ಕಾಫಿಯೋ ಅಥವಾ ಲೋಟವೋ ನಿಮ್ಮ ವಿವೇಚನೆಗೆ ಬಿಟ್ಟಿದ್ದು...
ಒಮ್ಮೆ, ಜೀವನದಲ್ಲಿ ಬಹಳ ಎತ್ತರದ ಸ್ಥಾನಗಳಿಗೆ ಏರಿರುವ, ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಮೂಹವೊಂದು ತಮ್ಮ ಹಳೆಯ ಪ್ರೊಫೆಸರರನ್ನು ಭೇಟಿಯಾಗಲು ಬಂದರು.
ಪ್ರೊಫೆಸರ್ ಮನೆಯಲ್ಲಿ ಮಾತುಕತೆ ಆರಂಭವಾಯಿತು. ಕೆಲಕ್ಷಣಗಳಲ್ಲೆ ಮಾತುಕತೆ ತಮ್ಮ ತಮ್ಮ ಕೆಲಸ ಮತ್ತು ಜೀವನದಲ್ಲಿರುವ ತೊಂದರೆ ಮತ್ತು ಒತ್ತಡಗಳ ಬಗ್ಗೆ ದೋಷಾರೋಪಣೆ ಮಾಡುವ ಹಂತಕ್ಕೆ ತಲುಪಿತು.
ಬಂದಿದ್ದ ತನ್ನ ವಿದ್ಯಾರ್ಥಿಗಳನ್ನು ಸತ್ಕರಿಸುವ ಸಲುವಾಗಿ ಪ್ರೊಫೆಸರ್ ಅಡುಗೆಮನೆ ಹೊಕ್ಕು, ದೊಡ್ಡ ಹೂಜಿಯಲ್ಲಿ ಕಾಫಿ ಮತ್ತು ವಿವಿಧ ಬಗೆಯ ಲೋಟಗಳು ~ ಪಿಂಗಾಣಿಯವು, ಪ್ಲಾಸ್ಟಿಕ್ ನವು, ಗಾಜಿನವು, ಕೆಲವು ಅಂದವಿಲ್ಲದವು, ಕೆಲವು ದುಬಾರಿಯಾದವು, ಕೆಲವು ಉತ್ಕೃಷ್ಠ ಗುಣಮಟ್ಟದವು ~ ತಂದು ವಿದ್ಯಾರ್ಥಿಗಳ ಮುಂದಿಟ್ಟು, ತಾವೆ ಲೋಟಗಳನ್ನು ಆಯ್ದುಕೊಂಡು ಕಾಫಿಯನ್ನು ಹಾಕಿಕೊಳ್ಳುವಂತೆ ಹೇಳಿದರು.
ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಲೋಟಗಳಿರುವುದನ್ನು ಗಮನಿಸಿದ ಪ್ರೊಫೆಸರ್ ಹೇಳಿದರು:
" ನೀವು ಸರಿಯಾಗಿ ಗಮನಿಸಿದಲ್ಲಿ, ಅಷ್ಟೇನು ಅಂದವಲ್ಲದ, ಕಳಪೆ ಗುಣಮಟ್ಟದ ಲೋಟಗಳನ್ನು ಬಿಟ್ಟು ಮಿಕ್ಕೆಲ್ಲಾ ಸುಂದರವಾದ, ದುಬಾರಿಯಾದ, ಉತ್ಕೃಷ್ಠ ಗುಣಮಟ್ಟದ ಲೋಟಗಳನ್ನು ಆರಿಸಿಕೊಂಡಿದ್ದೀರಿ. ಇದರಲ್ಲಿ ಅಂಥಾ ಅತಿಶಯೋಕ್ತಿ ಏನಿಲ್ಲಾ, ಏಕೆಂದರೆ ನಿಮಗೆ ಯಾವಾಗಲೂ ಉತ್ತಮವಾದದ್ದೆ ಬೇಕಿರುತ್ತದೆ, ನಿಮ್ಮ ಕಷ್ಟಗಳ ಮತ್ತು ಒತ್ತಡಗಳ ಮೂಲ ಕಾರಣ ಅದೆ.ನಿಮ್ಮೆಲ್ಲರಿಗೂ ಮುಖ್ಯವಾಗಿ ಬೇಕಿರುವುದು ಕಾಫಿ, ಲೋಟವಲ್ಲ. ಆದರೂ, ನೀವು ಇತರರದ್ದಕ್ಕಿಂತಲೂ ಉತ್ತಮವಾದ ಲೋಟವನ್ನು ಬಹಳ ಪ್ರಜ್ಞಾಪೂರ್ವಕವಾಗಿ ಆರಿಸಿಕೊಂಡಿರಿ.ಈಗ ಕಾಫಿ ಎಂಬುದು ಜೀವನವಾದರೆ, ಕೆಲಸ, ಹಣ ಮತ್ತು ಸ್ಥಾನಮಾನಗಳು ಈ ಸಮಾಜದಲ್ಲಿ ಲೋಟಗಳಂತೆ. ಅವು ನಿಮ್ಮ ಜೀವನವನ್ನು ಹಿಡಿದಿಡುವ ಕೆಲವು ಸಾಧನಗಳಷ್ಟೆ, ಆದರೆ ಜೀವನದ ಗುಣಮಟ್ಟವನ್ನು ಬದಲಿಸುವುದಿಲ್ಲ. ಕೆಲವೊಮ್ಮೆ ಈ ಲೋಟಗಳನ್ನು ಆಯ್ದುಕೊಳ್ಳುವ ಭರದಲ್ಲಿ, ನಾವು ಅದರಲ್ಲಿರುವ ಕಾಫಿಯ ಸವಿಯನ್ನು ಸವಿಯುವುದರಲ್ಲಿ ವಿಫಲರಾಗುತ್ತೇವೆ.
ಆದ್ದರಿಂದ, ಲೋಟಗಳು ನಿಮ್ಮ ಜೀವನವನ್ನು ಆಳದಿರಲಿ, ಬದಲಿಗೆ ಅದರಲ್ಲಿರುವ ಕಾಫಿಯ ಸವಿಯನ್ನು ಆನಂದಿಸಿ. "
ಇದು ನನಗೆ ಮಿಂಚಂಚೆಯಲ್ಲಿ ಬಂದದ್ದು. ಆಂಗ್ಲ ಭಾಷೆಯಲ್ಲಿರುವುದನ್ನು ಕನ್ನಡಕ್ಕೆ ಅನುವಾದಿಸುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.
Comments
ಉ: ಕಾಫಿಯೋ ಅಥವಾ ಲೋಟವೋ ನಿಮ್ಮ ವಿವೇಚನೆಗೆ ಬಿಟ್ಟಿದ್ದು...
In reply to ಉ: ಕಾಫಿಯೋ ಅಥವಾ ಲೋಟವೋ ನಿಮ್ಮ ವಿವೇಚನೆಗೆ ಬಿಟ್ಟಿದ್ದು... by malathi shimoga
ಉ: ಕಾಫಿಯೋ ಅಥವಾ ಲೋಟವೋ ನಿಮ್ಮ ವಿವೇಚನೆಗೆ ಬಿಟ್ಟಿದ್ದು...