ಮಣ್ಣು ಮುಟ್ಟದವರು (ಮೆಟ್ಟದವರು)

ಮಣ್ಣು ಮುಟ್ಟದವರು (ಮೆಟ್ಟದವರು)

 ಮಣ್ಣು ಮುಟ್ಟದವರು (ಮೆಟ್ಟದವರು)

 
ಪಂಚಭೂತಗಳಿಂದಲೇ ಆಗಿರುವ ಈ ಮಾನವ ದೇಹಕ್ಕೆ ಮಣ್ಣನ್ನು ಮುಟ್ಟಿಸಿಕೊಳ್ಳದೇ, ಮಣ್ಣನ್ನು ಮೆಟ್ಟದೇ ಜೀವಮಾನವೆಲ್ಲಾ ಬದುಕಿ ಬಾಳಬಹುದಾದವರು ಇರಬಹುದೇನೋ ಎಂಬ ವಿಚಾರ ನನಗೆ ಇತ್ತೀಚೆಗೆ ಬಹಳವಾಗಿ ಕಾಡತೊಡಗಿದೆ.
 
ನನಗೆ ಸಮೀಪದಲ್ಲ್ಲಿರುವ ಮಹಾನಗರವೆಂದರೆ "ಬೃಹತ್ ಬೆಂಗಳೂರು".  ಇತ್ತೀಚೆಗೆ ಆ ನಗರಕ್ಕೆ ಹೋದಾಗ ಸಹಜ ಕುತೂಹಲದಿಂದ ಅಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸ ಹತ್ತಿದೆ.  ಹಾಗೆ ಪರಿಚಯಸ್ಥರೊಬ್ಬರ ಕರೆಯ ಮೇರೆಗೆ ದೊಡ್ಡ ಅಪಾರ್ಟ್ ಮೆಂಟ್ ಒಂದರಲ್ಲಿರುವ ಅವರ ಮನೆಗೆ ಹೋದೆ.  ನಿಜಕ್ಕೂ ಹಳ್ಳಿಯಲ್ಲಿ ವಿಶಾಲತೆಯೊಂದಿಗೆ ಬದುಕುತ್ತಿರುವ ನನಗೆ ಏಳು ಅಟ್ಟಗಳ ಮೇಲಿನ ಅವರ ಮನೆಗೆ ಏರಿ ಹೋದದ್ದೇ ಒಂದು ರೀತಿಯ ಹೊಸ ಅನುಭವ.
ಆ ಏಳನೇ ಮಹಡಿಯಲ್ಲಿ ತಕ್ಕಷ್ಟು ವಿಶಾಲವಾಗೇ ಇದ್ದ ಅವರ ಮನೆ ಪೀಠೋಪಕರಣಗಳು, ವಿದ್ಯುತ್-ಇಲೆಕ್ಟ್ರಾನಿಕ್ ಉಪಕರಣಗಳು, ಆಲಂಕಾರಿಕ ಕೃತಕ ಸಸ್ಯಗಳು, ಕೃತಕ ಹೂಗಳ ಬಣ್ಣಬಣ್ಣದ ಮೆರುಗುಗಳು ಎಲ್ಲಾ ಒಂದೆರೆಡು ನಿಮಿಷ ನನಗೂ ಹಿತವೆನಿಸಿತು.  ಮೇಲೆ ಇನ್ನೂ ಏಳು ಅಟ್ಟಗಳಿರುವ ಈ "ಬೃಹತ್ ಬೆಂಗಳೂರಿನ ಬೃಹತ್ ಬಂಗಲೆ" ಯ ಬಗ್ಗೆ ಹಾಗೇ ಯೋಚಿಸತೊಡಗಿದೆ.  ಜನ ನಿಬಿಡವಾಗಿರುವ ಈ ನಗರದಲ್ಲಿ ಇಂತಹ ದೊಡ್ಡ ಕಟ್ಟಡಗಳು ಬೇಕೇ ಬೇಕು ಎನಿಸಿತು. ಆದರೂ ಎಲ್ಲಾ ವೈಭೋಗಗಳಿದ್ದರೂ ಇಂತಹ ಮನೆಗಳು ಅದೇನೋ ಕೃತಕ ವಾಸಸ್ಥಾನಗಳೆನಿಸಿತು.
 
ಇಂತಹ ಬಂಗಲೆಗಳು ಸಹಜ, ಅದರಲ್ಲೇನಿದೆ ವಿಚಿತ್ರವೆಂದು ಯಾರಿಗಾದರು ಅನಿಸಬಹುದು.  ಆದರೆ ಅತಳ, ಸುತಳ, ಪಾತಾಳಗಳಂತಹ ಏಳು ಕೆಳಮಹಡಿಗಳು, ಭೂ, ಭುವರ್, ಸುವರ್ಲೋಕ ಗಳಂತಹ ಏಳು ಮೇಲ್ಮಹಡಿಗಳ ಮಧ್ಯದಲ್ಲಿರುವ ನನ್ನ ಪರಿಚಿತರ ಜೇವನ ಶೈಲಿಯನ್ನು ಒಮ್ಮೆ ಇಣುಕಿ ನೋಡಿದೆ. ಈ ದಂಪತಿಗಳು ಬೆಳಿಗ್ಗೆ ಚಂದವಾಗಿ ಅಲಂಕರಿಸಿಕೊಂಡು ತಮ್ಮ ಕೆಲಸದ ನಿಮಿತ್ತ ಹೊರಟರೆ ಮತ್ತೆ ಈ ಗೂಡು ಸೇರುವುದು ರಾತ್ರಿಯೇ ಸರಿ.
ಕಛೇರಿಯಲ್ಲಿ ದುಡಿದು, ಟ್ರಾಫಿಕ್ ನಲ್ಲಿ ನುಸುಳಿ, ಜನಜಂಗುಳಿಯಲ್ಲಿ ಬಸವಳಿದು, ಹೈರಾಣಾಗಿ ಉಸ್ಸಪ್ಪಾ ಯೆಂದು ಮನೆ ಸೇರಿ ಬದುಕಿನ ಇನ್ನುಳಿದ ಮಜಲುಗಳನ್ನು ಅನುಭವಿಸಿ ಮತ್ತೆ ಮರುದಿನಕ್ಕೆ ಗಾಣದೆತ್ತಿನಂತೆ ತಯಾರಾಗುವ ಇವರು ಎಲ್ಲಾದರು ಮಣ್ಣನ್ನು ದೇಹಕ್ಕೆ ಮುಟ್ಟಿಸಿಕೊಳ್ಳುತ್ತಾರಾ ಎಂದು ಯೋಚಿಸತೊಡಗಿದೆ. ಬಹುತೇಕ ಇಲ್ಲಾ ಎಂದೇ ಅನಿಸಿ ಮತ್ತೆ ನನ್ನ ಯೋಚನೆಯನ್ನು ಮುಂದುವರಿಸಿದೆ.  ಇವರಿಗೆ ಮುಂದೊಂದು ದಿನ ಹುಟ್ಟುವ ಮಗು ಮಣ್ಣನ್ನು ದೇಹಕ್ಕೆ ತಾಗಿಸಿಕೊಳ್ಳಬಹುದೇ ಎಂದು ಯೋಚಿಸಿದಾಗ ಅದೂ ಸಹ ಮಣ್ಣಿನಿಂದ ದೂರವಿರುವ ಸಾದ್ಯತೆಯೇ ಹೆಚ್ಚೆನಿಸಿತು. ಇವರ ಮನೆಯಲ್ಲಿ ಮಣ್ಣಿಲ್ಲ, ಮಣ್ಣನ್ನೊಳಗೊಂಡ ಹೂ ಕುಂಡಗಳಿಲ್ಲ, ಮಣ್ಣಿನ ಅಂಗಳವಿಲ್ಲ. ನೆಲ ಅಂತಸ್ತಿನಲ್ಲಿರುವ ಹುಲ್ಲುಹಾಸನ್ನೊಳಗೊಂಡ ಜಾಗದಲ್ಲು ಸಿಮೆಂಟ್ ಗಾರೆ, ಸಿರಾಮಿಕ್ ಗಳ ಮೇಲೆಯೇ ಹೆಜ್ಜೆಯಿರಿಸಿ, ಕಾರನ್ನೇರಿ ಕುಳಿತರೆ, ಮತ್ತೆ ಇಳಿಯುವುದು ಸಹ ಅಂತಹದೇ ಅಂಗಳವಿರುವ ಆಫೀಸಿನಲ್ಲಿ. ಹಾಗಾಗಿ ಇವರಾದರೂ ಮಣ್ಣನ್ನು ಎಲ್ಲಿ ಮುಟ್ಟಿಯಾರು, ಮೆಟ್ಟಿಯಾರು ?
 
ಇವರೇನೊ ಮಣ್ಣು ಮುಟ್ಟದಿದ್ದರೇನಾಯಿತು, ಮಣ್ಣಿನಿಂದಲೇ ಬೆಳೆದ ದವಸ ದಾನ್ಯಗಳಿಂದ ಹಸಿವು ನೀಗಿಸಿಕೊಂಡು ಜೀವನ ಸಾಗಿಸುವರಲ್ಲ ಎಂದು ಸಮಾದಾನ ಮಾಡಿಕೊಂಡು ಮನೆಯವರೊಂದಿಗೆ ಕುಶಲೋಪರಿ ನಾಲ್ಕು ಮಾತನಾಡಿ,ಅವರಿತ್ತ ಆತಿಥ್ಯ ಸ್ವೀಕರಿಸಿ, ಕೆಳಗಿಳಿಯುವ ಮೊದಲು ಬಾಲ್ಕನಿಯೆಡೆಗೆ ಹೆಜ್ಜೆ ಹಾಕಿ ಕಣ್ಣು ಹಾಯಿಸಿದೆ.  ಸುತ್ತ ಮುತ್ತ  ಎಲ್ಲ ಇಂತಹ ನೂರಾರು ಅಪಾರ್ಟ್ ಮೆಂಟ್ ಗಳು.  ಈ ಗೂಡುಗಳನ್ನು ಬಂದು ಸೇರುವವರು ಹೆಚ್ಚಿನವರು ನಮ್ಮ ಮಣ್ಣಿನ ಮಕ್ಕಳಲ್ಲವೆ ಎನಿಸಿ ಸ್ವಲ್ಪ ಕಸಿವಿಸಿಯಾಯಿತು. ಏಕೆಂದರೆ ಹಳ್ಳಿಗಳು ಖಾಲಿಯಾಗಿ ಈ ಗೂಡುಗಳೆಲ್ಲ ತುಂಬಿದರೆ ಮಣ್ಣುಮುಟ್ಟದವರು, ಮೆಟ್ಟದವರು ಹೆಚ್ಚಾಗಿ ಇನ್ನೇನು ತೊಂದರೆಯಾಗಬಹುದು ಎಂದು ಯೋಚಿಸುತ್ತಾ ನನ್ನ ಊರು ಸೇರಿದೆ.
 
ಹಾಗೆಯೇ ನನ್ನ ಊರು ಸೇರಿದ ಮೇಲೆ ವೃತ್ತ ಪತ್ರಿಕೆಯೊಂದರಲ್ಲಿ "ವಿಶನ್ ೨೦೨೦" ಮಾಲಿಕೆಯಲ್ಲಿ ಚಿಂತಕ ಪಿ. ವಿ. ಇಂದಿರೇಶನ್ ಅವರ ಲೇಖನದಲ್ಲಿ ಒಂದು ಅಂಶ ನನ್ನ ಗಮನ ಸೆಳೆಯಿತು.  ಹಳ್ಳಿಯಲ್ಲಿ ದೊಡ್ಡ ದೊಡ್ಡ ಜಾಗ ಬಿಟ್ಟು ಮಹಾನಗರಗಳಲ್ಲಿ ನೆಲವೇ ಇಲ್ಲದ ಅಪಾರ್ಟ್ ಮೆಂಟ್ ಗಳಿಗೆ ಹೋಗುವವರು ತಾವು ಹಣ ಗಳಿಸಿ ಶ್ರೀಮಂತರಾಗುತ್ತಿದ್ದೇವೆ ಎಂಬ ಬ್ರಮೆಗೆ ಒಳಗಾಗುತ್ತಾರೆ ವಿನಹ ಅವರು ನೆಲ ಕಳೆದುಕೊಂಡು ಬಡವರಾದದ್ದು ಅವರಿಗೆ ಗೊತ್ತೇ ಅಗಿರುವುದಿಲ್ಲ.  ನಮ್ಮ ಜನಸಂಖ್ಯೆಯ ಬಹುಭಾಗ ನಗರವಾಸಿಗಳಾಗುವುದು ದೇಶದ ರಕ್ಷಣೆ, ನೀರು, ಆಹಾರ, ಇಂದನಗಳ ಒದಗಿಸುವಿಕೆ ಎಲ್ಲಾ ದೃಷ್ಠಿಯಲ್ಲೂ ಮುಂದಿನ ದಿನಗಳಲ್ಲಿ ದೇಶಕ್ಕೆ ಒಂದು ಸವಾಲಾಗಬಹುದು ಎಂಬ ಅಭಿಪ್ರಾಯವನ್ನು ಆವರು ಬಿಂಬಿಸಿದ್ದಾರೆ.
 
ಮಣ್ಣುಮುಟ್ಟದವರು, ಮೆಟ್ಟದವರು ಸ್ವಲ್ಪ ಪ್ರಮಾಣದಲ್ಲಿದ್ದರೆ ಪರವಾಗಿಲ್ಲ, ಆದರೆ ಅವರ ಸಂಖ್ಯೆಯೇ ಜಾಸ್ತಿಯಾದರೆ ಗತಿಯೇನು?  ಮನುಷ್ಯ ಪ್ರಕೃತಿ, ಪರಿಸರ, ಮಣ್ಣಿನಿಂದ ದೂರವಾಗುತ್ತಾ ನಡೆದಾಗ ಅವನು ಅಭಿವೃದ್ಧಿಯ ಪಥದಲ್ಲಿದಾನೆಂದು ತಿಳಿಯುತ್ತೇವೆ. ನಗರಗಳಲ್ಲಿ ಬಹುಪಾಲು ಜನಸಂಖ್ಯೆ ಕೇಂದ್ರೀಕೃತವಾಗುವುದು ನಿಜವಾದ ಅಭಿವೃದ್ಧಿಯೇ ಎಂದು ನಾವು ಸರಿಯಾಗಿ ಇಂದು ಯೋಚಿಸಬೇಕಾಗಿದೆ. 
 
 
Rating
No votes yet

Comments