ಸವತಿ ಮಾತ್ಸರ್ಯ

ಸವತಿ ಮಾತ್ಸರ್ಯ

ಎಲ್ಲ ಚುಕ್ಕಿಗೂ ಸವತಿ ಸ್ವಾತಿ ಎಂಬುವಳು
ಮುತ್ತುಗಳಿಗವಳಮ್ಮ ಎಂಬ ಮುನಿಸಿನಲಿ
ಹೆತ್ತಳು ರೋಹಿಣಿಯು ನೀಲರತುನವ ತಾನು
ಮತ್ತೆ ಗೋಪಿಯರೆದೆಯಲ್ಲಿ ಮೆರೆಯಲೆಂದು!

ಸಂಸ್ಕೃತ ಮೂಲ: (ಲೀಲಾ ಶುಕನ ಕೃಷ್ಣಕರ್ಣಾಮೃತ ಶ್ಲೋಕ ೬೫)

ಸ್ವಾತೀ ಸಪತ್ನೀ ಕಿಲ ತಾರಕಾಣಾಂ
ಮುಕ್ತಾಫಲಾನಾಂ ಜನನೀತಿ ರೋಷಾತ್|
ಸಾ ರೋಹಿಣೀ ನೀಲಮಸೂತ ರತ್ನಂ
ಕೃತಾಸ್ಪದಂ ಗೋಪವಧೂ ಕುಚೇಷು ||

-ಹಂಸಾನಂದಿ

ಕೊನೆಯ ಕೊಸರು : ದಕ್ಷ ಬ್ರಹ್ಮನಿಗೆ ೨೭ ಹೆಣ್ಣು ಮಕ್ಕಳು, ಅವರೆಲ್ಲರನ್ನೂ ಚಂದ್ರನಿಗೆ ಮದುವೆ ಮಾಡಿಕೊಟ್ಟ ಅನ್ನುವುದೊಂದು ಕಥೆ. ಇವರೇ ಕೃತ್ತಿಕೆಯಿಂದ ಭರಣಿಯ ವರೆಗಿನ ೨೭ ನಕ್ಷತ್ರಗಳು. ಹೀಗಾಗಿ ಇವರೆಲ್ಲ ಒಬ್ಬರಿಗೊಬ್ಬರು ಸವತಿಯರಾದರು.ಸ್ವಾತೀ ನಕ್ಷತ್ರದಲ್ಲಿ ಬಿದ್ದ ಮಳೆನೀರು ಕಪ್ಪೆ ಚಿಪ್ಪಿನೊಳಗೆ ಹೊಕ್ಕರೆ ಅದು ಮುತ್ತಾಗುತ್ತೆ ಅನ್ನುವುದೊಂದು ನಂಬಿಕೆ. ಹಾಗಾಗಿ ಎಲ್ಲ ಮುತ್ತುಗಳಿಗೂ ಸ್ವಾತಿಯೇ ತಾಯಾದಳು. ಇದೇ ಸವತಿ ಮಾತ್ಸರ್ಯಕ್ಕೆ ಕಾರಣವಾಯಿತು. ಅದಕ್ಕೆಂದೇ ರೋಹಿಣಿಯು ನೀಲಬಣ್ಣದ ರತ್ನವೊಂದನ್ನು ಹೆತ್ತಳು. (ಕೃಷ್ಣ ಹುಟ್ಟಿದ್ದು ಚಂದ್ರ ರೋಹಿಣೀ ನಕ್ಷತ್ರದಲ್ಲಿದ್ದಾಗ ಅನ್ನುವುದನ್ನು ನೆನೆಸಿಕೊಳ್ಳಿ).

ಅಂದಹಾಗೆ, ರೋಹಿಣೀ (Aldebaran) ಮತ್ತು ಸ್ವಾತೀ (Arcturus) ಇವೆರಡೂ ೨೭ ನಕ್ಷತ್ರಗಳ ಸಾಲಿನಲ್ಲಿ ಬರುವ ಎರಡು ಪ್ರಕಾಶಮಾನವಾದ ನಕ್ಷತ್ರಗಳು. ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಸ್ವಾತೀ ಮೂರನೆಯದ್ದಾದರೆ, ರೋಹಿಣಿಯು ೧೩ನೇ ಪ್ರಕಾಶಮಾನವಾದ್ದು.

Rating
No votes yet

Comments