೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ಭೇಟಿ
೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದದ್ದಾಯಿತು; ಅಪರಾಹ್ನ ಮೂರರಿಂದ ಸಂಜೆ ಐದೂವರೆಯವರೆಗೆ ಪುಸ್ತಕ ಪ್ರದರ್ಶನದ ಮಳಿಗೆಗಳಲ್ಲಿ ದೊಡ್ಡಿಯೊಳಗಿಂದ ದೊಡ್ಡಿಯೊಳಗೆ ಓಡಾಡಿಸಿಕೊಳ್ಳುವ ರಾಸುಗಳಂತೆ ತಳ್ಳಿ, ತಳ್ಳಿಸಿಕೊಂಡು ಬಂದದ್ದಾಯಿತು. ಯಾರೋ ಮಹನೀಯರ ಭಾಷಣ ಭೋರ್ಗರೆಯುತಿತ್ತು. ಅದಕ್ಕೆ ಕಟ್ಟಿದ ಮಂಟಪ ಎಷ್ಟೊಂದು ವಿಶಾಲವಾಗಿತ್ತೆಂದರೆ ಅದರ ಸರಹದ್ದಲ್ಲಿ ಎಲ್ಲಿ ನಿಂತರೂ ಕಣ್ಣಳತೆಗೂ ಸಿಗದ ದೂರದಲ್ಲೇ ವೇದಿಕೆಯಿತ್ತು. ವಿಡಿಯೋ ಪರದೆಯಲ್ಲಿ ನೋಡುತ್ತಾ ಬಹಳ ಹೊತ್ತು ನಿಲ್ಲಲಾಗಲಿಲ್ಲ. ವೇದಿಕೆಯಲ್ಲದೆ ಬೇರೆಲ್ಲಿಯಾದರೂ ಈ ಪರದೆಗಳಿದ್ದವೋ, ನನ್ನ ಕಣ್ಣಿಗಂತೂ ಬೀಳಲಿಲ್ಲ.
ಬೆಂಗಳೂರಲ್ಲೇ ಇಷ್ಟೊಂದು ಪುಸ್ತಕ ಪ್ರಕಟನಾಕಾರರು ಇದ್ದರೆಂದು ನಾನು ಊಹಿಸಿಯೇ ಇರಲಿಲ್ಲ. ಲಾಭದ ದಂಧೆಯೇ ಇರಬೇಕು ಎಂದುಕೊಂಡೆ. ಅಷ್ಟೊಂದು ಮಳಿಗೆಗಳಿಗೆ ಮೀಸಲಿಟ್ಟ ಜಾಗ ಏನೇನೂ ಸಾಲದ್ದರಿಂದ ಆ ತೆರನ ನೂಕು ನುಗ್ಗಲು. ಇದರ ಇಮ್ಮಡಿ ಪ್ರದೇಶವನ್ನಾದರೂ ಬೇಕಾಗಿತ್ತೇನೋ! ಇಲ್ಲವೇ ಭಾಷಣದ ಪ್ರದೇಶವನ್ನು ಶೇಕಡ ೨೫-೩೦ರಷ್ಟು ಕಡಿಮೆ ಮಾಡಿ ಅದನ್ನು ಈ ಮಳಿಗೆಗಳಿಗೆ ಕೊಡಬಹುದಿತ್ತೇನೋ.
ಮಾರಾಟಗಾರರು ಶೇಕಡ ೧೦ರಿಂದ ೫೦ರವರೆಗೂ ರಿಯಾಯಿತಿಯನ್ನಿಟ್ಟಿದ್ದರು. ಸುಮಾರು ಸಾವಿರ ರೂಪಾಯಿಗಳ ಪುಸ್ತಕಗಳನ್ನು ಕೊಂಡರೂ ಈ ಯಾವ ಮಳಿಗೆಯವರೂ ಬಿಲ್ ಕೊಡಲಿಲ್ಲ - ಪ್ರತಿಷ್ಠಿತ ಪ್ರಕಾಶಕರೂ ಕೂಡಾ! "ಈ ರಶ್ನಲ್ಲಿ ಕೊಡುವದು ಕಷ್ಟ" ಎಂದರು.
ಹಳೆಯ ಪುಸ್ತಕಗಳ ಎರಡು ಮಳಿಗೆಗಳು ಕಾಣಿಸಿಕೊಂಡರೂ ಅವುಗಳನ್ನು ಪರೀಕ್ಷಿಸಲಾಗಲಿಲ್ಲ.
ವಿಪರೀತ ಜನಸಂದಣಿಯಿಂದಾಗಿ ಪುಸ್ತಕಗಳನ್ನು ಸರಿಯಾಗಿ ವೀಕ್ಷಿಸಿ ಕೊಳ್ಳುವದಕ್ಕಾಗಲಿಲ್ಲ. ಜತೆಗೆ ಸೆಕೆ, ಧೂಳು, ಗದ್ದಲದಿಂದಾಗಿ ತಾಳ್ಮೆ ಬಹಳ ಹೊತ್ತು ಇರಲಿಲ್ಲ. ಅದಿಲ್ಲದೆ ಅಲ್ಲಿರಲೂ ಆಗಲಿಲ್ಲ.
ಅಲ್ಲದೆ ಆ ರೀತಿಯ ಜನದಟ್ಟಣೆಯಲ್ಲಿ ಎಲ್ಲಾದರೂ ಏನಾದರೂ ಅವಘಡವುಂಟಾದರೆ (ಉದಾಹರಣೆಗೆ ಬೆಂಕಿಯ ಆಕಸ್ಮಿಕ) ಏನೇನಾದಾವೆಂಬ ಭಯ ಹುಟ್ಟಿ ಬಂತು.
ಹೊರಟು ಬಂದೆವು.
Comments
ಉ: ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ಭೇಟಿ
ಉ: ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ಭೇಟಿ
ಉ: ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ಭೇಟಿ