ಅವಸರವೇ ಅಪಘಾತ ....

ಅವಸರವೇ ಅಪಘಾತ ....

ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದ ಮನೆಯಲ್ಲಿ ಇರುತ್ತಾ ಇಲ್ಲೇ ಯಲ್ಲೋ ಬಿದ್ದಿರಬೇಕು ನೋಡಿ ಎಂದಳು. ರಾತ್ರಿ ಪೂರ್ತಿ ನಿಶಾಚರನ ಹಾಗೆ ಕುಳಿತು ಕಂಪ್ಯೂಟರ್ ಕುಟ್ಟೊದು, ಈಗ ನಮ್ಮನ್ನು ಬೈಯೋದು ಎಂದು. ಅದು ಏನೋ? ಬರೀತಾರೆ ಎಂದು ಕೊಂಡರೆ, ನನ್ನ ಬಗ್ಗೆ ಹೀಯಾಳಿಸೋದು, ಇಲ್ಲ ತಮ್ಮ ಹೊಟ್ಟೆ ಮತ್ತು ತಲೆ ವರ್ಣಿಸೋದು ಬಿಟ್ಟು ಬೇರೆ ಏನು ಬರೆದಿದ್ದೀರ ಎಂದು ಬೈದಳು. ಕಡೆಗೆ ನಾನೇ ಹುಡುಕಿ ಬನಿಯನ್ ಹಾಕಿಕೊಂಡೆ.

ಮಗನಿಗೆ ಬೈಯುತ್ತಾ, ಲೇ ಜೋರಾಗಿ ಹೇಳೋ ಸ್ತೋತ್ರಗಳನ್ನ, ನಾಳೆ ಸ್ಪರ್ಧೆ ಇದೆ ಎಂದು ಹೇಳುತ್ತ ಇದ್ದಳು. ನಾನು ಅವನಿಗೆ ಏನು? ಹೇಳಿಕೊಡುತ್ತಿದ್ದಾಳೆ ಬೈಯುವುದನ್ನೋ ಅಥವಾ ಸ್ತೋತ್ರಗಳನ್ನೋ ಎಂದು ಅಚ್ಚರಿ ಆದರೂ ಕೇಳಲಿಲ್ಲ. ಮತ್ತೆ ಮಗನ ಜೊತೆಯಲ್ಲಿ ಆಟವಾಡುತ್ತಾ ಇದ್ದೆ. ಅದಕ್ಕೆ ಇಷ್ಟು ವಯಸ್ಸಾದರೂ ಚಿಕ್ಕ ಮಕ್ಕಳ ಹಾಗೆ ಮಾಡುತ್ತೀರಿ ತಿಳಿಯೋದಿಲ್ಲವೇ ಎಂದಳು. ಲೇ ಮಕ್ಕಳ ಜೊತೆ ನಾವು ಮಕ್ಕಳ ಹಾಗೆ ಇರಬೇಕು ಗೊತ್ತಾ. ಇಲ್ಲ ಅಂದರೆ ಅವರು ನಾವು ಬೇರೆ ಮತ್ತು ತಾವು ಬೇರೆ ಎಂದು ಅಂದುಕೊಂಡುಬಿಡುತ್ತಾರೆ. ಮಕ್ಕಳ ಮನಸ್ಸು ಆಗ ಮಾತ್ರ ಅರ್ಥವಾಗುವದು, ದೊಡ್ಡತನ ದೇಹಕ್ಕೆ ಮಾತ್ರ ಬರಬೇಕೆ ಹೊರತು ಮನಸಿಗಲ್ಲ ಎಂದು ಹೇಳಿದೆ. ಆಯಿತು ಇಷ್ಟೊತ್ತು ಲೇಟ್ ಆಗಿದೆ ಎಂದು ನನ್ನ ಜೊತೆ ಜಗಳ ಮಾಡಿದಿರಿ ಸುಮ್ಮನೇ ಹೊರಡಿ ಇನ್ನು ಸಾಕು ಎಂದಳು.

ಹೋಗುವ ಸಮಯದಲ್ಲಿ ಸಂಜೆ ಸ್ವಲ್ಪ ದುಡ್ಡು ತೆಗೆದುಕೊಂಡು ಬನ್ನಿ, ದಿನಸಿ ತರಬೇಕು ಎಂದು ಹೇಳಿದಳು. ನಾನು ಲಗುಬಗೆಯಿಂದ ನನ್ನ ಡೆಬಿಟ್ ಕಾರ್ಡ್ ಇಟ್ಟುಕೊಂಡು ಆಫೀಸ್ ಹೊರಟೆ. ಅಷ್ಟರಲ್ಲಿ ಎದುರಿಗೆ ನಮ್ಮ ಹಳೆಯ ಆಫೀಸ್ ನಲ್ಲಿ ಕೆಲಸ ಮಾಡುವ ಗೆಳೆಯ ಶ್ರೀನಿವಾಸ್ ಭೇಟಿ ಆದ. ನಾವಿಬ್ಬರು ಒಂದು ಡಿಪಾರ್ಟ್‌ಮೆಂಟ್ EDP ಎಂದರೆ Electronic Data Processing ಎಂದು ತಪ್ಪಾಗಿ ತಿಳಿಯಬೇಡಿ ಮತ್ತೆ Eat Drink Play , ನಾವು ಆ ಆಫೀಸ್ ನಲ್ಲಿ ಅದನ್ನೇ ಮಾಡುತ್ತಿದ್ದೆವು, ಏಕೆಂದರೆ ಎಲ್ಲಾ ಡಿಪಾರ್ಟ್‌ಮೆಂಟ್ ಗಳು ಕಂಪ್ಯೂಟರೈಸ್ ಆಗಿತ್ತು. ನಮಗೆ ತಿಂಗಳಲ್ಲಿ ಒಮ್ಮೆ ಅಥವಾ ಎರಡು ದಿನ ಮಾತ್ರ ಕೆಲಸ ಇರುತಿತ್ತು. ಹೀಗಾಗಿ ನಮ್ಮ ಡಿಪಾರ್ಟ್‌ಮೆಂಟನ್ನು ಭೋಜನಕ್ಕೆ ಕರೆಯದೇ ಮರು ನಾಮಕರಣ ಮಾಡಿದ್ದರು. ಎಲ್ಲಾ ಕ್ಷೇಮ ಸಮಾಚಾರ ಆದ ಮೇಲೆ ಕಾಫೀ ಕುಡಿದು, ಆಫೀಸ್ ಹೊದೆ.

ಸಧ್ಯ ಹೋದ ಕೂಡಲೇ ನೆನಪಿಗೆ ಬಂತು ಬಾಸ್ ರಜೆ ಎಂದು. ಬೈಗಳು ತಪ್ಪಿದವು ಎಂದು ನಿಟ್ಟುಸಿರು ಬಿಟ್ಟೆ. ನಾನು ಸುಮ್ಮನೇ ಮುಂಜಾನೆ ಹಾರಡಿದೆ ಎಂದು ಅನ್ನಿಸಿತು. ಬುದ್ದಿ ಅವಸರದಲ್ಲಿ ಏನೆಲ್ಲಾ ಮರೆಯುತ್ತೆ. ಮತ್ತೆ ಮಡದಿಗೆ ಕರೆ ಮಾಡಿ ತಿಂಡಿ ಬಗ್ಗೆ ಎಲ್ಲಾ ವಿಚಾರಿಸಿ, ಕೆಲಸ ಶುರು ಮಾಡಬೇಕು ಅನ್ನುವ ಸಮಯಕ್ಕೆ ಗೆಳೆಯ ನರೇಂದ್ರ ತಿಂಡಿಗೆ ಕರೆದ. ಮತ್ತೆ ತಿಂಡಿ ತಿಂದು ಬಂದು ಕೆಲಸ ಶುರು ಮಾಡಿದೆ.

ಅವಸರದಲ್ಲಿ ಸಂಜೆ ಬರುತ್ತ ದುಡ್ಡು ತೆಗೆಯೋಕೆ ಮರೆತುಬಿಟ್ಟೆ, ಮನೆ ಸಮೀಪ ಬಂದವನು ಮತ್ತೆ ಗಾಡಿ ವಾಪಸ್ ಎ ಟಿ ಎಂ ಕಡೆಗೆ ತಿರುಗಿಸಿಕೊಂಡು ಹೋದೆ. ಹೋದವನೆ ಅವಸರದಲ್ಲಿ ಕಾರ್ಡ್ ಹಾಕಿದೆ. ಕಾರ್ಡ್ ಒಳಗಡೆ ಹೋಯಿತು. ಆದರೆ ಇನ್ವಾಲಿಡ್ ಕಾರ್ಡ್ ಎಂದು ತೋರಿಸುತಿತ್ತು. ಮತ್ತೊಮ್ಮೆ ಹಾಕಿ ಪ್ರಯತ್ನಿಸಿದೆ. ಮತ್ತೆ ಅದೇ ಸಂದೇಶ. ಈಗ ಹಾಗೆ ದುಡ್ಡು ತೆಗೆದುಕೊಳ್ಳದೇ ಹೋದರೆ, ಮಡದಿ ನನ್ನ ಕಥೆನೇ ಮುಗಿಸುತ್ತಾಳೆ ಎಂದು. ಹೊರಗಡೆ ಬಂದು ಅವಳಿಗೆ ಕರೆ ಮಾಡಿ ಎಷ್ಟು ಬೇಕು ದುಡ್ಡು ಎಂದು ಫೋನ್ ಮಾಡಿದೆ. ಅವಳು 1000 ಎಂದು ಹೇಳಿದಳು. ನಾನು ಕೆಲ ನಿಮಿಷದ ನಂತರ ಮತ್ತೆ ಕರೆ ಮಾಡಿ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ. ಆಯಿತು, ಸುಮ್ಮನೇ ಬನ್ನಿ ಎಂದಳು. ಕಡೆಗೆ ಹಾಗೆ ಮನೆಗೆ ಹೋದೆ.

ಮನೆಗೆ ಹೋದೊಡನೆ ನನ್ನ ಕಾರ್ಡ್ ತೆಗೆದುಕೊಂಡು ಹೋಗಿ ದುಡ್ಡು ತೆಗೆಸಿಕೊಂಡು ಬನ್ನಿ ಎಂದಳು. ಕಾರ್ಡ್ ತೆಗೆದುಕೊಳ್ಳಲು ಹೋದೆ. ನನಗೆ ಆಶ್ಚರ್ಯ ನನ್ನ ಕಾರ್ಡ್ ಅಲ್ಲೇ ಇತ್ತು. ಮತ್ತೆ ನಾನು ಯಾವ ಕಾರ್ಡ್ ತೆಗೆದುಕೊಂಡು ಹೋದೆ ಎಂದು ಪರ್ಸ್ ತೆಗೆದು ನೋಡುತ್ತೇನೆ. ಪರ್ಸ್ ನಲ್ಲಿ ಇದ್ದಿದ್ದು ಪಾನ್ ಕಾರ್ಡ್, ಅದನ್ನೇ ಹಾಕಿ ಎರಡು ಬಾರಿ ನೋಡಿದ್ದೆ. ಜೋರಾಗಿ ನಗು ಬಂತು ನಕ್ಕರೆ ನನ್ನದೇ ಮರ್ಯಾದೆ ಹೋಗುತ್ತೆ ಎಂದು ಸುಮ್ಮನಾದೆ. ಕಡೆಗೆ ಅವಳ ಕಾರ್ಡ್ ಜೊತೆ ನನ್ನ ಕಾರ್ಡ್ ತೆಗೆದುಕೊಂಡು ಹೋದೆ. ದುಡ್ಡು ತೆಗೆಸಿಕೊಂಡು ಬಂದು, ಆ ಎ ಟಿ ಎಂ ಸರಿ ಇಲ್ಲ ಕಣೇ ಎಂದು ನಗುತ್ತಾ ಹೇಳಿ, ನನ್ನ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ಹೇಳಿ ದುಡ್ಡು ಕೊಟ್ಟೆ.

ಮರುದಿನ ನನ್ನ ಮಗನಿಗೆ ಸ್ತೋತ್ರ ಪಠಣ ಮತ್ತು ಸ್ವತಂತ್ರ ಹೋರಾಟಗಾರರ ವೇಷ ಭೂಷಣ ಸ್ಫರ್ಧೆಯಲ್ಲಿ ಬಹುಮಾನ ದೊರೆತಿತ್ತು. ನನ್ನ ಮಡದಿಗೆ ಭೇಷ್ ಹೇಳಿದೆ. ನೀವು ಸ್ವಲ್ಪ ಸುಧಾರಿಸಿ ನಿಮ್ಮ ಮಗನ ಹಾಗೆ ಬೇಗನೆ ಏಳುವುದು, ಸ್ತೋತ್ರ, ಮಂತ್ರ ಪಠಣ ಮಾಡಿ, ನಿಮ್ಮ ಅವಸರ ನನಗೆ ತಡೆಯೋಕೆ ಆಗಲ್ಲ, ನಮಗೂ ಹಿಂಸೆ ಕೊಡುತ್ತೀರಿ ಎಂದಳು. ನನಗು ಹಾಗೆ ಅನ್ನಿಸಿತು ಅವಸರವೇ ಅಪಘಾತ ಎಂದು.

Rating
No votes yet

Comments