ಸಂಭಾವಿತ ಠಕ್ಕ

ಸಂಭಾವಿತ ಠಕ್ಕ

    ಕೊಡಗಿನಲ್ಲಿ ಹಸಿರು ಗದ್ದೆ-ತೋಟಗಳ ನಡುವೆ ಹತ್ತಡಿ ಅಗಲದ ಡಾಮರುರಸ್ತೆಯಲ್ಲಿ ಸಾಗುತ್ತಿದ್ದರೆ ಇದ್ದಕ್ಕಿದ್ದಂತೆಯೇ ಇಬ್ಬದಿಗಳಲ್ಲಿ ಆರೆಂಟು ಅಂಗಡಿಗಳು, ಒಂದು ಬ್ಯಾಂಕ್, ಒಂದು ಪೋಸ್ಟ್ ಆಫೀಸ್, ಒಂದು ಮಸೀದಿ, ಒಂದು ಮೆಕಾನಿಕ್ ಅಂಗಡಿ, ಅಲ್ಲಲ್ಲಿ ಕೆಲವಾರು ಮನೆಗಳು - ಮೊದಲಾದವು ಪ್ರತ್ಯಕ್ಷವಾಗಿಬಿಡುತ್ತವೆ. ಈ ಒಂದು-ಒಂದೂವರೆ ಕಿಲೋಮೀಟರ್ ಉದ್ದದ ಸಂಕಲನ ಒಂದು ಪೇಟೆ! ಪೇಟೆಯೆಂದು ಹೇಳಿದರೆ ಸೋಮವಾರಪೇಟೆ, ವೀರಾಜಪೇಟೆ, ಮುಂತಾದವನ್ನು ಎಣಿಸಿಕೊಂಡಿದ್ದರೆ, ಕಣ್ಣಾರೆ ಕಂಡಾಗ ಅದೊಂದು ಊರೂ ಅಲ್ಲವಲ್ಲಾ ಎಂದನ್ನಿಸುತ್ತದೆ. 

   ಇಂಥಾ ಒಂದು ಪೇಟೆಯಲ್ಲಿ ಪೆಮ್ಮಯ್ಯ ಅಂಗಡಿ ಇಟ್ಟಿದ್ದಾರೆ. ಕಟ್ಟಡಗಳ ದುರುಸ್ತಿಗೆ ಬೇಕಾದ ಸಿಮೆಂಟ್, ಪೈಂಟ್ಸ್, ಡಿಸ್ಟೆಂಪರ್ಸ್, ಇತ್ಯಾದಿಗಳಲ್ಲದೆ, ಕಾಫಿ-ಏಲಕ್ಕಿ ತೋಟಗಳಿಗೆ ಅತ್ಯವಶ್ಯವಾಗಿ, ತುರ್ತಾಗಿ ಬೇಕಾದ ಕೆಲವು ವಸ್ತು-ಉಪಕರಣಗಳೂ ಅಲ್ಲಿ ಸಿಗುತ್ತವೆ. ಪೂರ್ಣಪ್ರಮಾಣದಲ್ಲಿ ಅಲ್ಲದಿದ್ದರೂ ಕಾಫಿ, ಏಲಕ್ಕಿ, ಕರಿಮೆಣಸು, ಮುಂತಾದ ಉತ್ಪನ್ನಗಳ ಕೊಡುಕೊಳ್ಳುವಿಕೆಯ ವ್ಯವಹಾರವನ್ನೂ, ಹಣದ ಲೇವಾದೇವಿಯನ್ನೂ ಅವರು ನಡೆಸುತ್ತಾರೆ. ಕೆಲವು ದೈನಿಕ ಹಾಗೂ ಇನ್ನಿತರ ನಿಯತಕಾಲಿಕಗಳ ಏಜೆನ್ಸಿಯೂ ಇದೆ.

     ಮನುಷ್ಯ ನೋಡಲು ತುಂಬ ಸಂಭಾವಿತನಂತಿದ್ದಾರೆ. ಐವತ್ತು-ಅರುವತ್ತರ ಪ್ರಾಯ. ಅರೆಬಕ್ಕತಲೆ. ಸೌಮ್ಯ ನಡೆ-ನುಡಿಗಳು. ಬೆಲ್ಟ್ ಕಟ್ಟಿದ ಪ್ಯಾಂಟಿನೊಳಕ್ಕೆ ಶರ್ಟ್ ತೂರಿಸಿ ಸಾಕ್ಸ್-ಶೂಗಳನ್ನು ಧರಿಸಿ ನಿತ್ಯ ಪೇಟೆಯಲ್ಲಿ ಓಡಾಡುವ ಇತರರಂತೆಯೇ ಅಚ್ಚುಕಟ್ಟಾಗಿರುತ್ತಾರೆ. ವ್ಯವಹಾರ ಚತುರ ಎಂಬುದು ಅವರನ್ನು ನೋಡಿದರೆ ಅನ್ನಲಾಗದು. ಆದರೆ ಕೆಲವೊಂದು ಘಟನೆಗಳು ಕೇಳಿದಾಗ ನಗುಬರಿಸಿದರೂ, ಅವರ ಚಾಲಾಕಿತನವನ್ನು ನೋಡಿ ಬೆಟ್ಟುಕಚ್ಚುವಂತೆ ಮಾಡುತ್ತವೆ.

ಭೂತಕಾಲ ಪತ್ರಿಕೆ

     ಇತ್ತೀಚೆಗೆ ಪಳಂಗಪ್ಪನವರು ಪೆಮ್ಮಯ್ಯನವರ ಅಂಗಡಿಯಿಂದ ಒಂದು ದೈನಿಕವನ್ನು ಕೊಂಡರು. ಮನೆಗೆ ಹೋಗಿ ನಿಧಾನವಾಗಿ ಪತ್ರಿಕೆಯನ್ನು ಬಿಡಿಸಿ ಓದಲಾರಭಿಸಿದರು. ಓದುತ್ತಿದ್ದಂತೆಯೇ ಅದರಲ್ಲಿದ್ದ ಸುದ್ಧಿಗಳೆಲ್ಲಾ ಎಲ್ಲೋ ಕೇಳಿದ್ದವೇ ಅಗಿರುವಂತಿದೆಯಲ್ಲಾ ಎಂಬ ಭಾವನೆ ಬರತೊಡಗಿತು. ಪುಟಗಳನ್ನು ತಿರುಗಿಸಿ ಓದಿದಾಗ ಕೆಲವು ಹೊಸ ಸುದ್ಧಿಗಳೆಂದೆನ್ನಿಸಿದರೂ, ಹೆಚ್ಚಿನವು ತನಗೆ ತಿಳಿದವೇ, ಎನ್ನಿಸಿತು. ‘ಪೆಮ್ಮಯ್ಯ ಎಲ್ಲಾದರೂ ತಪ್ಪಿ ನಿನ್ನೆಯ ಪತ್ರಿಕೆ ಕೊಟ್ಟುಬಿಟ್ಟರೇ’ ಎಂದುಕೊಳ್ಳುತ್ತಿದ್ದರೆ ನಿನ್ನೆಗಿಂತಲೂ ತೀರಾ ಹಳೆಯ ವರ್ತಮಾನಗಳು! ಕೊನೆಗೆ ಪುಟದ ಮೇಲ್ಭಾಗವನ್ನು ನೋಡಿದರೆ ದಿನಾಂಕ ೧೨ ಡಿಸೆಂಬರ್ ೨೦೦೯ ಎಂದಿದೆ. ‘ಅರೇ! ಇದು ತಪ್ಪಾಗಿ ಪ್ರಿಂಟಾಗಿದೆಯಾ?’ ಎಂದುಕೊಳ್ಳುತ್ತಾ ಪತ್ರಿಕೆಯ ಎಲ್ಲಾ ಪುಟಗಳನ್ನು ಗಮನವಿಟ್ಟು ನೋಡಿದರು. ‘ಯೇ, ಇಲ್ಲೆಲ್ಲಾ ೧೨ ಡಿಸೆಂಬರ್ ೨೦೦೯ ಎಂದೇ ಇದೆಯಲ್ಲಪ್ಪಾ! ಆದರೆ ಇವತ್ತಿನ ತಾರೀಕು ೧೨ ಡಿಸೆಂಬರ್ ೨೦೧೦!’

     ತುಸು ಹೊತ್ತು ಮೂಢರಂತೆ ಕುಳಿತ ಪಳಂಗಪ್ಪನವರಿಗೆ ಜ್ಞಾನೋದಯವಾಯಿತು. ‘ಪೆಮ್ಮಯ್ಯ ಸೆರೀ ಒಂದು ವರ್ಷದ ಹಿಂದಿನ ಪತ್ರಿಕೆಯನ್ನು ಹಿಡಿಸಿದ್ದಾನೆ! ಎಲಾ ಇವನಾ!’ ಎಂದು ನಕ್ಕರು. ‘ನನಗೆ ಹತ್ತಿಸಕ್ಕೆ ಬೇಕಾಗಿಯೇ ಈ ಪೇಪರನ್ನು ತೆಗೆದಿಟ್ಟಿದ್ದನಾ, ಅವನೂ!’ ಎಂದು ಮೂಗಿನ ಮೇಲೆ ಬೆರಳಿಟ್ಟರು.

 

ಕಳೆದುಹೋದ ಕಲ್ಲು

     ದಿಲ್ಲಿಯಲ್ಲಿ ಉದ್ಯೋಗದಲ್ಲಿರುವ ಪೂವಯ್ಯ ವರ್ಷಕ್ಕೊಮ್ಮೆ ಊರಿಗೆ ಬರುವವರು. ಎರಡು ವರ್ಷಗಳ ಹಿಂದೆ ಬಂದಿದ್ದಾಗ ಪೆಮ್ಮಯ್ಯನವರಿಂದ ಎರಡು ಕೇಜಿ ಕರಿಮೆಣಸು ಕೊಂಡರು. "ಡೆಲ್ಲಿಯಲ್ಲಿ ನಮ್ಮ ಮಿತ್ರರಿಗೆ ನೆರೆಮನೆಗಳವರಿಗೆ ಕೊಡುವುದಕ್ಕೆ ಬೇಕು. ಮತ್ತೆ ನಮಗೂ ಸೇರಿಸಿ ಎರಡು ಕಿಲೋ ಇರಲೀಂತ..."

     "ಹೌದಾ? ಹಾಗಾದರೆ ನಾನು ಒಳಗಿನಿಂದ ಒಳ್ಳೆಯದೇ ಕೊಡುತ್ತೇನೆ" ಎಂದು ಪೆಮ್ಮಯ್ಯ ಒಳಗಿನಿಂದ ಒಂದು ಹಿಡಿ ಮೆಣಸನ್ನು ತಂದು ತೋರಿಸಿ ಅದರ ಗುಣಗಾನವನ್ನು ಮಾಡಿದರು. "ಅಷ್ಟು ದೂರ ತೆಕೊಂಡು ಹೋಗಲಿಕ್ಕೆ ಚೆನ್ನಾಗಿ ಪ್ಯಾಕ್ ಮಾಡಿ ಕೊಡ್ತೇನೆ" ಎಂದು ಅಂಗಡಿಯ ಹಿಂಭಾಗದಲ್ಲಿರುವ ತಮ್ಮ ಮನೆಗೆ ಹೋಗಿ, ಹತ್ತಿಪ್ಪತ್ತು ನಿಮಿಷಗಳ ಬಳಿಕ ಚೊಕ್ಕದಾಗಿ ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಕೈಚೀಲವೊಂದನ್ನು ತಂದರು. ಅದನ್ನು ಪೂವಯ್ಯನವರ ಎದುರಿಗೇ ಅಂಗಡಿಯ ತಕ್ಕಡಿಯಲ್ಲಿಟ್ಟು, "ಎರಡು ಕೇಜಿ...ಸ್ವಲ್ಪ ಜಾಸ್ತಿಯಿದೆ... ಪರವಾಗಿಲ್ಲ...ಅಲ್ಲಿ ಗಿಫ್ಟ್ ಕೊಡುತ್ತೀರಾ? ...ಕೊಡಿ... ಕ್ವಾಲಿಟಿ ತುಂಬ ಚೆನ್ನಾಗಿದೆ..." ಎಂದು ಅವರ ಕೈಗಿತ್ತರು. ಕರಿಮೆಣಸಿನ ಆ ವರ್ಷದ ಫಸಲು, ಪೇಟೆಧಾರಣೆ, ಕೆಲಸದಾಳುಗಳ ಬರ, ಇತ್ಯಾದಿಗಳ ಕುರಿತು ಉಪನ್ಯಾಸವಿತ್ತು ಪೂವಯ್ಯನವರನ್ನು ಕಳುಹಿಸಿಕೊಟ್ಟರು.

     ಮರುವರ್ಷ ಊರಿಗೆ ಬಂದ ಮರುದಿನವೇ ಪೂವಯ್ಯನವರು ಪೆಮ್ಮಯ್ಯನವರ ಅಂಗಡಿಗೆ ಹೋಗಿ ಅವರ ಗಲ್ಲಾ ಪೆಟ್ಟಿಗೆಯ ಮೇಲೆ ಅಂಗೈಯಗಲದ ಸುಮಾರು ಅರ್ಧ ಕೇಜಿ ಭಾರದ ಕಲ್ಲೊಂದನ್ನಿಟ್ಟು, "ಹೋದ ಸರ್ತಿ ಬಂದಾಗ ಇಲ್ಲಿಂದ ಎರಡು ಕೇಜಿ ಕರಿಮೆಣಸು ತೆಕೊಂಡು ಹೋಗಿದ್ದೆ. ನೆನಪುಂಟಲ್ಲಾ? ನೀವೇ ನೀಟಾಗಿ ಪ್ಯಾಕ್ ಮಾಡಿ ಕೊಟ್ಟಿದ್ದಿರಿ. ಆ ಪ್ಯಾಕೆಟ್ಟೊಳಗೆ ಈ ಕಲ್ಲಿತ್ತು. ನಿಮ್ಮದಾ ನೋಡಿ... ಕಳೆದುಹೋದದ್ದನ್ನು ಹುಡುಕಿ ತಂದಿದ್ದೇನೆ," ಎಂದರು ವ್ಯಂಗ್ಯವಾಗಿ.

     ಪೆಮ್ಮಯ್ಯ ಆ ಕಲ್ಲನ್ನೊಮ್ಮೆ ದಿಟ್ಟಿಸಿ ನೋಡಿ, ಅಂಗಡಿಯಲ್ಲಿದ್ದ ತಮ್ಮ ಕೆಲಸದವನನ್ನು ಕುರಿತು, "ಏಯ್! ಬಾರೋ ಇಲ್ಲಿ" ಎಂದು ಕರೆದರು. ಅವನು ಹತ್ತಿರ ಬರುತ್ತಲೂ ಕೈಬೀಸಿ ಅವನ ಕೆನ್ನೆಗೊಂದು ‘ಫಟ್ಟೀರ್’ ಎಂದು ಹೊಡೆದು, "ಸುವ್ವರ್! ಹೀಗೇನೋ ಮಾಡೂದೂ? ಎಷ್ಟು ಸರ್ತಿ ನಿನ್ಗೆ ಹೇಳೂದು, ಮನಸ್ಸಿಟ್ಟು ಕೆಲಸಮಾಡೂಂತ, ಆಂ?" ಎಂದು ಘರ್ಜಿಸಿದರು. "ಹೋಗು ಒಳಗೆ! ಒಣಗಿಸೂದಕ್ಕಿಟ್ಟ ಆ ಕಾಫಿ ಮೇಲೆ ಕಾಲಾಡಿಸು, ಹೋಗು!"

     ನಂತರ ಪೆಮ್ಮಯ್ಯ, "ಸಾರಿ, ಪೂವಯ್ಯಣಾ! ಇದೂ ಏನಾಗಿದೆಯೆಂದರೇ...ಮೆಣಸು ಒಣಗಿಸೂದಕ್ಕೆ ಅದನ್ನು ಪೇಪರ್ ಮೇಲೆ ಹರಡಿಸಿಟ್ಟು, ಬಿಸಿಲಲ್ಲಿ ಇಡುತ್ತೇವೆಯಲ್ಲಾ, ಆಗ ಗಾಳಿಗೆ ಹಾರಿ ಹೋಗದೇ ಇರೂದಕ್ಕೆ ನಾಕು ಮೂಲೆಗೆ ಈ ಥರಾ ಕಲ್ಲು ಮಡಗುತ್ತೇವೆ. ಈ ಬದ್ಮಾಶ್ ಪ್ಯಾಕ್ ಮಾಡುವಾಗ ಒಂದು ಕಲ್ಲನ್ನೂ ಸೇರಿಸಿ ಕಟ್ಟಿಬಿಟ್ಟಿದ್ದಾನೆ," ಎಂದೆಲ್ಲಾ ಮಾತಾಡಿ ಸಮಾಧಾನ ಮಾಡಿದರು.

     ಪೂವಯ್ಯನವರಿಗೆ ಚೆನ್ನಾಗಿ ನೆನಪಲ್ಲಿತ್ತು, ಅದನ್ನು ಪ್ಯಾಕ್ ಮಾಡಿದವರು ಈತನೇ ಹೊರತು ಆಳಲ್ಲ, ಎಂದು. ಈಗಿನ ಘಟನೆಯನ್ನು ನೋಡುತ್ತಿದ್ದವರಿಗೆ ಗೊತ್ತಿತ್ತು, ಕೆನ್ನೆ ಮೇಲೆ ಹೊಡೆಸಿಕೊಂಡ ಈ ಕೆಲಸದಾಳು ಬಂದು ಒಂದು ತಿಂಗಳೂ ಆಗಿಲ್ಲವೆಂದು!

 

ಅಣ್ಣ-ತಮ್ಮಂದಿರ ಅನುಬಂಧ

     ಪೆಮ್ಮಯ್ಯ ಪಕ್ಕದ ಪಟ್ಟಣದಿಂದ ತಮ್ಮ ಅಂಗಡಿಗೆ ಬೇಕಾದ ಸಾಮಾನುಗಳನ್ನು ಕೆಲವೊಮ್ಮೆ ಹಣ ಕೊಟ್ಟು, ಹಲವು ಬಾರಿ ಸಾಲವಾಗಿ ತರುತ್ತಿದ್ದರು. ಹೀಗೆಯೇ ಅಲ್ಲಿನ ವ್ಯಾಪರಿ ಐಮದೆಗೆ ಕೊಡಲು ಎಂಟು-ಹತ್ತು ಸಾವಿರ ರೂಪಾಯಿ ಸಾಲ ಬಾಕಿಯಿತ್ತು. ಪಟ್ಟಣಕ್ಕೆ ಹೋದಾಗಲೆಲ್ಲಾ ಬಹಳ ಎಚ್ಚರಿಕೆಯಿಂದ ಅವನ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದರು. ಕೊನೆಗೊಮ್ಮೆ ಐಮದೆಯೇ ಪೆಮ್ಮಯ್ಯನವರನ್ನು ಹುಡುಕಿಕೊಂಡು ಬಂದರು. ಆತನನ್ನು ದೂರದಿಂದಲೇ ನೋಡಿದ ಪೆಮ್ಮಯ್ಯ ಒಳಕ್ಕೆ ನಡೆದು, ತಮ್ಮ ಕೃತಕ ಹಲ್ಲುಗಳನ್ನು ತೆಗೆದಿಟ್ಟರು. ತಲೆಯ ಮೇಲೆ ಮಂಕೀಕ್ಯಾಪೊಂದನ್ನು ಮುಖಮಾತ್ರ ಕಾಣಿಸುವಂತೆ ಕುತ್ತಿಗೆಯವರೆಗೆ ಎಳೆದು ತೊಟ್ಟುಕೊಂಡರು. ಅಲ್ಲಿಲ್ಲಿ ವಿಚಾರಿಸುತ್ತಾ ಅಂಗಡಿಗೆ ಬಂದ ಐಮದೆಯನ್ನು ಅಪರಿಚಿತನನ್ನು ನೋಡುವಂತೆ ನೋಡಿ, ಏನೆಂದು ಗೋಣುಹಾಕಿ ಕೇಳಿದರು. ಐಮದೆ, "ಇದು ಪೆಮ್ಮಯ್ಯನವರ ಅಂಗಡಿಯೋ?" ಎಂದು ಸಂಶಯದ ಸ್ವರದಲ್ಲಿ ಕೇಳಿದರು.            

     "ಹೌದು.."

      "ನೀವು ಪೆಮ್ಮಯ್ಯನರಲ್ಲವಾ?" ಮತ್ತಷ್ಟು ಸಂದೇಹದ ಪ್ರಶ್ನೆ.

      "ಅಲ್ಲ, ನಾನು ಅವನ ಅಣ್ಣ," ಬೊಚ್ಚು ಬಾಯಲ್ಲಿ ಪೆಮ್ಮಯ್ಯ ನುಡಿದರು. "ಏನಾಗಬೇಕಿತ್ತು?" 

      "ಅವರೆಲ್ಲಿ? ಅವರು ನನಗೆ ಹಣ ಕೊಡೂದಿದೆ. ಬಹಳ ದಿನ ಆಯಿತು..."

      "ಹೌದೋ? ಅವನಿಲ್ಲ, ಇವತ್ತು. ಮೈಸೂರಿಗೆ ಹೋಗಿದ್ದಾನೆ. ಅದಕ್ಕೆ ನಾನು ಅಂಗಡಿಯಲ್ಲಿ ಕೂತಿದ್ದು."

      "ಅವರು ಯಾವಾಗ ಬರೂದು?" "ಎರಡು ಮೂರು ದಿವಸ ಆಗ್ತದೇಂತ ಹೇಳಿದ... ಬಂದ ಮೇಲೆ ಹೇಳ್ತೇನೆ"

      "ಆಯಿತು. ಬಂದ ಮೇಲೆ ಮರೆಯದೆ ಹೇಳಿ. ನನಿಗೆ ಸ್ವಲ್ಪ ಅರ್ಜೆಂಟ್ ಹಣ ಬೇಕು... ಅದಕ್ಕೆ ಮಾಡಿ.."

      ಅಂಗಡಿಯ ಮೆಟ್ಟಲಿಳಿದು ಹೋಗುತ್ತಿದ್ದ ಐಮದೆಯನ್ನು ನೋಡುತ್ತಾ ಪೆಮ್ಮಯ್ಯ ಅಂದುಕೊಂಡರು, ‘ಬೀಸುವ ದೊಣ್ಣೆ ತಪ್ಪಿಸಿಯಾಯಿತು. ತನ್ನ ವ್ಯಾಪಾರ ಬಿಟ್ಟು ಈ ಕಾಕ ಹುಡುಕಿಕೊಂಡು ಮತ್ತೆ ಬರುವುದುಂಟಾ?’

Comments