ಮನದಾಸೆ ಫಲಿಸಿತದೋ
ಹಲಸಿನಾಮರ ಕೊಂಬೆ ತುದಿಯಲಿ
ಕೆಲಸಕಾಲಕೆ ಕೂದು ರಾಗದೊ
ಳುಲಿವ ಕೋಗಿಲೆ ದನಿಯ ಕೇಳುವ ಆಸೆ ಎನಗಾಯ್ತು
ನೆಲದ ಮೇಲಿನ ಮರಗಳೆಲ್ಲವು
ಅಲಗ ಕೊಡಲಿಗೆ ಆಗಿ ಲಯ ಕೋ
ಗಿಲೆಯ ಕೂಜನವಿರದ ಜೀವನ ಬರಡು ಬೇಡ ಬಿಡು
ಚ೦ದ ಮಾಮನ ಜತೆಯಿರುಳು ಮಕ
ರಂದ ಕ್ಷೀರಕ್ಕೆರೆದ ಅಂದದ
ಚ೦ದ ತಾರಕೆ ಗಡಣ ನೋಡುವ ಆಸೆ ಎನಗಾಯ್ತು
ಇಂದಿರುಳ ತಮದಲ್ಲಿ ನಾ ಸೊಬ
ಗಿಂದ ಹುಣ್ಣಮೆ ಬಾನ ನೋಡಲು
ಮಂದ ಹೊಗೆಗಡಲಿಂದ ಮನದಾನಂದ ದೂರ ಬಿಡು
ಜೋಡು ಎತ್ತಿನ ಗಾಡಿ ನೋಡಲು
ಜೋಡು ಇಲ್ಲದ ಬರಿಯಗಾಲಲಿ
ಕಾಡ ಬದಿಯಲಿ ಪಾಡಿ ನಡೆಯುವ ಆಸೆ ಎನಗಾಯ್ತು
ನೋಡಿದರೆ ಕಾಡಿಲ್ಲ ಕಟ್ಟಡ
ಗಾಡು ಬೆಳೆದಾಕಾಶದೆತ್ತರ
ಓಡಬೇಕೆನಿಸಿತ್ತು ಈ ಸುಡುಗಾಡು ಬೇಡ ಸುಡು
ಸಾರಸತ್ವವು ತುಂಬಿ ಅಮೃತ
ಧಾರೆ ಸುಧೆಯನು ದಿನವು ಎರೆಯುವ
ಊರ ಗೋವಿನ ಹಾಲ ಕುಡಿಯುವ ಆಸೆ ಎನಗಾಯ್ತು
ತಾರು ಮಾರ್ಗಗಳಲ್ಲಿ ಹುಡುಕಿದೆ
ದಾರಿಯುದ್ದಕು ಸಿಗದೆ ಬಳಲಿದೆ
ಬೇರೆ ದೇಶದ ದನದ ಹಾಲಿಗೆ ರುಚಿಯೆ ಇಲ್ಲ ಬಿಡು
ಇರುಳು ನಿದ್ರೆಯು ಬರದೆ ಅನುದಿನ
ಉರುಳಿ ಕೊರಗಿದೆ ಬಿಡದೆ ಯೋಚನೆ
ಅರಮನೆಯ ನೆಮ್ಮದಿಯ ಬದುಕಿನ ಆಸೆ ಎನಗಾಯ್ತು
ಸೆರೆಮನೆಯ ಜೀವನದ ನಗರವ
ತುರಿಹದಲಿ ಬಿಟ್ಟೋಡಿ ಹಳ್ಳಿಯ
ಭೂರಮೆಯ ಸನ್ನಿಧಿಯ ಸೇರಿದೆನಾಸೆ ಫಲಿಸಿತದೋ
Comments
ಉ: ಮನದಾಸೆ ಫಲಿಸಿತದೋ
In reply to ಉ: ಮನದಾಸೆ ಫಲಿಸಿತದೋ by srimiyar
ಉ: ಮನದಾಸೆ ಫಲಿಸಿತದೋ