ಸಾಹಿತ್ಯ ಸಮ್ಮೇಳನ - ನನ್ನ ಅನುಭವ

ಸಾಹಿತ್ಯ ಸಮ್ಮೇಳನ - ನನ್ನ ಅನುಭವ

ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಕೇಳಿದಾಗ ಮೂರು ದಿನವೂ ಹೋಗಬೇಕು ಎಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ನೆನ್ನೆ ಭಾನುವಾರ ಹೋಗಲೇಬೇಕೆಂದು ನಿರ್ಧರಿಸಿ ಮಧ್ಯಾನ್ಹದ ವೇಳೆಗೆ ನ್ಯಾಷನಲ್ ಕಾಲೇಜ್ ಮೈದಾನದ ಬಳಿಗೆ ನನ್ನ ದ್ವಿಚಕ್ರ ವಾಹನದಲ್ಲಿ ಹೋದರೆ ನನ್ನ ಗಾಡಿ ನಿಲ್ಲಿಸಲೇ ಸುಮಾರು ಅರ್ಧ ಘಂಟೆ ಹುಡುಕಾಡಿದೆ. ಕೊನೆಗೆ ಪಕ್ಕದ ರಸ್ತೆಯಲ್ಲಿ ಒಂದು ಗಲ್ಲಿಯಲ್ಲಿ ನಿಲ್ಲಿಸಿ ಮೈದಾನದ ಬಳಿಗೆ ಹೋದರೆ ನನ್ನ ಕಣ್ಣುಗಳನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ. ಅದೊಂದು ಜನಸಾಗರ ಬಹುಶಃ ಬೆಂಗಳೂರಿನ ಎಲ್ಲ ಕನ್ನಡಿಗರೂ ಅಲ್ಲೇ ಇದ್ದರು ಅನಿಸುತ್ತದೆ.

ಮೈದಾನದ ಒಳಗೆ ಪ್ರವೇಶಿಸಿದರೆ ನಡೆದಾಡಲು ಸಹ ಕಷ್ಟ ಎನಿಸುವಷ್ಟು ಜನ ಸಂದಣಿ. ನಿಜಕ್ಕೂ ಆ ಜನಸಾಗರ ನೋಡಿ ಆಶ್ಚರ್ಯ ಸಂತೋಷ ಎರಡೂ ಒಟ್ಟಿಗೆ ಆಯಿತು. ಕನ್ನಡಿಗರಲ್ಲಿ ಕನ್ನಡಾಭಿಮಾನ ಇಲ್ಲ ಅಂತ ಯಾರು ಸ್ವಾಮಿ ಹೇಳಿದ್ದು. ಅಲ್ಲಿದ್ದ ಜನಸಾಗರವೇ ಅದಕ್ಕೆ ಉತ್ತರ ನೀಡುವಂತಿತ್ತು. ನಾನು ಹೋಗುವ ವೇಳೆಗೆ ಮಹಾವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರಿಗೆ ಸನ್ಮಾನ ನಡೆಯುತ್ತಿತ್ತು. ಅಲ್ಲಿ ಸ್ವಲ್ಪ ಹೊತ್ತು ನಿಂತಿದ್ದು ಆಚೆ ಪುಸ್ತಕ ಮಳಿಗೆಗೆ ಹೋಗುವ ಎಂದು ಬಂದರೆ ಅಲ್ಲಿ ಊಹಿಸಲು ಸಾಧ್ಯವಾಗದಷ್ಟು ಜನ. ನಾವು ಸುಮ್ಮನೆ ಅಲ್ಲಿ ನಿಂತರೆ ಸಾಕು ಜನರೇ ನಮ್ಮನ್ನು ಮುಂದಕ್ಕೆ ಕರೆದುಕೊಂಡು ಬಂದುಬಿಡುತ್ತಿದ್ದರು. ಜನರ ಪುಸ್ತಕ ಪ್ರೀತಿ ಕಂಡು ನಿಜಕ್ಕೂ ಖುಷಿಯಾಯಿತು. ಯಾವುದೇ ಪುಸ್ತಕದ ಮಳಿಗೆಗೆ ಹೋದರು ಅಲ್ಲಿ ಜನ. ಸರಿಯಾಗಿ ಯಾವ ಪುಸ್ತಕ ಕೊಳ್ಳೋಣ ಎಂದುಕೊಂಡರೂ ಆಗಲಿಲ್ಲ. ಹಾಗೂ ಹೀಗೂ ಮಾಡಿ ಒಂದು ೭ ಪುಸ್ತಕಗಳನ್ನು ಕೊಂಡುಕೊಂಡೆ. ಕುವೆಂಪು ಮಳಿಗೆಯಲ್ಲಿ ಪೂ ಚಂ.ತೇ ಅವರ 'ಮಿಸ್ಸಿಂಗ್ ಲಿಂಕ್' ಹಾಗೆ ಇನ್ನೊಂದು ಮಳಿಗೆಯಲ್ಲಿ ಮಠ ಚಿತ್ರ ನಿರ್ದೇಶಕ ಗುರುಪ್ರಸಾದ ಅವರ  'Direcotrs Special ' ಕೊಂಡು ಮುಂದೆ ಬಂದಾಗ ಮಳಿಗೆ ಸಂಖ್ಯೆ ೩೬೧ ರಲ್ಲಿ ನನಗೆ ಬೇಕಾದ ಪುಸ್ತಕಗಳು ಸಿಕ್ಕವು. ಅವೆಂದರೆ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳು, ಭಗತ್ ಸಿಂಗ್, ಸುಭಾಶ್ ಚಂದರ ಬೋಸ್ ಅವರ ಪುಸ್ತಕಗಳು, ಹಾಗೆ 'ಸ್ವಾತಂತ್ರ್ಯದೆಡೆಗೆ' ಹಾಗೂ ಹನ್ನೆರೆಡು ಕ್ರಾಂತಿಕಾರಿ ಹೋರಾಟಗಾರ ಒಂದು ಹೊತ್ತಿಗೆ ಇವಿಷ್ಟನ್ನು ಖರೀದಿಸಿ ಆಚೆ ಬಂದಾಗ ಒಂದು ರೀತಿ ಆನಂದವಾಯಿತು.

ಆಚೆ ಬಂದು ಮೈದಾನದ ಸ್ಟ್ಯಾಂಡ್ ಅಲ್ಲಿ ನಿಂತು ನೋಡಿದರೆ ಇಡೀ ಸಮ್ಮೇಳನದ ವಿಹಂಗಮ ನೋಟ ಮನಸಿಗೆ ಮುದ ನೀಡುವಂತಿತ್ತು. ಹಾಗೆ ಸಂಪದಿಗರಾದ ಅತ್ರಾಡಿ ಸುರೇಶ ಹೆಗ್ಡೆ, ರಾಕೇಶ್ ಶೆಟ್ಟಿ ಅವರನ್ನು ಭೇಟಿ ಮಾಡಿ ಮಾತನಾಡಿಸಿ ಹೊರಡಲು ನನ್ನ ಗಾಡಿಯ ಬಳಿ ಬರುತ್ತಿದ್ದೆ.

ಆಗ ಹಿಂದೆ ಯಾರೋ ಮಾತನಾಡುತ್ತಿದ್ದದ್ದು ಕಿವಿಗೆ ಬಿತ್ತು " ಅಲ್ರಿ ಸ್ವಾಮಿ ವಿಷ್ಣುವರ್ಧನ್ ಸತ್ತಾಗಲೂ ಈ ಪಾಟಿ ಜನ ಬಂದಿರಲಿಲ್ಲ ಅಲ್ಲವಾ".
Rating
No votes yet

Comments