ಸುಬ್ಬುವಿನ ಸಂಪದ ಪರ್ಯಟನೆ !

ಸುಬ್ಬುವಿನ ಸಂಪದ ಪರ್ಯಟನೆ !

ನನಗೆ ಒಂದು ಅಭ್ಯಾಸವಿದೆ .... ಎಷ್ಟೋ ಇವೆ, ಅದರಲ್ಲಿ ಇದೂ ಒಂದು ...

 

ಅದೇನಪ್ಪಾ ಅಂದರೆ, ನಾನು ಬರೆದು, ಸಂಪದದಲ್ಲಿ ಪ್ರಕಟಿಸಿದ ಬರಹವನ್ನು ನನ್ನ ಸ್ನೇಹಿತ ವೃಂದಕ್ಕೆ ಈ-ಮೈಲ್’ನಲ್ಲಿ ಕಳಿಸುವುದು. ಈ ಅಭ್ಯಾಸದಿಂದಾಗಿ ಹಲವಾರು ಮಂದಿಗೆ ಸಂಪದ ಪರಿಚಯ ಮಾಡಿಕೊಟ್ಟ ಹೆಮ್ಮೆ ನನಗೆ !

 

ಸರಿ ... ಸಂತೋಷ ... ಏನೀಗ? ಅಂದಿರಾ. ಮೊದಲೇ appraisal ಸಮಯ. ಅಂದರೆ, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವ ಸಮಯ. ಹಾಗೆ ತಟ್ಟಿಕೊಂಡು ನಾನು ಮಾಡಿರುವ ಈ ಪ್ರಚಾರದ ಕಾರ್ಯವನ್ನು ಹೇಳಿಕೊಂಡಲ್ಲಿ, ಸಂಪದದ ಹರಿಕಾರರು ಏನಾದರೂ ಪ್ರಮೋಷನ್ ಕೊಡ್ತಾರೇನೋ ಅನ್ನೋ (ದುರ್)ಉದ್ದೇಶ ಇಲ್ಲ ಕಣ್ರೀ ....
ನಾನು ಮಾಡಿದ ಈ ಪ್ರಚಾರ ಕೆಲಸದಿಂದ ಏನಾಯ್ತು ಅಂತ ಹೇಳಲಿದ್ದೀನಿ, ಕೇಳಿ ...

 

ನಮ್ಮ ಸುಬ್ಬು ಗೊತ್ತಲ್ಲ?

 

ಅದೇ ’ಕೀಳರಿಮೆ’ಗೆ ತನ್ನ ದೇಹವನ್ನು ಲೀಸ್’ಗೆ ಬಿಟ್ಟಿದ್ದನಲ್ಲ ... ಹಾ! ಹೌದು ಅದೇ ಸುಬ್ಬು.

 

ಇವನೂ ನನ್ನ ಈ-ಮೈಲ್ ಲಿಸ್ಟ್’ನಲ್ಲಿರೋ ಖಾಯಂ ಗಿರಾಕಿ. ನನ್ನ ಹೆಸರಿನಲ್ಲಿ ಬರುವ ಈ-ಮೈಲ್’ಅನ್ನು ನೇರವಾಗಿ ಕ.ಬು’ಗೆ ಕಳಿಸುತ್ತಾನೆ ಎಂಬ ದಿವ್ಯ ಅರಿವಿದ್ದೂ, ಛಲ ಬಿಡದ ವಿಕ್ರಮನಂತೆ ನಾನು ಕಳಿಸುತ್ತಲೇ ಇರ್ತೀನಿ.

 

ಮೊನ್ನೆ ಅಮಾವಾಸ್ಯೆ ದಿನ ಸೂರ್ಯ ಗ್ರಹಣ ಕೂಡ ಬಂದಿತ್ತಲ್ಲ (ಹಾಗಂತ ಯಾರೋ ಹೇಳಿದ್ದು), ಅದರ ಹಿಂದಿನ ದಿನ, ಅಕಸ್ಮಾತ್ ಆಗಿ ನನ್ನ ಈ-ಮೈಲನ್ನು ಸುಬ್ಬು ತೆರೆದನಂತೆ !! (ಈ ವಿಷಯ ನನಗೆ ಆಮೇಲೆ ತಿಳಿಯಿತು) ಇದಕ್ಕೂ ಗ್ರಹಣಕ್ಕೂ ಏನೋ ಲಿಂಕ್ ಇದೆ ಅಂತ ವಿರೋಧ ಪಕ್ಷದವರೂ, ಸಿ.ಬಿ.ಐ ನವರೂ ಒಟ್ಟಾಗಿ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋ ಸುದ್ದಿ ಅಲ್ಲಲ್ಲಿ ಕೇಳಿಬಂದಿತ್ತು. ಇರಲಿ ಬಿಡಿ ....


ಅದಾದ ಮೇಲೆ ಹೀಗೆ ಒಮ್ಮೆ ಸಿಕ್ಕ. ನನ್ನ ಮುಖ ಕಂಡ ಕೂಡಲೆ ಅವನ ಮುಖದಲ್ಲಿ ಏನೋ ಒಂದು ತರಹ ಸಂತೋಷ ಕಾಡಿತ್ತು !!! ಇರಲಿ ಬಿಡಿ ... ನನಗೆ ಇದೇನೂ ಹೊಸದಲ್ಲ .... I am used to it .. ನನ್ನ ಮುಖ ಕಂಡ ಕೂಡಲೆ ತಮಗೆ ಹಣದ ವೃಷ್ಟಿಯೇ ಆಗುತ್ತದೆ ಎಂದು ನಂಬಿರೋ ಹಲವಾರು ಮಂದಿ ಇದ್ದಾರೆ ... ಜಾತಿ, ಮತ, ಹೆಣ್ಣು, ಗಂಡು ಎಂಬೆಲ್ಲ ಭೇದವಿಲ್ಲದೆ ಅವರೆಲ್ಲ ನನಗೆ ಸಾಲ ಕೊಟ್ಟವರೇ ಆಗಿದ್ದವರು!!!


ಅದು ಅತ್ಲಾಗೆ ಹೋಗ್ಲಿ, ವಿಷಯಕ್ಕೆ ಬರೋಣ ... ಸುಬ್ಬು ಸಿಕ್ಕ ಅಂತ ಹೇಳಿದೆ, ಅಲ್ವೇ?


ಅಲ್ಲೇ ಮೂಲೆಯಲ್ಲಿದ್ದ ಒಂದು ಹೋಟೆಲ್ಲಿಗೆ ಎಳೆದುಕೊಂಡು ಹೋದ. ಅಲ್ಲೇ ಒಂದು ಮೂಲೆಯಲ್ಲಿ ವಕ್ಕರಿಸಿ, ಸುಬ್ಬು "ಹೋದ ವಾರ, ನೀನು ಕಳಿಸಿದ ಈ-ಮೈಲ್ ನೋಡಿದೆ ಕಣೋ" ಅನ್ನೋದೇ?


ನನ್ನ ದೇಹದ ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ’ದಲ್ಲೆಲ್ಲಾ ಸಂತೋಷ ಹರಡಿತು ... ನಾನು ಮಾಣಿಯನ್ನು ಕರೆದು ಎರಡು ಪ್ಲೇಟ್ ಜಾಮೂನ್ ಹೇಳಿದೆ. ಸುಬ್ಬು ಮರುನುಡಿದ "ಸಂಪದ ನಿಜಕ್ಕೂ ಕಥೆ-ಕವನ ಇತ್ಯಾದಿಗಳ ಸಾಗರ ಕಣೋ" ಅಂದ. ನನ್ನೆಲ್ಲ ಬರಹ ಖಂಡಿತ ಓದಿದ್ದಾನೆ ಅನ್ನೋದು ಖರೆ ಆಯ್ತು. ಮಾಣಿಗೆ ಜೋರಾಗಿ ಕೂಗಿ ಹೇಳಿದೆ "ಮಸಾಲೆ ಎರಡು" ಅಂತ, ಅವನ ಶೈಲಿಯಲ್ಲೇ !!!


ನಾನು ಕೇಳಿದೆ "ಏನೇನೆಲ್ಲ ಓದಿದೆ. ಸ್ವಲ್ಪ ಹೇಳಯ್ಯಾ !!" ಮಿಕ್ಕ ಮಾತೆಲ್ಲ ಅವನದೇ !


"ಏನು ಬರೀತಾರೋ ಮಾರಾಯ ’ಅಬ್ದುಲ್’ ಅವರು. ಸ್ಟ್ರಾಂಗ್ ಕಾಫಿ ತರಹ ಇರುತ್ತೆ. ಅವರು ’ವಿಕಿಲೀಕ್’ ಬಗ್ಗೆ ಬರೆದ ಲೇಖನ ಸಕತ್ informative  ಆಗಿತ್ತು ಅಲ್ವಾ? ನಾನಂತೂ ಈ ನಡುವೆ ದೊಡ್ಡ ಸಮಾರಂಭಕ್ಕೆ ಹೋದಾಗ ಜಾಸ್ತಿ ಮಾತಾಡಲ್ಲ" ಅಂದ.... ಇವನ ಮಾತುಗಳು ಲೀಕ್ ಆದರೂ, ಆಗದಿದ್ದರೂ ಜಗತ್ತಿನಲ್ಲಿ ಏನೂ ವ್ಯತ್ಯಾಸ ಆಗಲ್ಲ, ಬಿಡಿ !


"’ಅಶೋಕ್ ಕುಮಾರ್’ ಅವರ information collection  ಸಕತ್ತಾಗಿರುತ್ತೆ ಅಲ್ವ? ಇಷ್ಟೆಲ್ಲ ವಿಷಯ ನಾವೇ ಹುಡುಕಬೇಕೂ ಅಂದರೆ ಎಲ್ಲೆಲ್ಲಿ ಅಂತ ಹುಡುಕೋದು? ಅಷ್ಟಕ್ಕೂ ಟೈಮ್ ಬೇಕಲ್ಲಾ?" ... ಅಶೋಕ್ ಅವರ ವಿಷಯ ಸಂಗ್ರಹಣೆ ಕೆಲಸ ಅದ್ಬುತವೇ ನಿಜ ಆದರೆ ಸುಬ್ಬು’ಗೆ ಎನಂಥಾ ಬ್ಯುಸಿ ಕೆಲಸ ಅಂತ ಗೊತ್ತಾಗಲಿಲ್ಲ.


"ನಮ್ಮ ’ಆನಂದರಾಮ ಶಾಸ್ತ್ರಿಗಳು’ ಸೂಪರ್ ಕಣೋ. ಮಾಹಿತಿ ಇರಬಹುದು ಅಥವಾ ಹಾಸ್ಯ ಇರಬಹುದು ಸಕತ್ ಮಜ ಬರುತ್ತೆ. ಯಾಕೋ ಈ ನಡುವೆ ಕಾಣೆ ಆಗಿಬಿಟ್ಟಿದ್ದಾರೆ. 


ಇನ್ನು ’ಆಸುಹೆಗ್ಡೆ’ ಏನು ಮಾರಾಯ? ಆಡೋ ಮಾತುಗಳನ್ನೂ ಕವನದಲ್ಲೇ ಹೇಳ್ತಾರೆ. ವಾಹ್ ವಾಹ್ ... ಅಲ್ಲದೇ, ಎಷ್ಟೋ ಹಿಂದೀ ಹಾಡುಗಳು ಈಗ ಅರ್ಥವಾಗ್ತಿದೆ ನನಗೆ" ...


"ಮೊನ್ನೆ ’ಚಿಕ್ಕು’ದು ಚುರುಮುರಿ ಚೆನ್ನಾಗಿತ್ತು ಕಣೋ ಆದರೆ ಖಾರ ಸ್ವಲ್ಪ ಕಡಿಮೆ ಆಯ್ತು ... ಅವರ ಕೈಯಲ್ಲಿ ಕಾಫೀ ಲೋಟ ನಮ್ಮ ಬಾಯೊಳಗೆ ಚುರುಮುರಿ, ಹೆಂಗೆ? ಅವರ ಮದುವೆಯಂತೆ ಕಣೋ ಪಾಪ... ಹೋಗೋಣ ಅಲ್ವಾ?..." ಅಂದ. ಎಲ್ಲ ಸರಿ ಕಣ್ರೀ, ಆದರೆ ’ಪಾಪ’ ಅಂತ ಯಾಕೆ ಹೇಳಿದ ಸುಬ್ಬು ಅಂತ ಗೊತ್ತಾಗಲಿಲ್ಲ. ಏನಿದ್ದರೂ ಆ ವಿಷಯ ಸುಬ್ಬು ಮತ್ತು ಚಿಕ್ಕು ಇತ್ಯರ್ಥ ಮಾಡಿಕೊಳ್ಳಲಿ, ಅಲ್ವೇ?


’ಗಣೇಶ್’ ಅವರ ಬರೆದ ’ತಮ್ಮಣ್ಣನವರ ದಿನಚರಿ’ ಓದಿದೆಯಾ. ಮೊದಲ ಸಾರಿ ಸುಮ್ಮನೆ ಓದಿದೆ. ಒಳ್ಳೇ ಮಜಾ ಬಂತು. ಆಮೇಲೆ ತಮ್ಮಣ್ಣನ ಪಾನೀಯ ಕುಡಿದು ಓದಿದೆ. ಒಳ್ಳೇ ಕಿಕ್ ಕೊಡ್ತು ಕಣೋ ...


’ಗೋಪಾಲ್’ ಅವರ ಹಾಸ್ಯ ಚೆನ್ನಾಗಿರುತ್ತೆ ಅಲ್ವ? ಪಾಪ, ಮೊನ್ನೆ ಅವರಿಗೆ ಯಾರೋ ಬುರುಡೆಗೆ ಹುಳ ಬಿಟ್ರಂತೆ. ಹೊರಗೆ ಬಂತೋ ಇಲ್ವೋ ಗೊತ್ತಾಗಲಿಲ್ಲ.


ನಮ್ ಮಿಲ್ಟ್ರಿ ಸಾರ್ ’ಗೋಪೀನಥ್’ ಅವರ ಕವನಗಳು ಚೆನ್ನಾಗಿರುತ್ತೆ ಕಣೋ ... ನೀನೂ ಓದು. ಮೊನ್ನೆ ಒಂದು ಕವನದಲ್ಲಿ ಟಾಪ್ ಟು ಬಾಟಮ್ ಶುಭಾಶಯ ಹೇಳಿದ್ದರು. ನಾನು ಸುಬ್ಬೂನ್ನ ಕೇಳಿದೆ "ಸ್ವಲ್ಪ ಬಿಡಿಸಿ ಹೇಳಿದರೆ, ನನಗೂ ಅರ್ಥವಾಗುತ್ತೆ" ಅಂತ. "ಅದಕ್ಕೇ ಕಣೋ ನಿನ್ನನ್ನ ದಡ್ಡ ಅನ್ನೋದು. ವರ್ಷದ ಮೊದಲ ದಿನದಿಂದ ಹಿಡಿದು ಕೊನೇ ದಿನದವರೆಗೂ ಪ್ರಮುಖ ಹಬ್ಬಗಳ ಶುಭಾಶಯಗಳನ್ನ ಒಂದು ಕವನದಲ್ಲಿ ಹೇಳಿದ್ದರು ಅಂದಿದ್ದು". ನಾನು ’ಆಯ್ತು ಕಣ್ಲಾ’ ಅಂದುಕೊಂಡೆ


"ಮುಂದಿನ ಸಾರಿ ಹರೀಶ್ ಆತ್ರೇಯ ಸಮ್ಮಿಲನಕ್ಕೆ ಕರೆದಾಗ, ಖಂಡಿತ ಹೋಗಬೇಕು ಅಂತ ಅಂದುಕೊಂಡಿದ್ದೀನಿ. ಇಬ್ಬರೂ ಹೋಗಿ ಬರೋಣ, ಆಯ್ತಾ" ಅವನೇ ನಿರ್ಧಾರ ಮಾಡಿದ ಮೇಲೆ ನಾನೇನು ಹೇಳಲಿ?


"’ಐನಂಡ ಪ್ರಭು’ ಅವರು ’ಕಾಫಿ - ಆತ್ಮ’ ಅಂತ ಒಂದು ಕಥೆ ಬರೆದಿದ್ದಾರೆ. ಕಥೆ ಬಲು ಚೆನ್ನಾಗಿದೆ ಕಣೋ. ಜನ ನನ್ನಲ್ಲಿರೋ ಸುಬ್ಬೂಗೆ ಬೆಲೆ ಕೊಡ್ತಾರೆಯೇ ವಿನಹ ದೇಹಕ್ಕಲ್ಲ. ಜೀವ ಹೋದ ಕೂಡಲೇ ಈ ಸುಬ್ಬು ಹೆಣವಾಗ್ತಾನೆ ಆದರೆ ಸುಬ್ಬು ಮೌಲ್ಯಗಳು ಅಳಿಯೋದಿಲ್ಲ ಅಂತ ತಿಳಿದು, ಒಂದು ರೀತಿ ಸಮಾಧಾನ ಸಿಕ್ತು ಕಣೋ." ನಾನು ಮನಸ್ಸಿನಲ್ಲೇ ಅಂದುಕೊಂಡೆ ’ಅದೇನೋ ಮೌಲ್ಯಗಳು ಅಂದ್ಯಲ್ಲ ಅದೇನು ಅಂತ ಸ್ವಲ್ಪ ಹೇಳ್ತೀಯಾ?’ ಅಂತ. ಆದರೆ ಬಾಯಿಬಿಟ್ಟು ಹೇಳಲಿಲ್ಲ, ಯಾಕೆಂದರೆ ಅವನು ನನ್ನ ಕಥೆ-ಕವನ ಓದಿದ್ದಾನಲ್ಲ ಅದಕ್ಕೇ !!!


"ಇಂದುಶ್ರೀ ಅವರ ಮಿಸ್ಡ್ ಕಾಲ್ ಕೊಡುವ ಮುನ್ನ ಅನ್ನೋ ಲೇಖನ ಖುಷಿ ಕೊಡ್ತು. ನನಗೆ ಮಿಸ್ಡ್ ಕೊಡೋ ವಿಷಯ ಗೊತ್ತಿತ್ತು ಆದರೆ ಇಷ್ಟೆಲ್ಲ ವಿಷಯ ಗೊತ್ತಿರಲಿಲ್ಲ ಬಿಡು" ಅಂತ ನಕ್ಕ !


"’ಜಯಂತ್’ ಬರೆದ ’ದಿಸೆಂಬರ್ ೩೧ ಕರಾಳ ನೆನಪು’ ಓದಿ ತುಂಬಾ ಬೇಜಾರಾಯ್ತು ಕಣೋ." ನನಗೂ ಬೇಜಾರಾಗಿತ್ತು. ಅದಕ್ಕೇ ಅವನಿಗೆ ಸಮಾಧಾನ ಹೇಳಿದೆ. ಅದಕ್ಕವನು ಮರುನಿಡಿದ "ಯಾವುದೂ ಶಾಶ್ವತ ಅಲ್ಲ. ಎಲ್ಲ ನಶ್ವರ. ನೀನು ಈ ದೋಸೆ ಪೂರ್ತಿ ತಿಂತೀಯಾ ಅನ್ನೋ ಗ್ಯಾರಂಟಿ ಏನಿದೆ, ಅಲ್ವಾ?" ಅನ್ನೋದೇ?


ಅಳು ಮುಖ ಹೊತ್ತವ, ಇದ್ದಕ್ಕಿದ್ದಂತೆ ಜೋರಾಗಿ ನಕ್ಕು ’ಕೋಮಲ್’ ಅವರ ಗೌಡಪ್ಪನ ಕಥೆಗಳು ಮಜಾ ಕೊಡ್ತಿತ್ತು, ಎಲ್ಲಿ ಹೋಗಿ ಬಿಟ್ಟರೋ ಏನೋ? ಅಂದ. ಪ್ರತಿಕ್ರಿಯೆ ವ್ಯಕ್ತಪಡಿಸಲೇ, ಬೇಡವೇ ಅಂತ ಗೊತ್ತಾಗಲಿಲ್ಲ ... ಯಾಕೆಂದರೆ ಮತ್ತೊಮ್ಮೆ ಅವನ ಮುಖಭಾವ ಬದಲಾಗಿತ್ತು. ಅದೇನು ಭಯವೋ, ಆತಂಕವೋ, ಆಕ್ರೋಶವೋ ಗೊತ್ತಾಗಲಿಲ್ಲ. "ಕುಣಿಗಲ್ ಮಂಜು ಅವರ ಆಫ್ಘಾನಿಸ್ತಾನ್ ಕಥೆಗಳು ಓದುತ್ತಿದ್ದರೇ ...." ಹಾಗೆಂದವ ಎರಡು ನಿಮಿಷ ಸುಮ್ಮನಾಗಿ ಬಿಟ್ಟ. ಸೂಕ್ಷ್ಮ ವಿಷಯವಾದ್ದರಿಂದ ನಾನು ಕೆದಕಲಿಲ್ಲ ಬಿಡಿ.


ಸುಬ್ಬು ಉವಾಚ "ದುಬಾಯ್ ’ಮಂಜಣ್ಣ’ ಬರೆಯೋ ಸ್ವಂತ ಅನುಭವದ ಕಥೆಗಳು ಬಲೇ ಜೋರಾಗಿರುತ್ತೆ ಅಲ್ವಾ? ಆದರೆ ಮೊನ್ನೆ ಬರೆದಿದ್ದರಲ್ಲ ’ಕೊರಿಯರ್’ನವನ ಕಥೆ .. ಅದು ಸ್ವಲ್ಪ ಬೋರ್ ಆಯ್ತು" ಅಂತ ... ನಾನು ಯಾಕೋ? ಅಂದೆ .. ಅವನೆಂದ "ಅವರು ಆ ಕೊರಿಯರ್ ಬಾಯ್’ಗೆ ಒಂದು ಬಿಡ್ತಾರೆ ಅಂತ ಮಾಡಿದ್ದೆ, ಡಿಸಪಾಯಿಂಟ್ ಮಾಡಿಬಿಟ್ರು" ... ನಾನು ಹೇಳಿದೆ "ಅಲ್ವೋ, ಅದು ಬರಹ ಕಣೋ ... ವಿಷ್ಣುವರ್ಧನ್ ಸಿನಿಮಾ ಅಲ್ಲಾ" ಅಂತ ... ಅದಕ್ಕವನು "ಏನೇ ಆಗಲಿ ಒಳ್ಳೇ ಸ್ಪೂರ್ತಿ ಬರುತ್ತೆ ಕಣೋ" ... ನನಗ್ಯಾಕೋ ಅನುಮಾನ ಬಂತು. ದುಬೈ ಮಂಜಣ್ಣ ಅವರ ಬರಹದಿಂದ ಸ್ಪೂರ್ತಿ ಬಂತೋ ಅಥವಾ ಅವರ ಆಕ್ಷನ್’ನಿಂದ ಸ್ಪೂರ್ತಿ ಬಂತೋ ಅಂತ. ಮೊದಲೇ ಸರಿಯಾಗಿ ಅವನ ಎದುರಿಗೇ ಕುಳಿತಿದ್ದೆ. ನಮ್ಮ ಹುಷಾರಿನಲ್ಲಿ ನಾವು ಇರಬೇಕು ನೋಡಿ. ಸ್ವಲ್ಪ ಸರಿದು ಕುಳಿತೆ.


"’ಮಧ್ವೇಶ್’ ಅವರ ’ದೀಪಾವಳಿ’ ಕಥೆ ಓದಿದೆಯಾ? ಸತ್ಯ ಘಟನೆ ಅಂತ ತಿಳಿದ ಮೇಲಂತೂ ತುಂಬಾ ಬೇಜಾರಾಯ್ತು ಕಣೋ" ಅಂತ ಅಂದ. ನಾನು ಮತ್ತೆ ಸಮಾಧಾನ ಮಾಡಲು ನೋಡಿದವ ಹಾಗೇ ಸುಮ್ಮನಾದೆ. ಯಾಕೆಂದ್ರೆ ನಾನು ದೋಸೆ ಮುಗಿಸಿದ್ದೆ. "ಎಲ್ಲ ನಶ್ವರ. ದೋಸೆ ಮುಗಿಸಿದ ಮೇಲೆ ನೀನಿರ್ತೀಯ ಅಂತ ಏನು ಗ್ಯಾರಂಟಿ" ಅಂತ ಅಂದುಬಿಟ್ಟರೆ?


"ನಮ್ಮ ನಾಗರಾಜ್ ಕವಿ’ಗಳು ’ಮೂಢ’ ಅಂತ ಹೇಳೊ ಪದಗಳು ನನ್ನೆದುರಿಗೆ ಕುಳಿತು ಹೇಳಿದ ಹಾಗೆ ಇರುತ್ತೆ ಕಣೋ." ನಾನು ಅಂದುಕೊಂಡೆ ’ಅವರು ನಿನ್ನನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಕಣೋ ಬರೆದಿರೋದೂ’ ಅಂತ ...


"’ಪಾರ್ಥ’ ಅವರ ಪ್ರಮಥಿನಿ ಚೆನಾಗಿದ್ದಾಳೆ ಅಲ್ವಾ? ನಾನೂ ಅವತ್ತಿಂದ ಎಷ್ಟೋ ಹಳೇ ಬೀರುಗಳನ್ನ ನೋಡಿದೆ ಕಣೋ. ಬರೀ ಹಳೇ ಜಿರಳೆ ಸಿಕ್ಕಿತೇ ವಿನಹ, ಬಳೆ ಸಿಗಲಿಲ್ಲ." ಅದು ಕಥೆ ಕಣೋ. ಪಾರ್ಥ ಅವರಿಗೆ ಬಳೆ ಸಿಗಲಿಲ್ಲ ಅಂತ ಹೇಳಲು ಹೊರಟೆ, ಆದರೆ ಹೇಳಲಿಲ್ಲ ’ಅವರಿಗೆ ಬಳೆ ಸಿಕ್ಕರೆ ನಿನಗೆ ಹೊಟ್ಟೆಕಿಚ್ಚು, ಅದಕ್ಕೇ ಹಾಗಂತೀಯ’ ಅಂದುಬಿಟ್ಟಾನು !


"ರಾಘವೇಂದ್ರ ನಾವಡ ಅವರು ಶತಾಯುಷಿ ಸ್ವಾಮೀಜಿಗಳ ಬಗ್ಗೆ ಬರೆದ ಲೇಖನ ಓದಿ ಧನ್ಯತಾ ಭಾವ ಬಂತು ಕಣೋ" .... ಅಬ್ಬಬ್ಬಾ ಸುಬ್ಬೂ, ಆ ಸ್ವಾಮೀಜಿಗಳ ಬಗ್ಗೆ ಬರೆದ ಲೇಖನ ಓದಿಯೇ ನಿನ್ನ ಭಾಷೆಯಲ್ಲಿ ಈ ಪಾಟಿ ಬದಲಾವಣೆಯೇ ...


"’ಸತ್ಯಚರಣ’ ಒಂದು ಚಿತ್ರ ಹಾಕಿದ್ರಲ್ಲ, ಅದನ್ನ ನೋಡಿ ನಿನಗೆ ಏನನ್ನಿಸಿತು?" ನಾನೆಂದೆ ’ಅದು ಬುದ್ದಿವಂತರ ಕೆಲಸ ಕಣೋ. ನನಗೆ ಅವೆಲ್ಲ ಗೊತ್ತಾಗೋಲ್ಲ. ಅದಿರಲಿ ನಿನಗೆ ಏನನ್ನಿಸಿತು?’ ಸುಬ್ಬು ಅಂದ ’ಫಿನಿಷ್ ಲೈನ್ ದಾಟಿದ ಆನೆ ಸವಾರ’ ಅಂತ ಆನಿಸಿತು. ಇರಬಹುದು ಎಂದು ನುಡಿದು ಸುಮ್ಮನೆ ಹೂಗುಟ್ಟಿದೆ.


ತಿಂಡಿ ತಿಂದ ತಟ್ಟೆಗಳನ್ನು ಒಯ್ದು, ಜಾಮೂನ್’ಯುಕ್ತ ಬಟ್ಟಲುಗಳನ್ನು ತಂದಿಟ್ಟ ಮಾಣಿ.


ಸರಿಯಾದ ಸಮಯಕ್ಕೇ ತಂದಿಟ್ಟಿದ್ದಾನೆ ... ಒಳ್ಳೇ ಹುಡುಗ .. ಮೆಲ್ಲನೆ ಸವಿಯುತ್ತ, ನಾನು ಸಿದ್ದವಾಗಿ ಕುಳಿತೆ. ಯಾಕೆ ಅಂದಿರಾ?


ಆಗಿಂದ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೆ. ಸುಬ್ಬು ಬಲು ಜೋರು. ಮೊದಲು ಅಬ್ದುಲ್, ಅಶೋಕ್ ಅಂತ ಶುರು ಮಾಡಿ ಆಂಗ್ಲ ಅಕ್ಷರ ಮಾಲೆಯ ಕ್ರಮದಲ್ಲೇ, ತನಗೆ ತಿಳಿದರನ್ನೆಲ್ಲ ಹೆಸರಿಸಿ, ಈಗ ನನ್ನ ಹೆಸರಿನ ಅಕ್ಷರಕ್ಕೆ ತಂದು ನಿಲ್ಲಿಸಿ, ಮೆಲ್ಲನೆ ಜಾಮೂನ್ ಸೇವಿಸುತ್ತಿದ್ದಾನೆ ... ಸದ್ಯ ನೆಲ್ಲಿಕಾಯಿ ಗಾತ್ರದ ಜಾಮೂನ್ ಹೇಳಿದ್ದಕೆ ಸರಿಯಾಯ್ತು. ಮೂರು ಸ್ಕೂಪ್ ಐಸ್-ಕ್ರೀಮ್ ಹೇಳಿದ್ದರೆ ಏನು ಗತಿ?


ಜಾಮೂನ್ ತಿಂದು ಮುಗಿಸಿದ. "ಮತ್ತೆ, ಮನೆ ಕಡೆ ಎಲ್ಲ ಆರಾಮಾನ?" ಅಂದ. ನಾನು "ಎಲ್ಲ ಚೆನ್ನಾಗಿದ್ದರೆ" ಅಂದೆ. "ನಿನ್ನ ಚಿಕ್ಕಪ್ಪನ ಮಗ ಮದುವೆಗೆ ಇದ್ದನಲ್ಲ. ಮದುವೆ ಆಯ್ತಾ?" ಅಂದ. ನಾನು ಹೇಳಿದೆ "ಮುಂಜಿ ಕೂಡ ಆಯ್ತು". ತಬ್ಬಿಬ್ಬಾಗುವ ಸರದಿ ಅವನದು. ನಾನೆಂದೆ "ಅವನಿಗೆ ಮದುವೆ ಆಗಿ, ಅವನ ಮಗನಿಗೆ ಮುಂಜೀನೂ ಆಯ್ತೋ" ಅಂತ ಅಸಮಧಾನದಿಂದ ನುಡಿದೆ. ನನ್ನ ಬಗ್ಗೆ ಹೇಳೋ ಭಡವ ಅಂತ ಬಾಯಿ ಬಿಟ್ಟು ಹೇಗೆ ಹೇಳಲಿ?


ಮಾಣಿ ಬಿಲ್ಲು ತಂದಿಟ್ಟ. ನಾನು ಕೈಗೆ ತೆಗೆದುಕೊಂಡೆ. 


ಅದೇ ಕ್ಷಣ ಸುಬ್ಬು ನನ್ನ ಬಗ್ಗೆ ಹೇಳಿಯೇ ಬಿಟ್ಟ "ಈ ನಡುವೆ ನಿನ್ನ ಬರಹ ಕಾಣಿಸ್ತಿಲ್ಲ. ನೀನು ಬರೆಯೋದು ನಿಲ್ಲಿಸಿಬಿಟ್ಟೆಯಾ ಹೇಗೆ?"

 

Comments