು. ಅತ್ಯಂತ ಉನ್ನತಾಕರದಲ್ಲಿ ಪರ್ವತದಂತಿದ್ದ ಆ ಎಮ್ಮೆಯ ಕಣ್ಣುಗಳು ಸದಾ ಕೋಪ ಸಿಡುಕಿನಿಂದ ತುಂಬಿ ನೋಡಲು ಭಯ ಎನಿಸುತ್ತಿತ್ತು. ಸದಾ ಸಿರ್ ಎನ್ನುತ್ತಿದ್ದ ಅದರ ಹತ್ತಿರ ಹೋಗಲು ನಮಗೆ ಹೆದರಿಕೆ. ಬಚ್ಚಲು ಮನೆಗೆ ಹೋಗಲು ಸದಾ ಅದನ್ನು ಕಟ್ಟಿದ್ದ ಕೊಟ್ಟಿಗೆಯ ಮೂಲಕವೆ ಹೋಗಬೇಕಾಗುತ್ತಿತ್ತು. ನಾವು ಹುಡುಗರು ಒಳಗೆ ಹೋದರೆ ಸಾಕು ಅದಕ್ಕೇನೊ ಕೋಪ, ತಲೆ ಕಾಲು ಬಾಲ ಎಲ್ಲವನ್ನು ಅಲ್ಲಾಡಿಸಿ ವ್ಯಕ್ತಪಡಿಸುತ್ತಿತ್ತು. ಹುಲ್ಲು ಹಾಕಿ ಸೇವೆ ಮಾಡುವ ಮನೆ ಕೆಲಸದವನನ್ನು ಹೊರತು ಪಡಿಸಿ ಮನೆ ಯಜಮಾನನನ್ನು ಸಹ ಯಾವ ಮುಲಾಜು ಇಲ್ಲದೆ ದೂರ ಓಡಿಸುತ್ತಿತ್ತು.
ಅದರ ಹಾಲು ಕರೆಯುವಾಗ ಮಾತ್ರ ನಮ್ಮ ಅಜ್ಜಿ ಅದರ ಹತ್ತಿರ ಹೋಗುತ್ತಿದ್ದರು. ಆಗ ಅದರೆ ಎದುರಿನ ಬಾನಿಗೆ ಕಲಗಚ್ಚು ತುಂಬಿಸುತ್ತಿದ್ದರು. ಕಲಗಚ್ಚು ಅಂದರೆ ನಮ್ಮ ಬೆಂಗಳೂರಿನ ಹೋಟೆಲಿನ ಕಾಫಿಯಂತಲ್ಲ. ಮನೆಯಲ್ಲಿ ಮಿಕ್ಕಿದ ಮುಸುರೆ ಅಕ್ಕಿ ಬೇಳೆ ತೊಳೆದ ನೀರು ಅಕ್ಕಿಯ ತೌಡು ತರಕಾರಿ ಹೆಚ್ಚುವಾಗ ಉಳಿದ ತುಣುಕಗಳು ಎಲ್ಲ ಸೇರಿಸಿ ಮಾಡಿದ ರುಚಿಕಟ್ಟಾದ ಪಾನಿಯ ,ನಾಲಕ್ಕು ಬಕೆಟ್ಟಿನಷ್ಟು ಕಲಗಚ್ಚನ್ನು ಅದರೆ ಎದುರಿನ ಬಾನಿಗೆ ತುಂಬಿದರೆ , ಅದು ಬಾಯಿ ಹಾಕಿ ಸೊರ್ ಸೊರ್ .. ಅಂತ ಕುಡಿಯುವ ಶಬ್ದ ಕೊಟ್ಟಿಗೆಯಿಂದ ಹೊರಗಿನವರೆಗು ಕೇಳಿಸುತ್ತಿತ್ತು. ಅದರ ರುಚಿಗೆ ಅ ಎಮ್ಮೆ ಮೈಮರೆತು ಅನಂದ ಅನ್ನುವುದು ಅದರ ಬ್ರಹ್ಮರಂದ್ರ ಸೇರಿರುವ ಸಮಯದಲ್ಲಿ ನಮ್ಮ ಅಜ್ಜಿ ಹಾಲನ್ನು ಕರೆಯುತ್ತಿದ್ದರೆ ಅದಕ್ಕೆ ಬಹುಷಃ ಗೊತ್ತೆ ಆಗುತ್ತಿರಲಿಲ್ಲ. ಅದರ ಬ್ರಹ್ಮಾನಂದ ನೆತ್ತಿಯಿಂದ ಇಳಿದ ನಂತರ ಯಥಾಪ್ರಕಾರ ಒಳಗೆ ಹೋದವರನ್ನೆ ಹೆದರಿಸುತ್ತಿತ್ತು.
ಎಮ್ಮೆಯ ಜೊತೆಯಲ್ಲಿಯೆ ಇರುವ ಹಸುಗಳು ಕಾಲ ಕಳೆದಂತೆ ಸಾಕಷ್ಟು ಬದಲಾಗಿವೆ. ಬೆಂಗಳೂರಿನ ಮಾಡ್ರನ ಹಸುಗಳಂತು ತಾವು ಹಸುಗಳು ಎನ್ನುವದನ್ನು ಮರೆತು ಕಸದ ತೊಟ್ಟಿಯಲ್ಲಿ ಬಾಯಿ ಹಾಕಿ ಪ್ಲಾಸ್ಟಿಕೆ ಪೇಪರಿನಿಂದ ಹಿಡಿದು ಎಲ್ಲವನ್ನು ತಿನ್ನುತ್ತ ಪಕ್ಕದಲ್ಲಿರುವ ನಾಯಿಗಳಿಗೆ ಸವಾಲು ಹಾಕುತ್ತಿವೆ (ಗೋರಕ್ಷಕರು ನನ್ನನ್ನು ಕ್ಷಮಿಸಲಿ).ಆದರೆ ಎಮ್ಮೆಗಳು ಮಾತ್ರ ಯಾವ ಬದಲಾವಣೆಯು ಇಲ್ಲ . ಅಂದು ಹೇಗಿದ್ದವೊ ಇಂದಿಗು ಹಾಗೆ ಇವೆ. ಅದೇ ದಿವ್ಯ ನಿರ್ಲಕ್ಷ್ಯ ಅದೇ ನಿದಾನ. ಅದುನಿಕ ಕಾಲದ ಯಾವ ಪರಿಣಾಮವು ಅದರ ಮೇಲಾಗಿಲ್ಲ.
ಅದಕ್ಕೆ ರಾಜ್ ಹಾಡಿದರು...
ಯಾರೆ ಕೂಗಾಡಲಿ ಊರೆ ಹೋರಾಡಲಿ
ಎಮ್ಮೆ ನಿನಗೆ ಸಾಟಿ ಇಲ್ಲ ........
Comments
ಉ: ಎಮ್ಮೆ ನಿನಗೆ ಸಾಟಿ ಇಲ್ಲ