ಪಸರಿಸಿ ಪರಿಸರ ಜಾಗೃತಿ

ಪಸರಿಸಿ ಪರಿಸರ ಜಾಗೃತಿ

ಕವನ

ಅಣ್ಣ ತಮ್ಮ ಅಕ್ಕ ತಂಗಿ ಬಂಧುಗಳಿರಾ ಬನ್ನಿರಿ
ಕಣ್ಣ ಮುಂದೆಯೆ ಕಂಗೊಳಿಸುವಾ ಚೆಲುವ ಸಿರಿಯನು ನೋಡಿರಿ
ತಣ್ಣಗಿಹುದಿಂದೆಮ್ಮ ಪರಿಸರ ಮುದವ ನೀಡುವ ಐಸಿರಿ
ಬಣ್ಣಗೆಡದೆಯೆ ಇರಲಿ ಎನ್ನುವ ಧ್ಯೇಯಗೀತೆಯ ಹಾಡಿರಿ


ಬೆಳೆದು ನಿಂತಿಹ ಮರಗಳನ್ನು ಕಡಿಯಬೇಡಿರಿ ಅಣ್ಣರೆ
ಇಳೆಯ ಹವೆಯನು ಶುದ್ಧ ಮಾಡುವ ಶಕ್ತಿ ಇಹುದು ಗಣ್ಯರೇ
ಮಳೆಯ ಬಳಿಗೆ ಸೆಳೆಯುವುದಕೆ ವೃಕ್ಷಕಾಶಿಯೆ ಆಸರೆ
ಬೆಳೆಯುತಿರಲಿ ಪಕ್ಷಿಕಾಶಿಯು  ಎಂದು ಬಯಸಿರಿ ಚಿಣ್ಣರೇ

ನೆಲದ ಕಾಂತಿಯು  ವರ್ಧಿಸುವುದು ಪೂರ್ಣಚಂದ್ರಮನಂದದಿ
ಜಲದ ಸುಧೆಯು ಶುದ್ಧವಾಗಿ ಉಕ್ಕಿ ಹರಿಯಲು ಚಂದದಿ
ನಿಲಯವಹುದಿದು ಜೀವಜಾಲಕೆ ಪ್ರಾಣಿಸಂಕುಲಕಾಸರೆ
ಪೋಲು ಮಾಡದೆ ಉಳಿಸಿ ಬೆಳೆಸುವ ನೀರ ಸೆಲೆಯನು ಜಾಣರೆ


ಶೋಣಿತಾಪುರದಸುರವರ್ಗವ ಮೀರಿಸುವ ಮೈಕಾಸುರ
ಪ್ರಾಣಿವರ್ಗವ ಶೋಷಿಸುವುದಿದು ಇರಲಿ ಮೌನ ನಿರಂತರ 
ಜಾಣರೆಂದಿಗು ಸುಳಿಯಗೊಡದಿರಿ ಮಾರಿ ಪ್ಲಾಸ್ಟಿಕ ಹತ್ತಿರ 
ಬಾಣದಲುಗಿನ ಮೊನಚ ತೋರಿರಿ ಮಲಿನ ಮಾಳ್ಪೆಡೆ ಪರಿಸರ


ಹೊಗೆಯನುಗುಳುತ ಮಲಿನಗೊಳಿಸುವ ವಾಹನಗಳನು ನಿಲ್ಲಿಸಿ
ಬೇಗೆಯಲಿ ಕಂಗೆಡದೆ ಹರುಷದಿ ಪಾದಸೇವೆಯ ಸಲ್ಲಿಸಿ
ಯೋಗವಿದು ಪರಿಸರವ ಕಾಯುವ ಭಾಗ್ಯವೆಂದೇ ಭಾವಿಸಿ
ಯಾಗದೀಕ್ಷೆಯ ಕರದಿ ಪಿಡಿಯುತ ಜನಕೆ ಜಾಗೃತಿ ಪಸರಿಸಿ

 

ವಿ.ಸೂ.: 

ವಿದ್ಯಾರ್ಥಿ ಬಂಧುಗಳಿಗಾಗಿ ಒಂದು ಪ್ರಯತ್ನ, "ದೋಣಿ ಸಾಗಲಿ.." ಧಾಟಿಗೆ  ಹತ್ತಿರ ಇರಬಹುದು.  

Comments