ಗಾಡಿ ಬುಲಾರ ಹೀಹೈ, ಸೀಟಿ ಬಜಾರ ಹೀಹೈ...

ಗಾಡಿ ಬುಲಾರ ಹೀಹೈ, ಸೀಟಿ ಬಜಾರ ಹೀಹೈ...

 

ಬಾಲಿವುಡ್ ಸಿನಿಮಾಕ್ಕೂ - ಭಾರತೀಯ ರೈಲಿಗೂ ಬಲು ಸಂಬಂಧವಯ್ಯಾ? ಯಾಕೆ ಅಂತೀರಾ....ವಿಶ್ವದ ಸಿನಿಮಾ ಪ್ರಪಂಚದಲಿ ಅತೀ ಹೆಚ್ಚು ಸಿನೆಮಾಗಳನ್ನು ಮಾಡುವುದು ಬಾಲಿವುಡ್ ಹಾಗೆಯೇ ಸಂಚಾರಿ ಪ್ರಪಂಚದಲಿ ವಿಶ್ವದಲ್ಲೇ ಅತೀ ದೊಡ್ಡ ಸಂಚಾರಿ ಇಂಡಿಯನ್ ರೈಲ್ವೇಸ್. ಮತ್ತೊಂದು ಸಾಮ್ಯತೆ ಇವೆರಡೂ ಜನ ಸಾಮಾನ್ಯರ ಜೀವನವನ್ನು ಪ್ರತಿಬಿಂಬಿಸುತ್ತದೆ. ವಿಷ್ಣು ಮತ್ತು ಮಂಜುಳಾ ರೈಲಿನ ಮೇಲೆ ಹಾಡುವ ’ಕಾಲವನ್ನು ತಡೆಯೋರು ಯಾರೂ ಇಲ್ಲಾ’, ’ಬಲು ಅಪರೂಪ ನಮ್ ಜೋಡಿ, ಎಂಥ ಕಚೇರಿಗೂ ನಾವ್ ರೆಡಿ..ಲಗ್ನಪತ್ರಿಕೆ ಚಿತ್ರದ ಉದಯಶಂಕರ್ ಮತ್ತು ಶಿವರಾಮ್’ ಹೇಗೆ ಮರೆಯಲು ಸಾಧ್ಯ ಹೇಳಿ. ಬೆಂಗಳೂರು ಮೈಲ್ ಕನ್ನಡದಲ್ಲಿ ಪ್ರಪ್ರಥಮ ರೈಲು ಚಿತ್ರವಾದರೆ ಪ್ರೇಮದ ಕಾಣಿಕೆಯ ಮೊದಲ ದೃಶ್ಯದಲ್ಲಿ ರೈಲು.

ಹಿಂದಿ ಪಿಕ್ಚರ್- ರೈಲು ಛಟ್ಟನೆ ನೆನಪಿಗೆ ಬರುವುದು ಕಮಲ್ ಅಮ್ರೋಹಿಯ ಪಾಕೀಜಾ ಡೈಲಾಗ್: "ಯೇ ಪಾಂವ್ ಜಮೀನ್ ಪರ್ ಮತ್ ಉತಾರಿಯೇಗಾ, ಮೈಲೆ ಹೋಜಾಯೇಂಗೆ". ಅಂದಿನ ದಿನಗಳಲ್ಲಿ ಈ ಡೈಲಾಗ್ ಯುವಕರ ಬಾಯಲ್ಲಿ ಜನಜನಿತ. ಆವೋ ಬಚ್ಚೋ ತುಮ್ಹೇ ದಿಖಾಯೇ-ವಂದೇ ಮಾತರಂ, ವಂದೇ ಮಾತರಂ ೧೯೫೪ ರಲ್ಲಿ ಬಂದ ಜಾಗೃತಿ ಚಿತ್ರದ ಪ್ರದೀಪ್ ಬರೆದ ಹಾಡು, ವಯಸ್ಸಿನ ಅಂತರವಿಲ್ಲದೆ ಆ ಹಾಡಿನ ವಂದೇಮಾತರಂಗೆ ದನಿಗೂಡಿಸಿದರು ಎಲ್ಲಾ. ೧೯೬೦ರಲ್ಲಿ ಅಶೋಕ್‌ಕುಮಾರ್-ನೂತನ್‌ಳ ಅಭಿನಯದ, ಎಸ್.ಡಿ.ಬರ್ಮನ್ ಅವರು ಸಂಗೀತ ನೀಡಿದ್ದ ಬಂಧಿನಿಯ "ಮೆರೆ ಸಾಜನ್ ಹೆ ಉಸ್ ಪಾರ್’, ೬೦ರ ದಶಕದ ದೇವಾನಂದ್-ವಹೀದಾ ರ ಕಾಲಾ ಬಜಾರಿನ ’ಅಪ್ನೆ ತೊ ಆಹ್ ಇಕ್ ತೂಫಾನ್ ಹೈ, ಊಪರ್ ವಾಲಾ ಜಾನ್‌ಕರ್ ಅಂಜಾನ್ ಹೈ’, ಕಾರಿನ ಮೇಲೆ ಕೂತ ದೇವ್, ರೈಲಿನ ಕಿಟಕಿಯ ಬಳಿ ಕುಳಿತ ಆಶಾಪರೇಖಳಿಗಾಗಿ ಹಾಡುವ ’ಜಿಯಾ ಹೋ..ಜೀಯ ಕುಚ್ ಬೋಲ್ ದೋ, ಜಬ್ ಪ್ಯಾರ್ ಕಿಸಿಸೆ ಹೋತಾ ಹೈ’..ಇಂದಿಗೂ ಕೇಳಿದಾಗ ಆ ಕಾಲದ ಪ್ಯಾರಿನ ಮಹತ್ತು-ಗಮ್ಮತ್ತು.  ಫೌಜಿ ಜಿತ್ರದ ’ಫೌಜಿ ಮೆರಾ ನಾಮ್, ವರ್ಧಿ ಹೆ ಭಗ್‌ವಾನ್’ ..ಹುಮ್ಮಸ್ಸು ತಂದರೆ ಆನಂದ್‌ಭಕ್ಷಿಯವರ, ಧರ್ಮೇಂದ್ರ-ಶತ್ರುಘ್ನಸಿನ್ಹಾ ಅಭಿನಯದ ದೋಸ್ತ್ ಚಿತ್ರದ ಅರ್ಥವತ್ತಾದ ’ಗಾಡಿ ಬುಲಾರ ಹೀಹೈ’ ರೈಲಿನಂತೆಯೇ ಸಾಗುವ ಜನಸಾಮಾನ್ಯ ಜೀವನವನು ಪ್ರತಿಬಿಂಬಿಸಿದರೆ, ರಾಜೇಶ್‍ಖನ್ನಾ-ಶರ್ಮಿಳಾರ ಆರಾಧನಾ ಚಿತ್ರದ "ಮೆರೆ ಸಪನೋಂಕಿ ರಾನಿ" ಇಂದೂ ಯುವಕರನು ಹುಚ್ಚೆಬ್ಬಿಸುದಂತೂ ಸೈ.

ಶಶಿಕಪೂರ್ ಅಭಿನಯದಲ್ಲಿನ ’ಹಮ್ ದೋ ನೋ ದೋ ಪ್ರೇಮಿ’ , ರಿಷಿಕಪೂರ್ ಬೋಗಿಯ ಮೇಲೆ ನಿಂತು ಪದ್ಮಿನಿ ಕೊಲ್ಹಾಪುರಿಗಾಗಿ ಹಾಡಿದ ’ಹೋಗಾ ತುಮ್ ಸೆ ಪ್ಯಾರಾ ಕೌನ್, ಹಮ್ ಕೋ ತೊ’, ರೈಲಿನ ಚಿತ್ರ ಬರ್ನಿಂಗ್ ಟ್ರೈನ್ ’ಪಲ್ ದೋ ಪಲ್ ಕಾ ಸಾಥ್’ ಪ್ರೇಮಿಗಳನು ಒಂದು ಗೂಡಿಸಿದರೆ, ಮತ್ತದೇ ಬರ್ನಿಂಗ್ ಟ್ರೈನ್ ಚಿತ್ರದ ’ತೆರಿ ಹೈ ಜಮೀನ್ ತೆರ ಆಸಮಾ, ಸಭೀ ಕಾ ಹೈ ತು’...ಸಂಕಟದಲಿ-ವೆಂಕಟರಮಣ ಬಿಂಬಿಸಿತ್ತು. ನಟಿ ಲಕ್ಷ್ಮಿಗೆ ಹೆಸರು ತಂದ ಜೂಲಿ ಎಂಜಿನ್ ಡ್ರೈವರ್ ಹಾಗೂ ಅವನ ಪರಿವಾರದ ಕಥೆಯಾದರೆ, ಬೆಂಗಳೂರಿನ ರೈಲು ನಿಲ್ದಾಣದಲಿ ಚಿತ್ರಿತಗೊಂಡ "ಕೂಲಿ" ಚಿತ್ರೀಕರಣ ಸಮಯ ಅಮಿತಾಭ್‌ನನ್ನು ಆಸ್ಪತ್ರೆಗೆ ಅಟ್ಟಿತು. ಎ.ಆರ್.ರೆಹಮಾನ್‌ಗೆ ಆಸ್ಕರ್ ತಂದುಕೊಟ್ಟ ಸ್ಲಂಡಾಗ್ ಚಿತ್ರದ ಜೈ ಹೊ ಹಾಡು ಕೂಡ ಮುಂಬಯಿಯ ವಿಕ್ಟೋರಿಯಾ ಟರ್ಮಿನಸ್‌ನಲಿ ಚಿತ್ರೀಕರಣಗೊಂಡದ್ದು. ಶೋಲೆ ಚಿತ್ರದ ರೈಲಿನ ಸನ್ನಿವೇಶವನು ಮರೆಯುವರಾರು.

೮೦ರ ದಶಕದ ವರೆಗೂ ಬಹಳಷ್ಟು ಚಿತ್ರಗಳಲ್ಲಿ ರೈಲು ದೃಶ್ಯಗಳು ಸಾಮಾನ್ಯ. ರೈಲುಗಳಲಿ ಹಾಡು, ಮೀಟಿಂಗ್, ಫೈಟಿಂಗ್, ಪ್ರೇಮಿಗಳ-ಕಣ್ಣುಮುಚ್ಚಾಲೆಯಾಟ, ಗಂಡ-ಹೆಂಡತಿ, ಒಡಹುಟ್ಟಿದವರು, ನಾಯಕ-ನಾಯಕಿಯರು ದೂರವಾಗುವುದು ಇವೆಲ್ಲವಕ್ಕೂ ಪ್ರಶಸ್ತ ಸ್ಥಳ ರೈಲು ನಿಲ್ದಾಣ ಆಗಿತ್ತು. ಬಡತನ, ಸಾಮಾಜಿಕ, ಮಧ್ಯಮ ವರ್ಗಗಳ ಚಿತ್ರಗಳು ತಟಸ್ಥವಾಗಿರುವ ಕಾಲವಿದು. ಶ್ರೀಮಂತಿಕೆ, ವೈಭವೋಪೇತ ಸೆಟ್‌ಗಳ ಯುಗವಿದು. ಸುಯ್ಯನೆ, ರೊಯ್ಯನೆ ಓಡುವ ಕಾರು, ಜೀಪು ಅಥವಾ ನೆನೆದೊಡನೆ ವಿದೇಶಕ್ಕೆ ಏರುವ ಏರು-ಪ್ಲೇನು.

ನಂಗತೂ ರ‍ೈಲು ಪಯಣ ಬಲು ಇಷ್ಟ. ಹಾದಿಯುದ್ದಕ್ಕೂ ಸಿಗುವ ತಿನಿಸು, ಅಧ್ವಾನವಾದರೂ ಇಷ್ಟವಾಗುವ ಕಾಫಿ. ಹಾಗೇ ಕಣ್ಣಾಡಿಸಿ, ಗಮನಿಸಿ ಸರ್ವಧರ್ಮ ಸಮನ್ವಯ ಭಾರತೀಯ ರೈಲುಗಳಲ್ಲಿ. ಮಲೈಕಾ ಅರೋರಾಳ ಸೊಂಟ ಕುಣಿಸುವ ಛಯ್ಯಾ, ಛಯ್ಯಾ ಹಾಡಂತೂ ಜಗಜ್ಜಾಹೀರ. ಟ್ರೈನ್ ಡಾನ್ಸ್ ನೈಸ್ ಏನೋ ಸರಿ. ಆದರೆ, ಮುಂಬೈ ಲೋಕಲ್ ಅಥವಾ ಅನ್-ರಿಸರ್ವ್ಡ್ ಬೋಗಿ ಹತ್ತಿದವರು ದಿನ ನಿತ್ಯ ಮಾಡುವ ನಿಜ ಜೀವನದ ಕಠಿಣ ಡ್ಯಾನ್ಸ್ ಅಲ್ಲಿನ ದಿನ ರೈಲು ಯಾತ್ರಿಕರಿಗೆ ಮಾತ್ರ ಗೊತ್ತುಂಟು. ಅವರ ದಿನ ನಿತ್ಯದ ರೈಲೋಡುವ, ಓಡೋಡಿ ಬಂದು ರೈಲೇರುವ ಸ್ಟೆಪ್‌ಗಳು ಪ್ರಾಣಕ್ಕೇ ಸಂಚಕಾರ ತಂದೀತು.  

ನಮ್ಮ ರೈಲಿನ ಬಗ್ಗೆ.....

ದೇಶದ ಉದ್ದಗಲಕ್ಕೂ ೧೫೬ ವರುಷಗಳಿಂದ ಅರವತ್ತು ಸಾವಿರ ಕಿ.ಮಿ ಲಕ್ಷಾಂತರ ಜನರನು, ಸರಕು-ಸಾಮಾಗ್ರಿಗಳನು ಹೊತ್ತೊಯ್ಯುವ ಭಾರತೀಯ ರೈಲು ವೆರಿ, ವೆರಿನೈಸ್ ಹಾಗೂ ವೆರಿ ಎಫಿಷಿಯಂಟ್. ಭಾರತೀಯ ರೈಲು ಸಂಚಾರ ಪ್ರಾರಂಭಗೊಂಡಿದ್ದು ೧೬ ಏಪ್ರಿಲ್ ೧೮೫೩. ಸಾಹೇಬ್, ಸಿಂಧ್ ಹಾಗೂ ಸುಲ್ತಾನ್ ಎಂಬ ಮೂರು ಎಂಜಿನ್‌ಗಳ ಜನ ಸಂಚಾರಿ ರೈಲು ಮೊಟ್ಟ ಮೊದಲ ಬಾರಿ ಬೋರಿ ಬಂದರ್(ಮುಂಬೈ) ನಿಂದ ೩೪ ಕಿ.ಮೀ. ದೂರದ ಠಾಣೆಯ ತನಕ. ಅಂದಿನಿಂದ ಇಂದಿನವರೆಗೂ ಪ್ರಾಂತ್ಯ, ವರ್ಗ, ಭಾಷೆ, ಬಡವ-ಬಲ್ಲಿದ, ಸಿರಿವಂತ-ಭಿಕ್ಷುಕರನು ಹೊತ್ತೊಯ್ಯುವ ಸಂಚಾರಿ ರೈಲು ಜನ ಸಾಮಾನ್ಯರ ದಿನ ನಿತ್ಯದ ಅವಿಭಾಜ್ಯ ಅಂಗವಾಗಿದೆ. ನಮ್ಮಲ್ಲಿ ಆಸಕ್ತಿ, ಸಹನೆ, ಕುತೂಹಲ ಇದ್ದಲ್ಲಿ ನಾವು ರೈಲುಗಳಲಿ ವೈವಿಧ್ಯಮಯ ಸಂಸ್ಕೃತಿಯನ್ನೊಳಗೊಂಡಿರುವ ಒಂದು ಪುಟ್ಟ ಭಾರತವನೇ ನಾವು ರೈಲಿನಲಿ ಕಾಣಬಲ್ಲೆವು.

 

 

Comments