ಕೋತಿಯಾಟ

ಕೋತಿಯಾಟ

ಕವನ

ನೋಡಿ ನಮ್ಮಯ ಮನೆಯ ಅಂಗಳ

ಕಿಂದು ಕೋತಿಯು ಬಂದಿತು

ಒಡೆಯನಾಣತಿಯಂತೆ ಬಾಗುತ

ನಮಗೆ ವಂದನೆ  ಸಲಿಸಿತು          [೧]

 

ಎತ್ತಿ ಅಲುಗಾಡಿಸುವ ಬೆತ್ತಕೆ

ಎತ್ತರೆತ್ತರ ಜಿಗಿಯಿತು

ಜಗಲಿಯಂಚಿನ ಕಂಬವೇರುತ

ಕೆಳಗೆ ಲಾಗವ ಹೊಡೆಯಿತು         [೨]

 

ಪೂರ್ವಕಾಲದ ಮದುಮಗಳ ತರ

ಬೆನ್ನು ಬಾಗಿಸಿ ನಾಚಿತು

ಆಧುನಿಕ ವಧು ಹೇಗೆನಲು ತಲೆ

ಯೆತ್ತಿ ನೆಟ್ಟಗೆ ನಡೆಯಿತು            [೩]

 

ಪುಟ್ಟನಿತ್ತಿಹ ಬಾಳೆ ಹಣ್ಣನು

ಮೆಲುತ ಹಲ್ಲನು ಕಿರಿಯಿತು

ಕಣ್ಣು ಮಿಟುಕಿಸಿ ,ಕೈಯ ಕುಲುಕುತ

ಸ್ನೇಹ ಚೇಷ್ಟೆಯನಾಡಿತು           [೪]

 

ಮೈಯ ಕೆದರುತ,ತಲೆಯನಾಡಿಸಿ

ಜನರ ನಗಿಸುತ ಕುಣಿಯಿತು

ಸಿಕ್ಕ ಧನವನು ಧಣಿಯ ಕೈಯಲಿ

ಇಕ್ಕಿ,ಹಿಂದೆಯೆ ಸಾಗಿತು            [೫]

Comments