ಸಫಲ ಸಂಪದ ಸಮ್ಮೇಳನ ಸಂ:೪

ಸಫಲ ಸಂಪದ ಸಮ್ಮೇಳನ ಸಂ:೪

ಇಂಟರ್‌ನೆಟ್‌ನಲ್ಲಿ ತಂಪಾದ ಕನ್ನಡದ ನೆರಳು ಇನ್ನೂ ಹರವಿಕೊಳ್ಳಬೇಕಾಗಿದೆ. ಈ ಗುರಿಗೆ ಬದ್ಧವಾದ ಸಮುದಾಯವ(ಗಳ)ನ್ನು ಮತ್ತು ಕಂಪ್ಯೂಟರಿನಲ್ಲಿ ಬೇಕಾದ ತಾಂತ್ರಿಕ ಸೌಲಭ್ಯಗಳನ್ನು ಬೆಳೆಸುವುದೂ ಕೂಡ ಕನ್ನಡದ ಬೇಸಾಯವೇ ಆಗಿರುವುದು ೨೧ನೇ ಶತಮಾನದ ವಿಶೇಷ. ಹರಿಪ್ರಸಾದ್ ಅವರು ಈ ನಿಟ್ಟಿನಲ್ಲಿ ಮಾಡಿರುವ ಕೆಲಸ ಅಗಾಧವಾದದ್ದು ಮತ್ತು stratagic ಆದದ್ದು ಕೂಡ. ಇವರು ನಿರ್ಮಿಸಿ ಪಾಲಿಸುತ್ತಿರುವ ಸಂಪದವು ಇಂಟರ್‌ನೆಟ್‌ನಲ್ಲಿನ ಕನ್ನಡದ ಬೆಳೆಗೆ ಫಲವತ್ತಾದ ನೆಲವಾಗಿದೆ. ಇಂತಹ ಸಂಪದದಲ್ಲಿ ಅಶರೀರವಾಗಿ ಮಾತ್ರ ಪರಿಚಿತರಾಗಿದ್ದ ಕೆಲವರನ್ನು ಮತ್ತು ಅನೇಕ  ಇತರರನ್ನು ಸಾಕಾರವಾಗಿ ಕಂಡು ಒಡನಾಡಲು ಅನುವು ಮಾಡಿಕೊಟ್ಟ ಇಂದಿನ ಸಂಪದಿಗರ ಮಿಲನದ ಕಾರ್ಯಕ್ರಮ ನನಗೆ ತುಂಬಾ ಹಿಡಿಸಿತು.  ಸುಪ್ರೀತ್‌ನಂತಹ (ಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಬಲ್ಲ) ಕಾಲೇಜ್ ವಿದ್ಯಾರ್ಥಿ ತರುಣನಿಂದ ಹಿಡಿದು ಎಮ್. ಎನ್. ಎಸ್. ರಾವ್‌ರಂತಹ ವಿಶ್ರಾಂತ (ಆದರೆ ಕನ್ನಡದ o.c.r ನಂತಹ ಕ್ಲಿಷ್ಟವಾದ ತಾಂತ್ರಿಕ ಸಮಸ್ಯೆಗೆ ಪರಿಹಾರ ಹುಡುಕುವುದರಲ್ಲಿ ಮಗ್ನರಾಗಿರುವ) ವೃದ್ಧರವರಗೆ ಪಾಲ್ಗೊಂಡವರಲ್ಲಿ ಕಂಡ  ಪ್ರತಿಯೊಬ್ಬರ ಹಿನ್ನೆಲೆಯಲ್ಲಿನ ವೈವಿಧ್ಯ ಹಾಗೇ ಉತ್ಸಾಹ, ಸೌಜನ್ಯತೆ ಮತ್ತು ಕಳಿಕಳಿಗಳಲ್ಲಿನ ಸಾಮ್ಯ. . .ಇವೆರಡೂ ಮೆಚ್ಚುಗೆಯಾದವು. ಕಾರ್ಯಕ್ರಮ ತಡವಾಗಿ ಮುಗಿದ ಮೇಲೂ ಅನೇಕರು ಬಹಳ ಹೊತ್ತು ಮಾತುಕತೆಗಳನ್ನಾಡುತ್ತಾ ಇದ್ದದ್ದು ಈ ಕಾರ್ಯಕ್ರಮವು ನೆರೆದಿದ್ದವರಲ್ಲಿ ಬೆಸೆದ ಒಳ್ಳೆಯ ನಂಟಿನಿಂದಾಗಿ ಎನ್ನಬಹುದು. ಇಂತಹ ಸಮ್ಮೇಳನಗಳು ಆನ್‌ಲೈನ್‌ನಲ್ಲಿ ಆಗಲೇ ಚಿಗುರಿದ ಬಾಂಧವ್ಯವನ್ನು ಇನ್ನೂ ಗಾಢವನ್ನೂ ಹಾಗೂ ಆಪ್ತವನ್ನೂ ಆಗಿಸುತ್ತವೆ.

ನಾಡಿಗ್ ದಂಪತಿಗಳಿಗೆ ಮತ್ತು ಸಂಪದದ ಸಿಬ್ಬಂದಿಯವರಿಗೆ ಅನೇಕ ಧನ್ಯವಾದಗಳು.

ಪ್ರಭು ಮೂರ್ತಿ

Comments