ಕನ್ನಡ ಸಾಹಿತ್ಯ ಸಮ್ಮೇಳನ ....

ಕನ್ನಡ ಸಾಹಿತ್ಯ ಸಮ್ಮೇಳನ ....

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ ಬಿಸಿಲು. ಆದರೂ ಗಾಂಧಿಬಜಾರ್ ತಲುಪಿ ನನ್ನ ಗಾಡಿ ಒಂದು ಕಡೆ ನಿಲ್ಲಿಸಿ, ಒಳಗಡೆ ಹೋದೆ. ಹೋದೊಡನೆ ಪ್ರೊ ಕೃಷ್ಣೇಗೌಡರು ಹಾಸ್ಯದ ಹೊನಲನ್ನು ಹರಿಸುತ್ತಿದ್ದರು.

ಕೆಲ ಹೊತ್ತು ಆದ ಮೇಲೆ ಪುಸ್ತಕ ಮಳಿಗೆಗೆ ಹೊರಟೆ, ತುಂಬಾ ಜನಜಂಗುಳಿ. ಜನರ ಪುಸ್ತಕ ಪ್ರೀತಿ ನೋಡಿ ತುಂಬಾ ಆನಂದವಾಯಿತು. ನನ್ನನ್ನು ಹಿಂದಿನವರೇ ದೂಡಿಕೊಂಡು ಹೋಗುತ್ತಿದ್ದರು, ಅಷ್ಟು ಜನ ಸೇರಿದ್ದರು. ಹಿಂದಿನಿಂದ ಒಬ್ಬ ಮನುಷ್ಯ ಹೊಟ್ಟೆ ಇಂದ ನನ್ನನ್ನು ನೂಕುತ್ತಾ ಹೊರಟಿದ್ದ. ಅವನು ನೂಕಿದ್ದು ನೋಡಿ ಕೋಪ ಬಂದರು, ಅವನ ಹೊಟ್ಟೆ ನೋಡಿ ನನಗೆ ಸಂತೋಷವಾಯಿತು, ಏಕೆಂದರೆ ನನ್ನ ಹೊಟ್ಟೆ, ಅವನ ಹೊಟ್ಟೆ ಮುಂದೆ ಏನು? ಅಲ್ಲ ಅಷ್ಟು ದೊಡ್ಡದಾಗಿತ್ತು.

ಮೊದಲು ಸಪ್ನ ಬುಕ್ ಸ್ಟಾಲ್ ಹೊಕ್ಕು, ಅಲ್ಲಿ ಇರುವ ಶ್ರೀನಿವಾಸ ವೈಧ್ಯರ "ತಲೆಗೊಂದು ತರತರ" ಪುಸ್ತಕ ತೆಗೆದುಕೊಂಡೆ. ಅಲ್ಲಿರುವ ಸನ್ನಿವೇಶ ಕೂಡ ಹಾಗೆ ಇತ್ತು, ತಲೆಗೊಂದು ತರತರ ಮಾತನಾಡುತ್ತಾ ಇದ್ದರು. ಮತ್ತೆ ಇನ್ನೊಂದು ಶ್ರೀ ವೈಧ್ಯರ ಪುಸ್ತಕ ಕಾಣಿಸಿತು. "ರುಚಿಗೆ ಹುಳಿಯೊಗರು" ಅದನ್ನು ತೆಗೆದುಕೊಂಡೆ. ಆಮೇಲೆ ಮುಂದಿನ ಮಳಿಗೆಗೆ ಹೋದೆ, ಅಲ್ಲಿ ಕಾಣಿಸಿದ್ದು, "ಅಂಗಿ ಬರಹ" ಲೇಖಕರು ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಸ್ಯ ಧಾರಾವಾಹಿಗಳಾದ ಸಿಲ್ಲಿ-ಲಲ್ಲಿ ಮತ್ತು ಪಾ.ಪ. ಪಾಂಡು ಬರೆದಂತ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರದ್ದು.

ಅಲ್ಲಿಂದ ಮತ್ತೊಂದು ಮಳಿಗೆಯಲ್ಲಿ ಬೀChi ಅವರ ಒಂದು ಪುಸ್ತಕ ತೆಗೆದುಕೊಂಡೆ. ಅವರು ನನಗೆ ಮೂವತ್ತು ರೂಪಾಯಿ ಚಿಲ್ಲರೆ ಕೊಡಬೇಕಾಗಿತ್ತು. ಐದೈದು ರೂಪಾಯಿಗಳನ್ನು ಕೊಟ್ಟರು. ಕೈಯಲ್ಲಿ ಇದ್ದ ಬೀChi ಅವರ ಪುಸ್ತಕ ಪ್ರಭಾವವೋ ತಿಳಿಯದು , ಇಷ್ಟೊಂದು ದುಡ್ಡು ಕೊಟ್ಟರೆ, ನಾನು ಒಂದು ಬ್ಯಾಗ್ ತರುತ್ತಿದ್ದೆ ಎಂದೆ. ಪಕ್ಕದಲ್ಲಿದ್ದ ಹುಡುಗಿ ಕಿಸಕ್ಕನೆ (ಇಂಗ್ಲೀಶ್ ಅಲ್ಲ) ನಕ್ಕಳು.

ಮತ್ತೆ ಮುಂದಿನ ಮಳಿಗೆಯಲ್ಲಿ ದೇವರ ಪುಸ್ತಕ ನೋಡಿ, ಭಕ್ತಿ ಪರವಶನಾಗಿ ಅಲ್ಲಿಗೆ ಕೈ ಮುಗಿಯುತ್ತಾ ಹೋದೆ. ನನ್ನ ಮುಂದೆ ಇರುವ ಮನುಷ್ಯ ಕೂಡ ನನಗೆ ಕೈ ಮುಗಿದ. ಆದರೆ ಅವನು ಯಾರೆಂದು? ನನಗೆ ತಿಳಿಯಲಿಲ್ಲ. ಏನೋ... ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಒಬ್ಬ ಮನುಷ್ಯ , ಮೈಯಲ್ಲಿ ದೇವರು ಬಂದವನ ಹಾಗೆ ಮಾಡುತ್ತಾ, ಬಂದು ನನ್ನ ನೂಕಿ ಒಂದು ಪುಸ್ತಕ ತೆಗೆದುಕೊಂಡ. ನಾನು ಮತ್ತೆ ಅವನಿಂದ ದೂರ ಸರಿದೆ. ಮತ್ತೆ ಒಬ್ಬ ಹೆಣ್ಣು ಮಗಳು ಕೂಡ ನನ್ನನ್ನು ಸರಿಸಿ, ಎಕ್ಸ್‌ಕ್ಯೂಸ್ ಮೀ ಎಂದು ಒಂದು ಪುಸ್ತಕ ಕೈಗೆತ್ತಿಕೊಂಡಳು. ನಾನು ದೂರದಿಂದ ದೇವರಿಗೆ ನಮಸ್ಕರಿಸಿ, ಮುಂದಿನ ಮಳಿಗೆಗೆ ಹೊರಟೆ.

ಮುಂದಿನ ಮಳಿಗೆಯಲ್ಲಿ ಮತ್ತೊಂದು ವೈ ಎನ್ ಗುಂಡೂರಾವ್ ಅವರ ಪುಸ್ತಕ ತೆಗೆದುಕೊಂಡೆ. ಅವರಿಗೆ ಅದೇ ಮೂವತ್ತು ರೂಪಾಯಿಗಳನ್ನು ಕೊಟ್ಟಿದ್ದು ನೋಡಿ ಚಿಲ್ಲರೆ ಬಂದಿದ್ದು ನೋಡಿ ತುಂಬಾ ಖುಷಿಯಾಗಿ, ದೇವರು ಬಂದ ಹಾಗೆ ಬಂದಿರಿ ಎಂದರು. ದೇವರಿಗೆ ಮಹಾಪ್ರಸಾದವಾಗಿ ಏನಾದರೂ? ಹೆಚ್ಚು-ಕಡಿಮೆ ಮಾಡುವಿರೋ ಎಂದೆ. ಈಗಾಗಲೇ ಕಡಿಮೆ ಮಾಡಿ ಕೊಟ್ಟು ಆಗಿದೆ. ಬೇಕಾದರೆ ಹೆಚ್ಚು ಮಾಡುವೆ ಎಂದರು. ಸುಮ್ಮನೇ ಹೊರಟು ಬಂದೆ.

ಒಬ್ಬ ನಿಮ್ಮ ಹೆಸರು ಹೇಳಿ, ಒಂದು ಉಂಗುರ ಕೊಡುತ್ತೇನೆ ಎಂದ. ನಿಮ್ಮ ಎಲ್ಲ ಕೆಲಸ ನೆರವೇರುತ್ತೆ ಎಂದ. ಕೆಲಸಗಳು ನೆರವೇರೋ ಸಮಯ ಮುಗಿದು ಹೋಗಿದೆ ಮಹಾರಾಯ ಎಂದು ಹೇಳಿದರು ಕೇಳಲಿಲ್ಲ. ಸರಿ, ನಿನ್ನ ಉಂಗುರ ಹಾಕಿಕೊಂಡರೆ ನನ್ನ ತಲೆಯಲ್ಲಿ ಕೂದಲು ಮತ್ತೆ ಹುಟ್ಟೂತ್ತೋ ಎಂದು ಕೇಳಿದೆ. ಪಾಪ ... ಜಾರುಬಂಡೆ ಹಾಗಿರುವ ತನ್ನ ತಲೆ ಕೆರೆದುಕೊಂಡ, ನನಗೆ ಅರ್ಥವಾಗಿ ಹೊರಗಡೆ ನಡೆದೆ.

ಒಂದೇ ಬಿಲ್ಲನ್ನು ಇಟ್ಟುಕೊಂಡು ಉಳಿದ ಬಿಲ್ಲನ್ನು ಹೊರಗಡೆ ಹೋಗಿ ಚೆಲ್ಲಿಬಿಟ್ಟೆ. ಹೆಂಡತಿ ಕೇಳಿದರೆ ಎರಡು ಪುಸ್ತಕ ತೆಗೆದುಕೊಂಡರೆ ಉಳಿದ ನಾಲ್ಕು ಪುಸ್ತಕ ಉಚಿತ ಎಂದು ಹೇಳಲು. ಈ ಧೂಳಿನ ಮುಖದಲ್ಲಿ ಮನೆಗೆ ಹೋದರೆ, ಮಡದಿ ಕಂಡುಹಿಡಿಯುವುದು ಕಷ್ಟ ಎಂದು ಮುಖ ತೊಳೆದು,ಮುಂದಿನ ಬಾರಿ ಸಂಪದದ ಒಂದು ಮಳಿಗೆ ಕೂಡ ಇರಲೆಂದು ಆಶಿಸುತ್ತಾ ಮನೆ ದಾರಿ ಹಿಡಿದೆ.

Rating
No votes yet

Comments