ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ

ಡೆಂಗ್ಯೂ ಜ್ವರ ಹತೋಟಿಗೊಂದು ವಿಭಿನ್ನ ಕ್ರಮ

ವಿಶ್ವ ಆರೋಗ್ಯ ಸಂಸ್ಥೆ (World Health Organisation) ಪ್ರಕಟಿಸಿರುವ ಪ್ರಕಾರ ಇಂದು ವಿಶ್ವದಾದ್ಯಂತ ಡೆಂಗ್ಯೂ ಜ್ವರ ಸುಮಾರು ಇನ್ನೂರೈವತ್ತು ಕೋಟಿ ಜನರನ್ನು ಬಾಧಿಸುತ್ತಿದೆ. ಮೂಳೆಗಂಟುಗಳಲ್ಲಿ ಅತಿಯಾದ ನೋವು, ತೀವ್ರತರದ ಜ್ವರ, ವಾಂತಿ, ಅತಿಸಾರ ಈ ರೋಗದ ಲಕ್ಷಣಗಳು. ಮಲೇರಿಯಾದಂತೆಯೇ ಈ ರೋಗವೂ ಸೊಳ್ಳೆಗಳಿಂದ ಹರಡುವ ವೈರಸ್ಸಿನಿಂದ ಬರುವ ರೋಗ. ಮಲೇರಿಯಾ ಹರಡಲು ಅನಾಫಿಲಿಸ್ ಸೊಳ್ಳೆ ಕಾರಣವಾದರೆ ಡೆಂಗ್ಯೂ ಹರಡಲು ಏಡೆಸ್ ಏಗೆಪ್ತಿ (Aedes aegypti ) ಎಂಬ ಸೊಳ್ಳೆ ಕಾರಣ. ಪ್ರತಿವರ್ಷ ಈ ಸುಮಾರು ಹತ್ತು ಕೋಟಿ ಜನರಿಗೆ ಈ ರೋಗ ಹಬ್ಬುತ್ತಿದೆ. ಅವರಲ್ಲಿ ಇಪ್ಪತ್ತೆರಡು ಸಾವಿರ ಜನರು ಸಾವನ್ನಪ್ಪುತ್ತಾರೆ. ಅವರಲ್ಲಿ ಬಹುತೇಕರು ಮಕ್ಕಳೇ ಆಗಿದ್ದಾರೆ.

 

ಡೆಂಗ್ಯೂ ಜ್ವರಕ್ಕೆ ಔಷಧಿ ಇದೆಯಾದರೂ ಡೆಂಗ್ಯೂ ಸೊಳ್ಳೆಯನ್ನು ಸಮರ್ಥವಾಗಿ ನಿಗ್ರಹಿಸಬಲ್ಲ ಕ್ರಮ ಇದುವರೆಗೆ ಕಂಡುಹಿಡಿಯಲಾಗಿಲ್ಲ. ಈ ನಿಟ್ಟಿನಲ್ಲಿ ಬ್ರಿಟನ್ನಿನ ಆಕ್ಸಿಟೆಕ್ ಲಿಮಿಟೆಡ್ ಸಂಸ್ಥೆ (Oxitec Limited) ಡೆಂಗ್ಯೂ ಪೀಡಿತ ದೇಶಗಳಲ್ಲಿ ಸಂಶೋಧನೆ ನಡೆಸಿತು. ಈ ಸೊಳ್ಳೆ ಒಂದು ಬಹಳ ಜಾಣ ಸೊಳ್ಳೆ. ಇದನ್ನು ನಿಗ್ರಹಿಸಲು ಯಾವುದೇ ಕೀಟನಾಶಕ ಬಳಸಿದರೂ ಕೆಲವೇ ದಿನಗಳಲ್ಲಿ ಅದರ ದೇಹದೊಳಕ್ಕೆ ಆ ಕೀಟನಾಶಕ ಬಾಧಿಸದಂತೆ ಪ್ರತ್ಯೌಷಧವೊಂದು ತಯಾರಾಗುತ್ತಿತ್ತು. ಕೆಲವೇ ದಿನಗಳಲ್ಲಿ ಮತ್ತೆ ಹೊಸ ಪೀಳಿಗೆಯೊಂದು ಹೊರಬರುತ್ತಿತ್ತು. ಹಲವು ವರ್ಷಗಳ ಕಾಲ ವಿಜ್ಞಾನಿಗಳಿಗೆ ಈ ಸೊಳ್ಳೆಗಳು ಸವಾಲಾಗಿ ಪರಿಣಮಿಸಿದ್ದವು.

 

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದೊಂದು ಗಾದೆ. ಆ ಪ್ರಕಾರ ಸೊಳ್ಳೆಗಳೇ ಸೊಳ್ಳೆಗಳಿಗೆ ಮಾರಕವಾಗುವಂತೆ ಆಗುವ ಕ್ರಮದ ಬಗ್ಗೆ ಸುಮಾರು ಎರಡು ವರ್ಷಗಳಿಂದ ಆಕ್ಸಿಟೆಕ್ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಕಳೆದ ಮೇ ತಿಂಗಳಲ್ಲಿ ಈ ಸೊಳ್ಳೆಗಳ ಒಂದು ಪ್ರತಿರೂಪಿ ಗಂಡು ಸೊಳ್ಳೆಗಳನ್ನು ಕೃತಕವಾಗಿ ಸೃಷ್ಟಿಸಿದ್ದಾರೆ. ಈ ಗಂಡು ಸೊಳ್ಳೆಗಳು ರೋಗ ಹರಡುವ ಹೆಣ್ಣು ಸೊಳ್ಳೆಗಳೊಂದಿಗೆ ಕೂಡಿ ಹೊಸ ಪೀಳಿಗೆಯ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಈ ಮೊಟ್ಟೆಗಳಿಂದ ಹೊರಬಂದ ಮರಿಗಳು ಯಥಾವತ್ತು ಸೊಳ್ಳೆಯಾಗಿದ್ದರೂ ಮನುಷ್ಯನನ್ನು ಕಚ್ಚುವ ಸಾಮರ್ಥ್ಯ ಕಳೆದುಕೊಂಡಿರುತ್ತದೆ. ಮನುಷ್ಯನನ್ನು ಕಚ್ಚದೇ ಇದ್ದಾಗ ಡೆಂಗ್ಯೂ ಹರಡುವ ಸಂಭವವೂ ಕಡಿಮೆಯಾಗುತ್ತದೆ. ಪ್ರಾಯೋಗಿಕವಾಗಿ ಮೇ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಕೇಯ್ಮನ್ ಐಲಾಂಡ್ ದ್ವೀಪಗಳ ಸುಮಾರು ನಲವತ್ತು ಎಕರೆ ಪ್ರದೇಶದಲ್ಲಿ ಈ ಸೊಳ್ಳೆಗಳನ್ನು ಬಿಡಲಾಗಿದೆ. ಅಕ್ಟೋಬರ್ ತಿಂಗಳವರೆಗಿನ ಸಮೀಕ್ಷೆಯಲ್ಲಿ ಆ ಪ್ರದೇಶದಲ್ಲಿ ಕಂಡುಬಂದ ಹೊಸ ಡೆಂಗ್ಯೂ ಪೀಡಿತರ ಸಂಖ್ಯೆ ಶೇಖಡಾ ಎಂಭತ್ತರಷ್ಟು ಕಡಿಮೆಯಾಗಿದೆ. ಇತ್ತ ಮನುಷ್ಯನನ್ನು ಕಚ್ಚದ ಸೊಳ್ಳೆಮರಿಗಳು ದೊಡ್ಡವಾಗಿ ತಮ್ಮದೇ ಗುಣಲಕ್ಷಣಗಳನ್ನು ಹೊಂದಿರುವ ಮರಿಗಳನ್ನು ಉತ್ಪಾದಿಸುತ್ತವೆ. ಆದುದರಿಂದ ಈ ಸೊಳ್ಳೆಗಳನ್ನು ಅವಲಂಬಿಸಿರುವ ಜೀವಜಾಲವೂ ಉಳಿಯುತ್ತದೆ. ದಿನಕಳೆದಂತೆ ರೋಗ ಹರಡುವ ಸಾಮರ್ಥ್ಯವಿರುವ ಸೊಳ್ಳೆಗಳು ನಿರ್ನಾಮವಾಗುತ್ತವೆ.

 

ಈ ವರದಿಯನ್ನು ಪ್ರಕಟಿಸುತ್ತಿದ್ದಂತೆಯೇ ವಿಶ್ವದೆಲ್ಲೆಡೆಯಿಂದ ಆಕ್ಸಿಟೆಕ್ ಸಂಸ್ಥೆಗೆ ಬೇಡಿಕೆ ಬರಲಾರಂಭಿಸಿದೆ. ಫ್ಲೋರಿಡಾ, ಬ್ರೆಜಿಲ್, ಪನಾಮಾ ದೇಶಗಳು ಆದಷ್ಟು ಬೇಗನೇ ತಮ್ಮ ದೇಶದಲ್ಲಿ ಈ ಕ್ರಮವನ್ನು ಅಳವಡಿಸಿಕೊಳ್ಳುವ ಆತುರ ತೋರಿವೆ. 

 

Rating
No votes yet

Comments