ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

Submitted by palachandra on Mon, 01/17/2011 - 11:11

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ ಏಳಬೇಕು ಎಂದು ತೀರ್ಮಾನಿಸಿ ಶನಿವಾರ ರಾತ್ರಿ ೧೧:೩೦ಕ್ಕೆ ಮಲಗಿದೆ. ಭಾನುವಾರ ಬೆಳಿಗ್ಗೆ ೬:೩೦ಕ್ಕೆ ಎಚ್ಚರ ಆಯಿತಾದರೂ ಏಳಬೇಕೆ ಬೇಡವೇ ಎಂಬ ಗೊಂದಲ. ನಾಳೆಯಿಂದ ಆರಂಭಿಸಬಹುದಲ್ಲಾ ಎಂದು ಒಮ್ಮೆ ಅಂದುಕೊಂಡರೂ, ಮನದೊಳಗಿದ್ದ ಆ ಏನೋ ನಿದ್ರಿಸಲು ಬಿಡಲಿಲ್ಲ.

 

ಇನ್ನೇನು ಮಾಡುವುದೆಂದು ಎದ್ದು, ಶೌಚಾದಿ ಮುಗಿಸಿ ಕ್ಯಾಮರಾವನ್ನು ಹೆಗಲಿಗೇರಿಸಿ ನನ್ನ ನೆಚ್ಚಿನ ಸೈಕಲ್ ಏರಿ ಹೊರಟೆ. ಹೊರಟಿದ್ದು ಹೌದು ಆದರೆ ಹೋಗುವುದು ಎಲ್ಲಿಗೆ? ಇದೇನು ಅಂತಹ ಕಷ್ಟದ ಪ್ರಶ್ನೆಯಲ್ಲ. ಸೈಕಲ್ ಹೋಗಬಹುದಾದ ಜಾಗಕ್ಕೆ ಎಂದುತ್ತರ ನೀಡಿ, ನಮ್ಮ ಮನೆಯಿರುವ ಬಾಲಾಜಿ ಲೇ-ಔಟಿನಿಂದ ಮೇಲ್ಮುಖವಾಗಿ ಉಪಕಾರ್ ಲೇ-ಔಟ್ ಕಡೆ ಹೊರಟೆ.

 

ಸೂರ್ಯನ ಹೊಂಗಿರಣ ಮೈಯನ್ನು ಹೊನ್ನಾಗಿಸುತ್ತಿದ್ದರೂ, ತಣ್ಣನೆಯ ಗಾಳಿ ಮೈಯೆಲ್ಲಾ ಸೋಕಿ ಮೈ ಬೆಚ್ಚಗಾಗುವುದನ್ನು ತಪ್ಪಿಸುತ್ತಿತ್ತು. ಚಾಪೆ, ಜಮಖಾನ, ಕಂಬಳಿ... ಛೇ ಮತ್ತದೇ ಆಲೋಚನೆ. ಸುಮ್ಮನೇ ಮನೆಯಲ್ಲಿ ಮಲಗಬಹುದಿತ್ತು. ಆದರೆ ಎದುರುಗಡೆಯ ಏರು ಆಲೋಚನೆಯನ್ನು ಹೊಡೆದುಹಾಕಿ ತನ್ನನ್ನು ಏರುವಂತೆ ಪ್ರೇರೇಪಿಸುತ್ತಿತ್ತು.

 


 

ಆಹಾ, ಮೈ ಬೆಚ್ಚಗಾಗಲು ಸೂರ್ಯಕಿರಣವೇನೂ ಬೇಡ.  ಕೈಕಾಲಾಡಿಸಿದರೆ ಮೈ ತನ್ನಿಂದ ತಾನೇ ಬೆಚ್ಚಗಾಗುವುದು. ಛಳಿಯೂ ಇಲ್ಲ, ನಿದ್ದೆಯ ಅಮಲೂ ಇಲ್ಲ. ಹಾಗೆಯೇ ಬಲಕ್ಕೆ ಸೈಕಲ್ ತಿರುಗಿಸಿ ಮುಂದುವರಿದೆ. ರಸ್ತೆಯ ಬಲಬದಿ ಒಂದು ಗುಡಿಸಲು, ಗುಡಿಸಲ ಮುಂದೆ ಮಣ್ಣಿನ ತೊಟ್ಟಿಯೊಂದರಲ್ಲಿ ನೀರು ತುಂಬಿಸಿಟ್ಟುಕೊಂಡು ಪಾತ್ರೆ ಬೆಳಗುತ್ತಿರುವ ಹೆಣ್ಣು ಮಗಳು. ಆಕೆಯ ಒಂದು ಮಗ್ಗುಲಿನಿಂದ ಹೊಳೆಯುತ್ತಿರುವ ಹೊಂಬೆಳಕು ಆಕೆಯನ್ನು ಜೀವಂತ ಚಿತ್ರವಾಗಿಸಿದೆ. ಸೈಕಲ್ ಹಾಗೆಯೇ ವೇಗ ಕಳೆದುಕೊಂಡಿತು. ನಿಲ್ಲಿಸಿ ಚಿತ್ರ ತೆಗೆಯೋಣವೇ ಎಂದುಕೊಂಡರೂ, ಏನೋ ಅಪಾಯದ ವಾಸನೆ. ಚಿತ್ರವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ. ಹಿಂದೆ ತಿರುತಿರುಗಿ ನೋಡಬೇಕೆನಿಸುವ ಚಿತ್ರ. ಮನದಂತೆ ಸೈಕಲ್ಲೂ ಹಿಂದೆ ತಿರುಗಿಯೇ ಬಿಟ್ಟುತು. ಆಕೆಯಿಂದ ಕೊಂಚ ದೂರದಲ್ಲಿ ನಿಂತು ಆ ಚಿತ್ರವನ್ನೇ ನೋಡತೊಡಗಿದೆ. ಕ್ಯಾಮರಾ ಬ್ಯಾಗಿಗೆ ಕೈಹಾಕಿ ಅದರ ಝಿಪ್ಪನ್ನು ತುಸು ಸರಿಸಿದೆನಷ್ಟೆ... ಮತ್ತೆ ಅಪಾಯದ ವಾಸನೆ. ಆಕೆಯ ಮನೆಯವರು ನೋಡಿ ಏನೂ ಉದ್ದೇಶವಿಲ್ಲದೇ ಚಿತ್ರ ತೆಗೆಯುತ್ತಿರುವ ನನಗೆ ಛೀಮಾರಿ ಹಾಕಿದರೆ. ಸಹವಾಸವೇ ಬೇಡ ಎಂದು, ಕೊನೆಯ ಬಾರಿ ಇನ್ನೊಮ್ಮೆ ಆ ಚಿತ್ರವನ್ನು ನೋಡಿ ಮುಂದುವರಿದೆ.

 

ಯಾವುದೋ ದೊಡ್ಡ ರಸ್ತೆ ಎದುರಾಯಿತು. ಎಡಕ್ಕೋ ಬಲಕ್ಕೋ ಎಂಬ ತೀರ್ಮಾನವಾಗಲಿಲ್ಲ. ಎರಡೂ ಕಡೆ ಕಣ್ಣು ಹಾಯಿಸಿದೆ.

ಎಡಗಡೆ ದೂರಕ್ಕೂ ಹಾಸಿದ ರಸ್ತೆ, ಅಕ್ಕ ಪಕ್ಕದಲ್ಲಿ ಬೋಳು. ಬಲಗಡೆ ತೆಂಗಿನ ತೋಟ, ತೋಟದಲ್ಲಿಯೇ ಟೆಂಟು ಕಟ್ಟಿಕೊಂಡ ರಸ್ತೆ ಕೆಲಸಗಾರರು. ಉದ್ದೇಶವಿಲ್ಲದೆಯೇ ಬಲಕ್ಕೆ ಸೈಕಲ್ ಹೊರಳಿತು. ಎಕರೆಯ ತೋಟದ ನಡುವೆ ಸುಮಾರು ಹತ್ತಿಪ್ಪತ್ತು ಟೆಂಟ್ಗಳು. ಎಲ್ಲರ ಮನೆಯ ಮುಂದೆಯೂ ಮೂರು ಕಲ್ಲನ್ನಿಟ್ಟು ಒಲೆಯನ್ನು ಮಾಡಿದ್ದಾರೆ. ಅದಾಗಲೇ ಬೆಂಕಿ ಏಳುತ್ತಿದೆ. ಹಿಂಬೆಳಕಿನಲ್ಲಿ ಹೊಗೆಯ ಲಾಸ್ಯ ಸುಂದರವಾಗಿ ಕಾಣುತ್ತಿದೆ. ಚಡ್ಡಿಯನ್ನು ಧರಿಸಿದ ಯುವಕನೊಬ್ಬ ಟೆಂಟಿಗೆ ಸ್ವಲ್ಪದೂರದಲ್ಲಿದ್ದ ಕಲ್ಲು ಚಪ್ಪಡಿಯ ಮೇಲೆ ಸ್ನಾನನಿರತನಾಗಿದ್ದಾನೆ. ಪ್ಲಾಸ್ಟಿಕ್ಕಿನ ಕೆಂಪು ಚೊಂಬು, ಕೆಂಪು ಬಕೇಟು, ಒಂದೊಂದೇ ಚೊಂಬು ನೀರನ್ನೂ ಮೈಮೇಲೆ ಹಾಕಿಕೊಂಡಾಗ ಆತನ ಮೈಯಿಂದೇಳುತ್ತಿದ್ದ ಹಬೆ. ಇನ್ನೊಂದು ಜೀವಂತ ಚಿತ್ರ, ಮತ್ತೆ ನನ್ನ ಕೈ ಕ್ಯಾಮರಾ ಬ್ಯಾಗನ್ನು ತಡಕಾಡಿತು. ಅದೇ ಹೆದರಿಕೆಯ ವಾಸನೆ. ಸ್ನಾನ ಮಾಡುವ  ದೃಷ್ಯವನ್ನು ಸೆರೆಹಿಡಿದರೆ ಜನರು ಸುಮ್ಮನಿರುತ್ತಾರೆಯೇ? ಹಾಗೇ ಮುಂದಕ್ಕೆ ಸಾಗಿದೆ.

 

ಎಡ, ಬಲ ಏರು ತಗ್ಗು  ಸುಮಾರು ೪, ೫ ಕಿ.ಮೀ. ದಾರಿ ಸವೆಸಿರಬಹುದು. ದಾರಿಯುದ್ದಕ್ಕೂ ಜೀವಂತ ಚಿತ್ರಗಳು. ಚಿತ್ರ ಸೆರೆ ಹಿಡಿಯಲು ಪುಕ್ಕಲುತನ.ಇಷ್ಟು ದಿನ ಎಷ್ಟು ಚಿತ್ರಗಳು ಹೀಗೆ ನನ್ನ ಕಣ್ಣು ತಪ್ಪಿರಬಹುದು. ಇದನ್ನೆಲ್ಲಾ ಯೋಚಿಸುತ್ತಿರುವಾಗ ಹೊಟ್ಟೆಯಲ್ಲಿ ಏನೂ ಇಲ್ಲದ್ದು ನೆನಪಾಯಿತು. ಪಕ್ಕದಲ್ಲಿದ್ದ ಅಂಗಡಿ ಹೊಕ್ಕು ೧ ಟೀ, ೧ ಬನ್ನನ್ನು ತೆಗೆದುಕೊಂಡೆ. ಅರ್ಧ ಬನ್ನು ನನ್ನ ಹೊಟ್ಟೆ ಸೇರಿದರೆ, ಇನ್ನರ್ಧ ನನ್ನ ಹೊಟ್ಟೆಗಾಗದಂತೆ ತಿನ್ನುವುದನ್ನೇ ನೊಡುತ್ತಿದ್ದ ಬೀದಿ ನಾಯಿಯ ಪಾಲಾಯ್ತು. ದುಡ್ಡು ಕೊಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪುಟ್ಟ ಹುಡುಗಿಯೊಬ್ಬಳು ಬಂದಳು. ಗುಟ್ಕಾ ಪ್ಯಾಕೇಟಿನ ಸರ, ಒಂದೆರಡು ಚಾಕಲೇಟುಗಳನ್ನು ಕೊಂಡು ಹೊರಟಳು.  ಆಕೆಯನ್ನೇ ಹಿಂಬಾಲಿಸಿದೆ. ರಸ್ತೆಯ ಎರಡೂ ಬದಿ ಹೊಂದಿಸಲು ಇಟ್ಟ ಚರಂಡಿ ಪೈಪುಗಳು, ಅಷ್ಟೇನೂ ಗಾಢಬಣ್ಣದ್ದಲ್ಲದ ರಸ್ತೆಯಲ್ಲಿ ಆಕೆಯ ಕೆಂಪು ಬಟ್ಟೆ ಎದ್ದು ಕಾಣಿಸುತಿತ್ತು. ವೇಗ ಹೆಚ್ಚಿಸಿಕೊಂಡು ಆಕೆಯಿಂದ ಕೊಂಚ ಮುಂದೆ ಹೋದೆ. ಸೈಕಲ್ ಮೇಲೇ ಕುಳಿತು, ಕಾಲನ್ನು ಪೈಪಿಗೆ ಆಧಾರವಾಗಿ ನಿಲ್ಲಿಸಿ, ನನ್ನ ಕ್ಯಾಮರಾ ಹೊರ ತೆಗೆದು ಹಿಂತಿರುಗಿದೆ. ಆಕೆಯ ಎಡ ಮಗ್ಗುಲಿನಿಂದ ಬೆಳಕು ಯಾವುದೇ ಅಡೆತಡೆಯಿಲ್ಲದೇ ಸೂಸಿಬರುತ್ತಿತ್ತು. ನನಗೆ ಚೆನ್ನಾದ ಫ್ರೇಮ್ ಸಿಕ್ಕಿದೊಡನೆ ಕ್ಯಾಮರಾ ಕ್ಲಿಕ್ಕಿಸಿದೆ. ಆಕೆಯ ಮುಖ ಇದ್ಯಾರಪ್ಪ ತನ್ನ ಫೋಟೋ ತೆಗಿತಾ ಇರೋದು ಅದೂ ಬೆಳ್-ಬೆಳ್ಗೆ ಎಂಬಂತಿತ್ತು. ಅದೇ ಆ ಸಮಯದ ಮೊದಲ ಮತ್ತು ಕೊನೇಯ ಚಿತ್ರವಾಗಿತ್ತು! ಕಾರಣ ಕ್ಯಾಮರಾದ ಬ್ಯಾಟರಿ ಕೈಕೊಟ್ಟಿತ್ತು.

 

ಮನೆಯ ಕಡೆ ಸೈಕಲ್ ತಿರುಗಿಸಿ ಹೊರಟೆ. ಮನೆಗೆ ಹೋಗಿ ಬ್ಯಾಟರಿ ಚಾರ್ಜ್ ಮಾಡಿ ನೋಡಿದರೆ ಚಿತ್ರ ಬಿಳಿಚಿಕೊಂಡಂತಿತ್ತು. ಕ್ಯಾಮರಾದ ಸಂಯೋಜನೆ ಕಡಿಮೆ ಬೆಳಕಿನಲ್ಲಿ ತೆಗೆಯುವ ಚಿತ್ರದ್ದಾಗಿತ್ತು. Aperture priority modeನಲ್ಲಿ ISO 1000, f/1.8. exposure 1/4000 sec ನಲ್ಲಿದ್ದರೂ, ಪ್ರಖರ ಬೆಳಕಿನಿಂದ ಚಿತ್ರ ಓವರ್ ಎಕ್ಸ್-ಪೋಸಾಗಿತ್ತು. ಅದೂ ಅಲ್ಲದೇ ಚಿತ್ರ raw formatನಲ್ಲಿರದೇ jpg ಆಗಿತ್ತು. ನಿರಾಸೆಯಾದರೂ gimpನಲ್ಲಿ ಓಪನ್ ಮಾಡಿ, levels ಹೆಚ್ಚು ಕಡಿಮೆ ಮಾಡಿ, ಕೆಂಬಣ್ಣದ ಸಾಚುರೇಶನ್ ಹೆಚ್ಚಿಸಿ, unsharp mask ಬಳಸಿ ಚಿತ್ರವನ್ನು ಶಾರ್ಪ್ ಮಾಡಿದಾಗ ಈ ಕೆಳಗಿನ ಚಿತ್ರ ಸಿಕ್ಕಿತು.    

 

GUTKA FOR MY FATHER

Comments