Switzerland, ಭೂಲೋಕದ ಸ್ವರ್ಗ

Switzerland, ಭೂಲೋಕದ ಸ್ವರ್ಗ

 Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣಿ, swiss army knife, ವಿಶ್ವ ಪ್ರಸಿದ್ಧ Lindt chocolate, ಬೆಲೆಬಾಳುವ ವಾಚುಗಳ ಉತ್ಪಾದನೆ, ಮತ್ತು ವಿಶ್ವ ರಾಜಕಾರಣದಲ್ಲಿ ಯಾರ ಗೊಡವೆಗೂ ಹೋಗದೆ ತಟಸ್ಥ ನೀತಿ ಅನುಸರಿಸುವ ಒಂದು ಪುಟ್ಟ, ಅತಿ ಶ್ರೀಮಂತ ದೇಶ ಸ್ವಿಟ್ಜರ್ ಲ್ಯಾಂಡ್. ಇದು ನಮ್ಮ ಮುಗ್ಧ ತಿಳಿವಳಿಕೆ ಈ ಪುಟ್ಟ ದೇಶದ ಬಗ್ಗೆ. 

ಆದರೆ ತನ್ನ ಸುತ್ತಲೂ ಶುಭ್ರ, ಮಂಜಿನ ಪರ್ವತವನ್ನೇ ಇಟ್ಟುಕೊಂಡ ಈ ಪುಟ್ಟ ದೇಶ ತನ್ನ ಒಡಲೊಳಗೆ ಇಟ್ಟುಕೊಂಡಿರುವುದು, ಶ್ರೀಮಂತವಾಗಿರುವುದು ಪಾಪದ ಹಣದ ಸಹಾಯದಿಂದ ಎಂದು ಹೇಳಿದರೆ ಹೌಹಾರುವಿರಾ?  
ವಿಶ್ವದ ಎಲ್ಲಾ ಭ್ರಷ್ಟ ರಾಜಕಾರಣಿ, ಅಧಿಕಾರಿ, ಕೈಗಾರಿಕೋದ್ಯಮಿ, ಕಳ್ಳ ಸಾಗಣೆದಾರ, ಮಾದಕ ದ್ರವ್ಯದ ವ್ಯಾಪಾರಿ ಹೀಗೆ ಹತ್ತು ಹಲವು ವರ್ಣರಂಜಿತ ವ್ಯಕ್ತಿತ್ವಗಳು ಲೂಟಿಗೈದ ಹಣವನ್ನು ಬಚ್ಚಿಡಲು ಆರಿಸಿಕೊಂಡ ತಾಣವೇ ಸ್ವಿಟ್ಜರ್ ಲ್ಯಾಂಡ್. ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ಇಟಲಿ ದೇಶಗಳಿಂದ ಸುತ್ತುವರೆದ ಸ್ವಿಸ್ಸ್, ಒಳ್ಳೆ ಬೆಚ್ಚಿಗಿನ ದೇಶ ಲೂಟಿ ಕೋರರಿಗೆ, ಪುಂಡರಿಗೆ. ಇದಕ್ಕಿಂತ ಬೆಚ್ಚಗಿನ, ರಹಸ್ಯ ಸ್ಥಳ ಬೇರೆಲ್ಲಿ ಸಿಗಲು ಸಾಧ್ಯ ಕಳ್ಳ ಧನವನ್ನು ಬಚ್ಚಿಡಲು, ಅಲ್ಲವೇ?   
ಭಾರತೀಯರು ಕೋಟಿಗಟ್ಟಲೆ ತೆರಿಗೆ ವಂಚಿಸಿದ, ನಮ್ಮ ಸಂಪನ್ಮೂಲ ಕದ್ದ, ಲಂಚದ ಮೂಲಕ ಗಳಿಸಿದ ಪಾಪದ ಹಣವನ್ನೂ ಸ್ವಿಸ್ ರೀತಿಯದೇ ಆದ Liechtenstein(ಲೀಚ್ಟೆನ್ ಸ್ಟೈನ್, ಯೂರೋಪ್ ನ ಮತ್ತೊಂದು ಮೈಕ್ರೋ ಸ್ಕೋಪಿಕ್ ದೇಶ )  ಬ್ಯಾಂಕ್ ನಲ್ಲಿ ಹೂತು ಹಾಕಿರುವುದನ್ನು ತೆಹೆಲ್ಕಾ ಬಯಲಿಗೆ ಹಾಕಿದೆ. ಸುಮಾರು ಹದಿನೈದು ಜನರ ಹೆಸರನ್ನು ಬಹಿರಂಗ ಗೊಳಿಸಿರುವ ತೆಹೆಲ್ಕಾ ಬರುವ ದಿನಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಹೊರಗೆಡವಲಿದೆ.  
ಸ್ವಿಸ್ ದೇಶದಲ್ಲಿ ಅಕ್ರಮವಾಗಿ ಧನ ಗುಡ್ಡೆ ಹಾಕಿರುವ ಜನರ ಹೆಸರುಗಳನ್ನು ಅಲ್ಲಿನ ಬ್ಯಾಂಕುಗಳು ಬಹಿರಂಗ ಪಡಿಸಬೇಕು. ನಮ್ಮ ಸಂಪನ್ಮೂಲಗಳನ್ನು ಲೂಟಿ ಮಾಡಿದ್ದೂ ಅಲ್ಲದೆ ಲೂಟಿಗೈದ ಸಂಪತ್ತಿಗೆ ತೆರಿಗೆಯನ್ನೂ ಕಟ್ಟದೆ ದುರಹಂಕಾರದಿಂದ ಮೆರೆಯುವ, ಶ್ರೀಮಂತರು ತಾವು ತಿಂದಿದ್ದನ್ನು ಕಕ್ಕಬೇಕು. ದೇಶದಲ್ಲಿ ಆಗಾಗ ಹೊರಬೀಳುತ್ತಿರುವ ಪ್ರತೀ ಹಗರಣದ ಹಿಂದೆಯೂ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯ ಮಾಹಿತಿ ಇದ್ದೂ ನಾವು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿ.  ಅದರ ಮೇಲೆ ಭಾರತ ಬಡ ದೇಶ ಎನ್ನುವ ಪಟ್ಟ ಬೇರೆ.  ಹೆಚ್ಚು ಎಂದರೆ ಅವನು ರಾಜಕಾರಣಿಯಾದರೆ ರಾಜೀನಾಮೆ ನೀಡಬಹುದು ಅಷ್ಟೇ. ರಾಜೀನಾಮೆ ನಂತರ ತಾನು ಕಬಳಿಸಿದ ಸಂಪತ್ತನ್ನು ಜೀವನ ಪೂರ್ತಿ ತಾನು ತನ್ನ ಮಕ್ಕಳು ತಿನ್ನಬಹುದು. ಜನರ ಮನ್ನಣೆಯನ್ನೂ ಗಳಿಸಿಕೊಳ್ಳಬಹುದು. ಇಂಥ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಒಳಗೊಂಡ ಹಗರಣಗಳನ್ನು ನೋಡಿದಾಗ ನಮಗನ್ನಿಸದೆ ಇರುತ್ತದೆಯೇ ನಮ್ಮ ದೇಶ ನಾವೆಣಿಸಿದಂತೆ ಬಡ ದೇಶವಲ್ಲ ಎಂದು?  
 
ತನ್ನ ಸ್ವ- ರಕ್ಷಣೆಗಾಗಿ ಅಥವಾ ಇಂಧನದ ಅವಶ್ಯಕತೆಗಾಗಿ ಅಣು ಸ್ಥಾವರಗಳನ್ನು ನಿರ್ಮಿಸಿದ್ದಕ್ಕೆ ಇರಾನಿನ ಮೇಲೆ ಹರಿ ಹಾಯುವ ಪಾಶ್ಚಾತ್ಯ ದೇಶಗಳು ಸ್ವಿಸ್ ತೆರನಾದ ಮೋಸದ ಜಾಲದ ಬಗ್ಗೆ ಮಾತ್ರ ಮೌನ ತಾಳಿರುವುದು ಆಷಾಢ ಭೂತಿತನದ ಪರಮಾವಧಿ. ಕೊಳಕು ಹಣವನ್ನು ಒಡಲಲ್ಲಿಟ್ಟುಕೊಂಡು ವಿಶ್ವಕ್ಕೆ ತಾನು ಸಭ್ಯಸ್ಥ ಎಂದು ತೋರಿಸುವ ಸ್ವಿಸ್ ಪರಿಪಾಠ ಹೇಸಿಗೆ ಹುಟ್ಟಿಸುವಂಥದ್ದು. ಮೋಸದ, ಲಂಚದ ಹಣವನ್ನು ರಹಸ್ಯವಾಗಿ,  ಜೋಪಾನವಾಗಿರಿಸಿ ಬಡ ದೇಶಗಳಲ್ಲಿರುವ ಲಂಚಗುಳಿತನದ ಬಗ್ಗೆ ಮರುಕ ತೋರುತ್ತಾ ತಾನು ವಿಶ್ವದಲ್ಲಿ ಲಂಚ ರಹಿತ ದೇಶ ಎಂದು ತೋರಿಸಿಕೊಳ್ಳುವ ದೇಶದ ಬಗ್ಗೆ ಏನೆನ್ನಬೇಕೋ ತಿಳಿಯದು. ಬ್ಯಾಂಕಿಂಗ್ ಗೌಪ್ಯವನ್ನು ಕಾಪಾಡಲು ಸ್ವಿಟ್ಜರ್ ಲ್ಯಾಂಡ್ ನ ೭೩ % ಜನ ರ ಬೆಂಬಲವಿದೆಯಂತೆ. ಇಲ್ಲದೆ ಏನು, ಈ ಕಳ್ಳ ಹಣದ ನೆರವಿನಿಂದಲೇ ಅಲ್ಲವೇ ಅವರ ಬಾಳು ಬೆಳಗುತ್ತಿರುವುದು.
ಭಯೋತ್ಪಾದಕರು ಯಾವುದಾದರೂ ದೇಶದಲ್ಲಿ ಅಡಗಿ ಕೂತರೆ ಅವರನ್ನು ಹೊಗೆ ಹಾಕಿ ಹೊರಕ್ಕೆಳೆಯುವ ಅಮೆರಿಕೆಯಾಗಲಿ, ಅಥವಾ ಇನ್ಯಾವುದೇ ದೇಶವಾಗಲೀ ಸ್ವಿಸ್ ಬ್ಯಾಂಕುಗಳಲ್ಲಿ ಬಡ ದೇಶಗಳ ಧನ ಲೂಟಿ ಮಾಡಿ ಕಲೆಹಾಕಿದ್ದಕ್ಕೆ ಸ್ವಿಸ್ ದೇಶವನ್ನು ದಂಡಿಸಲು ಸಾಧ್ಯವೇ? ಭಯೋತ್ಪಾದಕ ಕೃತ್ಯದಲ್ಲಿ ಒಬ್ಬ ಭಾಗಿಯಾಗಿಲ್ಲದಿದ್ದರೂ ಓರ್ವ  ಭಯೋತ್ಪಾದಕನಿಗೆ ಆಶ್ರಯ ನೀಡುವುದೂ ಭಯೋತ್ಪಾದನೆಗೆ ಸಹಕರಿಸಿದ್ದಂತೆ. ಈ ಮಾನದಂಡವನ್ನು ಸ್ವಿಸ್ ನಂಥ ದೇಶಗಳ ಮೇಲೆ ಏಕೆ ಉಪಯೋಗಿಸಬಾರದು?  ಲೂಟಿ ಮಾಡಿದವ ಮಾತ್ರ ಕಳ್ಳನಲ್ಲ, ಅವನ ಲೂಟಿಯನ್ನು ಜಾಗರೂಕತೆಯಿಂದ ಕಾಯುವುದೂ ಠಕ್ಕತನವೇ.  
ಸ್ವಿಸ್ ದೇಶದ ಗಿರಾಕಿಗಳಲ್ಲಿ ಬರೀ ಲಂಚ ತಿನ್ನುವ ರಾಜಕಾರಣಿಗಳು ಮಾತ್ರವಲ್ಲ. ಮೆಕ್ಸಿಕೋ ದೇಶದ ಮಾದಕ ದ್ರವ್ಯ ಮಾರುವ ದೊರೆಗಳು ಸಹ ಇಲ್ಲಿ ಹಣ ಅಡಗಿಸಿಡುತ್ತಾರೆ. ಅಂದರೆ ಪ್ರಪಂಚವನ್ನು ಕಾಡುತ್ತಿರುವ ಎಲ್ಲ ರೀತಿಯ ಪೀಡೆಗಳಿಗೆ ಸ್ವಿಸ್ ನೇರ ಹೊಣೆ ಎಂದರೆ ತಪ್ಪಾಗಬಹುದೇ?
ನೈಜೀರಿಯಾದ ಸಾನಿ ಅಬಾಚ, ಕೀನ್ಯಾದ ಡೇನಿಯಲ್ ಅರಪ್ ಮೊಯ್, ಫಿಲಿಪ್ಪಿನ್ಸ್ ದೇಶದ ಮಾರ್ಕೋಸ್, ನೆರೆಯ ಪಾಕಿಸ್ತಾನದ ಭುಟ್ಟೋ ಪರಿವಾರ, ಇಂಥ ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಸ್ವಿಸ್ ದೇಶದ ಮಿತ್ರರುಗಳು. ಆಂಗ್ಲ ಭಾಷೆಯಲ್ಲಿನ ಗಾದೆ; A person is known by the company he keeps.   
ವಿಶ್ವ ಸಮುದಾಯದಲ್ಲಿ ಸ್ವಿಸ್ ತಟಸ್ಥ ದೇಶವಾದರೆ ಮಾತ್ರ ಸಾಲದು, ಒಂದು ಜವಾಬ್ದಾರಿಯುತ ದೇಶವಾಗಿ ವಿಶ್ವದ ಬಡಜನರ, ಹತಾಶೆಗೂ ಸಹ ಸ್ಪಂದಿಸಬೇಕಾದ್ದು ಅತ್ಯಗತ್ಯ. ಬಡದೇಶಗಳ ಸಂಪತ್ತನ್ನು ಲೂಟಿ ಮಾಡಿದ ನಾಯಕರುಗಳ ಬ್ಯಾಂಕ್ ಖಾತೆಯನ್ನು ರಹಸ್ಯವಾಗಿರಿಸಿ ತನ್ಮೂಲಕ ಹಗಲು ದರೋಡೆಗೆ ಪರೋಕ್ಷ ಸಹಾಯ ನೀಡುತ್ತಿರುವ ಸ್ವಿಸ್ ಒಂದು ಪರಾವಲಂಬಿ ದೇಶ ಎನ್ನುವ ಬಿರುದು ಕಟ್ಟಿಕೊಂಡು ಬದುಕುವುದು ಬೇಡ. ಶೀತಲ ವಾತಾವರಣದ ಜನರ ಭಾವನೆಗಳು ಶೀತಲವಾಗಿಬಿಟ್ಟರೆ ಆಗುವ ಅನಾಹುತಕ್ಕೆ ಸ್ವಿಸ್ಸ್ ದೇಶವೇ ಸಾಕ್ಷಿಯೇನೋ? ಹಸಿವು, ರೋಗ, ಕುಡಿಯುವ ಸ್ವಚ್ಚ ನೀರಿನ ಅಭಾವ, ರಸ್ತೆ, ಆಸ್ಪತ್ರೆ, ಶಾಲೆಗಳ ತೀವ್ರ ಕೊರತೆ ಮುಂತಾದ ನೂರೊಂದು ಸಾಮಾಜಿಕ ಸಮಸ್ಯೆಗಳಿಂದ ಬಡ ದೇಶಗಳ ಜನ ಬಳಲುತ್ತಿದ್ದರೆ ತನ್ನ ತಿಜೋರಿಯನ್ನು ಪಾಪದ ಹಣದಿಂದ ಅಲಂಕರಿಸುವುದು ಬೇಡ. 
 ಬಡ ರಾಷ್ಟ್ರಗಳು ತಮ್ಮ ದೇಶದಿಂದ ಹೊರ ಹೋದ ಹಣಕ್ಕಾಗಿ ಸ್ವಿಸ್ ದೇಶವನ್ನು ಸಂಪರ್ಕಿಸಿದಾಗ ಕಾನೂನು ತೊಡಕುಗಳನ್ನು ಕಾರಣವಾಗಿಸಿ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣವನ್ನು ಕೊಡದೆ ವರ್ಷಗಟ್ಟಲೆ ಕಾಯಿಸಿದರು. ಈ ಅವಧಿಯಲ್ಲಿ ಈ ಬಡ ರಾಷ್ಟ್ರಗಳಲ್ಲಿ ಹೊಟ್ಟೆಗಿಲ್ಲದೆ, ಔಷಧಿ ಇಲ್ಲದೆ ಸತ್ತ ಜನರ ಸಂಖ್ಯೆ ಅದೆಷ್ಟೋ ದೇವರೇ ಬಲ್ಲ. ತನ್ನ ಪ್ರಜೆಗಳು ಕೊಬ್ಬು ತುಂಬಿದ ಸ್ಟೇಕ್ ತಿನ್ನುತ್ತಾ ವೈನು, ಬೀರು ಸವಿಯುತ್ತಿದ್ದರೆ ಬಡ ದೇಶಗಳ ಬಹುಸಂಖ್ಯಾತ ಜನ ಒಪ್ಪೊತ್ತಿನ ಅನ್ನವಿಲ್ಲದೆ ನರಳುವ ದೃಶ್ಯ ವಿಶ್ವದ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದೆ. ನಮ್ಮ ದೇಶದಿಂದ ಸ್ವಿಸ್ ದೇಶಕ್ಕೆ ವಲಸೆ ಹೋದ ಅಗಾಧ ಸಂಪತ್ತು ಮರಳಿ ಬಂದರೆ ಕೆಳಗೆ ತೋರಿಸಿದ ಮಕ್ಕಳ ಅಸಹಾಯಕ ಪರಿಸ್ಥಿತಿ ಸುಧಾರಿಸಲು ನೆರವಾಗಬಹುದು.
ಆರು ವರ್ಷ ಪ್ರಾಯದ ವಿಶಾಲ್ ಒಂದು ಕಪ್ ಚಹಾ ಮತ್ತು ಎರಡು ತುಂಡು ಬಿಸ್ಕಿಟ್ ಒಂದಿಗೆ ತನ್ನ ದಿನವನ್ನು ಆರಂಭಿಸುತ್ತಾನೆ. ಬಡ ಮಕ್ಕಳಿಗೆ ಪುಕ್ಕಟೆಯಾಗಿ ಹಂಚುವ ಚಿತ್ರಾನ್ನ ಅವನ ಮಧ್ಯಾಹ್ನದ ಊಟ. ಅದರಲ್ಲಿ ಅರ್ಧ ತಿಂದು ಮತ್ತೊಂದಿಷ್ಟನ್ನು ತೆಗೆದಿಡುತ್ತಾನೆ ಹಸಿದಾಗ ತಿನ್ನಲು. ರಾತ್ರಿ ಹಸಿದಾಗ ಐದು ರೂಪಾಯಿಯ ಕುರ್ಕುರೆ ಕೊಡಿಸುತ್ತಾಳೆ ಅವನ ತಾಯಿ. ಈ ತಿನಿಸುಗಳೇ ಅವನ ಒಂದು ದಿನದ ಆಹಾರ. ಇಷ್ಟು ತಿಂದಾಗ ವಿಶಾಲನಿಗೆ ಸಿಗುವ ಕ್ಯಾಲೋರಿಗಳು ೮೫೬.
ಎರಡು ವರ್ಷದ ಸುರ್ಜ ಕೊಲ್ಕತ್ತಾದ ಕಲ್ಯಾಣಿ ರೈಲ್ವೆ ಸ್ಟೇಶನ್ ನ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಮನೆ ಮಾಡಿ ಕೊಂಡಿದ್ದಾನೆ. ಬೆಳಗ್ಗಿನ ತಿಂಡಿಗೆ ಅರ್ಧ ಪೂರಿ. ಮಧ್ಯಾಹ್ನ, ಎರಡು ಹಿಡಿ ಅನ್ನ ಮತ್ತು ಬೇಳೆ ಸಾರು. ರಾತ್ರಿ ಮತ್ತೆರಡು ಹಿಡಿ ಅನ್ನ, ಸಾರು ಅಥವಾ ಒಂದು ರೊಟ್ಟಿ. ಸುರ್ಜ, ಐದು ವರ್ಷಗಳ ತನ್ನ ಅಕ್ಕ, ಮತ್ತು ಕುಷ್ಠ ರೋಗಿ ತಂದೆಯೊಂದಿಗೆ ವಾಸಿಸುತ್ತಾನೆ. ಬೇಡಿ ತಿನ್ನುವುದು ಅವರ ಬದುಕು. ದಿನಕ್ಕೆ ೨೦ – ೨೫ ರೂಪಾಯಿ ದುಡಿಯುತ್ತಾರೆ. ರೈಲು ಪ್ರಯಾಣಿಕರು ತಿಂದು ಉಳಿದುದನ್ನು ಇವರು ತಿಂದು ಬದುಕುತ್ತಾರೆ. ಇವರಿಗೆ ದೊರಕುವ ಕ್ಯಾಲೋರಿ ಹೆಚ್ಚು ಕಡಿಮೆ ವಿಶಾಲನಷ್ಟೇ. ನಮ್ಮ ಹೊಟ್ಟೆ ಬಡಿದ ಪಾಶ್ಚಾತ್ಯ ದೇಶಗಳ ಮಕ್ಕಳು ತಿನ್ನುವ ತಿನಿಸು ಮತ್ತು ಅವರಿಗೆ ಲಭ್ಯವಾಗುವ ಕ್ಯಾಲೋರಿ ಬಗ್ಗೆ ಬರೆಯಬೇಕೆ? ಬೇಡ ಬಿಡಿ, ಅವರಾದರೂ ತಿಂದುಂಡು ಚೆನ್ನಾಗಿರಲಿ.
child, Relief and You (CRY) ನಡೆಸಿದ ಸಮೀಕ್ಷೆಯ ವೇಳೆ ಸಿಕ್ಕಿದ ಚಿತ್ರಣ ಮೇಲಿನದು. CRY ಸಂಸ್ಥೆಗೆ ಸ್ವಿಸ್ ಸೇರಿ ಬಿಳಿಯ ದೇಶಗಳು ಧಾರಾಳವಾಗಿ ದಾನ ಕೊಡುತ್ತಿರಬಹುದು. ನಮ್ಮ ನಾಯಕರುಗಳು ಪೇರಿಸಿಟ್ಟ ಧನದ ಮೇಲೆ ಅವರಿಗೆ ಸಿಗುವ ಬಡ್ಡಿಯ ಒಂದಿಷ್ಟು ಅಂಶ. LET POOR KIDS FROM THIRD WORLD COUNTRIES SURVIVE ಅಂತ ಕನಿಕರದಿಂದ ದಾನ ಮಾಡುತ್ತಾರೆ ಬಿಳಿಯರು.   
“ವಿಶ್ವ ಹಸಿವಿನ ಸೂಚಿ” (world hunger index)  ಪ್ರಕಾರ ವಿಶ್ವದ ಪೌಷ್ಟಿಕಾಂಶ ಕೊರತೆಯಿರುವ ಶೇಕಡಾ ೪೨ ರಷ್ಟಿರುವ ಮಕ್ಕಳಲ್ಲಿ ಸುಮಾರು ಅರ್ಧದಷ್ಟು ಮಕ್ಕಳು ಭಾರತದಲ್ಲಿ ಇದ್ದಾರಂತೆ. India shining? ಕ್ಷಮಿಸಿ india starving ಎಂದಿರಬೇಕಿತ್ತು. india shining ಎಂದು ಹೇಳಿ ನಮಗೆ ಗರಿ ಗರಿಯಾದ ಟೋಪಿ ತೊಡಿಸಲು ಬಂದ ನಮ್ಮ ನಾಯಕರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಹೇಳಿದವರಾರು?
ನನ್ನ ಮನವಿ ಇಷ್ಟೇ. ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯಲು ಹಾಕಿರುವ ಹಣ ನಮ್ಮ ದೇಶಕ್ಕೆ ಹಿಂತಿರುಗಲಿ. ಲೂಟಿ ಮಾಡಿದವರ ಮೇಲೆ ಸೇಡು ಬೇಡ. ಅವು ಆಗುವ ಹೋಗುವ ಕೆಲಸಗಳಲ್ಲ. ಅವರನ್ನು ಕ್ಷಮಿಸೋಣ ಆದರೆ ನಮ್ಮ ಸಂಪತ್ತು ಮಾತ್ರ ರವಾನೆಯಾಗಲಿ ಭಾರತಕ್ಕೆ.
 

Comments