ಬಣ್ಣಗಳ ಜಗಳ

ಬಣ್ಣಗಳ ಜಗಳ

ಕವನ

ಬಣ್ಣಗಳ ಜಗಳ

ಕೆಂಪು ನೀಲಿ ಹಳದಿ ಬಿಳುಪು
ಬಣ್ಣಗಳೊಂದೆಡೆ  ಸೇರಿದವು
ನಾನೇ ಹೆಚ್ಚು  ನಾನೇ ಹೆಚ್ಚು
ಎನ್ನುತ ಜಗಳವ ಮಾಡಿದವು  ||ಪ||

ಮೊದಲಿಗೆ ತಾನೇ ಎಂದಿತು ಕೆಂಪು
ರಂಗಿನ ಗುಂಪಿನೊಳೆನದೇ ಪೆಂಪು
ಎನ್ನುಳಿದರೆ ನಿಮ್ಮೆಲ್ಲರ ಗುಂಪು
ಬೆಲೆಯಿಲ್ಲದೆಯೇ ಮೂಲೆಗುಂಪು  ||೧||


ಕೆಂಪಣ್ಣನ ಮಾತಿಗೆ ಜೋರು
ಗದ್ದಲ ಮಾಡಲು ಸಭೆಯೋರು
ಸಾಕು ಸಾಕು ಕೆಂಪಣ್ಣ
ನಾನಿಹೆ ನೋಡು ನೀಲಣ್ಣ ||


ಗಗನವ ನೋಡು ಸಾಗರ ನೋಡು
ನೀಲವೇ ಕೊನೆಯೊಳು ಕಾಣುವುದು
ವರ್ಣಜಾಲಗಳ ಈ ವೈಭವದೊಳು
ಹಿರಿತನವೆನಗೇ ಸಲ್ಲುವುದು  ||೨||


ನೀಲನ ಮಾತೂ ಯಾಕೋ ಬೋರು
ನಿಂತಳು ಹಳದಿಯ ಚೆಲುವಮ್ಮ
ಥಳಕಿನ ಬಳುಕಿನ ಹೊಂಬಣ್ಣದಲಿ
  ಸೆಳೆದಳು ತನ್ನೆಡೆ ಸಭೆಯನ್ನ  ||


ನೋಡಿರಿ ಎಲ್ಲರು ಚೆಲುವಿಕೆ ಎಂದರೆ
ನಾನೇ ಆಗಿಹೆ ಸೌಂದರ್ಯ
ಅರಿಯಿರಿ ನಿಮ್ಮಯ ಮದವಡಗಿಸಿರಿ
ತೋರುವಿರೇಕೆ ಮಾತ್ಸರ್ಯ  ||೩||


ಅಬ್ಬಾ ! ಅಬ್ಬಾ ! ಎಂಥಾ ಮಾತು
ಆಡಿದಳಲ್ಲೀ ಚೆಲುವಮ್ಮ
ಎನ್ನುತ ಬಿಳಿನಗೆಯಾಡುತಲೆದ್ದ
ಘನ ಗಂಭೀರದ ಬಿಳಿಯಣ್ಣ  ||


ಕೆಮ್ಮುತ ಮಾತಿಗೆ ತೊಡಗಿದನಾಗ
ನಾನೇ ಎಲ್ಲರ ಹಿರಿಯಣ್ಣ
ನಿಮ್ಮೆಲ್ಲರ ಕಿರಿತನವನ್ನೊಪ್ಪಿರಿ
ಮಾಡುವೆನಾಗ ಸರಿಯನ್ನ  ||೪||


ಆಯಿತು ದೊಡ್ಡದು ಗಲಾಟೆಯಲ್ಲಿ
ಓಡುತ ಬಂದರು ಉಳಿದವರು
ವಿಷಯವ ತಿಳಿದು ಚರ್ಚೆಗೆ ಇಳಿದು
ವಾದವನವರೂ ಹೂಡಿದರು ||


ಕೇಳಿರಿ ನಾನು ಬೂದಿರಬಹುದು
ಹಕ್ಕಲಿ ನಿಮ್ಮಂತೆಯೇ ಸಮನು
ಕಡೆಗಣಿಸಿದರೆನ್ನನು ನಾ ಬಿಡೆನು
ಸಮಯಕೆ ಎಲ್ಲೂ ಸೇರುವೆನು  ||೫||


ತಡವರಿಸಿದರೇನ್  ಜೋರಾಗಿಯೇ ತಾನ್
ಗಡಬಡಿಸಿದನು ಕರಿಯಣ್ಣ
ಮೊದಲಿಂದಲು ನೀವ್ಗಳು ಹೀಗೆಯೆ ಸರಿ
ಹೇಳುವರಿಲ್ಲ ಸರಿಯನ್ನ  ||


ಹಸಿರಮ್ಮಾ ನೀನಾದರು ಹೇಳು
ಇವರೆಲ್ಲರಿಗೆ ಕರಿಕಥೆಯ
ಎನ್ನುತ ಹಸಿರನು ನೋಡುತ ಕುಳಿತನು
ಕೇಳಲು ತನ್ನಯ ಪರಿ ಪರಿಯ  ||೬||


ಹಸಿರಮ್ಮಗೆ ಕಪ್ಪನ ಮಾತೊಪ್ಪದು
ಆಕೆಯು ಭಿಗುಮೊಗ ಮಾಡಿದಳು
ಹಸಿರಿಲ್ಲದೆ ಉಸಿರೆಂತಿದೆ ಮರುಳೆ
ಹಸಿರಿನ ಮಹಿಮೆಯ ಸಾರಿದಳು  ||


ಎಲ್ಲರು ಹಿರಿಯರೆ ಹೇಳುವರಾರು
ಕೇಳುವರಾರೀ ಸಭೆಯೊಳಗೆ
ಇವರೆಲ್ಲರ ಈ ಗದ್ದಲ ಕೇಳಿ
ನಕ್ಕನು ರವಿಯು ನಭದೊಳಗೆ  ||೭||


ಒಮ್ಮೆಲೆ ತಾನು ಅಡಗಿದನಾಗ
ಕಗ್ಗತ್ತಲೆಯು ಎಲ್ಲೆಡೆಗೆ
ಆಹಾ ಓಹೋ ಹಾಹಾಕಾರ
ಬಣ್ಣದ ಮೇಳದ ಒಳಗಡೆಗೆ  ||


ಬಿದ್ದಿಹ ರುಮಾಲು ಸಿಕ್ಕುವುದಿಲ್ಲ
ಬಣ್ಣಗಳಿಲ್ಲಿ ಕಾಣುವುದಿಲ್ಲ
ಸಿಕ್ಕಿದ ಪೇಟವನಿಟ್ಟರು ತಲೆಗೆ
ಗೊಣಗಾಡುತ್ತಲೆ  ಹೊರಟರು ಕಡೆಗೆ  ||


ಒಮ್ಮೆಲೆ ಬೆಳಕನು ರವಿ ಹೊಮ್ಮಿಸಲು
ನಾಚಿಕೆಗೊಂದವು ಬಣ್ಣಗಳು
ಹಿರಿತನವಿರುವುದು ಬೆಳಕಿನಲಿ
ಅರಿತರು ಮುಂದಕೆ ಬಾಳಿನಲಿ  ||೮||



                                                                                                                                                                                                                                                             

                                                                                                 -  ಸದಾನಂದ

Comments