ಬಾಲ್ಯವನ್ನು ಬಾಲಿಶಕ್ಕೆ ತಾಳೆಹಾಕುವುದು ಹಿರಿಯರ ಬಾಲಿಶತನಃ ಗಾದೆಗೊಂದು ಗುದ್ದು ೬೨
(೩೧೬) ಬೋಧನೆಯ ಪರಿಷ್ಕೃತ ರೂಪವೇ ಕಲಿಸುವುದು. ಬೋಧಕ ಹೇಗೆ ನಡೆದುಕೊಳ್ಳಬೇಕೆಂದು ಇತರರಿಗೆ ತಿಳಿಹೇಳುತ್ತಾನೆ. ಗುರುವು ಸ್ವತಃ ತಾನೇ ಕಲಿಯುತ್ತಿರುವಂತೆ ನಡೆದುಕೊಳ್ಳುತ್ತಾನೆ. ಬೋಧಕ ಕಲಿಕೆಯ ಕಷ್ಟವನ್ನೆಂದೂ ಬೋಧಿಸುವುದಿಲ್ಲ. ಗುರು ಕಲಿಕೆಯನ್ನು ಸ್ವಾದಿಷ್ಟವಾಗಿಸುತ್ತಾನೆ. ಬೋಧಕ ಕಾಲ್ಪನಿಕ ಸ್ವರ್ಗದಿಂದಿಳಿದುಬಂದಂತೆ ಆಡಿದರೆ ಗುರುವು ನಮ್ಮೊಳಗಿನಿಂದಲೇ ಬೆಳೆದು ನಿಂತಂತೆ ತೋರುತ್ತಾನೆ.
(೩೧೭) ಕಲಿಯಬೇಕೆಂಬ ನಮ್ಮ ವಿನಮ್ರ ಮನಃಸ್ಥಿತಿಯ ಮೂಲಸತ್ಯವೇನೆಂದರೆ ನಮಗೆ ಏನೂ ಗೊತ್ತಿಲ್ಲ ಎಂಬುದು. ಇದು ಗೊತ್ತಿಲ್ಲದವರು ಅದನ್ನು ’ಎಂಥಾ ವಿನಯ!’ ಎಂದು ಉದ್ಘರಿಸಿಬಿಡುತ್ತಾರೆ!
(೩೧೮) ಪ್ರತೀ ಶಿಶುವೂ ಸಹ ತಾನು ಪ್ರೌಢನಾಗಬೇಕೆಂದು ಬಯಸುತ್ತದೆ ಎಂದು ಹಿರಿಯರು ಭಾವಿಸುತ್ತಾರೆ. ಅದೊಂದು ಬಾಲಿಶ ನಂಬಿಕೆಯಾಗಿರಬಹುದು. ಏಕೆಂದರೆ ಪ್ರೌಢರಾದ ಹಿರಿಯರು ಯಾವಾಗಲೂ ತಮ್ಮ ಬಾಲ್ಯಕಾಲದ ಹಿನ್ನೆನಪಿಗೆ ಹೋಗಲೆತ್ನಿಸುತ್ತಿರುತ್ತಾರೆ!
(೩೧೯) ನಮ್ಮ ಪೂರ್ವಜರು ಸಾಯಬಾರದಿತ್ತು ಎಂದು ನಾವು ಭಾವಿಸಲು ಕಾರಣ ಸಾವಿಗಿಂತಲೂ ಬದುಕೇ ಮೇಲು ಎಂಬ ನಮ್ಮ ಪೂರ್ವಾಗ್ರಹ!
(೩೨೦) ’ಆಗಿರುವುದು’ ಆಗುವುದರೊಳಗಿನ ನಂಬಿಕೆಯಲ್ಲ. ಆದರೆ ’ಆಗಬೇಕು’ ಎನ್ನುವ ಬಯಕೆ ಮಾತ್ರ ಆಗಿರುವಿಕೆಯ ಅನಿವಾರ್ಯ ಭಾಗ!
Comments
ಉ: ಬಾಲ್ಯವನ್ನು ಬಾಲಿಶಕ್ಕೆ ತಾಳೆಹಾಕುವುದು ಹಿರಿಯರ ಬಾಲಿಶತನಃ ...